ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧೂಮಪಾನ ನಿಷೇಧದ ನಾಮಫಲಕ ಅಳವಡಿಸಿ:ಡಿ.ಸಿ

ಅಧಿಕಾರಿಗಳಿಗೆ ಕಟ್ಟು ನಿಟ್ಟಿನ ಸೂಚನೆ, ತಾಲ್ಲೂಕುಗಳಲ್ಲಿ ಗುಲಾಬಿ ಆಂದೋಲನ ಹಮ್ಮಿಕೊಳ್ಳಲು ಸಲಹೆ
Last Updated 7 ಅಕ್ಟೋಬರ್ 2022, 15:58 IST
ಅಕ್ಷರ ಗಾತ್ರ

ಚಾಮರಾಜನಗರ: ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ಜಿಲ್ಲೆಯ ಎಲ್ಲ ಸಾರ್ವಜನಿಕ ಪ್ರದೇಶಗಳಲ್ಲಿ ಧೂಮಪಾನ ನಿಷೇಧದ ನಾಮಫಲಕವನ್ನು ಕಡ್ಡಾಯವಾಗಿ ಅಳವಡಿಸಬೇಕು ಎಂದು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಶುಕ್ರವಾರ ಕಟ್ಟುನಿಟ್ಟಿನ ಸೂಚನೆ ನೀಡಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಜಿಲ್ಲಾ ಸಮನ್ವಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ‘ಸಾರ್ವಜನಿಕ ಸ್ಥಳಗಳಲ್ಲಿ, ಇಂದಿರಾ ಕ್ಯಾಂಟೀನ್‌ಗಳಲ್ಲಿ, ಮಹದೇಶ್ವರ ಬೆಟ್ಟದಲ್ಲಿ ಪ್ರಾಧಿಕಾರ ವ್ಯಾಪ್ತಿಯಲ್ಲಿ ಕಡ್ಡಾಯವಾಗಿ ಕೋಟ್ಪಾ ಸೆಕ್ಷನ್-4ರಂತೆ ಕನಿಷ್ಠ 10X45 ಸೆಂ.ಮೀ ಅಳತೆಯ ಧೂಮಪಾನ ನಿಷೇಧದ ನಾಮಫಲವನ್ನು ಅಳವಡಿ‌ಸಬೇಕು’ ಎಂದರು.

ತಂಬಾಕು, ಬೀಡಿ, ಸಿಗರೇಟ್, ಗುಟ್ಕಾ ಸೇರಿದಂತೆ ಎಲ್ಲ ಬಗೆಯ ತಂಬಾಕು ಬಳಕೆಯನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಅನುಕೂಲವಾಗುವಂತೆ ಎಲ್ಲ ತಾಲೂಕುಗಳಲ್ಲಿ ತಾಲ್ಲೂಕು ಮಟ್ಟದ ಗುಲಾಬಿ ಆಂದೋಲನ ಕಾರ್ಯಕ್ರಮವನ್ನು ನಡೆಸುವಂತೆ ಅಧಿಕಾರಿಗಳಿಗೆ ತಿಳಿಸಿದರು.

‘ತಾಲ್ಲೂಕುಗಳಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದಡಿ ತಾಲ್ಲೂಕು ಸಮನ್ವಯ ಸಮಿತಿ ಸಭೆ ನಡೆಸಿ ಸಭಾ ನಡಾವಳಿಯನ್ನು ಜಿಲ್ಲಾ ತಂಬಾಕು ನಿಯಂತ್ರಣ ಘಟಕಕ್ಕೆ ಸಲ್ಲಿಸಬೇಕು. ಜಿಲ್ಲಾ ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ತಮ್ಮ ಅಧೀನ ಕಚೇರಿಗಳಲ್ಲಿ ಧೂಮಪಾನ ನಿಷೇಧದ ನಾಮಫಲಕವನ್ನು ಪ್ರದರ್ಶನ ಮಾಡುವ ಕುರಿತು ಸುತ್ತೋಲೆ ಹೊರಡಿಸಬೇಕು’ ಎಂದರು.

ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಗುಡೂರು ಭೀಮಸೇನ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ್ಯಾಧಿಕಾರಿ ಡಾ. ಕೆ.ಎಂ. ವಿಶ್ವೇಶ್ವರಯ್ಯ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕರಾದ ಸುಧಾ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ನಾಗರಾಜು, ಆರ್‌ಸಿಎಚ್ ಅಧಿಕಾರಿ ಡಾ. ಮಂಜುನಾಥ್, ತಾಲೂಕು ಆರೋಗ್ಯಾಧಿಕಾರಿ ಡಾ. ಶ್ರೀನಿವಾಸ್, ಇತರರು ಸಭೆಯಲ್ಲಿ ಉಪಸ್ಥಿತರಿದ್ದರು.

‘ದಂಡ ವಿಧಿಸಿ, ಅರಿವು ಮೂಡಿಸಿ’

‘ಕೊಳ್ಳೇಗಾಲದ ವಿವಿಧ ಪ್ರದೇಶಗಳಲ್ಲಿ ಹಾಗೂ ಗುಂಡ್ಲುಪೇಟೆ ಪಟ್ಟಣ ಸಾರ್ವಜನಿಕ ಆಸ್ಪತ್ರೆ ಎದುರು ಮತ್ತು ತಾಲ್ಲೂಕಿನ ಕಬ್ಬಳ್ಳಿ ಗ್ರಾಮದ ಆರೋಗ್ಯ ಕೇಂದ್ರದ ಆವರಣದಲ್ಲಿ ಧೂಮಪಾನ ಮಾಡುವರು ಹೆಚ್ಚಿದ್ದು ಕೋಟ್ಪಾ ಕಾನೂನು ಅನುಷ್ಠಾನ ದಾಳಿ ನಡೆಸಿ ತಂಬಾಕು ಬಳಸುವವರಿಗೆ ದಂಡ ವಿಧಿಸಿ, ತಂಬಾಕು ಬಳಸದಂತೆ ಅರಿವು ಮೂಡಿಸಬೇಕು. ಎಲ್ಲ ತಾಲೂಕಿನಲ್ಲಿಯೂ ವರ್ತಕರ ಸಂಘದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಸಭೆ ನಡೆಸಿ ಕೋಟ್ಪಾ ಅನುಷ್ಠಾನದ ಕುರಿತು ಮಾಹಿತಿ ನೀಡಬೇಕು’ ಎಂದು ಚಾರುಲತಾ ಸೋಮಲ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT