ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಉತ್ತಮ ಮಳೆಗೆ ಚಿಗುರಿದ ಕೃಷಿ

ಗ್ರಾಮೀಣ ಭಾಗಕ್ಕೆ ಇನ್ನೂ ಹರಿಯದ ನೀರು, ಕಾಡಿನ ಕೆರೆಕಟ್ಟೆಗಳು ಭರ್ತಿ
Last Updated 10 ಸೆಪ್ಟೆಂಬರ್ 2020, 16:14 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಈ ಬಾರಿ ಮುಂಗಾರು ಮಳೆ ವಾಡಿಕೆಗಿಂತ ಉತ್ತಮವಾಗಿ ಆಗಿದ್ದು, ಕೃಷಿಕರಿಗೆ ಉಪಯುಕ್ತವಾಗಿದೆ.

ಈ ವರ್ಷ ಶೇ 30ರಿಂದ 49ರಷ್ಟು ಮಳೆ ಹೆಚ್ಚಾಗಿದೆ. ಹಂಗಳ ಹೋಬಳಿಯಲ್ಲಿ ಅತಿ ಹೆಚ್ಚು ಮಳೆಯಾಗಿದೆ. ರೈತರು ಬಿತ್ತನೆ ಮಾಡಿದಕಡಲೆಕಾಯಿ, ಹುರುಳಿ ಹಾಗೂ ತರಕಾರಿ ಬೆಳೆಗಳಿಗೆ ಮಳೆಯಿಂದಾಗಿ ಪ್ರಯೋಜನವಾಗಿದೆ.

ಜನವರಿ 1ರಿಂದ ಸೆಪ್ಟೆಂಬರ್‌ 10ರ ಅವಧಿಯಲ್ಲಿ ತಾಲ್ಲೂಕಿನಲ್ಲಿ ಸಾಮಾನ್ಯವಾಗಿ 41.3 ಸೆಂ.ಮೀ ಮಳೆಯಾಗುತ್ತದೆ. ಈ ವರ್ಷ 61.3 ಸೆಂ.ಮೀ ಮಳೆ ಸುರಿದಿದೆ. ಮುಂಗಾರು ಅವಧಿಯಲ್ಲಿ ಜೂನ್‌ 1ರಿಂದ ಸೆ.10ರವರೆಗೆ ವಾಡಿಕೆಯಲ್ಲಿ 17.7 ಸೆಂ.ಮೀ ಮಳೆಯಾಗುತ್ತದೆ. ಈ ವರ್ಷ 34.6 ಸೆಂ.ಮೀ ಮಳೆಯಾಗಿದೆ. ಶೇ 96ರಷ್ಟು ಹೆಚ್ಚು ಮಳೆ ಬಿದ್ದಿದೆ.

ಹಂಗಳ ಹೋಬಳಿ ವ್ಯಾಪ್ತಿಯಲ್ಲಿ 44.8 ಸೆಂ.ಮೀಗೆ 68.5 ಸೆಂ.ಮೀ, ಕಸಬಾ ಹೋಬಳಿಯಲ್ಲಿ 41.3 ಸೆಂ.ಮೀಗೆ 56.2 ಸೆಂ.ಮೀ, ಬೇಗೂರು ವ್ಯಾಪ್ತಿಯಲ್ಲಿ 37.4 ಸೆಂ.ಮೀಗೆ 51.6 ಸೆಂ.ಮೀ ಹಾಗೂ ತೆರಕಣಾಂಬಿ ಹೋಬಳಿಯ ಭಾಗದಲ್ಲಿ 42.0 ಸೆಂ.ಮೀ ಬದಲಾಗಿ 54.4 ಸೆಂ.ಮೀಗಳಷ್ಟು ಮಳೆ ಬಿದ್ದಿದೆ.

ತಾಲ್ಲೂಕಿನಾದ್ಯಂತ ಹೆಚ್ಚು ರೈತರು ಮಳೆಯನ್ನೇ ಆಶ್ರಯಿಸಿ ಕೃಷಿ ಚಟುವಟಿಕೆ ಮಾಡುತ್ತಾರೆ. ಜೋಳ, ಹತ್ತಿ, ಚೆಂಡುಹೂ, ಹುರುಳಿ, ಕಡಲೆಕಾಯಿ, ಎಳ್ಳು, ಮುಸುಕಿನ ಜೋಳ ಮತ್ತು ತರಕಾರಿ, ಸೊಪ್ಪುಗಳು ಬೆಳೆಯುತ್ತಾರೆ. ಎರಡು ವಾರಗಳಿಂದ ಸತತ ಮಳೆಯಾಗುತ್ತಿರುವುದರಿಂದ ರೈತರ ಮೊಗದಲ್ಲಿ ನಗು ಮೂಡಿದೆ.

ಕೇರಳದ ಭಾಗದಲ್ಲಿ ಹೆಚ್ಚು ಮಳೆಯಾಗುತ್ತಿರುವ ಕಾರಣ ಗಡಿ ಭಾಗದಲ್ಲಿ ಇರುವ ಕೆರೆಗಳಿಗೆ ನೀರು ಬಂದಿದೆ. ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಯಲ್ಲಿ ಬರುವ ಕೆರೆಗಳೂ ತುಂಬಿವೆ ಎಂದು ಅರಣ್ಯ ಇಲಾಖೆಯ ಸಿಬ್ಬಂದಿ ತಿಳಿಸಿದರು.

ತುಂಬದ ಕೆರೆಗಳು

ಗ್ರಾಮೀಣ ಭಾಗಗಳಲ್ಲೂ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದರೂ, ಕೆಲವು ಕೆರೆಗಳಿಗೆ ನೀರು ಹರಿದು ಬಂದಿಲ್ಲ. ಉದಾಹರಣೆಗೆ ಹಂಗಳದಲ್ಲಿ ಹೆಚ್ಚು ಮಳೆಯಾಗಿದ್ದರೂ, ಅಲ್ಲಿನ ಕೆರೆಯಲ್ಲಿ ಹೆಚ್ಚು ನೀರು ಕಾಣುತ್ತಿಲ್ಲ. ಮುಂದಿನ ದಿನಗಳಲ್ಲಿ ಮಳೆಯಾಗುವ ಸಾಧ್ಯತೆ‌ ಇರುವುದರಿಂದ ಕೆರೆಗಳು ತುಂಬಲಿವೆ ಎಂಬ ವಿಶ್ವಾಸದಲ್ಲಿ ರೈತರು ಇದ್ದಾರೆ.

‘ಮಳೆಯಾಗುತ್ತಿರುವುದರಿಂದ ಬೆಳೆಗಳಿಗೆ ಯಾವ ತೊಂದರೆ ಇಲ್ಲ. ಕೆರೆ ಕಟ್ಟೆ ತುಂಬುವಂತಹ ಮಳೆ ಇನ್ನೂ ಬಂದಿಲ್ಲ. ರೈತರಿಗೆ ಅನುಕೂಲವಷ್ಟು ಉತ್ತಮ ಮಳೆಯಾಗುತ್ತಿದೆ’ ಎಂದು ಎಂದು ಕೃಷಿ ಇಲಾಖೆ ಸಹಾಯಕ ನಿರ್ದೇಶಕ ವೆಂಕಟೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಉತ್ತಮ ಮಳೆಯಾಗುತ್ತಿರುವುದರಿಂದ ನದಿಗಳಲ್ಲಿ ನೀರು ಹರಿದು ತಮಿಳುನಾಡಿನ ಕಡೆಗೆ ಹೋಗುತ್ತಿದೆ. ಈ ಸಮಯದಲ್ಲಿ ತಾಲ್ಲೂಕಿನ ಕೆರೆಗಳನ್ನು ತುಂಬಿಸಿದರೆ ಮುಂದಿನ ಬೇಸಿಗೆಯಲ್ಲಿ ಉಪಯೋಗ ಆಗುತ್ತದೆ’ ಎಂದು ರೈತ ಹಂಗಳ ಮಹದೇವಪ್ಪ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT