ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನೂರು: ಮಕ್ಕಳಲ್ಲಿ ಉತ್ಸಾಹ ತುಂಬುವ ‘ಕಾಮನಬಿಲ್ಲು’!

ಕಲಿಕಾ ಚೇತರಿಕಾ ವರ್ಷದ ಅಂಗವಾಗಿ ವಿವಿಧ ಶೈಕ್ಷಣಿಕ ಚಟುವಟಿಕೆಗಳು
Last Updated 28 ಮೇ 2022, 3:59 IST
ಅಕ್ಷರ ಗಾತ್ರ

ಹನೂರು: ಮಕ್ಕಳನ್ನು ಶಾಲೆಯತ್ತ ಆಕರ್ಷಿಸಲು ತಾಲ್ಲೂಕಿನ ಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ‘ಮಳೆ ಬಿಲ್ಲು’ ಕಾರ್ಯಕ್ರಮದಲ್ಲಿ ಮಕ್ಕಳು ಉತ್ಸಾಹದಲ್ಲಿ ಪಾಲ್ಗೊಂಡು ಶೈಕ್ಷಣಿಕ ಕಲಿಕೆಗೆ ಮುಂದಡಿ ಇಟ್ಟಿದ್ದಾರೆ.

ಜಗತ್ತನ್ನೇ ತಲ್ಲಣಗೊಳಿಸಿದ್ದ ಕೋವಿಡ್‌ ಮಕ್ಕಳ ಶೈಕ್ಷಣಿಕ ಚಟುವಟಿಕೆಗಳ ಮೇಲೂ ಪರಿಣಾಮ ಬೀರಿತ್ತು. ಎರಡು ಶೈಕ್ಷಣಿಕ ವರ್ಷಗಳಲ್ಲಿ ಮಕ್ಕಳು ಕಲಿಕಾ ಚಟುವಟಿಕೆಗಳಲ್ಲಿ ನಿರಂತರವಾಗಿ ಭಾಗವಹಿಸಲು ಸಾಧ್ಯವಾಗದ ಕಾರಣ ಶಾಲಾ ಪರಿಸರಕ್ಕೆ ಹೊಂದಿಕೊಳ್ಳುವಂತೆ ಮಕ್ಕಳನ್ನು ಹುರಿದುಂಬಿಸಿ, ಉತ್ತಮ ಕಲಿಕಾ ಅನುಭವವನ್ನು ನೀಡುವ ಉದ್ದೇಶದಿಂದ ಸಾರ್ವಜನಿಕ ಶಿಕ್ಷಣ ಇಲಾಖೆ 2022-23ನೇ ಶೈಕ್ಷಣಿಕ ವರ್ಷವನ್ನು‘ಕಲಿಕಾ ಚೇತರಿಕೆ ವರ್ಷ’ ಎಂದು ಘೋಷಿಸಿದೆ. ಇದರ ಪೂರ್ವ ಸಿದ್ಧತೆಗಾಗಿ ಶಾಲಾ ಪ್ರಾರಂಭವನ್ನು ಮಕ್ಕಳು ಹಬ್ಬದಂತೆ ಆಚರಿಸುವ ಸಲುವಾಗಿ 15 ದಿನಗಳ ಕಾಲ ಮಕ್ಕಳ ಸ್ನೇಹಿ ಚಟುವಟಿಕೆಗಳಿಂದ ಕೂಡಿದ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.

ಶಾಲೆ ಆರಂಭದ ಮೊದಲ ಎರಡು ವಾರಗಳ ಕಾಲ ಮಗು ಸಂತಸದಿಂದ ಆನಂದಿಸಿ ಅನುಭವಿಸುವಂತೆ ಮಾಡುವ ಚಟುವಟಿಕೆಗಳನ್ನು ಆಯೋಜಿಸಿ ಪ್ರತ್ಯಕ್ಷ ಅನುಭವ ಪಡೆಯಲು ಶಾಲೆಗಳಲ್ಲಿ ಆದ್ಯತೆ ನೀಡಲಾಗುತ್ತಿದೆ. ಆರ್ಥಿಕ ಹೊರೆಯಾಗದಂತೆ ಲಭ್ಯವಿರುವ ಸಂಪನ್ಮೂಲಗಳನ್ನು ಬಳಸಿಕೊಂಡು ‘ಮಳೆಬಿಲ್ಲು’ ಕಾರ್ಯಕ್ರಮವನ್ನು ಆಯೋಜಿಸಲಾಗುತ್ತಿದೆ.

1ರಿಂದ 9ನೇ ತರಗತಿವರೆಗಿನ ವಿದ್ಯಾರ್ಥಿಗಳಿಗೆ ಆಯಾ ವಯೋಮಾನಕ್ಕೆ ಹಾಗೂ ಶಾಲಾ ಭೌಗೋಳಿಕ ಸನ್ನಿವೇಶಗಳಿಗೆ ಅನುಗುಣವಾಗಿ ಮಳೆಬಿಲ್ಲು ಚಟುವಟಿಕೆಗಳನ್ನು ಕೈಗೊಳ್ಳಲಾಗಿದ್ದು, ಮಕ್ಕಳಲ್ಲಿ ಹಿಂಜರಿಕೆ ಮತ್ತು ಭಯ ಬಾರದಂತೆ ಮುಕ್ತವಾಗಿ ಅಭಿವ್ಯಕ್ತಿಗೊಳಿಸಲು ಶಿಕ್ಷಕರು ಮಾರ್ಗದರ್ಶನ ನೀಡುತ್ತಿದ್ದಾರೆ. ಮಳೆಬಿಲ್ಲು ಚಟುವಟಿಕೆಗಳ ಮೂಲಕ ಮಕ್ಕಳನ್ನು ಹುರಿದುಂಬಿಸಿ 2022-23ನೇ ಶೈಕ್ಷಣಿಕ ಸಾಲಿಗೆ ವಿದ್ಯಾರ್ಥಿಗಳನ್ನು ಸನ್ನದ್ಧರನ್ನಾಗಿಸುವುದು ಇದರ ಮುಖ್ಯ ಉದ್ದೇಶ.

ಮಂಗಲ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಇಂಥ ವಾತಾವರಣವನ್ನು ಕಲ್ಪಿಸಿಕೊಡುವುದರ ಮೂಲಕ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಆಟದ ಹಬ್ಬ, ಆಟಿಕೆತಯಾರಿ, ನಾಟಕದ ಹಬ್ಬ, ಚಿತ್ರ-ಚಿತ್ತಾರ, ಕಲಾ ಹಬ್ಬ, ಚಿತ್ರ ಜಗತ್ತು, ಕಥೆಗಳ ಹಬ್ಬ, ಕವಿತೆ ಕಟ್ಟೋಣ-ಹಾಡು ಹಾಡೋಣ, ಪರಿಸರ ಹಬ್ಬ, ಗಣಿತದ ಗಮ್ಮತ್ತು, ಇತಿಹಾಸದ ಹಬ್ಬ ಮತ್ತು ಅಡುಗೆ ಮನೆಯಲ್ಲಿ ವಿಜ್ಞಾನ, ಗೊಂಚಲು-ಸಾಂಸ್ಕೃತಿ ಸಂಭ್ರಮ ಕಾರ್ಯಕ್ರಮಗಳನ್ನು ಏರ್ಪಡಿಸಲಾಗುತ್ತಿದೆ.

ಪ್ರತಿ ಚಟುವಟಿಕೆಯಲ್ಲೂ ವಿದ್ಯಾರ್ಥಿಗಳು ತಮ್ಮನ್ನು ತಾವು ಸಕ್ರಿಯವಾಗಿ ತೊಡಗಿಸಿಕೊಳ್ಳುವುದರ ಮೂಲಕ ಉತ್ಸಾಹದಿಂದ ಕಲಿಕೆಗೆ ಮುಂದಾಗಿದ್ದಾರೆ. ಆಯಾ ತರಗತಿಯ ಶಿಕ್ಷಕರ ಮಾರ್ಗದರ್ಶನದಲ್ಲಿ ನಿರುಪಯುಕ್ತವಾಗಿ ಬಿದ್ದಿರುವ ವಸ್ತುಗಳನ್ನು ಸಂಗ್ರಹಿಸಿ ಅದರಿಂದ ವಿವಿಧ ಮಾದರಿಗಳನ್ನು ಮಾಡುವುದರ ಮೂಲಕ ತಮ್ಮ ಸೃಜನಶೀಲತೆಯನ್ನು ಪ್ರದರ್ಶಿಸುತ್ತಿದ್ದಾರೆ.

--

ಕಲಿಕಾ ಚೇತರಿಕೆ ವರ್ಷ ಕಾರ್ಯಕ್ರಮದ ಅಡಿಯಲ್ಲಿ ವಿವಿಧ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗುತ್ತಿದ್ದು, ಮಕ್ಕಳ ಸೃಜನಶೀಲತೆಯನ್ನು ಹೊರತರಲು ಇದು ಉತ್ತಮ ವೇದಿಕೆ
-ಆರ್. ಮಹಾಲಕ್ಷ್ಮಿ, ಶಿಕ್ಷಕಿ

---

ಶಿಕ್ಷಕರ ಮಾರ್ಗದರ್ಶನದಿಂದಾಗಿ ನಿರುಪಯುಕ್ತ ವಸ್ತುಗಳಿಂದ ಹೊಸ ಮಾದರಿಗಳನ್ನು ತಯಾರಿಸುವುದನ್ನು ಕಲಿಯಲು ಸಾಧ್ಯವಾಗಿದೆ. ಎಲ್ಲರೂ ಉತ್ಸಾಹದಿಂದ ತೊಡಗಿಕೊಂಡಿದ್ದೇವೆ
-ಕೆ. ಚಂದನ, 7ನೇ ತರಗತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT