ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಮಂಜಿನ ಚಾದರ, ದರ್ಶನ ನೀಡದ ನೇಸರ‌

ಜಿಲ್ಲೆಯಲ್ಲಿ ಜಿಟಿ ಜಿಟಿ ಮಳೆ, ಚಳಿಯ ವಾತಾವರಣ ಪ್ರವಾಸಿ ತಾಣಗಳಲ್ಲಿ ಜನವೋ ಜನ
Last Updated 18 ಜುಲೈ 2021, 17:15 IST
ಅಕ್ಷರ ಗಾತ್ರ

ಚಾಮರಾಜನಗರ/ಕೊಳ್ಳೇಗಾಲ: ರಜಾ ದಿನವಾದ ಭಾನುವಾರ ನೇಸರನಿಗೆ ಗಡಿ ಜಿಲ್ಲೆಯ ಮೇಲೆ ಮುನಿಸು ಇತ್ತೋ ಏನೋ, ಇಡೀ ದಿನ ಒಮ್ಮೆಯೂ ಆತ ದರ್ಶನ ನೀಡಲಿಲ್ಲ!ಕೊಡಗು, ಊಟಿ ಮುಂತಾದ ಗಿರಿ ಪ್ರದೇಶಗಳಲ್ಲಿ ಕಂಡು ಬರುವ ಇಬ್ಬನಿ ಕವಿದ ವಾತಾವರಣ ಜಿಲ್ಲೆಯಲ್ಲೂ ಕಂಡು ಬಂತು.

ಮಳೆಗಾಲದಲ್ಲೂ ಬಿಸಿಲು ಕಂಡು ಬರುವ ಜಿಲ್ಲೆಯಲ್ಲಿ ಭಾನುವಾರ ಸೋನೆ ಮಳೆಯ ಸಿಂಚನ. ಬೆಳಿಗ್ಗೆ 5 ಗಂಟೆಗೆ ಆರಂಭವಾದ ಮಳೆ 9.30ರವರೆಗೆ ನಿರಂತರವಾಗಿ ಸುರಿಯಿತು. ಆ ಬಳಿಕವೂ ಬಿಡುವು ಕೊಟ್ಟು ಬರುತ್ತಲೇ ಇತ್ತು. ದಿನ ಪೂರ್ತಿ ಬೀಸುತ್ತಿದ್ದ ಶೀತಗಾಳಿ ಚಳಿಯ ಅನುಭವ ಉಂಟುಮಾಡಿತು. ಮಳೆ, ಚಳಿಯೊಂದಿಗೆ ರಜಾ ದಿನವೂ ಆಗಿದ್ದರಿಂದ ಜನರು ಮನೆಯಿಂದ ಹೊರ ಬರಲು ಹಿಂದೇಟು ಹಾಕಿದರು.

ಬಿಳಿಗಿರಿರಂಗನಬೆಟ್ಟ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟ ಸೇರಿದಂತೆ ಜಿಲ್ಲೆ ಗಿರಿ ಪ್ರದೇಶಗಳು, ಕಾಡಂಚಿನ ಪ್ರದೇಶಗಳು ಮಂಜಿನ ಚಾದರ ಹೊದ್ದು ಮಲಗಿದಂತೆ ತೋರಿದವು. ಈ ಅಪೂರ್ವವಾದ ದೃಶ್ಯಕಾಯ್ಯ ನೋಡುಗರ ಕಣ್ಮನ ಸೆಳೆದವು.

ಬಿಳಿಗಿರಿರಂಗನಬೆಟ್ಟ
ಬಿಳಿಗಿರಿರಂಗನಬೆಟ್ಟ

ಪ್ರವಾಸಿಗರ ಸಂಭ್ರಮ: ಕರಿ ಮೋಡ ಸಹಿತ ಸೋನೆ ಮಳೆ, ಶೀತ ಗಾಳಿಯು ಜಿಲ್ಲೆಗೆ ಭೇಟಿ ನೀಡುವ ಪ್ರವಾಸಿಗರ ಸಂಭ್ರಮವನ್ನು ಇಮ್ಮಡಿ ಗೊಳಿಸಿತು. ಕೋವಿಡ್‌ ಆತಂಕದ ನಡುವೆಯೇ ಭರಚುಕ್ಕಿ ಜಲಪಾತ, ಬಿಳಿಗಿರಿರಂಗನಬೆಟ್ಟ, ಹಿಮವದ್‌ ಗೋಪಾಲಸ್ವಾಮಿ ಬೆಟ್ಟ ಸೇರಿದಂತೆ ಜಿಲ್ಲೆಯ ಪ್ರವಾಸಿ ತಾಣಗಳಿಗೆ ಭಾನುವಾರ ಜನರು ದಾಂಗುಡಿ ಇಟ್ಟರು. ಪ್ರವಾಸಿ ತಾಣಗಳ ಸೌಂದರ್ಯ ಸವಿಯುವುದರ ಜೊತೆಗೆ, ಇಬ್ಬನಿ ಆವರಿಸಿದ ವಾತಾವರಣ ನೀಡುವ ವಿಶಿಷ್ಟ ಅನುಭವವನ್ನು ತಮ್ಮದಾಗಿಸಿಕೊಂಡರು.

ಭೋರ್ಗರೆಯುತ್ತಿದೆ ಜಲಧಾರೆ: ಕೊಳ್ಳೇಗಾಲ ತಾಲ್ಲೂಕಿನ ಸುಪ್ರಸಿದ್ಧ ಭರಚುಕ್ಕಿ ಜಲಪಾತ ವೀಕ್ಷಣೆಗೆ ಪ್ರವಾಸಿಗರ ದಂಡೇ ಬಂದಿತ್ತು. ವಾರದಿಂದೀಚೆಗೆ ಸುರಿಯುತ್ತಿರುವ ಮಳೆಗೆ ಹಾಗೂ ಜಲಾಶಯಗಳಿಂದ ಹೆಚ್ಚು ಪ್ರಮಾಣದಲ್ಲಿ ನೀರು ಬಿಡುತ್ತಿರುವುದರಿಂದ ಕಾವೇರಿ ನದಿ ನೀರಿನ ಮಟ್ಟ ಹೆಚ್ಚಾಗಿದ್ದು, ಭರಚುಕ್ಕಿ ಜಲಪಾತ ಮೈದುಂಬಿ ಭೋರ್ಗರೆಯಲು ಆರಂಭಿಸಿದೆ.

ಕೊರಕಲು ಕಲ್ಲುಗಳ ನಡುವೆ ಹಾಲ್ನೊರೆಯಂತೆ ಧುಮ್ಮಿಕ್ಕಿ ಬೀಳುವ ಜಲಪಾತದ ನಯನಮನೋಹರ ದೃಶ್ಯಾವಳಿಯನ್ನು ಕಣ್ತುಂಬಿಕೊಂಡ ಪ್ರವಾಸಿಗರು ಕೋವಿಡ್‌ ಅನ್ನು ಮರೆತೇ ಬಿಟ್ಟಿದ್ದರು. ಜಿಟಿ ಜಿಟಿ ಮಳೆಯನ್ನೂ ಲೆಕ್ಕಿಸದೆ, ಯುವಕರು, ಯುವತಿಯರು, ಮಕ್ಕಳು, ನವ ಜೋಡಿಗಳು, ಗುಂಪು ಗುಂಪಾಗಿ ಜಲಧಾರೆಯನ್ನು ವೀಕ್ಷಣೆ ಮಾಡಿ ಕುಣಿದು ಕುಪ್ಪಳಿಸಿದರು. ಸುತ್ತಮುತ್ತಲಿನ ಪ್ರಕೃತಿಯ ಸೊಬಗನ್ನು ಕಣ್ಣು ಹಾಗೂ ಮೊಬೈಲ್‌ಗಳಲ್ಲಿ ಸೆರೆ ಹಿಡಿದು ಸಂಭ್ರಮಿಸಿದರು.

ವಾಹನ ದಟ್ಟಣೆ:ಜಲಪಾತ ವೀಕ್ಷಣೆಗೆ ಬಾರಿ ಸಂಖ್ಯೆಯಲ್ಲಿ ಜನರು ಬೈಕ್, ಕಾರು, ಬಸ್, ಮಿನಿ ಬಸ್, ಆಟೋಗಳಲ್ಲಿ ಹೆಚ್ಚಾಗಿ ಬಂದಿದ್ದರಿಂದಭರಚುಕ್ಕಿಗೆ ಸಾಗುವ ರಸ್ತೆಯಲ್ಲಿ ವಾಹನ ದಟ್ಟಣೆ ಉಂಟಾಯಿತು. ಅನೇಕರು ರಸ್ತೆಯಲ್ಲೇ ಕಾರುಗಳನ್ನು ಅಡ್ಡದಿಡ್ಡಿಯಾಗಿ ನಿಲ್ಲಿಸಿದ ಕಾರಣ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸಿತು.

‘ನಾವು ಎರಡು ತಿಂಗಳ ಕಾಲ ಮನೆಯಲ್ಲೇ ಇದ್ದೆವು. ಈಗ ಲಾಕ್ ಡೌನ್ ಮುಗಿದಿದೆ. ಆ ಕಾರಣ ಜಲಪಾತ ವೀಕ್ಷಣೆಗೆ ಕುಟುಂಬ ಸಮೇತವಾಗಿ ಬಂದಿದ್ದೇವೆ. ಮಾಸ್ಕ್ ಮತ್ತು ಅಂತರ ಕಾಪಾಡಿ ಕೋವಿಡ್ ನಿಯಮವನ್ನು ಪಾಲಿಸಿಕೊಂಡೇ ವೀಕ್ಷಣೆ ಮಾಡುತ್ತಿದ್ದೇವೆ’ ಎಂದು ದೆಹಲಿ ಮೂಲದ ಪ್ರವಾಸಿಗ ಜೋಯಲ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಆರ್‌ಟಿ: ಸೋನೆ ಮಳೆಯ ಸಿಂಚನ

ಯಳಂದೂರು:ತಾಲ್ಲೂಕಿನಲ್ಲಿ ಶನಿವಾರ ರಾತ್ರಿಯಿಂದ ಗಾಳಿ ಸಹಿತ ಸೋನೆ ಮಳೆಯ ಸಿಂಚನವಾಗುತ್ತಿದೆ. ಇದರ ನಡುವೆಯೂ
ನೂರಾರು ಪ್ರವಾಸಿಗರು ಮತ್ತು ಭಕ್ತರು ಬಿಳಿಗಿರಿ ರಂಗನಾಥನಸ್ವಾಮಿಯ ದರ್ಶನ ಪಡೆದರು.

ಹಿಮವದ್‌ ಗೋಪಾಲಸ್ವಾಮಿ ದೇವಾಲಯ
ಹಿಮವದ್‌ ಗೋಪಾಲಸ್ವಾಮಿ ದೇವಾಲಯ

ಬಿಆರ್‌ಟಿ ಸುತ್ತಮುತ್ತ ನಿರಂತರವಾಗಿ ಶೀತಗಾಳಿ ಬೀಸುತ್ತಿದ್ದು, ಹಸಿರೊದ್ದ ಬನದ ತುಂಬ ಮಂಜಿನ ಚಾದರ ಹರಡಿದೆ. ಜಿಟಿಜಿಟಿ ಮಳೆಯೂಸೇರಿ ಸ್ಥಳೀಯರಲ್ಲಿ ಮೈ ಕೊರೆಯುವ ಚಳಿ ಅನುಭವವಾಗುತ್ತಿದೆ.

ಮಳೆಯ ನಡುವೆಯೇ, ಮಹಿಳೆಯರು, ಮಕ್ಕಳು ದೇವಾಲಯಕ್ಕೆ ಭೇಟಿ ನೀಡಿದರು. ಕಾರು, ಬೈಕ್ ಮತ್ತು ಬಸ್‌ಗಳಲ್ಲಿ ಆಗಮಿಸಿದ್ದ ಭಕ್ತರು ಕಮರಿಯ ಸುತ್ತ ಹರಡಿದ್ದ ಮಂಜು, ಮೋಡಗಳ ನಡುವೆಚಿತ್ರ ತೆಗೆದು ಸಂಭ್ರಮಿಸಿದರು.

‘ಭಾನುವಾರ ಮುಂಜಾನೆ ತನಕ ಬಿರ್‌ಟಿ ವ್ಯಾಪ್ತಿಯಲ್ಲಿ 4.4 ಸೆಂ.ಮೀ ಮಳೆ ಸುರಿದಿದೆ. ತಾಪಮಾನ18 ಡಿಗ್ರಿ ಸೆಲ್ಸಿಯಸ್‌ಗೆ ಕುಸಿದಿದೆ’ ಎಂದು ಮಳೆ ಮಾಹಿತಿಸಂಗ್ರಹಿಸುವ ಶಿಕ್ಷಕ ರಾಮಾಚಾರಿ ಹೇಳಿದರು.

ಗುಂಡ್ಲುಪೇಟೆ ಹಿಮವದ್‌ ಗೋಪಾಲಸ್ವಾಮಿ ಬೆಟ್ಟಕ್ಕೂ ನೂರಾರು ಪ್ರವಾಸಿಗರು ಭೇಟಿ ನೀಡಿದರು. ಶೀತ ಹವೆಯಿಂದ ಮಂಜಿನ ಪ್ರಮಾಣ ಭಾನುವಾರ ಹೆಚ್ಚಿತ್ತು. ಪ್ರವಾಸಿಗರು ಗೋಪಾಲಕೃಷ್ಣ ದೇವಾಲಯಕ್ಕೂ ಭೇಟಿ ನೀಡಿ ಪೂಜೆ ಸಲ್ಲಿಸಿದರು.

ಉತ್ತಮ ವರ್ಷಧಾರೆ

ವಾರದಿಂದೀಚೆಗೆ ಜಿಲ್ಲೆಯಲ್ಲಿ ಉತ್ತಮ ಮಳೆಯಾಗುತ್ತಿದೆ. ಭಾನುವಾರ ಬೆಳಿಗ್ಗೆ 8.30ಕ್ಕೆ ಕೊನೆ‌ಗೊಂಡಂತೆ 24 ಗಂಟೆಗಳ ಅವಧಿಯಲ್ಲಿ ಜಿಲ್ಲೆಯಾದ್ಯಂತ 1.4 ಸೆಂ.ಮೀ ಮಳೆಯಾಗಿದೆ. ಜುಲೈ ತಿಂಗಳಲ್ಲಿ ಇಲ್ಲಿಯವರೆಗೆ 8.4 ಸೆಂ.ಮೀ ಮಳೆ ಬಿದ್ದಿದೆ. ಸಾಮಾನ್ಯವಾಗಿ ಈ ಅವಧಿಯಲ್ಲಿ 3.4 ಸೆಂ.ಮೀ ಮಳೆಯಾಗುತ್ತದೆ.

ಉಷ್ಣಾಂಶ ಕುಸಿತ: ಮೋಡ, ಮಳೆ ಹಾಗೂ ಶೀತಗಾಳಿಯಿಂದಾಗಿ ವಾತಾವರಣದ ತಾಪಮಾನದಲ್ಲೂ ಕುಸಿತವಾಗಿದ್ದು, ಗರಿಷ್ಠ ತಾಪಮಾನ 25 ಡಿಗ್ರಿ ಸೆಲ್ಸಿಯಸ್‌ನಷ್ಟಿದ್ದರೆ ಕನಿಷ್ಠ ತಾಪಮಾನ 20 ಡಿಗ್ರಿ ಸೆಲ್ಸಿಯಸ್‌ನ ಆಸುಪಾಸಿನಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT