ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹುಣಸೆ ಚಿಗುರಿಗೂ ಬಂತು ಬಲು ಬೇಡಿಕೆ!

‘ಸಿ’ ವಿಟಮಿನ್‌ ಇರುವ ಎಲೆ, ಹೂಗಳ ಸಾಂಬಾರು: ಬಳಕೆ ನೂರಾರು
Last Updated 30 ಮೇ 2021, 5:24 IST
ಅಕ್ಷರ ಗಾತ್ರ

ಯಳಂದೂರು: ಉಷ್ಣವಲಯದ ಬೆಳೆ ಯಾಗಿರುವ ಹುಣಸೆ ಬಂಜರು ಮತ್ತು ಅರೆ ನೀರಾವರಿ ಪ್ರದೇಶದಲ್ಲಿ ಬೆಳೆಯುವ ಅಮೂಲ್ಯ ವೃಕ್ಷ. ಹಣ್ಣಿನ ತಿರುಳು ‘ಸಿ’ ಜೀವಸತ್ವವನ್ನು ಹೊಂದಿದ್ದರೆ, ಮುಂಗಾರಿಗೂ ಮೊದಲು ಅರಳುವ ಚಿಗುರು ಪೋಷಕಾಂಶಗಳ ಆಗರ.

ಹುಣಸೆ ಮರಗಳ ಚಿಗುರು ಮತ್ತು ಹೂಗಳ ಸಾರು, ತೊವ್ವೆ ಚಿಗುರು ಪ್ರಿಯರ ಬಾಯಲ್ಲಿ ನೀರೂರಿಸುತ್ತಿದೆ. ಚಿಗುರಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಗುಣ ಇದ್ದು, ಹಲವರು ಮುಂಜಾನೆಯೇ ಹೂ, ಮೊಗ್ಗುಗಳನ್ನು ಸಂಗ್ರಹಿಸುತ್ತಿದ್ದಾರೆ.

ಚೈತ್ರಮಾಸದಿಂದ ಆರ್ದ್ರಾ ಮಳೆ ನಕ್ಷತ್ರದ ವರೆಗೆ ಚಿಗುರು ಸಿಗುತ್ತದೆ. ದೇಹಕ್ಕೆ ತಂಪು ತುಂಬಿ, ಸ್ವಾಸ್ಥ್ಯ ವೃದ್ಧಿಸಲು ಇದು ಸಹಕಾರಿ ಎಂದು ಹುಣಸೆ ಚಿಗುರಿಗೆ ಬೇಡಿಕೆ ಹೆಚ್ಚಾಗಿದೆ.

ಚಿಗುರು ಒಣಗಿಸಿ ಚಟ್ನಿ ಪುಡಿ ಮಾಡಿ ಪಿತ್ತ ನಿವಾರಣೆಗೆ ಬಳಸುತ್ತಾರೆ. ಹುಣಸೆ ತೊಕ್ಕನ್ನು 1 ವರ್ಷ ಕೆಡದಂತೆ ಸಂಗ್ರಹಿಸಬಹುದು. ಔಷಧ ತಯಾರಿಯಲ್ಲಿ ಹಣ್ಣು, ಎಲೆ ಮತ್ತು ತೊಗಟೆ ಬಳಕೆ ಆಗುತ್ತದೆ. ಎಲೆ, ಹೂ, ಹಣ್ಣು ಮತ್ತು ಚಿಗುರು ಆಹಾರ ಪದಾರ್ಥಗಳಿಗೆ, ಬೀಜವನ್ನು ಅಂಟು ಮತ್ತು ಎಣ್ಣೆಗಾಗಿ ಬಳಕೆ ಮಾಡುತ್ತಾರೆ ಎಂದು ಪಟ್ಟಣದ ರಾಧಾ ಗೋಪಾಲ್ ಹೇಳಿದರು.

ಹೂ, ಎಲೆ ಮತ್ತು ಹಣ್ಣಿನಲ್ಲಿ ಟಾರ್ಟಾರಿಕ್ ಆಮ್ಲ ಇರುತ್ತದೆ. ಸಕ್ಕರೆ, ಬಿ ಜೀವಸತ್ವ ಮತ್ತು ಕ್ಯಾಲ್ಸಿಯಂನಿಂದ ಸಮೃದ್ಧವಾಗಿದೆ. ಇದನ್ನು ಬಲ್ಲವರು ಕೋವಿಡ್ ಕಾಲಘಟ್ಟದಲ್ಲಿ ಆಹಾರದ ಭಾಗವಾಗಿ ಸೇವಿಸುತ್ತಾರೆ. ಇತರ ಸೊಪ್ಪುಗಳ ಜೊತೆ ಬೆರಸಿ ಇಲ್ಲವೇ ಚಿಗುರಿನಿಂದ ಮಾಡುವ ರಸಂ ಅನ್ನು ಇಷ್ಟಪಟ್ಟು ಸವಿಯುತ್ತಾರೆ. ಕೆಲವರು ಚಿಗುರು ಮಾರಾಟ ಮಾಡಿ ತುಸು ಆದಾಯ ಗಳಿಸುವುದೂ ಇದೆ.

ತಾಲ್ಲೂಕಿನಲ್ಲಿ ಹುಣಸೆ ಮರಗಳು ರಸ್ತೆ ಬದಿ, ಹೊಳೆ ದಂಡೆ, ತೆಂಗಿನತೋಟ ಮತ್ತಿತರ ಕಡೆಗಳಲ್ಲಿ ಮಾತ್ರ ಉಳಿದಿವೆ. ಪ್ರತಿ ವರ್ಷ ಕೊಂಡೋತ್ಸವಕ್ಕೆ ಹುಣಸೆ ಮರಗಳನ್ನು ಕಡಿದು, ಧ್ವಂಸ ಮಾಡಲಾಗುತ್ತಿದೆ. ಹೀಗಾಗಿ, ಇವುಗಳ ಸಂತತಿ ಕಡಿಮೆಯಾಗಿದೆ ಎಂದು ಬಳೇಪೇಟೆ ಸಲೀಂ ಹೇಳಿದರು.

5 ವರ್ಷ ಕಾಪಾಡಿ: ಹುಣಸೆ ಸಸಿಯನ್ನು ನೆಟ್ಟು 5 ವರ್ಷ ಪೋಷಿಸಿದರೆ ನಮ್ಮನ್ನು 100 ವರ್ಷ ಕಾಯುತ್ತದೆ. ಮಳೆಗಾಲದಲ್ಲಿ ಸಸಿ ಹಾಕಿದರೆ 6 ತಿಂಗಳು ನೀರು ನೀಡಬೇಕಿಲ್ಲ. 3 ವರ್ಷಕ್ಕೆ ಹೂ ಕಾಣಿಸಿಕೊಳ್ಳುತ್ತದೆ. 6 ವರ್ಷದಿಂದ ಉತ್ತಮ ಇಳುವರಿ ನೀಡುತ್ತದೆ. 1 ಕುಟುಂಬವನ್ನು ನೂರಾರು ವರ್ಷ ಪೋಷಿಸುತ್ತದೆ ಎನ್ನುತ್ತಾರೆ ರೈತರು.

ಮುಂಗಾರು ಚಿಗುರು: ಬಿಳಿ ಚಿಗುರು ಕಡಿಮೆ ಒಗರಿನಿಂದ ಕೂಡಿದ್ದು, ಉತ್ತಮ ರುಚಿ ಹೊಂದಿರುತ್ತದೆ. ರಾಗಿ ಮುದ್ದೆ ಮತ್ತು ಗಟ್ಟಿಯಾದ ಚಿಗುರು ಸಾರು ನಾಲಿಗೆಯ ರುಚಿ ಹೆಚ್ಚಿಸುತ್ತದೆ. ರಸವನ್ನು ಸೂಪಿನಂತೆ ಬಳಸಿದರೆ ಕಫ, ಪಿತ್ತ ನಿವಾರಿಸಬಹುದು. ಕಿತ್ತಳೆ, ದಾಳಿಂಬೆ, ನಿಂಬೆ, ಚಕ್ಕೋತ ಮತ್ತು ನೆಲ್ಲಿಗಿಂತ ಹೆಚ್ಚಿನ ಸಿ ವಿಟಮಿನ್‌ ಇದರಲ್ಲಿ ಸಿಗುತ್ತದೆ. ಮಾನ್ಸ್‌ನ್‌ಗೂ ಮೊದಲ ಚಿಗುರು ಸೇವವಿಸುವುದು ಉತ್ತಮ ಸಂದರ್ಭ ಎನ್ನುತ್ತಾರೆ ಸಾವಯವ ಕೃಷಿಕ ಕೆಸ್ತೂರು ಲೋಕೇಶ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT