ಮಹದೇಶ್ವರ ಬೆಟ್ಟ: ದೀಪಾವಳಿ ಆಚರಣೆಗೆ ಸಿದ್ಧತೆ

ಮಹದೇಶ್ವರ ಬೆಟ್ಟ: ಇಲ್ಲಿನ ಪ್ರಸಿದ್ಧ ಯಾತ್ರಾ ಸ್ಥಳ ಮಲೆ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ವಿಶೇಷ ಪೂಜೆ, ಇನ್ನಿತರ ಧಾರ್ಮಿಕ ಕಾರ್ಯಕ್ರಮ ಬುಧವಾರದಿಂದ (ನ.3) ಆರಂಭವಾಗಲಿವೆ. ನ.5ರವರೆಗೆ ನಡೆಯಲಿದೆ.
ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ದೀಪಾವಳಿ ಜಾತ್ರಾ ಮಹೋತ್ಸವ ನಡೆಸದಿರಲು ಜಿಲ್ಲಾಡಳಿತ ಈ ಮೊದಲೇ ನಿರ್ಧರಿಸಿತ್ತು. ಹಾಗಾಗಿ, ರಥೋತ್ಸವ, ತೆಪ್ಪೋತ್ಸವ ರದ್ದಾಗಿವೆ. ಉಳಿದಂತೆ ಎಣ್ಣೆ ಮಜ್ಜನ ಸೇವೆ, ಅಮಾವಾಸ್ಯೆ ವಿಶೇಷ ಪೂಜೆ, ಹಾಲರವೆ ಉತ್ಸವಗಳು ಸಾಂಪ್ರಾದಾಯಿಕ ಧಾರ್ಮಿಕ ವಿಧಿ ವಿಧಾನಗಳೊಂದಿಗೆ ದೇವಾಲಯದ ಒಳಾಂಗಣಕ್ಕೆ ಸೀಮಿತವಾಗಿ ನಡೆಯಲಿವೆ.
ಪವಾಡ ಪುರುಷನ ಸನ್ನಿಧಿಯಲ್ಲಿ ನಡೆಯುವ ದೀಪಾವಳಿ ಜಾತ್ರೆಯು ವಾರ್ಷಿಕವಾಗಿ ನಡೆಯುವ ಎರಡನೇ ಜಾತ್ರೆಯಾಗಿದ್ದು, ಸಾಮಾನ್ಯವಾಗಿ ಐದು ದಿನ ನಡೆಯುತ್ತಿದೆ. ಕೋವಿಡ್ ಕಾರಣದಿಂದ ಕಳೆದ ವರ್ಷ ಜಾತ್ರೆ ರದ್ದಾಗಿತ್ತು. ಈ ವರ್ಷ ಮೂರು ದಿನ ಹಬ್ಬದ ಆಚರಣೆ ನಡೆಯಲಿದೆ. ಅದರಲ್ಲಿ ಒಂದು ದಿನ ಬಿಟ್ಟು ಉಳಿದ ದಿನಗಳು ಭಕ್ತರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
ಬುಧವಾರ (ನ.3) ಎಣ್ಣೆಮಜ್ಜನ ವಿಶೇಷ ಸೇವೆ ನಡೆಯಲಿವೆ. 4ರಂದು (ಗುರುವಾರ) ಹಾಲರವೆ ಉತ್ಸವ ನಡೆಯಲಿದ್ದು, ಕೋವಿಡ್ ಮುನ್ನೆಚ್ಚರಿಕೆ ಕ್ರಮವಾಗಿ ಸೀಮಿತ ಜನರ ಉಪಸ್ಥಿತಿಯಲ್ಲಿ ನಡೆಯಬೇಕಾಗಿರುವುದರಿಂದ ಬುಧವಾರ ಮಧ್ಯಾಹ್ನದಿಂದ ಗುರುವಾರ ಮಧ್ಯಾಹ್ನದವರೆಗೆ ಸಾರ್ವಜನಿಕರು ಹಾಗೂ ಭಕ್ತರ ಪ್ರವೇಶವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಆದೇಶ ಹೊರಡಿಸಿದ್ದಾರೆ.
5ರಂದು ವಿಶೇಷ ಸೇವೆ ಹಾಗೂ ದೀಪಾವಳಿ ಹಬ್ಬ ಆಚರಣೆ ನಡೆಯಲಿದೆ. ಅಂದು ಭಕ್ತರ ಪ್ರವೇಶಕ್ಕೆ ಹಾಗೂ ವಿವಿಧ ಸೇವೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಭಕ್ತರಿಗೆ ಎಲ್ಲ ವ್ಯವಸ್ಥೆ: ದೀಪಾವಳಿ ಅಂಗವಾಗಿ ದೇವಾಲಯ ಹಾಗೂ ಸುತ್ತಮುತ್ತಲಿನ ಪ್ರದೇಶಗಳನ್ನು ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದೆ.
ಪಾದಯಾತ್ರೆ ಮೂಲಕ ಬೆಟ್ಟಕ್ಕೆ ಬರುವ ಭಕ್ತರಿಗಾಗಿ, ಕೌದಳ್ಳಿಯಿಂದ ಬೆಟ್ಟದವರೆಗೆ 10 ಸ್ಥಳಗಳಲ್ಲಿ ಕುಡಿಯುವ ನೀರು, ಶೌಚಾಲಯದ ವ್ಯಸಸ್ಥೆ ಮಾಡಲಾಗಿದೆ. ಬೆಳಿಗ್ಗೆ 7ರಿಂದ ಮಧ್ಯರಾತ್ರಿವರೆಗೆ ಅನ್ನದಾಸೋಹ, ಲಗೇಜು ಇಡಲು ವ್ಯವಸ್ಥೆ, ವಾಹನಗಳ ನಿಲುಗಡೆ ವ್ಯವಸ್ಥೆಗಳನ್ನು ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಮಾಡಿದೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.