ಶನಿವಾರ, ಮಾರ್ಚ್ 25, 2023
29 °C
ಕನ್ನಡ ಅಭಿವೃದ್ದಿ ಪ್ರಾಧಿಕಾರದಿಂದ ಜಾಗೃತಿ, ಒತ್ತಾಯ

ವೈದ್ಯಕೀಯ ವಲಯದಲ್ಲಿ ಕನ್ನಡ ಬಳಸಿ: ಸಿ.ಎಂ.ನರಸಿಂಹಮೂರ್ತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ವೈದ್ಯಕೀಯ ವಲಯದಲ್ಲಿ ಕನ್ನಡ ಬಳಕೆ ಅನುಷ್ಠಾನವನ್ನು ಕಡ್ಡಾಯವಾಗಿ ಮಾಡುವ ಸಂಬಂಧ ರಾಷ್ಟ್ರೀಯ ವೈದ್ಯರ ದಿನವಾದ ಗುರುವಾರ, ಕನ್ನಡ ಅಭಿವೃದ್ದಿ ಪ್ರಾಧಿಕಾರದ ಜಿಲ್ಲಾ ಸಮಿತಿ ಸದಸ್ಯರು ಜಿಲ್ಲಾ ಆರೋಗ್ಯ ಇಲಾಖೆ ಕಚೇರಿಗೆ ಭೇಟಿ ನೀಡಿ ಮನವಿ ಸಲ್ಲಿಸಿದರು.

ಡಾ.ಬಿಧಾನ್ ಚಂದ್ರರಾಯ್ (ಬಿ.ಸಿ.ರಾಯ್) ಅವರ ಜನ್ಮದಿನದ ಅಂಗವಾಗಿ ಆಚರಿಸಲಾಗುತ್ತಿರುವ ರಾಷ್ಟ್ರೀಯ ವೈದ್ಯರ ದಿನದ ಸಂದರ್ಭದಲ್ಲಿ ಪ್ರಾಧಿಕಾರವು ವೈದ್ಯಕೀಯ ವಲಯದಲ್ಲಿ ಕನ್ನಡ ಬಳಕೆ ಜಾಗೃತಿ ಅಭಿಯಾನವನ್ನು ಹಮ್ಮಿಕೊಂಡಿದ್ದು, ಪ್ರಾಧಿಕಾರದ ಜಿಲ್ಲಾ ಸಮಿತಿ ಸದಸ್ಯರು ಜಿಲ್ಲಾ ಕುಟುಂಬ ಅಧಿಕಾರಿ ಡಾ.ಅಂಕಪ್ಪ ಅವರನ್ನು ಭೇಟಿ ಮಾಡಿ ಕನ್ನಡ ಬಳಕೆಯನ್ನು ಅನುಷ್ಠಾನ ಮಾಡುವಂತೆ ಒತ್ತಾಯಿಸಿದರು. 

ರಾಜ್ಯದ ವೈದ್ಯಕೀಯ ವಲಯದ ಸಿಬ್ಬಂದಿ ಕನ್ನಡ ಬಲ್ಲವರಾದರೆ ವೈದ್ಯರು ಮತ್ತು ರೋಗಿಗಳ ನಡುವಿನ ಸಂವಹನ ಸುಲಭವಾಗುವ ಉದ್ದೇಶದಿಂದ ವೈದ್ಯಕೀಯ ಕ್ಷೇತ್ರದಲ್ಲಿ ಕನ್ನಡ ಬಳಕೆ ಮಾಡಬೇಕು ಎಂದು ಅವರು ಆಗ್ರಹಿಸಿದರು. 

ಕನ್ನಡ ಅಭಿವೃದ್ದಿ ಪ್ರಾಧಿಕಾರದ ಜಿಲ್ಲಾ ಸಮಿತಿಯ ಸದಸ್ಯ ಸಿ.ಎಂ.ನರಸಿಂಹಮೂರ್ತಿ ಮಾತನಾಡಿ ‘ವೈದ್ಯಕೀಯ ಶಿಕ್ಷಣವನ್ನು ಪಡೆದ ಹೊರ ರಾಜ್ಯ, ಹೊರ ದೇಶದ ವಿದ್ಯಾರ್ಥಿಗಳು ಶಿಕ್ಷಣವನ್ನು ಪಡೆದ ನಂತರ ಇಲ್ಲಿಯೇ ನೆಲೆಸಿ ಕಾರ್ಯನಿರ್ವಹಿಸುವಾಗ ಕನ್ನಡದಲ್ಲಿ ಸಂವಹನ ನಡೆಸಿದರೆ ಕನ್ನಡ ಭಾಷೆ ಬೆಳೆಯಲು ಸಹಕಾರಿಯಾಗುತ್ತದೆ. ವಿಶೇಷ ಪರಿಣತ ಶಸ್ತ್ರಚಿಕಿತ್ಸಕರಿಂದ ಹಿಡಿದು ಶುಶ್ರೂಷಕ ಸಿಬ್ಬಂದಿವರೆಗೂ ಸೇವೆ ಅರಸಿ ಬಂದ ರೋಗಿಗಳಿಗೆ ಕನ್ನಡ ಭಾಷೆಯಲ್ಲಿ ಸಂವಹನ ಮಾಡಿ ಸೇವೆ ಒದಗಿಸಿದರೆ ಮೂಲ ಆಶಯವು ಈಡೇರುತ್ತದೆ’ ಎಂದರು.

ಡಾ.ಅಂಕಪ್ಪ ಮಾತನಾಡಿ, ‘ರೋಗಿಗಳು ಆಸ್ಪತ್ರೆಗೆ ಬಂದಾಗ ವೈದ್ಯರು ರೋಗಿಗಳ ಕನ್ನಡ ಭಾಷೆಯಲ್ಲಿ ಸಾಂತ್ವನ ನುಡಿಗಳನ್ನಾಡಿ ಔಷಧ ಉಪಚಾರಗಳಿಗೆ ಮುಂದಾದರೆ ಹೆಚ್ಚು ಪರಿಣಾಮಕಾರಿಯಾಗುತ್ತದೆ. ಆಸ್ಪತ್ರೆಗಳಲ್ಲಿ ನಾಮಫಲಕ, ಭಿತ್ತಿಪತ್ರ, ಅರ್ಜಿ, ರೋಗಿಗಳಿಗೆ ಸಂಬಂಧಪಟ್ಟ ವಿಷಯಗಳನ್ನು ಕನ್ನಡದಲ್ಲಿಯೇ ಹೊರಡಿಸಲಾಗುತ್ತದೆ. ಕೊರೊನಾ ಸಾಂಕ್ರಾಮಿಕ ರೋಗ ಸೃಷ್ಟಿಸಿರುವ ಮಾನಸಿಕ ದುಗುಡದ ನಡುವೆ ರೋಗಿ ಮತ್ತು ವೈದ್ಯರ ಸಂಬಂಧವನ್ನು ಭಾಷೆಯು ಗಟ್ಟಿಗೊಳಿಸುತ್ತದೆ’ ಎಂದು ಹೇಳಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎಚ್.ಕೆ.ಗಿರೀಶ್, ಕನ್ನಡ ಜಾಗೃತಿ ಸಮಿತಿ ಸದಸ್ಯರಾದ ಮಹೇಶ್ ಚಿಕ್ಕಲೂರು, ದುಗ್ಗಟ್ಟಿ ಮಲ್ಲಿಕಾರ್ಜುನ ಸ್ವಾಮಿ ಮತ್ತಿತರರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು