ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೂಜಿಗಲ್ಲಿನಂತೆ ಸೆಳೆಯುತ್ತಿದೆ ಹೂ ಗೋಪುರ

ಫಲಪುಷ್ಪ ಪ್ರದರ್ಶನಕ್ಕೆ ಇಂದು ತೆರೆ, ಭೇಟಿ ನೀಡುತ್ತಿರುವ ಸಾರ್ವಜನರಿಕರ ಸಂಖ್ಯೆ ಕಡಿಮೆ
Last Updated 27 ಜನವರಿ 2020, 19:45 IST
ಅಕ್ಷರ ಗಾತ್ರ

ಚಾಮರಾಜನಗರ: ತೋಟಗಾರಿಕಾ ಇಲಾಖೆಯು ಜಿಲ್ಲಾಡಳಿತ ಭವನದ ಆವರಣದಲ್ಲಿ ಆಯೋಜಿಸುವ ಮೂರು ದಿನಗಳ ಫಲಪುಷ್ಪ ಪ್ರದರ್ಶನದಲ್ಲಿ ಹೂವುಗಳಿಂದ ನಿರ್ಮಿಸಲಾಗಿರುವ, ಚಾಮರಾಜೇಶ್ವರ ದೇವಾಲಯದ ಗೋಪುರದ ಪ್ರತಿಕೃತಿ ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿದೆ.

ಜನರಿಗೆ ಸೆಲ್ಫಿ ತೆಗೆದುಕೊಳ್ಳುವುದಕ್ಕಾಗಿ ಸೆಲ್ಫಿ ಪಾಯಿಂಟ್‌ ಪ್ರತ್ಯೇಕವಾಗಿ ನಿರ್ಮಿಸಲಾಗಿದ್ದರೂ, ಅಲ್ಲಿಗಿಂತ ಹೆಚ್ಚು ಮಂದಿ ಗೋಪುರದ ಎದುರಲ್ಲೇ ಸೆಲ್ಫಿ ತೆಗೆದುಕೊಳ್ಳುವುದಕ್ಕೆ ಮುಗಿಬೀಳುತ್ತಿದ್ದಾರೆ.

ಮೈಸೂರಿನವರಾದ ಉಮಾಶಂಕರ್‌ ಎಂಬುವವರು ಈ ಗೋಪುರವನ್ನು ನಿರ್ಮಿಸಿದ್ದು, ಇದರ ನಿರ್ಮಾಣಕ್ಕೆ ಒಟ್ಟಾರೆ 75 ಸಾವಿರ ಹೂವುಗಳನ್ನು ಬಳಸಲಾಗಿದೆ. ಗೋಪುರದ ಕೆಳಗೆ ಹೂವಿನಿಂದ ಶಿವಲಿಂಗವನ್ನು ನಿರ್ಮಿಸಲಾಗಿದ್ದು, ಗೋಪುರಕ್ಕೆ ಎದುರಾಗಿ ಪುಷ್ಪಗಳಿಂದಲೇ ನಂದಿಯನ್ನು ನಿರ್ಮಿಸಿ ಇರಿಸಲಾಗಿದೆ.

ಫಲಪುಷ್ಪ ಪ್ರದರ್ಶನಕ್ಕೆ ಹಾಕಲಾಗಿರುವ ಪೆಂಡಾಲ್‌ನ ಎದುರಿಗೆ ಮಧ್ಯಭಾಗದಲ್ಲಿ ಪುಷ್ಪಗಳ ಗೋಪುರಗಳನ್ನು ನಿರ್ಮಿಸಲಾಗಿದ್ದು, ಒಂದೇ ನೋಟಕ್ಕೆ ಜನರನ್ನು ಸೆಳೆಯುತ್ತಿದೆ. ಬಿಳಿ, ಹಳದಿ ಮತ್ತು ಕಂದು ಬಣ್ಣಗಳ ಸೇವಂತಿಗೆ, ಚೆಂಡು ಹೂವು, ಗುಲಾಬಿ ಹೂಗಳನ್ನು ಬಳಸಿ ಗೋಪುರ, ಶಿವಲಿಂಗ ಹಾಗೂ ನಂದಿಯ ಪ್ರತಿಕೃತಿಯನ್ನು ನಿರ್ಮಿಸಲಾಗಿದೆ.

1.25 ಲಕ್ಷ ಹೂ: ‘ಫಲಪುಷ್ಪ ಪ್ರದರ್ಶನಕ್ಕಾಗಿ ಪ್ರಮುಖವಾಗಿ ಮೂರು ಹೂವುಗಳ ಕಲಾಕೃತಿಯನ್ನು ಮಾಡಲಾಗಿದ್ದು, ಒಟ್ಟು 1.25 ಲಕ್ಷ ಹೂವುಗಳನ್ನು ಬಳಸಲಾಗಿದೆ. 75 ಸಾವಿರ ಹೂವುಗಳನ್ನು ಚಾಮರಾಜೇಶ್ವರ ದೇವಾಲಯದ ಗೋಪುರದ ಪ್ರತಿಕೃತಿ, ಶಿವಲಿಂಗ ಹಾಗೂ ನಂದಿಗೆ ಬಳಸಲಾಗಿದೆ. ಉಳಿದ ಹೂವುಗಳನ್ನು ಇಸ್ರೊದ ಚಂದ್ರಯಾನ ರಾಕೆಟ್‌ ಪ್ರತಿಕೃತಿ ಹಾಗೂ ಆನೆ ಪ್ರತಿಕೃತಿ ನಿರ್ಮಾಣಕ್ಕೆ ಉಪಯೋಗಿಸಲಾಗಿದೆ’ ಎಂದು ತೋಟಗಾರಿಕಾ ಇಲಾಖೆಯ ಉಪ ನಿರ್ದೇಶಕ ಶಿವ ಪ್ರಸಾದ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಹಣ್ಣುಗಳಲ್ಲಿ ಗಣ್ಯರ ಮುಖ: ಕಲ್ಲಂಗಡಿ ಹಣ್ಣುಗಳನ್ನು ಕೆತ್ತಿ ಬಿಡಿಸಿರುವ ರಾಷ್ಟ್ರನಾಯಕರ, ಗಣ್ಯರ, ಪ್ರಸಿದ್ಧ ವ್ಯಕ್ತಿಗಳ ಕಲಾಕೃತಿಗಳು ಫಲಪುಷ್ಪ ಪ್ರದರ್ಶನದ ಮತ್ತೊಂದು ಆಕರ್ಷಣೀಯ ಬಿಂದು. ಛತ್ರಪತಿ ಶಿವಾಜಿ ಭಗತ್‌ ಸಿಂಗ್‌, ಪಾಕಿಸ್ತಾನದ ಯುದ್ಧವಿಮಾನವನ್ನು ಹೊಡೆದುರಿಳಿಸಿದ ಅಭಿನಂದನ್‌, ವಿವೇಕಾನಂದ, ಅಂಬೇಡ್ಕರ್‌, ಗಾಂಧೀಜಿ, ಮುಖ್ಯಮಂತ್ರಿ ಯಡಿಯೂರಪ್ಪ, ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌, ಪೇಜಾವರ ಮಠದ ವಿಶ್ವೇಶ ತೀರ್ಥ ಸ್ವಾಮೀಜಿ, ಯಕ್ಷಗಾನದ ಮುಖವರ್ಣಿಕೆಗಳನ್ನು ಕಲ್ಲಂಗಡಿ ಹಣ್ಣುಗಳಲ್ಲಿ ಕೆತ್ತಲಾಗಿದೆ.ಡಾ.ಬಿಆರ್‌.ಅಂಬೇಡ್ಕರ್‌ ಅವರ ಮರಳು ಶಿಲ್ಪ ಕೂಡ ಗಮನಸೆಳೆಯುತ್ತಿದೆ.

ವಿವಿಧ ಬೋನ್ಸಾಯ್‌ ಗಿಡಗಳು, ಕಳ್ಳಿ ಗಿಡಗಳು, ಅಲಂಕಾರಿಕ ಹೂವುಗಳು ಫಲಪುಷ್ಪ ಪ್ರದರ್ಶನದ ಸೌಂದರ್ಯವನ್ನು ಹೆಚ್ಚಿಸಿವೆ. ಜಿಲ್ಲೆಯ ಪ್ರಗತಿಪರ ರೈತರು ಬೆಳೆದಿರುವ ಅಪರೂಪದ ಬೆಳೆಗಳು, ತರಕಾರಿಗಳು, ಭಾರಿ ಗಾತ್ರದ ಬಾಳೆಗೊನೆಗಳು ಕೃಷಿಯಲ್ಲಿ ಆಸಕ್ತಿ ಇರುವವರ ಕುತೂಹಲ ಕೆರಳಿಸುತ್ತಿವೆ. ಪಾಲಿಹೌಸ್‌, ಹನಿ ನೀರಾವರಿ ವ್ಯವಸ್ಥೆ, ಕೃಷಿ ಹೊಂಡ, ಮೀನುಸಾಕಣೆ ಸೇರಿದಂತೆ ವಿವಿಧ ಪ್ರಾತ್ಯಕ್ಷಿಕೆಗಳೂ ಪ್ರದರ್ಶನದಲ್ಲಿವೆ.

ವಿವಿಧ ಇಲಾಖೆಗಳ ಹಾಗೂ ಕೃಷಿ ಯಂತ್ರೋಪಕರಣಗಳ ಏಜೆನ್ಸಿಗಳ 21 ಮಳಿಗೆಗಳು ಪ್ರದರ್ಶನದಲ್ಲಿವೆ. ತೋಟಗಾರಿಕೆ, ಕೃಷಿ, ರೇಷ್ಮೆ, ಸಾರ್ವಜನಿಕ ಶಿಕ್ಷಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಯೋಜನೆಗಳ ಮಾಹಿತಿಗಳನ್ನು ಜನರಿಗೆ ನೀಡಲಾಗುತ್ತಿದೆ.

ಇಂದು ಕೊನೆ: ಮೂರು ದಿನಗಳ ಫಲಪುಷ್ಪ ಪ್ರದರ್ಶನಕ್ಕೆ ಮಂಗಳವಾರ ತೆರೆ ಬೀಳಲಿದೆ. ಮಂಗಳವಾರ ರಾತ್ರಿ 9.30ವರೆಗೆ ಸಾರ್ವಜನಿಕರು ಭೇಟಿ ನೀಡಬಹುದು ಎಂದು ಶಿವಪ್ರಸಾದ್‌ ಅವರು ಹೇಳಿದ್ದಾರೆ.

ಜನರ ಸಂಖ್ಯೆ ಕಡಿಮೆ

2018ರ ದಸರಾ ಸಂದರ್ಭದಲ್ಲಿ ನಡೆದ ಫಲಪುಷ್ಪ‍ ಪ್ರದರ್ಶನಕ್ಕೆ ಹೋಲಿಸಿದರೆ, ಪ್ರದರ್ಶನ ವೀಕ್ಷಿಸಲು ಬಂದ ಸಾರ್ವಜನಿಕರ ಸಂಖ್ಯೆ ಕಡಿಮೆ. ಆ ವರ್ಷ ಫಲಪುಷ್ಪಗಳು ಹೆಚ್ಚಿದ್ದವು.

ಭಾನುವಾರ ಉದ್ಘಾಟನೆಗೊಂಡ ಮೊದಲ ದಿನ ಸಂಜೆಯ ವರೆಗೂ ಹೆಚ್ಚಿನ ಜನರು ಬರಲಿಲ್ಲ. ಆರು ಗಂಟೆಯ ನಂತರ ಜನರು ಬರಲು ಆರಂಭಿಸಿದರು. ಎರಡನೇ ದಿನವಾದ ಸೋಮವಾರ ಹಗಲು ಹೊತ್ತಿನಲ್ಲಿ ಶಾಲಾ ವಿದ್ಯಾರ್ಥಿಗಳು ಬಿಟ್ಟರೆ ಸಾರ್ವಜನಿಕರು ಬಂದವರು ಕಡಿಮೆ. ಜಿಲ್ಲಾಡಳಿತ ಭವನಕ್ಕೆ ಬಂದವರೆಲ್ಲ, ಪ್ರದರ್ಶನಕ್ಕೆ ಹೋಗಿ ಬರುತ್ತಿದ್ದರು. ಸಂಜೆ ಹೊತ್ತು ಸ್ವಲ್ಪ ಜನ ಸಂದಣಿ ಇತ್ತು.ವಿವಿಧ ಮಳಿಗೆಗಳಲ್ಲಿದ್ದ ಇಲಾಖೆಗಳ ಸಿಬ್ಬಂದಿ ಕೂಡ ‘ಈ ವರ್ಷ ಜನ ಕಡಿಮೆ’ ಎಂದು ಹೇಳುತ್ತಿದ್ದಾರೆ.

ಕಾಡಿತೇ ಪ್ರಚಾರದ ಕೊರತೆ?

ಫಲಪುಷ್ಪ ಪ್ರದರ್ಶನ ನಡೆಯಲಿರುವ ಬಗ್ಗೆ ಸರಿಯಾಗಿ ಪ್ರಚಾರ ಮಾಡದೇ ಇದ್ದುದು ಜನರು ಕಡಿಮೆಯಾಗಲು ಕಾರಣ ಎಂದು ಹೇಳಲಾಗುತ್ತಿದೆ. ಪ್ರದರ್ಶನಕ್ಕೆ ನಾಲ್ಕೈದು ದಿನಗಳಿರುವಾಗ, ಅದರ ಬಗ್ಗೆ ಜಿಲ್ಲಾಡಳಿತ ಮಾಧ್ಯಮಗಳಿಗೆ ಪ್ರಕಟಣೆ ನೀಡಿತು. ಜಿಲ್ಲಾಡಳಿತ ಭವನದ ಪ್ರವೇಶ ದ್ವಾರದ ಬಳಿ ಚಿಕ್ಕ ಫಲಕ ಹಾಕಿದ್ದು ಬಿಟ್ಟರೆ ಬೇರೆಲ್ಲೂ ಈ ಬಗ್ಗೆ ಫಲಕ ಹಾಕಿದ್ದು ಕಾಣುತ್ತಿಲ್ಲ.

ಪ್ರತಿ ದಿನ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನೂ ಏರ್ಪಡಿಸಲಾಗಿದೆ. ಈ ಬಗ್ಗೆಯೂ ಯಾರಿಗೂ ಯಾವುದೇ ಮಾಹಿತಿ ಇಲ್ಲ. ಆಹ್ವಾನ ಪತ್ರಿಕೆಯಲ್ಲೂ ಮುದ್ರಿಸಿಲ್ಲ. ಮಾಧ್ಯಮಗಳಿಗೂ ತಿಳಿಸಿಲ್ಲ. ಮೊದಲ ದಿನ ಜಿಲ್ಲೆಯವರೇ ಆದ, ಖ್ಯಾತ ಮಿಮಿಕ್ರಿ ಕಲಾವಿದ ಗೋಪಿ ಅವರು ಪ್ರದರ್ಶನ ನೀಡಿದ್ದರು. ಸೋಮವಾರ ಸುಗಮ ಸಂಗೀತ ಕಾರ್ಯಕ್ರಮವಿತ್ತು. ಮಾಹಿತಿ ಇದ್ದಿದ್ದರೆ, ಜನರು ಇನ್ನಷ್ಟು ಸಂಖ್ಯೆಯಲ್ಲಿ ಸೇರುತ್ತಿದ್ದರು.

‘ಫಲಪುಷ್ಪ ಪ್ರದರ್ಶನಕ್ಕೆ ಸಾಕಷ್ಟು ಸಿದ್ಧತೆ ಮಾಡಿದ್ದೇವೆ. ಪ್ರಚಾರವನ್ನು ಮಾಡಿದ್ದೇವೆ. ಜನರ ಸ್ಪಂದನೆ ಉತ್ತಮವಾಗಿದೆ. ಹಗಲು ಹೊತ್ತಿನಲ್ಲಿ ಜನರ ಸಂಖ್ಯೆ ಕಡಿಮೆ ಇರುತ್ತದೆ. ರಾತ್ರಿ ಹೊತ್ತು ಹೆಚ್ಚು ಜನ ಬರುತ್ತಿದ್ದಾರೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಾಂಸ್ಕೃತಿಕ ಕಾರ್ಯಕ್ರಮ ಏರ್ಪಡಿಸಿದೆ’ ಎಂದು ಶಿವಪ್ರಸಾದ್‌ ಅವರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT