ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರ್ವಹಣೆ ಇಲ್ಲದೆ ಸೊರಗುತ್ತಿದೆ ದೊಡ್ಡರಸನ ಕೊಳ

ಮಳೆಗಾಲದಲ್ಲಿ ಮಾತ್ರ ನೀರು, ಉಳಿದ ಸಮಯದಲ್ಲಿ ಗಿಡಗಂಟಿ, ಕಸಕಡ್ಡಿಗಳ ತಾಣ
Last Updated 11 ನವೆಂಬರ್ 2018, 20:00 IST
ಅಕ್ಷರ ಗಾತ್ರ

ಚಾಮರಾಜನಗರ: ಒಂದು ಕಾಲದಲ್ಲಿ ಇಡೀ ಪಟ್ಟಣಕ್ಕೆ ಸಿಹಿನೀರು ಪೂರೈಸುತ್ತಿದ್ದಇತಿಹಾಸ ಪ್ರಸಿದ್ಧ ದೊಡ್ಡರಸನ ಕೊಳ ಈಗ ಸೂಕ್ತ ನಿರ್ವಹಣೆ ಇಲ್ಲದೇ ಸೊರಗುತ್ತಿದೆ.

ಜೋರು ಮಳೆ ಬಂದರೆ ಮತ್ತು ಗಣೇಶ ಹಬ್ಬದ ಸಂದರ್ಭದಲ್ಲಿ ಗಣಪತಿ ಮೂರ್ತಿಗಳ ವಿಸರ್ಜನೆಯ ಸಂದರ್ಭದಲ್ಲಿ ಮಾತ್ರ ನೀರು ತುಂಬಿ ನಳನಳಿಸುವ ಈ ಕೆರೆ, ಉಳಿದ ದಿನಗಳಂದು ಮಕ್ಕಳಿಗೆ ಆಟದ ಮೈದಾನ ಹಾಗೂ ಕಸ ಹಾಕುವ ತಾಣವಾಗಿ ಬದಲಾಗುತ್ತದೆ. ಗಿಡಗಂಟೆಗಳು ಬೆಳೆದು ಕೆರೆಯ ಸೌಂದರ್ಯವೇ ಹಾಳಾಗಿದೆ.

ಸರಿಸೃಪಗಳ ಉಪಟಳ: ಕೊಳದ ಸುತ್ತಲೂ ಗಿಡಗಂಟಿಗಳು ಬೆಳೆದಿರುವುದರಿಂದ ಹಾವು, ಚೇಳಿನಂತಹ ಜಂತುಗಳು ಹರಿದಾಡುತ್ತವೆ. ದೂರದಿಂದ ಕೊಳ ಸುಂದರವಾಗಿ ಕಂಡರೂ ಹತ್ತಿರ ಹೋದರೆ ಅಶುದ್ಧತೆ ರಾಚುತ್ತದೆ.

ವಿದ್ಯುತ್‌ ಇಲ್ಲ: ಈ ಕೊಳಕ್ಕೆ ವಿದ್ಯುತ್‌ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿಲ್ಲ. ಸಮೀಪದಲ್ಲೇ ವಿದ್ಯುತ್‌ ಕಂಬಗಳಿದ್ದರೂ ಬಲ್ಬ್‌ಗಳಿಲ್ಲ.

ಮಳೆಗಾಲದಲ್ಲಿ ಮಾತ್ರ ನೀರು: ಜೋರು ಮಳೆಯಾದಾಗ ಕೊಳದಲ್ಲಿ ನೀರು ತುಂಬುತ್ತದೆ. ಈ ಬಾರಿಯ ಮಳೆಗಾಲದಲ್ಲಿ ಕೊಳ ಭರ್ತಿಯಾಗಿ ಜನರಲ್ಲಿ ಸಂತಸ ಮೂಡಿಸಿತ್ತು. ಕರಿವರದರಾಜನ ಬೆಟ್ಟದಿಂದ ಹರಿದು ಬರುವ ನೀರಿನ ಮಾರ್ಗವನ್ನು ಅಭಿವೃದ್ಧಿ ಪಡಿಸಿದ್ದ ನಗರಸಭೆ, ಪೈಪ್‌ ಮೂಲಕ ನೀರು ಕರೆಗೆಗೆ ಬರುವಂತೆ ಮಾಡಿತ್ತು. ಆದರೆ, ಮಳೆ ನಿಲ್ಲುತ್ತಿದ್ದಂತೆ, ಕೊಳದಲ್ಲಿರುವ ನೀರೂ ಬತ್ತುತ್ತದೆ.

ಈಕೊಳದ ಸಮೀಪ ಗಣಪತಿ, ಸುಬ್ರಹ್ಮಣ್ಯ,ಸಾಯಿಬಾಬಾ, ಅಯ್ಯಪ್ಪ, ಶನೀಶ್ವರ ಸ್ವಾಮಿ ದೇವಸ್ಥಾನಗಳಿಗೆ. ಪ್ರತಿ ನಿತ್ಯ ಹತ್ತಾರು ಭಕ್ತರು ಇಲ್ಲಿಗೆ ಭೇಟಿ ನೀಡುತ್ತಾರೆ.

ಕೊಳದಲ್ಲಿ ಸದಾ ನೀರು ತುಂಬಿದ್ದರೆ, ಮತ್ತಷ್ಟುಖುಷಿ ಆಗುತ್ತದೆ. ಮನಸ್ಸಿಗೆ ಪ್ರಶಾಂತತೆ ಎನಿಸುತ್ತದೆ. ನೀರು ಇದ್ದರೆ ಸುತ್ತಮುತ್ತಲ ಪ್ರದೇಶದಲ್ಲಿ ಅಂತರ್ಜಲ ವೃದ್ಧಿಗೂ ಅನುಕೂಲವಾಗಲಿದೆ ಎಂದು ಹೇಳುತ್ತಾರೆ ಕೊಳದ ಬೀದಿ ನಿವಾಸಿಗಳು.

‘ಗಣಪತಿ ಹಬ್ಬದ ಸಂದರ್ಭದಲ್ಲಿ ತಾತ್ಕಾಲಿಕವಾಗಿ ನೀರು ತುಂಬಿಸಲಾಗುತ್ತದೆ. ಮೂರ್ತಿಗಳ ವಿಸರ್ಜಿಸಿದ ಬಳಿಕ ಕೊಳ ಖಾಲಿ. ಕಲ್ಯಾಣಿಯನ್ನು ಆಕರ್ಷಕಗೊಳಿಸಲು ನಗರಸಭೆ ಮುಂದಾಗಬೇಕು’ ಎಂದು ನಿವಾಸಿ ಪ್ರಭುಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ದೇವಸ್ಥಾನಕ್ಕೂ ಇದೇ ನೀರು ಬಳಕೆ: ಹಿಂದೆ ಪಟ್ಟಣದ ಚಾಮರಾಜೇಶ್ವರ ದೇವಾಲಯದಲ್ಲಿ ಅಭಿಷೇಕ ಮಾಡಲು ಅರ್ಚಕರು ಈ ಕೊಳದಿಂದಲೇ ನೀರು ತೆಗೆದುಕೊಂಡು ಹೋಗುತ್ತಿದ್ದರು. ಮೊದಲು ಕೊಳದ ನೀರು ಶುದ್ಧವಾಗಿತ್ತು. ಅಂತಹ ಶುದ್ಧತೆಯ ನೀರನ್ನು ಈಗಲೂ ಉಳಿಸಿಕೊಳ್ಳಲು ನಗರಸಭೆ ಮುಂದಾಗಬೇಕು ಎನ್ನುತ್ತಾರೆ ಅವರು.

ಕೊಳದಲ್ಲಿ ಹೂಳು ಕೂಡ ತುಂಬಿದೆ. ಅಭಿವೃದ್ಧಿ ಪಡಿಸಿದರೆ ಇದೊಂದು ಪ್ರವಾಸಿ ತಾಣವಾಗುವುದರಲ್ಲಿ ಯಾವುದೇ ಸಂಶಯವಿಲ್ಲ ಎಂಬುದು ಸ್ಥಳೀಯ ನಿವಾಸಿ ದೊರೆ ಅವರ ಅಭಿಪ್ರಾಯ.

ಮುಂದಿನ ದಿನಗಳಲ್ಲಿ ಕ್ರಮ: ಕೊಳ ಅಭಿವೃದ್ಧಿಗೆ ಸದ್ಯಕ್ಕೆ ಹಣ ಮೀಸಲಿಡಲಾಗಿಲ್ಲ. ಮುಂದಿನ ದಿನಗಳಲ್ಲಿ ಸದಸ್ಯರ ಸಭೆ ಕರೆದು ವಿದ್ಯುತ್‌ ಸೌಲಭ್ಯ ಹಾಗೂ ಇನ್ನಿತರ ಅಭಿವೃದ್ಧಿ ಕಾರ್ಯಗಳಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ನಗರಸಭೆ ಆಯುಕ್ತ ಎನ್‌.ರಾಜಣ್ಣ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಸಿಹಿ ನೀರಿನ ಕೊಳ

‘ಹಿಂದೆ ನಮ್ಮ ಚಾಮರಾಜನಗರದ ಜನತೆಗೆಸಿಹಿ ನೀರು ಒದಗಿಸುತ್ತಿದ್ದಒಂದೇ ಒಂದುಕೊಳ ಇದು. ಅಂದಿನಿಂದಲೂ ಈ ಕೊಳ ಪವಿತ್ರವಾಗಿದೆ ಎಂಬುದು ಜನರ ನಂಬಿಕೆ. ಆದರೆ,ಇತ್ತೀಚಿನದಿನಗಳಲ್ಲಿ ಅಂತರ್ಜಲ ಕೊರತೆಯಿಂದ ಕೊಳ ಸಂಪೂರ್ಣ ಬತ್ತಿ ಹೋಗಿದೆ. ಸಾರ್ವಜನಿಕರು ಕೂಡ ಇಲ್ಲಿ ಕಸ ಎಸೆಯುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕು. ನಗರಸಭೆಯು ಕೊಳದ ಅಭಿವೃದ್ಧಿಗೆ ಮುಂದಾಗಬೇಕು’ ಎಂದು ಒತ್ತಾಯಿಸುತ್ತಾರೆ ಕೊಳದ ಬೀದಿಯ ನಿವಾಸಿ ದೊರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT