ಭಾನುವಾರ, 28 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜಿಲ್ಲಾ ದಸರಾ ಸಂಭ್ರಮಕ್ಕೆ ಕ್ಷಣಗಣನೆ

ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ; ಸ್ಥಳೀಯ ಕಲಾವಿದರಿಗೆ ಆದ್ಯತೆ
Last Updated 5 ಅಕ್ಟೋಬರ್ 2021, 16:40 IST
ಅಕ್ಷರ ಗಾತ್ರ

ಚಾಮರಾಜನಗರ: ಮೈಸೂರು ದಸರಾ ಮಹೋತ್ಸವದ ಅಂಗವಾಗಿ ಜಿಲ್ಲೆಯಲ್ಲೂ ಹಮ್ಮಿಕೊಂಡಿರುವ ನಾಲ್ಕು ದಿನದ ದಸರಾ ಮಹೋತ್ಸವಕ್ಕೆ ಗುರುವಾರ (ಅ.7) ಚಾಲನೆ ಸಿಗಲಿದ್ದು, ಸಿದ್ಧತೆ ಅಂತಿಮ ಹಂತ ತಲುಪಿದೆ.

2019ರಲ್ಲಿ ಅದ್ಧೂರಿಯಾಗಿ ಜಿಲ್ಲಾ ದಸರಾ ಆಯೋಜಿಸಲಾಗಿತ್ತು. ಕಳೆದ ವರ್ಷ ಕೋವಿಡ್‌ ಮೊದಲನೇ ಅಲೆಯ ಕಾರಣಕ್ಕೆ ಜಿಲ್ಲಾ ಮಟ್ಟದ ದಸರಾ ನಡೆದಿರಲಿಲ್ಲ. ಸರಳ ಆಚರಣೆಗೆ ಸೀಮಿತವಾಗಿತ್ತು. ಚಾಮರಾಜೇಶ್ವರ ದೇವಾಲಯದ ಒಳ ಆವರಣದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು, ಕನಿಷ್ಠ ಪ್ರೇಕ್ಷಕರಿ‌ಗೆ ಮಾತ್ರ ಅವಕಾಶ ನೀಡಿ, ಕೇಬಲ್‌ ಟಿವಿ, ಫೇಸ್‌ಬುಕ್‌ಗಳಲ್ಲಿ ಕಾರ್ಯಕ್ರಮದ ನೇರಪ್ರಸಾರ ಮಾಡಲಾಗಿತ್ತು.

ಈ ಬಾರಿ ಕೋವಿಡ್‌ ಪರಿಸ್ಥಿತಿ ನಿಯಂತ್ರಣದಲ್ಲಿರುವುದರಿಂದ ಕೋವಿಡ್‌ ನಿಯಮಗಳ ಪಾಲನೆಗೆ ಒಳಪಟ್ಟು ದಸರಾ ಆಚರಿಸಲು ಸರ್ಕಾರ ಅನುಮತಿ ನೀಡಿದ್ದು, ಅ.7ರಿಂದ 10ರವರೆಗೆ ನಡೆಸಲು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ವಿದ್ಯುತ್‌ ಅಲಂಕಾರ, ಉದ್ಘಾಟನಾ ಸಮಾರಂಭ ಹಾಗೂ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಈ ಬಾರಿಯ ದಸರಾ ಸೀಮಿತವಾಗಿದೆ. ಈ ಹಿಂದೆ ನಾಲ್ಕು ದಿನವೂ ಕಲಾ ತಂಡಗಳ ಮೆರವಣಿಗೆ, ಮಹಿಳಾ ದಸರಾ, ರೈತ ದಸರಾ, ಕ್ರೀಡಾ ದಸರಾ, ಆಹಾರ ದಸರಾ... ಮುಂತಾದ ಒಂದಿಲ್ಲೊಂದು ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಲಾಗುತ್ತಿತ್ತು. ದಸರಾ ಅಂಗವಾಗಿ ಆಕರ್ಷಕ ಫಲಪುಷ್ಪ ಪ್ರದರ್ಶನಗಳನ್ನೂ ಏರ್ಪಡಿಸಲಾಗುತ್ತಿತ್ತು. ಕೋವಿಡ್‌ ಹಾವಳಿ ಇದಕ್ಕೆಲ್ಲವೂ ತಡೆಯೊಡ್ಡಿದೆ.

ಪೂಜೆಯೊಂದಿಗೆ ಚಾಲನೆ: ಗುರುವಾರ ಬೆಳಿಗ್ಗೆ 10.15ಕ್ಕೆ ಚಾಮರಾಜೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯದೊಂದಿಗೆ ಜಿಲ್ಲಾ ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ಸಿಗಲಿದೆ. ಬಳಿಕ ದೇವಾಲಯದ ಆವರಣದಲ್ಲಿ ಕಲಾ ತಂಡಗಳ ಪ್ರದರ್ಶನವೂ ನಡೆಯಲಿದೆ. 11 ಗಂಟೆಗೆ ಚಿತ್ರ ಕಲಾ ಪ್ರದರ್ಶನವನ್ನೂ ಹಮ್ಮಿಕೊಳ್ಳಲಾಗಿದೆ.

ದೇವಾಲಯದ ಹೊರಭಾಗದಲ್ಲಿ ನಿರ್ಮಿಸಿರುವ ವೇದಿಕೆಯಲ್ಲಿ ಸಂಜೆ 5.30ಕ್ಕೆ ದಸರಾ ಉದ್ಘಾಟನಾ ಕಾರ್ಯಕ್ರಮ ನೆರವೇರಲಿದೆ.

ಜಿಲ್ಲಾ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ಸಿ. ಪುಟ್ಟರಂಗಶೆಟ್ಟಿ ಅಧ್ಯಕ್ಷತೆ ವಹಿಸುವರು.

ಲೋಕಸಭಾ ಸದಸ್ಯರಾದ ವಿ.ಶ್ರೀನಿವಾಸ ಪ್ರಸಾದ್, ಶಾಸಕರಾದ ಆರ್.ನರೇಂದ್ರ, ಎನ್.ಮಹೇಶ್, ಸಿ.ಎಸ್. ನಿರಂಜನ್‌ಕುಮಾರ್, ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷರಾದ ಎಂ.ರಾಮಚಂದ್ರ, ನಗರಸಭಾ ಅಧ್ಯಕ್ಷೆ ಸಿ.ಎಂ.ಆಶಾ, ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪಿ.ಬಿ.ಶಾಂತಮೂರ್ತಿ ಕುಲಗಾಣ, ನಗರಸಭಾ ಉಪಾಧ್ಯಕ್ಷೆ ಪಿ.ಸುಧಾ ಸಮಾರಂಭದಲ್ಲಿ ಉಪಸ್ಥಿತರಿರಲಿದ್ದಾರೆ.

ಸ್ಥಳೀಯ ಕಲಾವಿದರಿಂದ ಸಾಂಸ್ಕೃತಿಕ ವೈವಿಧ್ಯ

ದಸರಾ ಪ್ರಯುಕ್ತ ನಾಲ್ಕು ದಿನವೂ ಚಾಮರಾಜೇಶ್ವರ ದೇವಾಲಯದ ಆವರಣದ ಬಳಿ ನಿರ್ಮಿಸಲಾಗಿರುವ ಮುಖ್ಯ ವೇದಿಕೆಯಲ್ಲಿ ಸಂಜೆ 4ರಿಂದ ರಾತ್ರಿ 9.45ರವರೆಗೆ ಹಾಗೂ ಜಿಲ್ಲಾಡಳಿತ ಭವನದಲ್ಲಿರುವ ಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಮಧ್ಯಾಹ್ನ 2ರಿಂದ ರಾತ್ರಿ 9.50ರವರೆಗೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ.

ಈ ಬಾರಿಯ ಕಾರ್ಯಕ್ರಮದಲ್ಲಿ ಜಿಲ್ಲಾ ಮಟ್ಟದ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆ ನೀಡಿರುವುದು ವಿಶೇಷ. ಖ್ಯಾತ ಗಾಯಕರು, ಸಂಗೀತ ನಿರ್ದೇಶಕರು, ಸಿನಿಮಾ ನಟರ ಕಾರ್ಯಕ್ರಮಗಳು ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿಯಲ್ಲಿ ಇಲ್ಲ.

ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ಜೆ.ಎಚ್‌.ಪಟೇಲ್‌ ಸಭಾಂಗಣದಲ್ಲಿ ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ.

ರಿಯಾಲಿಟಿ ಶೋ ಮಜಾ ಭಾರತ ಖ್ಯಾತಿಯ ಜಗಪ್ಪ ತಂಡದ ಹಾಸ್ಯೋತ್ಸವ, ಉಮ್ಮತ್ತೂರು ಬಸವರಾಜು, ಮಿಮಿಕ್ರಿ ಗೋಪಿ ತಂಡದ ಹಾಸ್ಯ ಸಂಜೆ, ಬಸವಟ್ಟಿ ಲೋಕೇಶ್‌ ಮತ್ತು ತಂಡದ ನೃತ್ಯ ಪ್ರದರ್ಶನ ಸಾಂಸ್ಕೃತಿಕ ಕಾರ್ಯಕ್ರಮಗಳ ಪಟ್ಟಿಯಲ್ಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT