ಶನಿವಾರ, ಸೆಪ್ಟೆಂಬರ್ 25, 2021
22 °C
ಜಿಲ್ಲಾ ಕೇಂದ್ರ ಗ್ರಂಥಾಲಯದ ಹೊಸ ಕಟ್ಟಡಕ್ಕೆ ಶಂಕುಸ್ಥಾಪನೆ

ಜಿಲ್ಲೆ ಶೈಕ್ಷಣಿಕ ಕೇಂದ್ರ ಆಗಲಿ: ಶ್ರೀನಿವಾಸ ಪ್ರಸಾದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಗಡಿ ಜಿಲ್ಲೆ ಚಾಮರಾಜನಗರವು ಶೈಕ್ಷಣಿಕ ಕೇಂದ್ರ (ಹಬ್‌) ಆಗಿ ರೂಪುಗೊಳ್ಳಬೇ‌ಕು ಎಂದು ಸಂಸದ ವಿ.ಶ್ರೀನಿವಾಸ ಪ್ರಸಾದ್‌ ಅವರು ಶುಕ್ರವಾರ ಅಭಿಪ್ರಾಯಪಟ್ಟರು.

ನಗರದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ₹1 ಕೋಟಿ ವೆಚ್ಚದಲ್ಲಿ ಜಿಲ್ಲಾ ಕೇಂದ್ರ ಗ್ರಂಥಾಲಯದ ಹೊಸ ಕಟ್ಟಡದ ಶಂಕುಸ್ಥಾಪನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಜಿಲ್ಲೆಯಲ್ಲಿ ಶಿಕ್ಷಣ ಕ್ಷೇತ್ರದ ಪ್ರಗತಿಗೆ ಒತ್ತು ನೀಡಲಾಗುತ್ತಿದೆ. ಮೂಲಸೌಕರ್ಯಗಳು ಇನ್ನಷ್ಟು ಆಗಬೇಕು. ಈಗ ವೈದ್ಯಕೀಯ ಕಾಲೇಜು ಇದೆ. ಅದಕ್ಕಾಗಿ ಹೊಸ ಆಸ್ಪತ್ರೆ ನಿರ್ಮಾಣವಾಗುತ್ತಿದೆ. ಎಂಜಿನಿಯರಿಂಗ್‌ ಕಾಲೇಜು ಇದೆ. ಬಿಎಸ್‌ಸಿ ನರ್ಸಿಂಗ್‌ ಕಾಲೇಜು ಆರಂಭವಾಗಲಿದೆ. ಪದವಿ ಕಾಲೇಜುಗಳಿವೆ. ಕಾನೂನು ಕಾಲೇಜು ಇನ್ನು ಆರಂಭವಾಗಬೇಕಿದೆ’ ಎಂದರು. 

ಪ್ರತ್ಯೇಕ ವಿವಿ ಬೇಗ ಆಗಲಿ: ‘ಜಿಲ್ಲೆಯಲ್ಲಿ ಸದ್ಯ ಡಾ.ಬಿ.ಆರ್.ಅಂಬೇಡ್ಕರ್‌ ಸ್ನಾತಕೋತ್ತರ ಕೇಂದ್ರ ಇದೆ. ಈಗ ಪ್ರತ್ಯೇಕ ವಿಶ್ವವಿದ್ಯಾಲಯ ಸ್ಥಾಪಿಸಲು ಸರ್ಕಾರ ಹೊರಟಿದೆ. ತಜ್ಞರ ಸಮಿತಿ ನೇಮಿಸಿದೆ. 25ಕ್ಕೆ ವರದಿಯನ್ನೂ ಸಮಿತಿ ನೀಡಲಿದೆ. ಪ್ರತ್ಯೇಕ ವಿವಿ ಆದರೆ ಇಲ್ಲಿನ ಮಕ್ಕಳಿಗೆ ಅನುಕೂಲವಾಗಲಿದೆ. ಶೀಘ್ರದಲ್ಲಿ ವಿವಿ ಸ್ಥಾಪನೆಯಾಗಬೇಕು. ಅದಕ್ಕೆ ಬೇಕಾದ ಎಲ್ಲ ಸಹಕಾರವನ್ನು ನೀಡಲಾಗುವುದು. ಜಿಲ್ಲಾ ಉಸ್ತುವಾರಿ ಸಚಿವರು ಕೂಡ ಸರ್ಕಾರದಿಂದ ಸೌಕರ್ಯಗಳನ್ನು ಕೊಡಿಸಬೇಕು’ ಎಂದು ಸಂಸದರು ಹೇಳಿದರು. 

‘1993ರವರೆಗೆ ಸಂಸದರ ಕ್ಷೇತ್ರ ಪ್ರದೇಶಾಭಿವೃದ್ಧಿ ನಿಧಿ ಇರಲಿಲ್ಲ. ಬಂದ ತಕ್ಷಣ ಗ್ರಂಥಾಲಯಕ್ಕಾಗಿ ಅನುದಾನ ನೀಡಿದ್ದೆ. ಈಗ ಹೊಸ ಗ್ರಂಥಾಲಯ ಕಟ್ಟಡ ನಿರ್ಮಾಣ ಆಗುತ್ತಿರುವುದು ಸಂತಸದ ಸಂಗತಿ. ನಾನು ಆರಂಭದಿಂದಲೂ ಜಿಲ್ಲೆಯಲ್ಲಿ ಶಿಕ್ಷಣಕ್ಕೆ ಒತ್ತು ನೀಡುತ್ತಾ ಬಂದಿದ್ದೇನೆ. ಮಕ್ಕಳಿಗೆ ಉತ್ತಮ ಶಿಕ್ಷಣ ಸಿಗಬೇಕು. ಜಿಲ್ಲೆ ಆರ್ಥಿಕವಾಗಿ ಅಭಿವೃದ್ಧಿ ಹೊಂದಬೇಕು’ ಎಂದರು. 

ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌, ಶಾಸಕರಾದ ಸಿ.ಪುಟ್ಟರಂಗಶೆಟ್ಟಿ, ಎನ್‌.ಮಹೇಶ್‌, ಸಿ.ಎಸ್‌.ನಿರಂಜನಕುಮಾರ್‌,  ಕೇಂದ್ರ ಪರಿಹಾರ ಸಮಿತಿ ಅಧ್ಯಕ್ಷ ಎಂ.ರಾಮಚಂದ್ರ, ಚುಡಾ ಅಧ್ಯಕ್ಷ ಶಾಂತಮೂರ್ತಿ ಕುಲಗಾಣ, ನಗರಸಭಾ ಅಧ್ಯಕ್ಷೆ ಆಶಾ, ನಗರಸಭಾ ಸದಸ್ಯ ಎಂ.ಮಹೇಶ್‌, ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ, ಸಾರ್ವಜನಿಕ ಗ್ರಂಥಾಲಯ ಇಲಾಖೆಯ ನಿರ್ದೇಶಕ ಡಾ.ಸತೀಶ್‌ ಕುಮಾರ್‌ ಎಸ್‌.ಹೊಸಮನಿ, ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಅಧಿಕಾರಿ ಆರ್‌.ಶಿವಸ್ವಾಮಿ ಇದ್ದರು. 

ಸುರೇಶ್‌ ಕುಮಾರ್‌ಗೆ ಶ್ಲಾಘನೆ

ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿರುವುದಕ್ಕೆ ಶಿಕ್ಷಣ ಸಚಿವ ಸುರೇಶ್‌ ಕುಮಾರ್‌ ಅವರನ್ನು ಶ್ರೀನಿವಾಸ ಪ್ರಸಾದ್‌ ಅವರು ಶ್ಲಾಘಿಸಿದರು. 

‘ಸುರೇಶ್‌ ಕುಮಾರ್‌ ಅವರು ಶಿಕ್ಷಣ ಇಲಾಖೆಗೆ ಕಾಯಕಲ್ಪ ಕೊಡುತ್ತಿದ್ದಾರೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯನ್ನು ಯಾವುದೇ ಗೊಂದಲವಿಲ್ಲದೇ ಅಡೆತಡೆಗಳಿಲ್ಲದೇ ಯಶಸ್ವಿಯಾಗಿ ನಡೆಸಿದ್ದಾರೆ. ಕೋವಿಡ್‌ ಸಮಯದಲ್ಲಿ ಎಲ್ಲರೊಂದಿಗೂ ಚರ್ಚಸಿ ಅವರು ಈ ನಿರ್ಧಾರ ಕೈಗೊಂಡಿದ್ದರು. ಅವರ ತೀರ್ಮಾನವನ್ನು ಸುಪ್ರೀಂ ಕೋರ್ಟ್‌ ಕೂಡ ಎತ್ತಿ ಹಿಡಿದಿತ್ತು. ಜಿಲ್ಲೆಯ ಅಭಿವೃದ್ಧಿಗೂ ಅವರು ಶ್ರಮ ವಹಿಸುತ್ತಿದ್ದಾರೆ’ ಎಂದು ಶ್ಲಾಘಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.