ಬುಧವಾರ, 21 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದೇಸಿ ಸಾಧಕರು: ಜಾನಪದ ಬದುಕಿನ ಪರಮಪದ!

ತತ್ವಪದ ಬೆಳಕಿನಲ್ಲಿ ವಾಸ್ತವದ ಹುಡುಕಾಟ ನಡೆಸುವ ಪದಕಾರ ಶ್ರೀನಿವಾಸಯ್ಯ
ನಾ.ಮಂಜುನಾಥಸ್ವಾಮಿ
Published 6 ಡಿಸೆಂಬರ್ 2023, 6:29 IST
Last Updated 6 ಡಿಸೆಂಬರ್ 2023, 6:29 IST
ಅಕ್ಷರ ಗಾತ್ರ

ಯಳಂದೂರು: ‘ಜನನ ಮರಣ ಆದಿಗಳಿಗೆ ಧೋರಣೆ, ಮಾನ ಪ್ರಾಣ ಇಂದ್ರಿಯಗಳಿಗೆ ಸಾಕ್ಷಿ ಆಗಿರುವಾತನೆ, ಅನುಪಮ ತತ್ವಗುಣ, ಪದಧ್ಯಾಯಿನಿ, ಶ್ರೀಮುನಿ ಜನ ವಂದಿತನೆ... ತನಗೆ ಯಾರೆಂಬುದ ಅರುಹಿದೆ, ಶ್ರೀ ಸದ್ಗುರು ವರನಿಗೆ ಅತಿಶರಣು...’

ಉದಾತ್ತ ಮೌಲ್ಯ ಪರಂಪರೆಯನ್ನು ತತ್ವಪದಗಳ ಮೂಲಕ ಧ್ಯಾನಿಸುವ ಮೊದಲ ಚರಣ ಇದು.  ಇಂತಹ ಹಾಡಿನ ಸಾಲನ್ನು ತಮ್ಮದೆ ತಾಳ, ಲಯದಲ್ಲಿ ಪ್ರಸ್ತುತ ಪಡಿಸುವ ಕೆಸ್ತೂರು ಶ್ರೀನಿವಾಸಯ್ಯ ಅಪರೂಪದ ಜಾನಪದ ಮತ್ತು ತತ್ವಪದಗಳ ಹಾಡುಗಾರ.

ತಾಲ್ಲೂಕಿನ ಕೆಸ್ತೂರು ಗ್ರಾಮದ 80ರ ಹರೆಯದ ಕೆ.ಎನ್.ಶ್ರೀನಿವಾಸಯ್ಯ ಬಾಲ್ಯದಿಂದಲೂ ಭಕ್ತಿ ಪಂಥದ ಹಾಡುಗಳಿಗೆ ಕಿವಿಕೊಟ್ಟವರು. ಇವರು ತತ್ವ ಪದಗಳಿಗೆ ಯಾವುದೇ ಶಾಸ್ತ್ರೀಯ ಚೌಕಟ್ಟಿನ ಸ್ಥಾನ ನೀಡರು. ಶುದ್ಧ ಮಾರ್ಗದಲ್ಲಿ ಹಾಡಲೇ ಬೇಕೆಂಬ ಕಟ್ಟಲೆಯಿಂದ ಹೊರ ಬಂದವರು. ಜನಪದ, ಭಜನೆ, ತತ್ವ ಪದಗಳಿಗೆ ಪ್ರಥಮ ಸ್ಥಾನ ನೀಡುವ ಇವರ ನಾದ ಲಹರಿ ರಾಜಧಾನಿಯನ್ನು ಮುಟ್ಟಿದೆ. ಜನಮನವನ್ನು ಕಾಡಿದೆ.

ಗ್ರಾಮೀಣ ಜನರ ಸಿರಿಕಂಠದಲ್ಲಿ ಆಗಾಗ ಕೇಳಿಸುವ ಪದಗಳಿಗೆ ದೇಶಿಯತೆಯ ಘಮಲು ಇದ್ದೇ ಇರುತ್ತದೆ. ಆಲಿಸುವವರಿಗೂ ಹಾಡುಗಳ ರಾಗ, ತಾಳದ ಸೊಗಸು ಗೊತ್ತಿರುತ್ತದೆ. ಅಂತಹ ಸಾಹಿತ್ಯದ ಪರಂಪರೆಯ ಬನಿಯಾಗಿ, ಮೌಲ್ಯಗಳ ರೂಪಕವಾಗಿ ಕಾಡುವ ಜನಪದರ ತತ್ವ ಪದಗಳಿಗೆ ಈಗಲೂ ಎತ್ತರದ ಸ್ಥಾನವಿದೆ. ಹಾಗಾಗಿ, ಸಾಂಸ್ಕೃತಿಕ ಸಭೆ, ಸಮಾರಂಭಗಳಲ್ಲಿ ತತ್ವ ಪದಗಳ ಮೊದಲ ಚರಣ ಹಾಡಿಯೇ ಮುಂದೆ ಸಾಗಬೇಕು ಎಂಬುದು ಹಾಡುಗಾರರ ಅಭಿಮತ.

ಆಕಾಶವಾಣಿ ಕಲಾವಿದ: 

ಶ್ರೀನಿವಾಸ್  ಅವರು ಬಾಲ್ಯದಲ್ಲಿ ಸಿದ್ದರಾಮ, ಬಸವಣ್ಣ, ಕನಕರ ಭಕ್ತಿ ಮತ್ತು ಮುಕ್ತಿ ಹಾಡುಗಳನ್ನು ಕೇಳುತ್ತ, ಗ್ರಾಮೀಣ ಪ್ರದೇಶದಲ್ಲಿ ರಾಮಾಯಣ ಮತ್ತು ಮಹಾಭಾರತ ನಾಟಕಗಳನ್ನು ನೋಡುತ್ತ, ಹಾಡುತ್ತ ಬೆಳೆದವರು. ರಂಗದ ಮೇಲೆ ಸಮಯ ಹೊಂದಿಸಲು ಹಾಡುತ್ತಿದ್ದ ಭಕ್ತಿ ಗಾಯನವನ್ನು ಇವರು ತಮ್ಮ ಹವ್ಯಾಸದ ಭಾಗವಾಗಿಸಿಕೊಂಡರು.

ಜನಪದರು ಸರಳವಾಗಿ ಪದ ಕೋಶಗಳನ್ನು ತೆರೆಯುತ್ತಾರೆ. ವಚನ ವೈವಿಧ್ಯ, ಭಕ್ತಿ ಮತ್ತು ನಾದಪ್ರಿಯತೆ ನಮ್ಮನ್ನು ಕಾಡಿದೆ. ಕೀರ್ತನೆ, ವಚನ ಗಾಯನಗಳ ಅರ್ಥ, ಸಮಾಜಕ್ಕೆ ಅವುಗಳ ಮಹತ್ತು, ಅಂದಿನ ದಿನಮಾನಗಳಲ್ಲಿ ಆತ್ಮ, ಪರಮಾತ್ಮ, ಸ್ವರ್ಗ, ನರಕಗಳ ಕಲ್ಪನೆಯ ಹಿನ್ನಲೆಯಲ್ಲಿ ಗಟ್ಟಿಕೊಳ್ಳುತ್ತಿದ್ದ ಮಟ್ಟುಗಳನ್ನು ಉಸಿರಾಗಿಸಿಕೊಂಡಿದ್ದಾರೆ.

‘ನಮ್ಮ ಹಾಡು-ಹಣತೆ ಬೆಳಗಲು ಇದೇ ಮೂಲ ಕಾರಣ’ ಎಂದು ಹೇಳುತ್ತಾರೆ ಶ್ರೀನಿವಾಸಯ್ಯ. 

ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯಕ್ರಮ, ಯುಗಾದಿ ವಿಶೇಷ ವೇದಿಕೆ, ಬೆಂಗಳೂರಿನಲ್ಲಿ ನಡೆಯುವ ನಾಡು-ನುಡಿ ಸಮ್ಮೇಳನಗಳಲ್ಲಿ ಇವರ ಕಲಾ ಪ್ರದರ್ಶನಕ್ಕೆ ವೇದಿಕೆ ಸಿಕ್ಕಿದೆ. ಬಹುಮಾನ, ಸಮ್ಮಾನಕ್ಕೂ ಭಾಜನರಾಗಿದ್ದಾರೆ. 20 ವರ್ಷದಿಂದ ಆಕಾಶವಾಣಿ ಹಾಗೂ ಇತರ ವೇದಿಕೆಗಳಲ್ಲಿ ಅವಕಾಶ ಸಿಕ್ಕಿದೆ. ಬಸವಾದಿ ಶರಣರ ಭಜನೆ, ಕನಕರ ಸಂಕಟ-ಸಂತಸಗಳ ಕೀರ್ತನೆ, ಹರಿಭಕ್ತಿ ಸ್ಮರಣೆ, ಕಥೆ ಕಾಲಕ್ಷೇಪಗಳಲ್ಲಿ ಇವರ ಗಾಯನ ಲಹರಿ ಹರಿದಿದೆ. 

‘ಕಲಿಯುವ ಕಸುವು ಇರಲಿ’

‘ಶಿವ ಎಂಬ ಶಬ್ಧ ಬಾಯೊಳು ಬಂದರೆ, ಬಂದ ಪಾಪ ದೂರಾಗುವುದು, ದೇಹದಲ್ಲಿ ಸ್ಥಿರವಿಲ್ಲದ ಮನಸ್ಸು ಇಲ್ಲದೆ ಇದ್ದರೆ, ಬದುಕು ನೆಲೆ ಇಲ್ಲದೆ ಹರಿದಾಡುವುದು..’  ಎನ್ನುತ್ತಾರೆ ಶ್ರೀನಿವಾಸಯ್ಯ.

‘ಏಕತಾರಿ, ದಮಡಿ, ತಂಬೂರಿ, ಕಂಜರ ವಾದ್ಯಗಳಲ್ಲಿ ಒಂದನ್ನು ನುಡಿಸಿಯೂ ಗಾಯನ ಸಾಂಗತ್ಯದೊಳಗೆ ಹಾಡಬಹುದು. ಜನಪದ ನುಡಿಸಬಹುದು. ಇಂದಿನ ಯುವ ಜನರಿಗೆ ಮೌಲ್ಯಗಳ ಕಣಜವಾದ ತತ್ವಪದಗಳಿಗೆ ಹೊಸತನವನ್ನು ಕಟ್ಟುವ ತವಕ, ಕಲಿಯುವ ತುಡಿತ ಇದ್ದರೆ, ತತ್ವ ಪದಕಾರರ ಹಾಡುಗಳನ್ನು ಹೊಸ ಮಾರ್ಗದಲ್ಲಿ ಮುಟ್ಟಿಸಲು ಸಾಧ್ಯ’ ಎಂದು ಸಲಹೆ ನೀಡುತ್ತಾರೆ ಅವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT