ಗುರುವಾರ , ಆಗಸ್ಟ್ 11, 2022
21 °C
ಜಿಲ್ಲಾಧಿಕಾರಿ ನೇತೃತ್ವದಲ್ಲಿ ಜಿಲ್ಲಾ ಪರಿಶಿಷ್ಟ ಜಾತಿ ಹಿತರಕ್ಷಣಾ ಸಮಿತಿ ಸಭೆ

ಎಸ್‌ಸಿ ದೌರ್ಜನ್ಯ ಪ್ರಕರಣಗಳ ನಿರ್ಲಕ್ಷ್ಯ: ಆರೋಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ‘ಪರಿಶಿಷ್ಟ ಜಾತಿಯವರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ಬಗ್ಗೆ ನಿರ್ಲಕ್ಷ್ಯ ವಹಿಸಲಾಗುತ್ತಿದೆ. ನೊಂದವರಿಗೆ ಸರಿಯಾದ ಸ್ಪಂದನೆ ಸಿಗುತ್ತಿಲ್ಲ’ ಎಂದು ಪರಿಶಿಷ್ಟ ಜಾತಿ ಸಮುದಾಯದ ಮುಖಂಡರು ಆರೋಪಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ನಡೆದ ಜಿಲ್ಲಾ ಪರಿಶಿಷ್ಟ ಜಾತಿ ಹಿತರಕ್ಷಣಾ ಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಮುಖಂಡರು, ‘ಪ್ರಕರಣಗಳ ಬಗ್ಗೆ ಉದಾಸೀನ ಧೋರಣೆ ತಾಳುತ್ತಿರುವುದರಿಂದ ಸಂತ್ರಸ್ತರಿಗೆ ಸಕಾಲಕ್ಕೆ ಪರಿಹಾರ ಸಿಗುತ್ತಿಲ್ಲ. ಪೊಲೀಸರು ನ್ಯಾಯಾಲಯಕ್ಕೆ ಪೂರಕ ದಾಖಲಾತಿಗಳನ್ನು ಸಲ್ಲಿಸುತ್ತಿಲ್ಲ’ ಎಂದು ದೂರಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು, ‘ಪರಿಶಿಷ್ಟ ಜಾತಿಯವರ ಮೇಲಿನ ದೌರ್ಜನ್ಯ ಪ್ರಕರಣಗಳನ್ನು ದಾಖಲು ಮಾಡಿಕೊಂಡು ಸಂತ್ರಸ್ತರಿಗೆ ಪರಿಹಾರ ಒದಗಿಸಬೇಕು. ಪ್ರಕರಣ ದಾಖಲು ಅಥವಾ ವರದಿಯಾದ ಕೂಡಲೇ ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ಸಮನ್ವಯದಿಂದ ಮುಂದಿನ ಪ್ರಕ್ರಿಯೆಗೆ ಗಮನ ನೀಡಬೇಕು. ವಿಳಂಬ ಮಾಡುವುದು, ಉದಾಸೀನ ಪ್ರವೃತ್ತಿ ತೋರುವುದು ಮುಂದುವರಿದರೆ ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಕಾಯ್ದೆಯಡಿ ನಿರ್ದಾಕ್ಷಿಣ್ಯ ಶಿಸ್ತು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಎಚ್ಚರಿಸಿದರು. 

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್ ಅವರು ಮಾತನಾಡಿ, ‘ದೌರ್ಜನ್ಯ ಪ್ರಕರಣಗಳಲ್ಲಿ ಶೀಘ್ರ ತನಿಖೆ ಪೂರ್ಣಗೊಳಿಸಿ ದೋಷಾರೋಪ ಪಟ್ಟಿ ಸಲ್ಲಿಸಲಾಗುತ್ತದೆ. ಇಲಾಖೆ ವತಿಯಿಂದ ಎಲ್ಲ ಕ್ರಮ ತೆಗೆದುಕೊಳ್ಳಲಾಗುತ್ತಿದೆ. ಯಾವುದೇ ದೌರ್ಜನ್ಯ ಪ್ರಕರಣಗಳಿದ್ದಲ್ಲಿ ತಮ್ಮನ್ನೇ ನೇರವಾಗಿ ಸಂಪರ್ಕಿಸಬಹುದು’ ಎಂದರು. 

ವಾರದ ಗಡುವು: ಸಭೆಯಲ್ಲಿ ಅನೇಕ ಗ್ರಾಮಗಳಲ್ಲಿ ಪರಿಶಿಷ್ಟ ಸಮುದಾಯದವರಿಗೆ ಸ್ಮಶಾನದ ಕೊರತೆ ಇರುವ ವಿಚಾರವೂ ಪ್ರಸ್ತಾಪವಾಯಿತು. 

ಇದಕ್ಕೆ ಸ್ಪಂದಿಸಿದ ಜಿಲ್ಲಾಧಿಕಾರಿ ಅವರು, ‘ಸ್ಮಶಾನಕ್ಕಾಗಿ ಎಷ್ಟು ಜಾಗದ ಅವಶ್ಯಕತೆ ಇದೆ ಎಂಬ ಬಗ್ಗೆ ವಾರದ ಒಳಗಾಗಿ ತಾಲ್ಲೂಕುವಾರು ವರದಿ ನೀಡಬೇಕು. ಲಭ್ಯವಿರುವ ಜಮೀನುಗಳನ್ನು ಗುರುತಿಸಬೇಕು. ಸರ್ಕಾರಿ ಭೂಮಿ ಇಲ್ಲದಿರುವ ಕಡೆಗಳಲ್ಲಿ ಖಾಸಗಿಯವರಿಂದ ಖರೀದಿಸಬೇಕು. ಒತ್ತುವರಿಯಾಗಿದಲ್ಲಿ ತೆರವುಗೊಳಿಸಬೇಕು’ ಎಂದು ಹೇಳಿದರು. 

ಜಿಲ್ಲಾ ಪಂಚಾಯಿತಿ ಮುಖ್ಯ ನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ನಾರಾಯಣ ರಾವ್, ಉಪವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬದೋಲೆ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಭಾಗೀರಥಿ, ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಹೊನ್ನೇಗೌಡ, ಮುಖಂಡರಾದ ಸಿ.ಎಂ.ಕೃಷ್ಣಮೂರ್ತಿ, ಕೆ.ಎಂ. ನಾಗರಾಜು, ಶಿವಮೂರ್ತಿ, ಬಸವನಪುರ ರಾಜಶೇಖರ್, ಪಿ.ಸಂಘಸೇನ, ಅಣಗಳ್ಳಿ ಬಸವರಾಜು, ರಾಮಸಮುದ್ರ ಸುರೇಶ್, ನಾಗರಾಜು, ಮುತ್ತಣ್ಣ, ಶಿವಣ್ಣ, ನಾಗೇಶ್, ಯರಿಯೂರು ರಾಜಣ್ಣ, ಕಂದಹಳ್ಳಿ ನಾರಾಯಣ, ಶ್ರೀಕಂಠಮೂರ್ತಿ, ಚಿಕ್ಕಣ್ಣ, ಬ್ಯಾಡಮೂಡ್ಲು ಬಸವಣ್ಣ, ಗುಂಡ್ಲುಪೇಟೆಯ ಶಿವು, ವಿವಿಧ ಇಲಾಖೆಗಳ ಅಧಿಕಾರಿ ಇದ್ದರು. 

ಸಾಮಾಜಿಕ ಬಹಿಷ್ಕಾರ ಸಹಿಸಲಾಗದು

‘ಜಿಲ್ಲೆಯ ಎಲ್ಲಿಯೇ ಆಗಲಿ, ಸಾಮಾಜಿಕ ಬಹಿಷ್ಕಾರ ಹಾಕುವಂತಿಲ್ಲ. ಸ್ವಜಾತಿಯಲ್ಲಿರಲಿ ಅಥವಾ ಇನ್ಯಾವುದೇ ಕೋಮುಗಳ ನಡುವಿನ ವೈರತ್ವ, ವೈಯಕ್ತಿಕ ಕಾರಣದಿಂದ ಬಹಿಷ್ಕಾರ ವಿಧಿಸುವಂತಿಲ್ಲ. ತಾಲ್ಲೂಕು ಮಟ್ಟದಲ್ಲಿ ಇಂತಹ ಪ್ರಕರಣಗಳು ಜರುಗದಂತೆ ನೋಡಿಕೊಳ್ಳುವ ಸಲುವಾಗಿಯೇ ತಹಶೀಲ್ದಾರ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಹಾಗೂ ಸರ್ಕಲ್ ಇನ್‌ಸ್ಪೆಕ್ಟರ್‌‌ ಅವರನ್ನು ಒಳಗೊಂಡ ಸಮಿತಿ ರಚಿಸಲಾಗಿದೆ. ಕಾನೂನು ಬಾಹಿರ ಪ್ರಕರಣಗಳಿಗೆ ಅವಕಾಶ ನೀಡುವುದನ್ನು ಸಹಿಸಲಾಗುವುದಿಲ್ಲ’ ಎಂದು ಜಿಲ್ಲಾಧಿಕಾರಿ ಹೇಳಿದರು. 

‘ಈ ಬಗ್ಗೆ ಸಂಘ ಸಂಸ್ಥೆಗಳು ಸಹ ಜಾಗೃತಿ ಮೂಡಿಸಬೇಕು. ತಾಲ್ಲೂಕು ಮಟ್ಟದಲ್ಲಿ ಅರಿವಿಗಾಗಿ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಆಯೋಜಿಸಬೇಕು’ ಎಂದು ಸೂಚಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.