ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌರ ಕಾರ್ಮಿಕರ ಮುಷ್ಕರ: ರಾಶಿ ಬಿದ್ದ ತ್ಯಾಜ್ಯ

ನಾಲ್ಕು ದಿನಗಳಿಂದ ನಡೆಯದ ಸ್ವಚ್ಛತಾ ಕಾರ್ಯ, ಮನೆಗಳ ಕಸದ ಬುಟ್ಟಿಗಳು ಭರ್ತಿ
Last Updated 4 ಜುಲೈ 2022, 16:57 IST
ಅಕ್ಷರ ಗಾತ್ರ

ಚಾಮರಾಜನಗರ: ಸೇವೆ ಕಾಯಂಗೊಳಿಸುವಂತೆ ಆಗ್ರಹಿಸಿ ನಗರ ಸ್ಥಳೀಯ ಸಂಸ್ಥೆಗಳ ಪೌರಕಾರ್ಮಿಕರು ನಾಲ್ಕು ದಿನಗಳ ಕಾಲ ನಡೆಸಿದ ಮುಷ್ಕರದಿಂದಾಗಿ ಜಿಲ್ಲಾ ಕೇಂದ್ರ ಸೇರಿದಂತೆ ವಿವಿಧ ನಗರ, ಪಟ್ಟಣಗಳಲ್ಲಿ ಸ್ವಚ್ಛತಾ ಕಾರ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. 

ಕಸ ಸಂಗ್ರಹಣೆ ಕಾರ್ಯ ನಾಲ್ಕು ದಿನಗಳಿಂದ ಸ್ಥಗಿತಗೊಂಡಿದ್ದು, ರಸ್ತೆಗಳಲ್ಲಿ, ಸಾರ್ವಜನಿಕ ಸ್ಥಳಗಳಲ್ಲಿ ಅಲ್ಲಲ್ಲಿ ಕಸದ ರಾಶಿ ಕಂಡು ಬಂದಿದೆ. ಮನೆ ಮನೆಗಳಲ್ಲಿ ಕಸ ಸಂಗ್ರಹಣೆಯೂ ನಡೆದಿಲ್ಲ. ಹೊರಗಡೆ ಕಸ ಎಸೆಯಬೇಕಾದ ಪರಿಸ್ಥಿತಿ ನಗರ, ಪಟ್ಟಣ ನಿವಾಸಿಗಳಿಗೆ ಉಂಟಾಗಿದೆ.

ಜಿಲ್ಲಾ ಕೇಂದ್ರ ಹಾಗೂ ತಾಲ್ಲೂಕು ಕೇಂದ್ರಗಳಲ್ಲಿ ಪೌರಕಾರ್ಮಿಕರು, ಕಸ ಸಂಗ್ರಹಕಾರರು, ಲೋಡರ್‌ಗಳು ಹಾಗೂ ವಾಟರ್‌ಮೆನ್‌ಗಳು ಜುಲೈ 1ರಿಂದ ಮುಷ್ಕರ ಆರಂಭಿಸಿದ್ದರು. 

ಚಾಮರಾಜನಗರದ ನಗರಸಭೆಯ ವ್ಯಾಪ್ತಿಯಲ್ಲಿ 44 ಮಂದಿ ಕಾಯಂ ಪೌರಕಾರ್ಮಿಕರಿದ್ದಾರೆ. 81 ಮಂದಿ ಗುತ್ತಿಗೆಆಧಾರದಲ್ಲಿ ಕೆಲಸ ಮಾಡುವವರಿದ್ದಾರೆ. ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುವರರಲ್ಲಿ ಬಹುತೇಕರು ಮನೆ ಮನೆಗಳಿಗೆ ತೆರಳಿ ಕಸ ಸಂಗ್ರಹಿಸುವ ಕೆಲಸ ಮಾಡುವವರು. ಒಂದಷ್ಟು ಜನ ರಸ್ತೆಗಳ ಸ್ವಚ್ಛ ಕಾರ್ಯದಲ್ಲೂ ತೊಡಗಿರುತ್ತಾರೆ.ಅವರು ಕರ್ತವ್ಯಕ್ಕೆ ಗೈರಾಗಿರುವುದರಿಂದ ಈಗ ಅಷ್ಟೂ ಜನರ ಕೆಲಸವನ್ನು 44 ಮಂದಿಯೇ ಮಾಡಬೇಕಾಗಿದೆ.

ರಸ್ತೆಗಳ ಬದಿ, ಬಡಾವಣೆಗಳ ಅಲ್ಲಲ್ಲಿ ದೊಡ್ಡ ದೊಡ್ಡ ಕಸದ ರಾಶಿಯೇ ಬಿದ್ದಿದೆ. ಮನೆಗಳಲ್ಲೂ ಕಸದ ಬುಟ್ಟಿಗಳಲ್ಲಿ ನಾಲ್ಕು ದಿನಗಳ ಕಸ ತುಂಬಿದೆ. 

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಗರಸಭೆ ಆಯುಕ್ತ ಕರಿಬಸವಯ್ಯ ಅವರು, ‘44 ಮಂದಿ ಕಾಯಂ ಪೌರಕಾರ್ಮಿಕರು ಕರ್ತವ್ಯ ನಿರತರಾಗಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಎಂದಿನಂತೆ ಸ್ವಚ್ಛತಾ ಕೆಲಸ ನಡೆಯುತ್ತಿದೆ. ಮುಷ್ಕರ ನಡೆಯುತ್ತಿರುವುದರಿಂದ ಮನೆಗಳಿಂದ ಸಂಗ್ರಹಿಸಲು ಮಾತ್ರ ಸಾಧ್ಯವಾಗಿಲ್ಲ’ ಎಂದು ಹೇಳಿದರು. 

ಕೊಳ್ಳೇಗಾಲ ವರದಿ: ನಗರದಲ್ಲಿ ನಾಲ್ಕು ದಿನಗಳಿಂದ ಕಸದ ವಿಲೇವಾರಿ ಆಗಿಲ್ಲ. ಮುಖ್ಯ ರಸ್ತೆ, ಸೇರಿದಂತೆ ಅನೇಕ ಬಡಾವಣೆಗಳಲ್ಲಿ ಕಸ ರಾಶಿ ಬಿದ್ದಿದೆ. ಚರಂಡಿಗಳೂ ತುಂಬಿವೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ.

‘ನಗರಸಭಾ ವ್ಯಾಪ್ತಿಯಲ್ಲಿ 38 ಮಂದಿ ಕಾಯಂ ಪೌರಕಾರ್ಮಿಕರು ಇದ್ದಾರೆ. ಈಗ ಅವರೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. 40 ಮಂದಿ ಪೌರಕಾರ್ಮಿಕರು, ಕಸ ತೆಗೆಯುವ ವಾಹನ, ನೀರು ಬಿಡುವವರು ಸೇರಿದಂತೆ 80ಕ್ಕೂ ಹೆಚ್ಚು ಮಂದಿ ಮುಷ್ಕರದಲ್ಲಿ ತೊಡಗಿದ್ದಾರೆ. ಆ ಕಾರಣ ಕಸ ತೆರವು ಮಾಡಲು ಆಗುತ್ತಿಲ್ಲ’ ಎಂದು ಆಯುಕ್ತ ನಂಜುಂಡಸ್ವಾಮಿ ಹೇಳಿದರು.

ಯಳಂದೂರು ವರದಿ: ಪೌರ ಕಾರ್ಮಿಕರು ಮುಷ್ಕರದ ಕಾರಣಕ್ಕೆ ಪಟ್ಟಣದಲ್ಲಿ  ತ್ಯಾಜ್ಯ ವಿಲೇವಾರಿ ಪ್ರಕ್ರಿಯೆ ನಿಧಾನವಾಗಿದೆ. ಇದರಿಂದ ಪೇರಿಸಿದ ಕಸದ ರಾಶಿ ಅಲ್ಲಲ್ಲಿ ಬಿದ್ದಿದ್ದು, ತೆರವುಗೊಳಿಸಲು ಪಟ್ಟಣ ಪಂಚಾಯಿತಿ ಪರದಾಡುವಂತಾಗಿದೆ. 

ಸ್ವಚ್ಛತಾ ಕಾರ್ಮಿಕರು ಕೆಲಸದಿಂದ ದೂರ ಉಳಿದಿರುವುದರಿಂದ ಬಡಾವಣೆಗಳಲ್ಲಿ ತ್ಯಾಜ್ಯ ಸಾಗಣೆಗೆ ಹಿನ್ನಡೆಯಾಗಿದೆ. ಬಳೇಪೇಟೆ, ಸಂತೇ ಮೈದಾನ ಹಾಗೂ ರಾಜ ಕಾಲುವೆಗಳ ಸುತ್ತಮುತ್ತ ಮನೆಗಳ ಕಸವನ್ನು ಎಸೆಯಲಾಗಿದೆ. ರಸ್ತೆ ಬದಿಯಲ್ಲಿ ತ್ಯಾಜ್ಯ ಚೆಲ್ಲಲಾಗಿದೆ ಎಂದು 
ಪಟ್ಟಣ ಪಂಚಾಯಿತಿ ಸಿಬ್ಬಂದಿ ರಾಜು ಹೇಳಿದರು.

'ಸೋಮವಾರ ಸ್ವಚ್ಛತಾ ಕಾರ್ಮಿಕರು ಮುಷ್ಕರ ಅಂತ್ಯಗೊಳಿಸಿದ್ದಾರೆ. ಮುಷ್ಕರದ ನಡುವೆಯೂ ಪಟ್ಟಣದ ತ್ಯಾಜ್ಯ ವಿಲೇವಾರಿ ನಡೆದಿದೆ. ಬಡಾವಣೆಗಳಲ್ಲಿ ಸ್ವಚ್ಛತಾ ಕಾರ್ಯಕ್ಕೆ ಹಿನ್ನಡೆ ಆಗಿಲ್ಲ' ಎಂದು ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಮಲ್ಲೇಶ್ ಹೇಳಿದರು.

ಮುಷ್ಕರ ಅಂತ್ಯ

ಈ ಮಧ್ಯೆ, ನಾಲ್ಕು ದಿನಗಳಿಂದ ಕೆಲಸ ಸ್ಥಗಿತಗೊಳಿಸಿ ಅನಿರ್ದಿಷ್ಟಾವಧಿ ಮುಷ್ಕರ ಹೂಡಿದ್ದ ಪೌರಕಾರ್ಮಿಕರು ಸೋಮವಾರ ಸಂಜೆ ಹೋರಾಟವನ್ನು ಅಂತ್ಯಗೊಳಿಸಿದ್ದಾರೆ.

‘ರಾಜ್ಯಮಟ್ಟದಲ್ಲಿ ಸಚಿವರು ಅಧಿಕಾರಿಗಳು ಪೌರಕಾರ್ಮಿಕರೊಂದಿಗೆ ಸಭೆ ನಡೆಸಿ ಚರ್ಚಿಸಿದ್ದಾರೆ. ನಮ್ಮ ಬೇಡಿಕೆಗಳನ್ನು ಈಡೇರಿಸಲು ಸರ್ಕಾರ ಒಪ್ಪಿಕೊಂಡಿದೆ. ನಮ್ಮ ಸಂಘದ ರಾಜ್ಯ ಮಟ್ಟದ ಮುಖಂಡರ ಸೂಚನೆಯ ಮೇರೆಗೆ ಜಿಲ್ಲೆಯಲ್ಲೂ ಮುಷ್ಕರವನ್ನು ಹಿಂತೆಗೆದುಕೊಳ್ಳಲಾಗಿದೆ’ ಎಂದು ಕರ್ನಾಟಕ ರಾಜ್ಯ ನಗರ ಪಾಲಿಕೆ, ನಗರಸಭೆ, ಪುರಸಭೆಗಳ ಪೌರಕಾರ್ಮಿಕ ಮಹಾ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಶಂಕರ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ.  

––

ಕಸ ಸಂಗ್ರಹ ಕಾರ್ಯ ನಡೆಯದಿರುವುದರಿಂದ ಕೊಳ್ಳೇಗಾಲ ಕಸದ ನಗರಿ ಆಗಿದೆ. ಚರಂಡಿಗಳಲ್ಲಿ ನೀರು ಸರಿಯಾಗಿ ಹೋಗುತ್ತಿಲ್ಲ. ತೊಂದರೆ ಆಗುತ್ತಿದೆ.
ಜಾಕಾವುಲ್ಲಾ, ಕೊಳ್ಳೇಗಾಲ

––

ಬೇಡಿಕೆ ಈಡೇರಿಸಲು ಸರ್ಕಾರ ಒಪ್ಪಿರುವುದರಿಂದ ಮುಷ್ಕರ ಅಂತ್ಯಗೊಳಿಸಿದ್ದೇವೆ. ಮಂಗಳವಾರದಿಂದ ಪೌರಕಾರ್ಮಿಕರು ಕರ್ತವ್ಯಕ್ಕೆ ಹಾಜರಾಗಲಿದ್ದಾರೆ
ಶಂಕರ್‌, ಪೌರಕಾರ್ಮಿಕರ ಸಂಘದ ಜಿಲ್ಲಾ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT