ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬುಡಕಟ್ಟು ಸಂಸ್ಕೃತಿ ಪಸರಿಸಲು ಉತ್ಸವ ಅಗತ್ಯ: ಪುಟ್ಟರಂಗಶೆಟ್ಟಿ

ಪುಣಜನೂರು ಶ್ರೀನಿವಾಸ ಕಾಲೊನಿಯಲ್ಲಿ ಗಿರಿಜನ ಉತ್ಸವ ಆಯೋಜನೆ
Last Updated 27 ಜನವರಿ 2023, 16:06 IST
ಅಕ್ಷರ ಗಾತ್ರ

ಚಾಮರಾಜನಗರ: ‘ಗಿರಿಜನರ ಸಂಸ್ಕೃತಿಯು ರಾಷ್ಟ್ರೀಯ ಮಟ್ಟದಲ್ಲಿ ಪಸರಿಸುವುದಕ್ಕೆ ಗಿರಿಜನ ಉತ್ಸವದಂತಹ ಕಾರ್ಯಕ್ರಮಗಳು ಅವಶ್ಯಕ’ ಎಂದು ಶಾಸಕ ಸಿ.ಪುಟ್ಟರಂಗಶೆಟ್ಟಿ ಶುಕ್ರವಾರ ತಿಳಿಸಿದರು.

ತಾಲ್ಲೂಕಿನ ಪುಣಜನೂರು ಗ್ರಾಮದ ಶ್ರೀನಿವಾಸಪುರ ಕಾಲೊನಿಯಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಲಾಗಿದ್ದ ಗಿರಿಜನ ಉತ್ಸವದಲ್ಲಿ ಅವರು ಮಾತನಾಡಿದರು.

‘ಕೋವಿಡ್‌ನಿಂದಾಗಿ ಎರಡು ವರ್ಷಗಳ ಕಾಲ ಗಿರಿಜನ ಉತ್ಸವ ನಡೆದಿರಲಿಲ್ಲ. ಬುಡಕಟ್ಟು ಜನರು ಗಿರಿಜನ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು. ಗಿರಿಜನರು ಅತ್ಯಂತ ಹಿಂದುಳಿದಿದ್ದಾರೆ. ಈ ಜನಾಂಗದ ಅಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹೆಚ್ಚು ಅನುದಾನ ಕೊಡಬೇಕು. ಆದರೆ, ಮೂರು ನಾಲ್ಕು ವರ್ಷಗಳಿಂದಲೂ ಕಡಿಮೆ ಅನುದಾನ ಕೊಡಲಾಗುತ್ತಿದೆ. 2018–19ರಲ್ಲಿ ಗಿರಿಜನರಿಗೆ ಕುರಿ ಸಾಲ ಕೊಡಲಾಗಿತ್ತು. ಆದರೆ, ಇತ್ತೀಚೆಗೆ ಅನುದಾನಗಳು ಬರುತ್ತಿಲ್ಲ’ ಎಂದರು.

‘ಸಮುದಾಯ ಭವನಗಳ ನಿರ್ಮಾಣಕ್ಕೂ ಅನುದಾನ ಕೊಡುತ್ತಿಲ್ಲ. ಆಳುವ ಸರ್ಕಾರಗಳು ಜನಾಂಗಗಳ ಅಭಿವೃದ್ಧಿಗೆ ಅನುದಾನ ಕೊಡಬೇಕು. ಈ ಭಾಗದಲ್ಲಿ ರಸ್ತೆ, ಚರಂಡಿ, ವಸತಿ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲಾಗಿದೆ. ಗಿರಿಜನರು ಸರ್ಕಾರದಿಂದ ಬರುವ ಸವಲತ್ತುಗಳನ್ನು ಸಮರ್ಪಕವಾಗಿ ಬಳಸಿಕೊಂಡು ಅಭಿವೃದ್ಧಿ ಹೊಂದಬೇಕು. ಕೋಳಿಪಾಳ್ಯಕ್ಕೆ ಪದವಿ ಪೂರ್ವ ಕಾಲೇಜು ಮಂಜೂರಾತಿ ಆಗಿದೆ. ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಇದೆ. ಪೋಷಕರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಬೇಕು’ ಎಂದು ತಿಳಿಸಿದರು.

ಕಾವೇರಿ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ನಿಜಗುಣರಾಜು ಮಾತನಾಡಿ, ‘ಬುಡಕಟ್ಟು, ಆದಿವಾಸಿಗಳ ಪಾರಂಪಾರಿಕ ನೃತ್ಯ ಕಲೆಗೆ ತನ್ನದೇ ಆದ ವಿಶೇಷತೆ ಇದ್ದು, ಅದು ರಾಷ್ಟ್ರ ಅಂತರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆಗಳಿಸುವಂತಾಗಬೇಕು’ ಎಂದರು.

‘ಈ ಹಿಂದೆ ದುಡ್ಡೇ ದೊಡ್ಡಪ್ಪ ಎಂಬ ಮಾತು ಇತ್ತು. ಆದರೆ ಪ್ರಸ್ತುತ ದಿನಗಳಲ್ಲಿ ಜ್ಞಾನ ಇದ್ದವರೇ ದೊಡ್ಡವರು. ಜ್ಞಾನ ಎಂಬುದು ನಶಿಸಿ ಹೋಗುವುದಿಲ್ಲ. ಗಿರಿಜನ ಬುಡಕಟ್ಟು ಜನರು ಮಕ್ಕಳಿಗೆ ಶಿಕ್ಷಣ ನೀಡಿ ವಿದ್ಯಾವಂತರನ್ನಾಗಿಸಬೇಕು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಬುಡಕಟ್ಟು ಜನರ ಆರೋಗ್ಯ, ಶಿಕ್ಷಣಕ್ಕಾಗಿ ಸಾಕಷ್ಟು ಯೋಜನೆಗಳನ್ನು ರೂಪಿಸಿದೆ. ಈ ಸವಲತ್ತುಗಳನ್ನು ಪಡೆದು ಮುಖ್ಯವಾಹಿನಿಗೆ ಬರಬೇಕು’ ಎಂದರು.

‘ಗಿರಿಜನರು ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಬೇಕು. ಯಾವುದೇ ದುಶ್ಚಟಗಳಿಗೆ ಬಲಿಯಾಗಬಾರದು’ ಎಂದು ಅವರು ಸಲಹೆ ಮಾಡಿದರು.

ಪುಣಜನೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಮಣಿನಾಯಕ್ ಮಾತನಾಡಿ, ‘ಮಕ್ಕಳಿಗೆ ಶಿಕ್ಷಣ ನೀಡುವಲ್ಲಿ ನಿರ್ಲಕ್ಷ್ಯ ವಹಿಸಬಾರದು. ಇಂದಿನ ಮಕ್ಕಳೇ ಭವಿಷ್ಯದ ಪ್ರಜೆಗಳು. ಸರ್ಕಾರದ ಸೌಲಭ್ಯಗಳನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸಿಕೊಂಡು ಸಾಮಾಜಿಕವಾಗಿ ಮತ್ತು ಶೈಕ್ಷಣಿಕವಾಗಿ ಮುಂದೆ ಬರಬೇಕು’ ಎಂದರು.

ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಗೀತಾ ಸಿದ್ದರಾಜು, ಸದಸ್ಯರಾದ ಸಬೀನಾ ಬಾನು, ಕುಮಾರ್, ಮುಖಂಡ ಸಮೀರ್, ಜಿಲ್ಲಾ ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಮಂಜುಳಾ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಗುರುಲಿಂಗಯ್ಯ ಗಿರಿಜನ ಮುಖಂಡರಾದ ಜಡಿಯಪ್ಪ, ಮಾದಮ್ಮ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT