ಶನಿವಾರ, ಜೂನ್ 19, 2021
26 °C
ಗ್ರಾಮೀಣ ಪ್ರದೇಶಗಳಲ್ಲಿ ಸೋಂಕು ಉಲ್ಬಣಿಸಿದ ಬಳಿಕ ಸಮೀಕ್ಷೆ! ಲಕ್ಷಣ ಕಂಡುಬಂದರೆ ಕೋವಿಡ್‌ ಪರೀಕ್ಷೆ ಕಡ್ಡಾಯ

ಕೊನೆಗೂ ಸಮೀಕ್ಷೆ ನಡೆಸಲು ಜಿಲ್ಲಾಧಿಕಾರಿ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಪಟ್ಟಣ ಪ್ರದೇಶಗಳಿಗಿಂತ ಗ್ರಾಮಾಂತರ ಭಾಗದಲ್ಲಿ ಕೊರೊನಾ ಸೋಂಕು ಉಲ್ಬಣಿಸಿದ ನಂತರ ಎಚ್ಚೆತ್ತಿರುವ ಜಿಲ್ಲಾಡಳಿತ ಗ್ರಾಮಗಳಲ್ಲಿ ಸಮೀಕ್ಷೆ ನಡೆಸಲು ಆರೋಗ್ಯ ಇಲಾಖೆಯ ಕಾರ್ಯಕರ್ತರಿಗೆ ಶನಿವಾರ ಸೂಚನೆ ನೀಡಿದೆ.

ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರನ್ನು ಒಳಗೊಂಡ ತಂಡವು ಗ್ರಾಮಗಳಲ್ಲಿ ಕೆಮ್ಮು, ಜ್ವರ, ನೆಗಡಿ, ಗಂಟಲು ಕೆರೆತ ಲಕ್ಷಣಗಳನ್ನು ಹೊಂದಿರುವವರು,  ತೀವ್ರ ಉಸಿರಾಟದ ತೊಂದರೆ ಇರುವವರನ್ನು ಪತ್ತೆ ಹಚ್ಚಲಿದ್ದಾರೆ.

ಇಲ್ಲಿನ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶನಿವಾರ ಕೋವಿಡ್ ನಿಯಂತ್ರಣ ಸಂಬಂಧ ನಡೆದ ಆರೋಗ್ಯ ಇಲಾಖೆಯ ಅಧಿಕಾರಿಗಳು ಹಾಗೂ ಕೋವಿಡ್ ಪಡೆ ಕುರಿತು ನಿಯೋಜಿತರಾಗಿರುವ ನೋಡೆಲ್ ಅಧಿಕಾರಿಗಳ ಸಭೆಯಲ್ಲಿ ಜಿಲ್ಲಾಧಿಕಾರಿ ಎಂ.ಆರ್.ರವಿ ಅತಿ ಶೀಘ್ರವೇ ಸಮೀಕ್ಷಾ ಕಾರ್ಯ ಆರಂಭವಾಗಬೇಕು ಎಂದು ಸೂಚನೆ ನೀಡಿದರು.

ಸೋಂಕು ನಗರ, ಪಟ್ಟಣ ಪ್ರದೇಶಗಳಿಗಿಂತ ಗ್ರಾಮೀಣ ಭಾಗದಲ್ಲಿ ಹೆಚ್ಚು ಕಂಡು ಬರುತ್ತಿದೆ. ಹೀಗಾಗಿ, ವ್ಯಾಪಕವಾಗಿ ಗ್ರಾಮಾಂತರ ಭಾಗಗಳಲ್ಲಿ ಸಮೀಕ್ಷೆಯನ್ನು ಬಿರುಸಿನಿಂದ ನಡೆಸಿ ಒಂದು ವಾರದೊಳಗೆ ಪೂರ್ಣಗೊಳಿ
ಸಬೇಕು. ಹೆಚ್ಚು ಕೋವಿಡ್ ಪ್ರಕರಣಗಳು ಕಂಡುಬಂದಿರುವ ಗ್ರಾಮಗಳಲ್ಲಿ ವಿಶೇಷವಾಗಿ ಹೆಚ್ಚು ತಂಡಗಳನ್ನು ನಿಯೋಜಿಸಿ, ಪೈಲಟ್ ಮಾದರಿಯಾಗಿ ಪರಿಗಣಿಸಿ ಸಮೀಕ್ಷೆ ನಡೆಸಬೇಕು ಎಂದು ನಿರ್ದೇಶನ ನೀಡಿದರು.

ಕೊರೊನಾ ಸೋಂಕು ದೃಢಗೊಂಡ ಪ್ರಕರಣಗಳಲ್ಲಿ ತಂಡವು ರೋಗಲಕ್ಷಣವಿರುವ ಪ್ರಾಥಮಿಕ ಸಂಪರ್ಕಿತರನ್ನು ಕಡ್ಡಾಯವಾಗಿ ಕೋವಿಡ್ ಪರೀಕ್ಷೆಗೆ ಒಳಪಡಿಸಬೇಕು. ಇತರೆ ಕಾಯಿಲೆಗಳಿಂದ ಬಳಲುತ್ತಿರುವ ಹಿರಿಯ ನಾಗರಿಕರ ಸಮೀಕ್ಷೆ ಸಹ ಕೈಗೊಳ್ಳಬೇಕು. ಕಂಟೈನ್‍ಮೆಂಟ್ ವಲಯಗಳಲ್ಲಿಯೂ ಸಮೀಕ್ಷೆ ಕಾರ್ಯವನ್ನು ಚುರುಕುಗೊಳಿಸಬೇಕು. ತಾಲ್ಲೂಕು ಆರೋಗ್ಯ ಅಧಿಕಾರಿಗಳು, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸಮೀಕ್ಷೆಯ ಮೇಲ್ವಿಚಾರಣೆ ಮಾಡುವ ಮೂಲಕ ನಿಗದಿತ  ಅವಧಿಯೊಳಗೆ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದರು.

ಹೋಂ ಐಸೋಲೇಷನ್ ಆಯ್ಕೆಗೆ ಮನೆಯಲ್ಲಿ ನಿಗದಿಪಡಿಸಲಾಗಿರುವ ಎಲ್ಲಾ ಅಗತ್ಯ ಸೌಕರ್ಯಗಳು ಲಭ್ಯವಿದ್ದರೆ ಮಾತ್ರ ಅನುಮತಿಸಬೇಕು. ಇಲ್ಲವಾದಲ್ಲಿ ಕೋವಿಡ್ ಕೇರ್ ಕೇಂದ್ರಗಳಿಗೆ ದಾಖಲಿಸಬೇಕು. ಆಸ್ಪತ್ರೆ, ಕೋವಿಡ್ ಕೇರ್ ಕೇಂದ್ರಗಳಲ್ಲಿ ಗುಂಪುದಟ್ಟಣೆಯಾಗದಂತೆ ಅತ್ಯಂತ ವ್ಯವಸ್ಥಿತವಾಗಿ ಪರೀಕ್ಷೆಗಳು ನಡೆಯಬೇಕು. ಸೋಂಕಿತರಿಗೆ ಮಾಹಿತಿ ನೀಡುವ ಕೇಂದ್ರಗಳು ಸುಗಮವಾಗಿ ನಿರ್ವಹಣೆಯಾಗಬೇಕು ಎಂದು ಅವರು ತಿಳಿಸಿದರು.

ವೈದ್ಯಕೀಯ ಕಾಲೇಜಿನ ಡೀನ್ ಡಾ. ಸಂಜೀವ್, ನೋಡೆಲ್ ಅಧಿಕಾರಿಗಳಾಗಿ
ರುವ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್‍ಕುಮಾರ್, ಏಡುಕುಂಡಲು, ಜಿಲ್ಲಾ ಸರ್ವೇಲೆನ್ಸ್ ಅಧಿಕಾರಿ ಡಾ. ನಾಗರಾಜು, ಆರ್.ಸಿ.ಎಚ್. ಅಧಿಕಾರಿ ಡಾ. ವಿಶ್ವೇಶ್ವರಯ್ಯ, ಡಾ. ಮಹದೇವು, ತಹಶೀಲ್ದಾರರಾದ ಚಿದಾನಂದ ಗುರುಸ್ವಾಮಿ, ರವಿಶಂಕರ್, ನಾಗರಾಜು, ಕೆ. ಕುನಾಲ್, ಜಯಪ್ರಕಾಶ್, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಉಮೇಶ್, ಸಲೀಂ ಹುಸೇನ್, ಶ್ರೀಕಂಠರಾಜೇಅರಸ್, ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ. ಶ್ರೀನಿವಾಸ್, ಡಾ. ರವೀಂದ್ರ, ಡಾ. ಮಂಜುನಾಥ್ ಭಾಗವಹಿಸಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು