ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೆಚ್ಚುವರಿ ದಾಸ್ತಾನು; ₹ 8.23 ಲಕ್ಷದ ಮದ್ಯ ವಶ

ಮದ್ಯ ಮಾರಾಟ, ಸಾಗಣೆ ಮೇಲೆ ನಿಗಾ: ಜಂಟಿ ಆಯುಕ್ತ
Last Updated 22 ಮಾರ್ಚ್ 2023, 6:28 IST
ಅಕ್ಷರ ಗಾತ್ರ

ಚಾಮರಾಜನಗರ: ಯಳಂದೂರಿನ ಗುರುಕೃಪಾ ವೈನ್ಸ್‌ನಲ್ಲಿ ಹೆಚ್ಚುವರಿಯಾಗಿ ದಾಸ್ತಾನು ಮಾಡಿದ್ದ ₹ 8.23 ಲಕ್ಷ ಮೌಲ್ಯದ ಮದ್ಯವನ್ನು ಅಬಕಾರಿ ಇಲಾಖೆ ಅಧಿಕಾರಿಗಳು ಮಂಗಳವಾರ ವಶಪಡಿಸಿಕೊಂಡಿದ್ದಾರೆ. ಮದ್ಯದ ಅಂಗಡಿಯಲ್ಲಿ ಕೆಲಸ ಮಾಡುತ್ತಿದ್ದ ಅನಿಲ್‌ ಕುಮಾರ್ ಎಂಬ ನೌಕರರನ್ನು ಬಂಧಿಸಿದ್ದಾರೆ.

ಕಾರ್ಯಾಚರಣೆ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಬಕಾರಿ ಇಲಾಖೆಯ ಮೈಸೂರು ವಿಭಾಗದ ಜಂಟಿ ಆಯುಕ್ತ ವಿಜಯಕುಮಾರ್‌ ‘ಮುಂಬರುವ ವಿಧಾನಸಭಾ ಚುನಾವಣೆಯನ್ನು ನಿಷ್ಪಕ್ಷಪಾತವಾಗಿ ನಡೆಸುವ ಉದ್ದೇಶದಿಂದ ಇಲಾಖೆಯು ಮದ್ಯ ವಹಿವಾಟಿನ ತಪಾಸಣೆ ಹಾಗೂ ಕಾರ್ಯಾಚರಣೆಯನ್ನು ತೀವ್ರಗೊಳಿಸಿದೆ. ಖಚಿತ ಮಾಹಿತಿ ಮೇರೆಗೆ ನಮ್ಮ ಸಿಬ್ಬಂದಿ ಮದ್ಯದ ಮಳಿಗೆ ಮೇಲೆ ದಾಳಿ ಮಾಡಿ ತಪಾಸಣೆ ಮಾಡಿದಾಗ ಹೆಚ್ಚುವರಿಯಾಗಿ ಮದ್ಯ ಸಂಗ್ರಹಿಸಿರುವುದು ಕಂಡು ಬಂದಿದೆ’ ಎಂದರು.

ಜಿಲ್ಲಾ ಅಬಕಾರಿ ಉಪ ಆಯುಕ್ತ ಆರ್‌.ನಾಗಶಯನ ಮಾತನಾಡಿ ‘ತಪಾಸಣೆ ಸಂದರ್ಭದಲ್ಲಿ 180 ರಟ್ಟಿನ ಪೆಟ್ಟಿಗೆಗಳಲ್ಲಿದ್ದ 1,555.200 ಲೀಟರ್‌ ಮದ್ಯ (ಬ್ರಾಂದಿ, ವಿಸ್ಕಿ–₹ 7.20 ಲಕ್ಷ ಮೌಲ್ಯ) ಹಾಗೂ 82 ರಟ್ಟಿನ ಪೆಟ್ಟಿಗೆಗಳಲ್ಲಿದ್ದ 670 ಲೀಟರ್‌ ಬಿಯರ್‌ (₹1.03 ಲಕ್ಷ) ವಶಕ್ಕೆ ಪಡೆಯಲಾಗಿದೆ’ ಎಂದು ಮಾಹಿತಿ ನೀಡಿದರು.

‘ಕೆಎಸ್‌ಬಿಸಿಎಲ್‌ನಿಂದ ಈ ಮದ್ಯ ಖರೀದಿಸಿಲ್ಲ. ಬೇರೆ ಎಲ್ಲಿಂದಲೋ ಪೂರೈಕೆಯಾಗಿದೆ. ಅದು ತನಿಖೆಯಿಂದ ತಿಳಿಯಬೇಕಿದೆ’ ಎಂದು ಹೇಳಿದರು.

ಕಟ್ಟುನಿಟ್ಟಿನ ನಿಗಾ: ‘ಪಾರದರ್ಶಕವಾಗಿ ಚುನಾವಣೆ ನಡೆಸುವ ನಿಟ್ಟಿನಲ್ಲಿ ಚುನಾವಣಾ ಆಯೋಗವು ಇಲಾಖೆಗೆ ಸ್ಪಷ್ಟ ಸೂಚನೆ ನೀಡಿದೆ. ಆ ನಿಟ್ಟಿನಲ್ಲಿ ನಾವು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದೇವೆ. ಎಲ್ಲ ಮದ್ಯದ ಅಂಗಡಿಗಳಿಗೆ ಸಿ.ಸಿ ಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಒಟ್ಟು 666 ಕ್ಯಾಮೆರಾ ಅಳವಡಿಸಿದ್ದೇವೆ. ಕೆಎಸ್‌ಬಿಸಿಎಲ್‌ ಆವರಣದಲ್ಲಿ 20 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ತಿಂಗಳ ಅವಧಿಯಲ್ಲಿ 116 ಕಡೆ ದಾಳಿ ಮಾಡಲಾಗಿದ್ದು, 85 ಪ್ರಕರಣ ದಾಖಲಿಸಲಾಗಿದೆ. 96.390 ಲೀಟರ್‌ ಮದ್ಯ, 1,130 ಲೀಟರ್‌ ಬಿಯರ್ ಹಾಗೂ 3 ವಾಹನಗಳನ್ನು ಜಪ್ತಿ ಮಾಡಲಾಗಿದೆ. ಇವುಗಳ ಮೌಲ್ಯ ₹ 1,49,136 ಆಗಿದೆ. 58 ಆರೋಪಿಗಳನ್ನು ಬಂಧಿಸಲಾಗಿದೆ’ ಎಂದರು.

ಯಳಂದೂರಿನಲ್ಲಿ ಕಾರ್ಯಾಚರಣೆ ನಡೆಸಿದ ತಂಡದಲ್ಲಿದ್ದ ಅಬಕಾರಿ ಸೂಪರಿಂಟೆಂಡೆಂಟ್‌ ಎಂ.ಡಿ ಮೋಹನ್ ಕುಮಾರ್, ಅಬಕಾರಿ ಇನ್‌ಸ್ಪೆಕ್ಟರ್‌ಗಳಾದ ಮಹೇಶ್‌, ಉಮಾಶಂಕರ್, ಸಬ್‌ ಇನ್‌ಸ್ಪೆಕ್ಟರ್‌ಗಳಾದ ಮಹೇಶ್, ನಂದಿನಿ, ಶ್ರೀಧರ್‌ ಇದ್ದರು.

ಸೂಕ್ಷ್ಮ ಮದ್ಯದ ಅಂಗಡಿಗಳ ಗುರುತು

‘ಇದೇ ಮೊದಲ ಬಾರಿಗೆ ಜಿಲ್ಲೆಯಲ್ಲಿ ಸೂಕ್ಷ್ಮ ಮದ್ಯದ ಅಂಗಡಿಗಳನ್ನು ಗುರುತಿಸಲಾಗಿದೆ. ಕೊಳ್ಳೇಗಾಲ ವಲಯದಲ್ಲಿ 10, ಚಾಮರಾಜನಗರ ವಲಯದಲ್ಲಿ 12, ಗುಂಡ್ಲುಪೇಟೆ ವಲಯದಲ್ಲಿ 14 ಸೇರಿದಂತೆ ಒಟ್ಟು 36 ಮದ್ಯದ ಅಂಗಡಿಗಳನ್ನು ಪಟ್ಟಿ ಮಾಡಿದ್ದೇವೆ. ರಾಜಕೀಯ ವ್ಯಕ್ತಿಗಳೊಂದಿಗೆ ಸಂಬಂಧ ಹೊಂದಿರುವ, ಈ ಹಿಂದಿನ ಚುನಾವಣೆಗಳಲ್ಲಿ ಅಬಕಾರಿ ಅಕ್ರಮಗಳಲ್ಲಿ ಗುರುತಿಸಲಾಗಿದ್ದ, ಕೊಳಚೆ ಪ್ರದೇಶದಲ್ಲಿ ಇರುವ ಮತ್ತು ಮುಖ್ಯ ರಸ್ತೆಯಿಂದ ತೀರ ಒಳಭಾಗದಲ್ಲಿರುವ ಅಂಗಡಿಗಳನ್ನು ಸೂಕ್ಷ್ಮ ಅಂಗಡಿಗಳೆಂದು ಪರಿಗಣಿಸಲಾಗಿದೆ. ಇಂತಹ ಕಡೆ ವಿಶೇಷ ಗಮನ ಹರಿಸಲಾಗುತ್ತಿದೆ. ಅಂತರರಾಜ್ಯ ಗಡಿಯಲ್ಲಿ ಮೂರು ಶಾಶ್ವತ ಚೆಕ್‌ಪೋಸ್ಟ್‌ ಸೇರಿದಂತೆ 16 ಚೆಕ್‌ಪೋಸ್ಟ್‌ ನಿರ್ಮಿಸಲಾಗಿದೆ’ ಎಂದರು.

‘ಮುಂಜಾಗ್ರತಾ ಕ್ರಮವಾಗಿ ಅಬಕಾರಿ ಅಕ್ರಮಗಳಲ್ಲಿ ಭಾಗಿಯಾದ 40 ಹಳೆ ಆರೋಪಿಗಳಿಂದ ₹ 2 ಲಕ್ಷ ಮೊತ್ತದ ಸದ್ವರ್ತನೆ ಬಾಂಡ್ ಪಡೆಯಲಾಗಿದೆ’ ಎಂದು ನಾಗಶಯನ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT