ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತನ್ನ ಹಸುಗೂಸನ್ನು ₹50 ಸಾವಿರಕ್ಕೆ ಮಾರಾಟ ಮಾಡಿದ ತಂದೆ!

ಮಕ್ಕಳ ಕಲ್ಯಾಣ ಸಮಿತಿ ಮುಂದೆ ಪೋಷಕರು ಹಾಜರು, ತಂದೆಯ ವಿರುದ್ಧ ಪ್ರಕರಣ
Last Updated 20 ಸೆಪ್ಟೆಂಬರ್ 2022, 13:31 IST
ಅಕ್ಷರ ಗಾತ್ರ

ಚಾಮರಾಜನಗರ: 25 ದಿನಗಳ ಗಂಡು ಮಗುವನ್ನು ತಂದೆಯೇ ₹50 ಸಾವಿರಕ್ಕೆ ಮಾರಾಟ ಮಾಡಿರುವ ಪ್ರಕರಣ ನಗರದಲ್ಲಿ ವರದಿಯಾಗಿದೆ.

ನಗರದ ನ್ಯಾಯಾಲಯದ ರಸ್ತೆಯಲ್ಲಿ ವಾಸವಿರುವ ಬಸವ (35) ಎಂಬುವವರು ಮಗುವನ್ನು ಮಾರಾಟ ಮಾಡಿದ್ದಾರೆ. ಅವರ ಪತ್ನಿ ನಾಗವೇಣಿ ಅವರ ವಿರೋಧದ ನಡುವೆಯೂ, ಬಸವ ಮಗುವನ್ನು ₹50 ಸಾವಿರ ಹಣ ಪಡೆದು ಬೇರೆಯವರಿಗೆ ಕೊಟ್ಟಿದ್ದಾರೆ ಎಂದು ಆರೋಪಿಸಲಾಗಿದೆ.

ಅನಾರೋಗ್ಯದಿಂದ ಬಳಲುತ್ತಿದ್ದ ಪತ್ನಿಯ ಚಿಕಿತ್ಸೆಗಾಗಿ ಹಾಗೂ ಸಾಲ ತೀರಿಸುವುದಕ್ಕಾಗಿ ಮಗುವನ್ನು ಬೆಂಗಳೂರಿನ ವ್ಯಕ್ತಿಯೊಬ್ಬರಿಗೆ ಕೊಟ್ಟಿದ್ದಾಗಿ ಬಸವ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆಯೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಮಂಗಳವಾರ ಬಸವ ಅವರ ಮನೆಗೆ ಹೋಗಿ ವಿಚಾರಣೆ ನಡೆಸಿದ್ದಾರೆ. ದಂಪತಿಯನ್ನು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರು ಪಡಿಸಿದ್ದಾರೆ. ಬಸವ ವಿರುದ್ಧ ಪಟ್ಟಣ ಠಾಣೆಯಲ್ಲಿ ದೂರನ್ನೂ ನೀಡಿದ್ದಾರೆ. ಮಗುವನ್ನು ಪಡೆದಿರುವ ಬೆಂಗಳೂರಿನ ವ್ಯಕ್ತಿಯ ಹುಟುಕಾಟದಲ್ಲಿ ಅಧಿಕಾರಿಗಳು ತೊಡಗಿದ್ದಾರೆ.

ಘಟನೆ ವಿವರ: ಬಸವ ಅವರು ನಗರದ ಹೋಟೆಲೊಂದರಲ್ಲಿ ಕೆಲಸ ಮಾಡುತ್ತಾರೆ. ಈ ದಂಪತಿಗೆ ಈಗಾಗಲೇ ಏಳು ವರ್ಷದ ಗಂಡು ಮಗು ಇದೆ. ನಾಗವೇಣಿ ಅವರು ಆಗಸ್ಟ್‌ 22ರಂದು ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಗಂಡು ಮಗುವಿಗೆ ಜನ್ಮ ನೀಡಿದ್ದರು. ಬಸವ ಅವರು ತಮ್ಮ ಸಹೋದ್ಯೋಗಿಯ ಮೂಲಕ ಸೆ. 15ರಂದು ಬೆಂಗಳೂರಿನ ವ್ಯಕ್ತಿಗೆ ಮಗುವನ್ನು ಮಾರಾಟ ಮಾಡಿದ್ದಾರೆ ಎಂದು ಗೊತ್ತಾಗಿದೆ. ಇದಕ್ಕೆ ವಿರೋಧ ವ್ಯಕ್ತಪಡಿಸಿದ ನಾಗವೇಣಿ ಮೇಲೆ ಬಸವ ಅವರು ಹಲ್ಲೆಯನ್ನೂ ಮಾಡಿದ್ದಾರೆ ಎಂದು ದೂರಲಾಗಿದೆ.

ಬೆಳಕಿಗೆ ಬಂದಿದ್ದು ಹೇಗೆ?: ಲೈಂಗಿಕ ಅಲ್ಪಸಂಖ್ಯಾತರ ಬಗ್ಗೆ ಕೆಲಸ ಮಾಡುವ ಸಮತಾ ಸೊಸೈಟಿಯ ಜಿಲ್ಲಾ ಅಧ್ಯಕ್ಷೆ, ಸ್ವತಃ ಲೈಂಗಿಕ ಅಲ್ಪಸಂಖ್ಯಾತೆಯಾಗಿರುವ ದೀಪಾ ಬುದ್ಧೆ ಅವರು ತಮ್ಮ ಪಿಎಚ್‌ಡಿ ಅಧ್ಯಯನದ ಭಾಗವಾಗಿ ಸಮೀಕ್ಷೆ ನಡೆಸುತ್ತಿರುವಾಗ ಮಗು ಮಾರಾಟ ಮಾಡಿರುವ ವಿಚಾರ ಅವರ ಗಮನಕ್ಕೆ ಬಂದಿದೆ.

‘ಪ್ರವಾಹದಿಂದಾಗಿ ಲೈಂಗಿಕ ಅಲ್ಪಸಂಖ್ಯಾತರ ಸ್ಥಿತಿಗತಿಯ ಬಗ್ಗೆ ಸಮೀಕ್ಷೆ ನಡೆಸುತ್ತಿದ್ದೆ. ಈ ಸಂದರ್ಭದಲ್ಲಿ ಮಗು ಮಾರಾಟದ ವಿಚಾರ ಗಮನಕ್ಕೆ ಬಂತು. ನಾಗವೇಣಿ ತಂಗಿ ನಮ್ಮ ಸಮುದಾಯದವರು. ಅವರ ಭಾವ ಮಗುವನ್ನು ಮಾರಾಟ ಮಾಡಿದ್ದನ್ನು ನನ್ನ ಗಮನಕ್ಕೆ ತಂದರು. ಸೆ. 17ರಂದು ನನಗೆ ವಿಷಯ ಗೊತ್ತಾಯಿತು. ನಾಗವೇಣಿ ಅವರು ನನ್ನ ಬಳಿ, ‘ಹೇಗಾದರೂ ಮಗುವನ್ನು ವಾಪಸ್‌ ಕರೆದುಕೊಡುವಂತೆ ಮಾಡಿ’ ಎಂದು ಗೋಗರೆದರು. ಖುದ್ದಾಗಿ ಬಸವ ಅವರೊಂದಿಗೆ ಮಾತನಾಡಿದೆ. ಸೋಮವಾರದ ಒಳಗಾಗಿ ಮಗುವನ್ನು ಕರೆದುಕೊಂಡು ಬರುವಂತೆ ಹೇಳಿದ್ದೆ. ಮಗುವನ್ನು ಕರೆತರದೇ ಇದ್ದುದರಿಂದ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಹಾಗೂ ಮಾಧ್ಯಮಗಳ ಗಮನಕ್ಕೆ ತಂದೆ’ ಎಂದು ದೀಪಾ ಬುದ್ಧೆ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಕರಣ ದಾಖಲು: ಘಟನೆ ಬಗ್ಗೆ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಗೀತಾಲಕ್ಷ್ಮಿ, ‘ಪೋಷಕರನ್ನು ವಿಚಾರಣೆ ಮಾಡಿದ್ದೇವೆ. ಮಗು ಮಾರಾಟ ಮಾಡಿದ ವ್ಯಕ್ತಿಯ ವಿರುದ್ಧ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಿದ್ದೇವೆ. ಆತನ ಪತ್ನಿ ಇನ್ನೂ ಬಾಣಂತಿ ಆಗಿರುವುದರಿಂದ ಆಕೆಗೆ ಆರೈಕೆ ಬೇಕು. ಹಾಗಾಗಿ ಸ್ವಾಧಾರ ಕೇಂದ್ರದಲ್ಲಿ ಆಶ್ರಯ ನೀಡಲು ಮುಂದಾಗಿದ್ದೇವೆ. ಆದರೆ, ಆಕೆ ಅಲ್ಲಿಗೆ ಬರಲು ಒಪ್ಪುತ್ತಿಲ್ಲ. ಇದರ ಜೊತೆಗೆ ‌ಮಗುವನ್ನು ಪಡೆದಿರುವ ಬೆಂಗಳೂರಿನ ವ್ಯಕ್ತಿಯನ್ನು ಪತ್ತೆ ಹಚ್ಚಿ ಮಗುವನ್ನು ರಕ್ಷಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT