ಬುಧವಾರ, 28 ಫೆಬ್ರುವರಿ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಯಳಂದೂರು | ಒಣಹುಲ್ಲು ದುಬಾರಿ: ಬರದ ನಡುವೆ ಬೆಲೆಯ ಬರೆ

Published 18 ಡಿಸೆಂಬರ್ 2023, 5:05 IST
Last Updated 18 ಡಿಸೆಂಬರ್ 2023, 5:05 IST
ಅಕ್ಷರ ಗಾತ್ರ

ಯಳಂದೂರು: ಈ ಬಾರಿ ಬರ ಎಲ್ಲೆಡೆ ಕಾಡಿದೆ. ಭತ್ತ ಬೇಸಾಯದ ವ್ಯಾಪ್ತಿ ತಗ್ಗಿದೆ. ನೀರಾವರಿ ಪ್ರದೇಶಗಳಲ್ಲೂ ಕನಿಷ್ಠ ಮಟ್ಟದ ಬಿತ್ತನೆಯಾಗಿದೆ. ಒಣಮೇವು ಸಾಕಷ್ಟು ಪ್ರಮಾಣದಲ್ಲಿ ಉತ್ಪಾದನೆಯಾಗಿಲ್ಲ. ಹೀಗಾಗಿ ಬೇಡಿಕೆ ಹೆಚ್ಚಾಗಿದ್ದು, ಬೆಲೆಯೂ ಜಾಸ್ತಿಯಾಗಿದೆ.   

ರೈತರು ಹುಲ್ಲು ಸಂಗ್ರಹಿಸಲು ಮೈಸೂರು ಮತ್ತು ಮಂಡ್ಯ ಜಿಲ್ಲೆಗಳತ್ತ ಮುಖ ಮಾಡುವಂತಾಗಿದೆ. 

ತಾಲ್ಲೂಕಿನಲ್ಲಿ ಪ್ರತಿ ವರ್ಷ 3,000 ಹೆಕ್ಟೇರ್ ಪ್ರದೇಶದಲ್ಲಿ ಭತ್ತ ಬಿತ್ತನೆ ಆಗುತ್ತಿತ್ತು. ಮುಂಗಾರು ಮಳೆಯ ಕೊರತೆ ಕಾರಣಕ್ಕೆ ಕಬಿನಿ ನಾಲೆಯಲ್ಲಿ ಸಾಕಷ್ಟು ಪ್ರಮಾಣದಲ್ಲಿ ನೀರು ಪೂರೈಕೆಯಾಗದ್ದರಿಂದ 800 ಹೆಕ್ಟೇರ್‌ ಪ್ರದೇಶದಲ್ಲಿ ಮಾತ್ರ ಬಿತ್ತನೆಯಾಗಿತ್ತು. ರಾಗಿ ಮತ್ತು ಕಬ್ಬು ನಾಟಿ ಪ್ರಕ್ರಿಯೆಯ ಮೇಲೆ ಮಳೆ ಕೊರತೆ ಬಾಧಿಸಿತು. ಇದರಿಂದ ವರ್ಷ ಪೂರ್ತಿ  ಜಾನುವಾರುಗಳಿಗೆ ಮೇವು ಸಂಗ್ರಹಿಸಲು ರೈತರಿಗೆ ಸಾಧ್ಯವಾಗಿಲ್ಲ. ಹುಲ್ಲಿನ ಧಾರಣೆ ಹೆಚ್ಚಾಗಿರುವುದು ಅವರಿಗೆ ಹೊರೆಯಾಗಿದೆ. 

ನೀರಾವರಿ ಪ್ರದೇಶಗಳಲ್ಲಿ ಈಗ ಭತ್ತ ಕಟಾವಿಗೆ ಬಂದಿದೆ. ಸಾಗುವಳಿ ಪ್ರಮಾಣ ಕುಗ್ಗಿರುವುದರಿಂದ ಕೊಯ್ಲಿನ ಯಂತ್ರಗಳು ಹೆಚ್ಚಿನ ಪ್ರಮಾಣದಲ್ಲಿ ಬಂದಿಲ್ಲ. ಯಂತ್ರಗಳಿಂದ ಭತ್ತದ ಸಸಿಗಳನ್ನು ಕತ್ತರಿಸಿದರೆ ಮೇವಿನ ಪ್ರಮಾಣ ಕುಸಿಯುವ ಆತಂಕವೂ ಬೇಸಾಯಗಾರರನ್ನು ಕಾಡುತ್ತಿದೆ. ಹಾಗಾಗಿ, ಕೆಲ ಕೃಷಿಕರು ಮೇವು ಸಂಗ್ರಹಿಸಲು ಶ್ರಮಿಕರಿಗೆ ಹೆಚ್ಚು ಕೂಲಿ ನೀಡಿ ಭತ್ತದ ಕಟಾವು ಮಾಡಿಸುವತ್ತ ಚಿತ್ತ ಹರಿಸಿದ್ದಾರೆ.   

‘ಗ್ರಾಮೀಣ ಪ್ರದೇಶದಲ್ಲೂ ಈ ಬಾರಿ ಒಣ ಹುಲ್ಲಿನ ಕೊರತೆ ಇದೆ. ಜಾನುವಾರು ಸಾಕಣೆದಾರರು ನೇರವಾಗಿ ನರಸೀಪುರ, ತಲಕಾಡು, ಮಳವಳ್ಳಿ ಭಾಗಗಳಿಂದ ಹುಲ್ಲು ಖರೀದಿಸಲು ಮುಂದಾಗಿದ್ದಾರೆ. ಕಳೆದ ವರ್ಷ 1 ಟ್ರಾಕ್ಟರ್ ನೆಲ್ಲಿನ ಹುಲ್ಲು ₹10 ಸಾವಿರಕ್ಕೆ ಸಿಗುತ್ತಿತ್ತು. ಈ ಬಾರಿ ₹15 ಸಾವಿರಕ್ಕೆ ದಿಢೀರ್ ಏರಿಕೆ ಕಂಡಿದೆ, 1 ಎತ್ತನಗಾಡಿ ಒಣ ಮೇವಿನ ಧಾರಣೆ ₹3000 ಇದ್ದದ್ದು, ₹5,000 ಮುಟ್ಟಿದೆ. ಮುಂದೆ ಬೇಡಿಕೆಗೆ ತಕ್ಕಂತೆ ಹುಲ್ಲಿನ ಬೆಲೆ ಮತ್ತಷ್ಟು ಏರಲಿದೆ’ ಎಂದು ಜಾನುವಾರು ಸಾಕಣೆದಾರ ಅಂಬಳೆ ಗ್ರಾಮದ ಬಸವಣ್ಣಪ್ಪ ‘ಪ್ರಜಾವಾಣಿ’ಗೆ ಹೇಳಿದರು. 

‘ಲಾರಿ ಮತ್ತು ಟ್ರ್ಯಾಕ್ಟರ್ ಮೂಲಕ ನೇರವಾಗಿ ಹೊರ ಜಿಲ್ಲೆಗಳಿಂದ ಮೇವು ಪೂರೈಕೆಯಾಗುತ್ತದೆ. ಬೆಲೆ ಹೆಚ್ಚು ಪೀಕಬೇಕು. ಮೇವಿನ ಗುಣಮಟ್ಟವೂ ಕಡಿಮೆ. ಆದರೆ, ಅನಿವಾರ್ಯವಾಗಿ ಸಿಕ್ಕಿದ್ದನ್ನು ಕೊಂಡುಕೊಳ್ಳಬೇಕಾದ ಸ್ಥಿತಿ ಇದೆ’ ಎಂದು ಅವರು ಹೇಳಿದರು. 

ಜಿಲ್ಲೆಯಿಂದಲೂ ಹೊರಕ್ಕೆ: ಬರ ಪರಿಸ್ಥಿತಿ ಇರುವುದರಿಂದ ಜಿಲ್ಲೆಯಿಂದ ಮೇವನ್ನು ಹೊರ ಜಿಲ್ಲೆ, ಹೊರ ರಾಜ್ಯಗಳಿಗೆ ಕಳುಹಿಸುವಂತಿಲ್ಲ ಎಂದು ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ. ಆದರೆ, ಕೆಲವರು ಹೆಚ್ಚು ಬೆಲೆಯ ಆಸೆಗೆ ಹೊರಗಡೆಗೆ ಮಾರುತ್ತಿದ್ದಾರೆ ಎಂದೂ ಆರೋಪಿಸುತ್ತಾರೆ ರೈತರು. 

ರಾಗಿ ಕಬ್ಬಿನ ಸೋಗೆಗೂ ಬರ!

‘ಒಣ ಹುಲ್ಲು ಬಿಟ್ಟು ರಾಗಿ ಕಡ್ಡಿ ಮತ್ತು ಕಬ್ಬಿನ ಸೋಗೆಗಳನ್ನೂ ಪಶುಗಳ ಮೇವಾಗಿ ಬಳಸಲಾಗುತ್ತದೆ. ಆದರೆ ಈ ಬೆಳೆಗಳು ಒಣಗಿದ್ದು ನಿರೀಕ್ಷಿತ ಪ್ರಮಾಣದಲ್ಲಿ ರೈತರ ಕೈಹಿಡಿದಿಲ್ಲ. ಹೀಗಾಗಿ ಬೆಳೆಗಾರರು ತಮ್ಮಲ್ಲಿ ಬೆಳೆದ ಮೇವನ್ನು ಕೊಡು-ಕೊಳ್ಳುವ ಮೂಲಕ ಬರದ ತೀವ್ರತೆ ತಡೆಯಲು ಮುಂದಾಗಿದ್ದಾರೆ. ಹಸಿ ಬರದ ಪರಿಣಾಮ ಕೃಷಿಕರು ಮತ್ತು ಪಶು ಸಾಕಣೆದಾರರ ಮೇಲೆ ಈ ಬಾರಿ ನೇರವಾಗಿ ಕಾಡಿದೆ’ ಎಂದು ಹೊನ್ನೂರು ಪ್ರಸನ್ನ ಹೇಳಿದರು.

ಜಾನುವಾರುಗಳ ದಿನದ ಮೇವಿಗಾಗಿ ಒಣಹುಲ್ಲನ್ನು ಹೊತ್ತುಕೊಂಡು ಜಾನುವಾರುಗಳೊಂದಿಗೆ ಹೆಜ್ಜೆ ಹಾಕಿದ ರೈತ ಮಹಿಳೆ
ಜಾನುವಾರುಗಳ ದಿನದ ಮೇವಿಗಾಗಿ ಒಣಹುಲ್ಲನ್ನು ಹೊತ್ತುಕೊಂಡು ಜಾನುವಾರುಗಳೊಂದಿಗೆ ಹೆಜ್ಜೆ ಹಾಕಿದ ರೈತ ಮಹಿಳೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT