ಸೋಮವಾರ, ನವೆಂಬರ್ 29, 2021
20 °C
ಜಿಲ್ಲೆಯ ಮೊದಲ ವಿದ್ಯುತ್‌ ಚಾಲಿತ ಆಟೊ ಮಾಲೀಕ ಜೋಸೆಫ್‌ ಓಲಿವರ್‌

ನಗರ ಸಂಚಾರಕ್ಕೆ ‘ಹಸಿರು’ ಆಟೊ: ಚಾಮರಾಜನಗರ ಜಿಲ್ಲೆಯ ಮೊದಲ ವಿದ್ಯುತ್‌ ಚಾಲಿತ ಆಟೊ

ಸೂರ್ಯನಾರಾಯಣ ವಿ. Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲಾ ಕೇಂದ್ರ ಚಾಮರಾಜನಗರದಲ್ಲಿ ಕೆಲವು ವಾರಗಳಿಂದೀಚೆಗೆ ಹಸಿರು ಬಣ್ಣದ, ಹಸಿರು ನೋಂದಣಿ ಫಲಕದ ಮತ್ತು ಚಾವಣಿಯಲ್ಲಿ ಸೌರ ಫಲಕ ಅಳವಡಿಸಿಕೊಂಡಿರುವ ಆಟೊವೊಂದು ಪದೇ ಪದೇ ಕಣ್ಣಿಗೆ ಬೀಳುತ್ತಿದೆ. 

ನಗರ ನಿವಾಸಿ ಜೋಸೆಫ್‌ ಓಲಿವರ್‌ ಅದರ ಮಾಲೀಕ. ಪೆಟ್ರೋಲ್‌, ಡೀಸೆಲ್‌ ಬೆಲೆ ಶತಕ ದಾಟಿ ಮುನ್ನಡೆಯುತ್ತಿರುವ ಈ ಹೊತ್ತಿನಲ್ಲಿ ಜೋಸೆಫ್‌ ನಗುಮುಖ ದಿಂದಲೇ, ಪ್ರಯಾಣಿಕರನ್ನು ಕುಳ್ಳಿರಿಸಿ ಹೊಗೆ ಉಗುಳದ, ಶಬ್ದ ಉಂಟು ಮಾಡದ ಈ ಆಟೊವನ್ನು ಚಲಾಯಿಸುತ್ತಿದ್ದಾರೆ. 

ಅಂದ ಹಾಗೆ, ಇದು ವಿದ್ಯುತ್‌ ಚಾಲಿತ ಪರಿಸರ ಸ್ನೇಹಿ (ಹಸಿರು) ಆಟೊ. ‘ನನ್ನದು ಜಿಲ್ಲೆಯ ಮೊದಲ ವಿದ್ಯುತ್‌ ಚಾಲಿತ ಆಟೊ’ ಎಂದು ಹೆಮ್ಮೆಯಿಂದ ಹೇಳುತ್ತಾರೆ ಜೋಸೆಫ್‌. 

ಡಿಜಿಟಲ್‌ ಖರೀದಿ: ಗಲ್ಫ್‌ನಲ್ಲಿ ಐದು ವರ್ಷ ದುಡಿದು ಊರಿಗೆ ವಾಪಸ್‌ ಬಂದ ಜೋಸೆಫ್‌ ಅವರಿಗೆ ಸಂಪಾ ದನೆಯ ದಾರಿಯೊಂದು ಬೇಕಿತ್ತು.

ಅಂಗಡಿ ಹಾಕಲು ಇಲ್ಲವೇ ಬೇರೆ ಉದ್ಯಮ ಸ್ಥಾಪಿಸಲು ದೊಡ್ಡ ಮಟ್ಟಿನ ಬಂಡವಾಳದ ಅಗತ್ಯವಿತ್ತು. ಆಟೊ ಓಡಿಸಿದರೆ ಹೇಗೆ ಎಂಬ ಆಲೋಚನೆ ಅವರಿಗೆ ಬಂತು. ಆದರೆ, ಈಗಿನ ಪೆಟ್ರೋಲ್‌, ಡೀಸೆಲ್‌ ದರದಲ್ಲಿ ಆಟೊ ಖರೀದಿಸಿದರೆ ಸಂಪಾದನೆಯಾಗಬಹುದೇ ಎಂಬ ಅನುಮಾನವೂ ಅವರನ್ನು ಕಾಡಿತು.

ವಿದ್ಯುತ್‌ ಚಾಲಿತ ಆಟೊ ಖರೀದಿಸಿದರೆ ಹೇಗೆ ಎಂಬ ಯೋಚನೆ ಬಂದಿದ್ದೇ ತಡ, ಇಂಟರ್‌ನೆಟ್‌, ಗೂಗಲ್‌ನಲ್ಲಿ ಜಾಲಾಡಿದರು. ತೆಲಂಗಾಣದ ಅಡಾಪ್ಟ್‌ ಮೋಟಾರ್ಸ್‌ ಎಂಬ ಸಂಸ್ಥೆ ತಯಾರಿಸುವ ‘ಸ್ವೀಕಾರ್‌’ ಎಂಬ ಮಾಡೆಲ್‌ ತಮಗೆ ಸೂಕ್ತ ಆಗಬಹುದು ಎನಿಸಿ, ಕಂಪನಿ ಸಂಪರ್ಕಿಸಿದರು. ವಿಡಿಯೊ ಕಾಲ್‌ನಲ್ಲೇ ಆಟೊ ಪರಿಶೀಲಿಸಿ ಬುಕ್‌ ಮಾಡಿದರು.  ಕೆಲವೇ ದಿನಗಳಲ್ಲಿ ಚಾಮರಾಜನಗರಕ್ಕೆ ಆಟೊ ತಲುಪಿತು. 

‘ಆಟೊಗೆ ₹ 2.10 ಲಕ್ಷ ಬೆಲೆ. ಸೌರ ಫಲಕ ಹೆಚ್ಚುವರಿಯಾಗಿ ಅಳವಡಿಸಲಾಗಿದೆ. ಇದಕ್ಕಾಗಿ ₹ 20 ಸಾವಿರ ಹೆಚ್ಚು ನೀಡಿದ್ದೇನೆ. ಹೀಗಾಗಿ ₹ 2.30 ಲಕ್ಷ ಕೊಟ್ಟಿದ್ದೇನೆ. 48 ವೋಲ್ಟ್‌ನ ಲೀಥಿಯಂ ಬ್ಯಾಟರಿ ಇದೆ. ಮೂರರಿಂದ ನಾಲ್ಕು ಗಂಟೆ ಚಾರ್ಜ್‌ ಮಾಡಿದರೆ 120 ಕಿ.ಮೀ. ಕ್ರಮಿಸಬಹುದು. ಸೌರಶಕ್ತಿಯ ಬಳಕೆಯಿಂದ ಹೆಚ್ಚುವರಿಯಾಗಿ 20 ಕಿ.ಮೀ. ಸಂಚರಿಸಬಹುದು’ ಎಂದು ಆಟೊದ ಬಗ್ಗೆ ಜೋಸೆಫ್‌ ವಿವರಿಸಿದರು.

ಉಳಿತಾಯ ಹೆಚ್ಚು: ‘ಪೆಟ್ರೋಲ್‌, ಡೀಸೆಲ್‌ಗಾಗಿ ನೂರಾರು ರೂಪಾಯಿ ಖರ್ಚು ಮಾಡಬೇಕಿಲ್ಲ. ನನಗೆ ವಿದ್ಯುತ್‌ಗೆ ದಿನಕ್ಕೆ ₹ 50ರಿಂದ ₹ 60 ಬೇಕಾಗುತ್ತದೆ. ಆಟೊ ನಿರ್ವಹಣೆ ವೆಚ್ಚ ಬೇರೇನಿಲ್ಲ. ಬ್ಯಾಟರಿಗೆ ಮೂರು ವರ್ಷ ವಾರಂಟಿ, ಮೋಟಾರ್‌ಗೆ ಒಂದು ವರ್ಷ ವಾರಂಟಿ ಇದೆ’ ಎಂದು ಅವರು ಹೇಳಿದರು. 

ವೇಗ ಕಡಿಮೆ: ಈ ಆಟೊದಲ್ಲಿ 30ರಿಂದ ಗರಿಷ್ಠ 40 ಕಿ.ಮೀ ವೇಗದಲ್ಲಿ ಮಾತ್ರ ಸಂಚರಿಸುತ್ತದೆ. ಹಾಗಾಗಿ, ಇದರಲ್ಲಿ ಕುಳಿತು ವೇಗವಾಗಿ ಹೋಗಬೇಕು ಎಂದರೆ ಆಗದು. ಆಟೊ ಶಬ್ದ ಉಂಟು ಮಾಡುವುದಿಲ್ಲ. ಸಂಚರಿಸುವಾಗ ಕುಲುಕುವುದಿಲ್ಲ. ಹಾಗಾಗಿ, ಆಸ್ಪತ್ರೆಗೆ ಚಿಕಿತ್ಸೆಗಾಗಿ ತೆರಳುವರು, ವೃದ್ಧರು ಹೆಚ್ಚು ಇಷ್ಟಪಡುತ್ತಿದ್ದಾರೆ.

‘ಪರಿಸರ ಸ್ನೇಹಿ ವಾಹನಗಳೇ ಭವಿಷ್ಯ’

‘ಕೆಲವರು ಆಟೊದಲ್ಲಿ ಕುಳಿತುಕೊಳ್ಳಲು ಹಿಂದೇಟು ಹಾಕುತ್ತಿದ್ದಾರೆ. ಯುವಜನರು ಇಷ್ಟ ಪಡುತ್ತಿದ್ದಾರೆ. ಪೆಟ್ರೋಲ್‌, ಡೀಸೆಲ್‌ ಬಳಸುವ ಆಟೊ ಓಡಿಸುವವರಿಗೆ ಅಷ್ಟು ಇಷ್ಟ ಆಗಿಲ್ಲ. ಯಾಕೆಂದರೆ ಇದರಲ್ಲಿ ವೇಗವಾಗಿ ಹೋಗಲು ಸಾಧ್ಯವಿಲ್ಲ. ವಿದ್ಯುತ್‌ ಚಾಲಿತ ವಾಹನಗಳೇ ಮುಂದಿನ ಭವಿಷ್ಯ. ಕೆಲವು ವರ್ಷಗಳಲ್ಲಿ ಈ ವಾಹನಗಳೇ ರಸ್ತೆಗಳಲ್ಲಿ ಮೆರೆಯಲಿವೆ ನೋಡಿ’ ಎನ್ನುತ್ತಾರೆ ಜೋಸೆಫ್‌. 

‘ವಿದ್ಯುತ್‌ ಚಾಲಿತ ವಾಹನಗಳ ಪರಿಣಾಮಕಾರಿ ಬಳಕೆಗಾಗಿ ಮೂಲಸೌಕರ್ಯಗಳನ್ನು ಹೆಚ್ಚಿಸುವ ಅಗತ್ಯವಿದೆ. ಸದ್ಯ ಜಿಲ್ಲೆಯಲ್ಲಿ ಆಟೊ ಸರ್ವಿಸ್ ವ್ಯವಸ್ಥೆ ಇಲ್ಲ. ಚಾರ್ಜ್‌ ಮಾಡುವ ಪಾಯಿಂಟ್‌ಗಳು ಇಲ್ಲ. ಇವುಗಳಿಂದಾಗಿ ಆಟೊ ನಿರ್ವಹಣೆ ಕೊಂಚ ಸವಾಲಿನ ಕೆಲಸ’ ಎಂದು ಅವರು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು