ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಕಾಡಾನೆ ದಾಳಿಯಲ್ಲಿ ರೈತ ಸಾವು–ಗ್ರಾಮಸ್ಥರ ಆಕ್ರೋಶ

Last Updated 3 ಜನವರಿ 2021, 14:10 IST
ಅಕ್ಷರ ಗಾತ್ರ

ಚಾಮರಾಜನಗರ: ತಾಲ್ಲೂಕಿನ ಯಣಗುಂಬ ಗ್ರಾಮದಲ್ಲಿ ಶನಿವಾರ ರಾತ್ರಿ ಬೆಳೆ ಕಾವಲಿಗಾಗಿ ಜಮೀನಿಗೆ ತೆರಳಿದ್ದ ರೈತರೊಬ್ಬರನ್ನು ಕಾಡಾನೆ ತುಳಿದು ಸಾಯಿಸಿದೆ.

ರೈತನ ಸಾವಿಗೆ ಅರಣ್ಯ ಇಲಾಖೆಯ ನಿರ್ಲಕ್ಷ್ಯವೇ ಕಾರಣ ಎಂದು ಗ್ರಾಮಸ್ಥರು ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಗ್ರಾಮದ ಸ್ವಾಮಿಗೌಡ (50) ಮೃತಪಟ್ಟ ರೈತ. ತಮ್ಮ ಜಮೀನಿನಲ್ಲಿ ಮುಸುಕಿನ ಜೋಳ ಬೆಳೆದಿದ್ದ ಅವರು, ಕಟಾವು ಮಾಡಿದ್ದರು. ಜೋಳದ ರಾಶಿ ಜಮೀನಿನಲ್ಲೇ ಇದ್ದುದರಿಂದ ಶನಿವಾರ ರಾತ್ರಿ ಕಾವಲಿಗಾಗಿ ಜಮೀನಿಗೆ ತೆರಳಿದ್ದರು. ಆಹಾರ ಅರಸಿಕೊಂಡು ಬಂದಿದ್ದ ಆನೆ ಅವರ ಮೇಲೆ ದಾಳಿ ನಡೆಸಿದೆ. ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸ್ವಾಮಿ ಅವರಿಗೆ ಪತ್ನಿ ಹಾಗೂ ಪುತ್ರ ಇದ್ದು, ಕುಟುಂಬದ ಆಧಾರ ಸ್ತಂಭವಾಗಿದ್ದರು ಎನ್ನಲಾಗಿದೆ.

ಆಕ್ರೋಶ: ಬೆಳಿಗ್ಗೆ ವಿಷಯ ಗೊತ್ತಾದ ತಕ್ಷಣ ಗ್ರಾಮಸ್ಥರು ಅರಣ್ಯ ಇಲಾಖೆಗೆ ಸುದ್ದಿ ಮುಟ್ಟಿಸಿದರು. ಸ್ಥಳಕ್ಕೆ ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್‌ಕುಮಾರ್‌ ಹಾಗೂ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದರು.

‌ಈ ಸಂದರ್ಭದಲ್ಲಿ ಗ್ರಾಮಸ್ಥರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಯಣಗುಂಬ ಪ್ರದೇಶದಲ್ಲಿ ಕಾಡಿನ ಹಾವಳಿ ತಪ್ಪಿಸಲು ಇಲಾಖೆ ಕಂದಕ ನಿರ್ಮಾಣ ಅಥವಾ ರೈಲ್ವೆ ಕಂಬಿ ಬೇಲಿ ಸೇರಿದಂತೆ ಯಾವುದೇ ಕ್ರಮ ಕೈಗೊಂಡಿಲ್ಲ. ಇಲಾಖೆಯ ನಿರ್ಲಕ್ಷ್ಯದಿಂದ ದುರಂತ ಸಂಭವಿಸಿದೆ ಎಂದು ದೂರಿದರು. ‌

ಗ್ರಾಮಸ್ಥರ ಮನವೊಲಿಸಲು ಯತ್ನಿಸಿದ ಸಂತೋಷ್‌ ಕುಮಾರ್‌ ಅವರು, ‘ಕೋವಿಡ್‌ ಕಾರಣದಿಂದ ಅನುದಾನ ಲಭ್ಯವಾಗದೇ ಇದ್ದುದರಿಂದ ಕಂದಕ ನಿರ್ಮಾಣ ಮಾಡಲು ಆಗಿಲ್ಲ. ತಕ್ಷಣವೇ ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.ಆದರೂ ಗ್ರಾಮಸ್ಥರು ಪಟ್ಟು ಸಡಿಸಲಿಲ್ಲ.

ನಂತರ ಸ್ಥಳಕ್ಕೆ ಶಾಸಕ ಸಿ.ಪುಟ್ಟರಂಗಶೆಟ್ಟಿ ಅವರು ಭೇಟಿ ನೀಡಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. ‘ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು. ಮೃತ ರೈತನ ಕುಟುಂಬಕ್ಕೆ ಪರಿಹಾರ ಧನ ನೀಡಬೇಕು’ ಎಂದು ಒತ್ತಾಯಿಸಿದರು.

ತಕ್ಷಣದಿಂದಲೇ ಕಂದಕ ನಿರ್ಮಾಣ ಕಾಮಗಾರಿ ಪ್ರಾರಂಭಿಸಲಾಗುವುದು. ಅಲ್ಲದೇ ಮೃತನ ಕುಟುಂಬಕ್ಕೆ ಅರಣ್ಯ ಇಲಾಖೆಯಿಂದ ₹ 7.5 ಲಕ್ಷ ಪರಿಹಾರ ಕೊಡಿಸುವ ಭರವಸೆಯನ್ನು ಶಾಸಕರು ನೀಡಿದರು.

₹2 ಲಕ್ಷ ಹಣವನ್ನು ಸೋಮವಾರ ಹಾಗೂ ಉಳಿದ ಮೊತ್ತವನ್ನು ನಂತರ ನೀಡುವ ಭರವಸೆಯನ್ನು ಶಾಸಕರು ಹಾಗೂ ಅಧಿಕಾರಿಗಳು ನೀಡಿದ ನಂತರ ಗ್ರಾಮಸ್ಥರು ಪಟ್ಟು ಸಡಿಲಿಸಿ, ರೈತನ ಅಂತ್ಯಕ್ರಿಯೆ ನಡೆಸಲು ಮುಂದಾದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT