ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾರುಕಟ್ಟೆಯಲ್ಲಿ ‘ಹಣ್ಣುಗಳ ರಾಜ’ನ ವೈಭವ

ಮೂರು ವಾರದ ಬಳಿಕ ಇಳಿದ ಟೊಮೆಟೊ ಬೆಲೆ; ಹಸಿಮೆಣಸಿನಕಾಯಿ ಧಾರಣೆಯಲ್ಲಿ ಭಾರಿ ಕುಸಿತ
Last Updated 31 ಮೇ 2022, 16:39 IST
ಅಕ್ಷರ ಗಾತ್ರ

ಚಾಮರಾಜನಗರ: ಹಣ್ಣುಗಳ ರಾಜ ಮಾವಿನ ಹಣ್ಣಿನ ಅಬ್ಬರ ಮಾರುಕಟ್ಟೆಯಲ್ಲಿ ಆರಂಭವಾಗಿದೆ. ಮಾರುಕಟ್ಟೆಯಲ್ಲಿ ಎಲ್ಲಿ ನೋಡಿದರಲ್ಲಿ ಈಗ ಮಾವಿನ ‌ಹಣ್ಣುಗಳ ರಾಶಿ.

ವಿವಿಧ ತಳಿಗಳ ಮಾವಿನ ಹಣ್ಣುಗಳು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದು, ಗ್ರಾಹಕರಿಂದ ಬೇಡಿಕೆ ಸೃಷ್ಟಿಯಾಗಿದೆ. ವ್ಯಾಪಾರಿಗಳು ತಳ್ಳು ಗಾಡಿಗಳಲ್ಲಿಟ್ಟು ವ್ಯಾಪಾರ ಮಾಡುತ್ತಿದ್ದಾರೆ.

ಬಾದಾಮಿ, ಸಿಂಧೂರ, ರಸಪೂರಿ, ಮಲ್ಲಿಕಾ ತಳಿಗಳ ಮಾವಿನಹಣ್ಣು ಮಾರುಕಟ್ಟೆಗೆ ಬಂದಿವೆ. ತೋತಾಪುರಿ ಮಾವು ಕೂಡ ಲಭ್ಯವಿದೆ.

ಕಳೆದ ವರ್ಷದ ಕೊನೆಯವರೆಗೂ ಮಳೆ ಸುರಿದಿದ್ದರಿಂದ ಈ ಬಾರಿ ಮಾವಿನ ಋತು ಆರಂಭ ಕೊಂಚ ತಡವಾಗಿತ್ತು. ಹಾಗಾಗಿ, ಮಾರುಕಟ್ಟೆಗೆ‌ ಹಣ್ಣಿನ ರಾಜನ ಆಗಮನ ವಿಳಂಬವಾಗಿದೆ.

ಹಾಪ್‌ಕಾಮ್ಸ್ ಮಳಿಗೆಗಳಲ್ಲಿ ಬಾದಾಮಿ, ಸಿಂಧೂರ, ರಸಪೂರಿ ಹಣ್ಣು ಲಭ್ಯವಿವೆ. ಬಾದಾಮಿ ಮಾವಿನ ಹಣ್ಣಿಗೆ ಕೆ.ಜಿ.ಗೆ ₹ 100 ಬೆಲೆ ಇದೆ. ಸಿಂಧೂರಕ್ಕೆ ಕೆ.ಜಿ.ಗೆ ₹ 50 ಇದೆ. ರಸಪೂರಿಗೆ ₹ 80 ಇದೆ. ತೋತಾಪುರಿ ₹ 40ಕ್ಕೆ ಮಾರಾಟವಾಗುತ್ತಿದೆ.

‘ಮಾವಿನ ಹಣ್ಣು ಈಗಷ್ಟೇ ಬರಲು ಆರಂಭವಾಗಿದೆ. ಬೆಲೆ ಕೊಂಚ ಹೆಚ್ಚಿದೆ. ನಮ್ಮಲ್ಲಿ ನಾಲ್ಕು ತಳಿಗಳ ಮಾವು ಲಭ್ಯವಿದ್ದು, ಬೆಲೆ ಹೆಚ್ಚಾಗಿ ದ್ದರೂ, ಗ್ರಾಹಕರು ಬಾದಾಮಿ ಖರೀ ದಿಸುತ್ತಿದ್ದಾರೆ. ಈಗಷ್ಟೇ ಸೀಸನ್‌ ಆರಂಭ ವಾಗಿರುವುದರಿಂದ ಹಣ್ಣುಗಳು ಸ್ವಲ್ಪ ಹುಳಿ ರುಚಿ ಹೊಂದಿವೆ. ಹಣ್ಣುಗಳ ಆವಕ ಹೆಚ್ಚಾದಂತೆ ಬೆಲೆ ಕಡಿಮೆಯಾಗಲಿದೆ’ ಎಂದು ಹಾಪ್‌ಕಾಮ್ಸ್‌ ವ್ಯಾಪಾರಿ ಮಧು ‘ಪ್ರಜಾವಾಣಿ’ಗೆ ತಿಳಿಸಿದರು.

ಹಣ್ಣಿನ ಮಾರುಕಟ್ಟೆಯಲ್ಲಿ ಉಳಿದ ಹಣ್ಣುಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ. ಸೇಬಿನ ದುಬಾರಿ ಬೆಲೆ (₹ 180) ಈ ವಾರವೂ ಮುಂದುವರಿದಿದೆ. ಹಾಪ್‌ಕಾಮ್ಸ್‌ನಲ್ಲಿ ದಾಳಿಂಬೆಗೂ ₹ 160 ಇದೆ. ಕೆಜಿ ಕಿತ್ತಳೆ ₹ 120, ದ್ರಾಕ್ಷಿ ₹ 100ರಂತೆ ಮಾರಾಟವಾಗುತ್ತಿದೆ.

ಟೊಮೆಟೊ ಅಗ್ಗ: ಮೂರು ವಾರಗಳಿಂದ ಏರುಮುಖವಾಗಿದ್ದ ಟೊಮೆಟೊ ಬೆಲೆ ಈ ವಾರ ಗಣನೀಯವಾಗಿ ಇಳಿದಿದೆ.

ಮಳೆಯ ಕಾರಣಕ್ಕೆ ಟೊಮೆಟೊ ಧಾರಣೆ ಕಳೆದ ವಾರ ₹ 100 ತಲುಪಿತ್ತು. ವಾರದಿಂದೀಚೆಗೆ ಬಿಸಿಲು ಹೆಚ್ಚಾಗಿರುವುದರಿಂದ ಬೆಲೆ ಇಳಿದಿದೆ.

ಬೀನ್ಸ್‌ ಬೆಲೆಯೂ ಈ ವಾರ ಕಡಿಮೆಯಾಗಿದೆ. ಕಳೆದ ವಾರ ₹ 90ರಿಂದ ₹ 100ರವರೆಗೆ ಇತ್ತು. ಸೋಮವಾರ ಹಾಪ್‌ಕಾಮ್ಸ್‌ನಲ್ಲಿ ಕೆ.ಜಿ.ಗೆ ₹ 80 ಇತ್ತು.

ಹಸಿಮೆಣಸಿನಕಾಯಿಯ ಬೆಲೆಯಲ್ಲಿ ಭಾರಿ ಇಳಿಕೆಯಾಗಿದೆ. ಈ ಬಾರಿ ಉತ್ತಮ ಇಳುವರಿ ಬಂದಿದ್ದು, ರೈತರಿಗೆ ಹೆಚ್ಚಿನ ಬೆಲೆ ಸಿಗುತ್ತಿಲ್ಲ. ತರಕಾರಿ ಅಂಗಡಿಗಳಲ್ಲೂ ಕೆಜಿಗೆ ₹ 20 ರಂತೆ ಸಿಗುತ್ತಿದೆ.ಉಳಿದ ತರಕಾರಿಗಳ ಬೆಲೆಯಲ್ಲಿ ವ್ಯತ್ಯಾಸವಾಗಿಲ್ಲ.

ಮಾಂಸ ಮಾರುಕಟ್ಟೆಯಲ್ಲಿ ಚಿಕನ್‌ ಬೆಲೆ ₹ 200ರಿಂದ ₹ 220 ಹಾಗೂ ಮಟನ್‌ ಬೆಲೆ ₹ 560ರಿಂದ ₹ 600ರವರೆಗೆ ಇದೆ.

ಹೂವಿನ ಬೆಲೆ ಏರಿಳಿತ

ಬಿಡಿ ಹೂವಿನ ಮಾರುಕಟ್ಟೆಯಲ್ಲಿ ಹೂವಿನ ಬೆಲೆಯಲ್ಲಿ ಏರಿಳಿತವಾಗಿದೆ.

ಶನಿವಾರ, ಭಾನುವಾರ ಹೂವುಗಳಿಗೆ ಬೇಡಿಕೆ ಹೆಚ್ಚು ಇದ್ದುದರಿಂದ ಬೆಲೆಯಲ್ಲಿ ಕೊಂಚ ಏರಿಕೆ ಕಂಡು ಬಂದಿತ್ತು. ಎರಡು ದಿನಗಳಿಂದಬೆಲೆ ಇಳಿದಿದೆ. ಬುಧವಾರದ ಬಳಿಕ ಮತ್ತೆ ಹೆಚ್ಚಾಗಲಿದೆ ಎಂದು ಹೇಳುತ್ತಾರೆ ವ್ಯಾಪಾರಿಗಳು.

ಕನಕಾಂಬರ ಹೂವಿಗೆ ಬೇಡಿಕೆ ಇದ್ದು, ಕೆಜಿಗೆ ₹ 800ರಿಂದ ₹ 1000ದವರೆಗೂ ಇದೆ. ಮಲ್ಲಿಗೆಗೆ ₹ 200, ಸೇವಂತಿಗೆಗೆ ₹ 160ರಿಂದ ₹ 200, ಚೆಂಡುಹೂವಿಗೆ ₹ 30ರಿಂದ ₹ 40 ಬೆಲೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT