ಮಂಗಳವಾರ, ನವೆಂಬರ್ 24, 2020
22 °C
ಚಾಮರಾಜನಗರ: ತಾಳವಾಡಿಯ ಗುಮಟಾ‍ಪುರದಲ್ಲಿ ಸಗಣಿಯಲ್ಲಿ ಹೊಡೆದಾಡುವ ಆಚರಣೆ

ಗೊರೆ ಹಬ್ಬ: ಕೋವಿಡ್‌ ನಡುವೆ ಕುಗ್ಗದ ಉತ್ಸಾಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಕೋವಿಡ್‌–19 ಹಾವಳಿಯ ನಡುವೆಯೇ, ಸಮೀಪದ ತಮಿಳುನಾಡಿನ ತಾಳವಾಡಿ ತಾಲ್ಲೂಕಿನ ಗುಮಟಾಪುರದಲ್ಲಿ ಸಗಣಿಯಿಂದ ಹೊಡೆದಾಡುವ ‘ಗೊರೆ ಹಬ್ಬ’ ಮಂಗಳವಾರ ನಡೆಯಿತು. 

ಕೋವಿಡ್‌ ಕಾರಣದಿಂದ ಜನರ ಭಾಗವಹಿಸುವಿಕೆ ಸ್ವಲ್ಪ ಕಡಿಮೆಯಾಗಿದ್ದರೂ, ಸಗಣಿ ಎರಚಾಟದಲ್ಲಿ ಭಾಗವಹಿಸಿದ್ದವರ ಉತ್ಸಾಹ ಕಡಿಮೆಯಾಗಲಿಲ್ಲ. ಪ್ರತಿ ವರ್ಷ ದೀಪಾವಳಿಯ ಮರು ದಿನ ನಡೆಯುವ ಹಬ್ಬಕ್ಕೆ ಈ ಬಾರಿ ಸ್ಥಳೀಯ ಆಡಳಿತ ಕೊನೆ ಕ್ಷಣದಲ್ಲಿ ಅನುಮತಿ ನೀಡಿತ್ತು. ಹೆಚ್ಚು ಜನರನ್ನು ಸೇರಿಸದಂತೆ ಷರತ್ತನ್ನೂ ಒಡ್ಡಿತ್ತು. 

ಹೊರ ರಾಜ್ಯದಲ್ಲಿ ನಡೆಯುತ್ತಿದ್ದರೂ, ಈ ಹಬ್ಬವನ್ನು ಕನ್ನಡಿಗರೇ ಆಚರಿಸುವುದು ವಿಶೇಷ. 100 ವರ್ಷಕ್ಕೂ ಹೆಚ್ಚಿನ ಇತಿಹಾಸ ಹೊಂದಿರುವ ಈ ಹಬ್ಬದಲ್ಲಿ ಜಾತಿ, ಮತ, ಮಯಸ್ಸಿನ ಭೇದವಿಲ್ಲದೆ ಎಲ್ಲರೂ ಭಾಗಿಯಾದರು.  

ಪಟಾಕಿ, ಮಂಗಳವಾದ್ಯಗಳ ಸದ್ದು, ಜನರ ಕೇಕೆ, ಶಿಳ್ಳೆ, ಅರಚಾಟ, ಕೂಗಾಟಗಳ ನಡುವೆ ಎರಡು ತಂಡಗಳಾಗಿ ಯುವಕರು ಹಾಗೂ ವಯಸ್ಕರು ಸಗಣಿಯನ್ನು ದೊಡ್ಡ ಉಂಡೆಗಳನ್ನಾಗಿ ಮಾಡಿ ಪೈಪೋಟಿಗೆ ಬಿದ್ದವರಂತೆ ಪರಸ್ಪರ ಎಸೆದರು. ಒಂದೂವರೆ ಗಂಟೆಗೂ ಹೆಚ್ಚು ಕಾಲ ಸಗಣಿ ಕಾದಾಟ ನಡೆಯಿತು. 

ಹಬ್ಬಕ್ಕಾಗಿ ಗ್ರಾಮಸ್ಥರು ಬೆಳಿಗ್ಗೆಯಿಂದಲೇ ಸಗಣಿ ಸಂಗ್ರಹ ಕಾರ್ಯ ಆರಂಭಿಸಿದ್ದರು. ಗ್ರಾಮದ ಬೀರೇಶ್ವರ ದೇವಾಲಯದ ಹಿಂಭಾಗದಲ್ಲಿರುವ ಅಂಬೇಡ್ಕರ್‌ ಕಾಲೊನಿಯಲ್ಲಿ ದೊಡ್ಡದಾದ ಎರಡು ಸಗಣಿ ರಾಶಿಗಳನ್ನು ಮಾಡಲಾಗಿತ್ತು. 

ಮಧ್ಯಾಹ್ನ 2.30ಕ್ಕೆ ಸುಮಾರಿಗೆ ಗ್ರಾಮದ ಕಾರೇಶ್ವರ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ, ಅಲ್ಲಿ ಮಕ್ಕಳು ಸಾಂಕೇತಿಕವಾಗಿ ಸಗಣಿ ಎರಚಾಡಿಕೊಳ್ಳುವ ಮೂಲಕ ಹಬ್ಬಕ್ಕೆ ಚಾಲನೆ ಸಿಕ್ಕಿತು.

ಚಾಡಿಕೋರನ ಮೆರವಣಿಗೆ: ಆ ಬಳಿಕ ನಡೆದ ಚಾಡಿಕೋರನ ಮೆರವಣಿಗೆ ಗಮನ ಸೆಳೆಯಿತು. ಇಬ್ಬರು ಚಾಡಿಕೋರರನ್ನು ಎರಡು ಕತ್ತೆಗಳ ಮೇಲೆ ಕೂರಿಸಲಾಯಿತು. ಆರ್‌.ಮಹದೇವ ಅವರು ಪ್ರಧಾನ ಚಾಡಿಕೋರನ ಪಾತ್ರ ನಿರ್ವಹಿಸಿದರು. ಹುಲ್ಲಿನ ಮೀಸೆ, ದಾಡಿ ಹಾಗೂ ಹಂಬುಸೊಪ್ಪಿನ ಹಾರ ಧರಿಸಿದ್ದ ಚಾಡಿಕೋರನನ್ನು ಕತ್ತೆಯ ಮೇಲೆ ಕೂರಿಸಿ ಗ್ರಾಮದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಮಾಡಲಾಯಿತು. ಚಾಡಿಕೋರನನ್ನು ಬೀರೇಶ್ವರ ದೇವಾಲಯಕ್ಕೆ ಕರೆದುಕೊಂಡು ಬಂದು ಅಲ್ಲಿ ವಿಶೇಷ ಪೂಜೆ ಸಲ್ಲಿಸಿದ ನಂತರ ಮೆರವಣಿಗೆ ಮುಕ್ತಾಯವಾಯಿತು. 

ಆ ನಂತರ ದೇವಾಲಯದ ರಾಶಿ ಹಾಕಲಾಗಿದ್ದ ಸಗಣಿಗೆ ಅರ್ಚಕರು ಪೂಜೆ ಸಲ್ಲಿಸಿದರು. ನಂತರ ಸಗಣಿ ಎರಚಾಟ ನಡೆಯಿತು. ಕೊನೆಗೆ ಗೊಂಡೆಕಾರನಗುಡ್ಡದಲ್ಲಿ ಚಾಡಿಕೋರನ ಪ್ರತಿಕೃತಿಯನ್ನು ದಹಿಸುವ ಮೂಲಕ ಗೊರೆ ಹಬ್ಬಕ್ಕೆ ಮುಕ್ತಾಯ ಹಾಡಲಾಯಿತು. 

ಸಗಣಿ ಹರಾಜು: ಹಬ್ಬದಲ್ಲಿ ಬಳಸಿದ ಸಗಣಿಯನ್ನು ಎರಡು ದಿನಗಳ ಬಳಿಕ ಹರಾಜು ಹಾಕಲಾಗುತ್ತದೆ. ಅದರಲ್ಲಿ ಬಂದ ದುಡ್ಡನ್ನು ಬೀರೇಶ್ವರ ದೇವಾಲಯಕ್ಕೆ ನೀಡಲಾಗುತ್ತದೆ ಎಂದು ಹೇಳುತ್ತಾರೆ ಮುಖಂಡರು. 

ಜನರು ಕಡಿಮೆ: ಹಿಂದಿನ ವರ್ಷಗಳಿಗೆ ಹೋಲಿಸಿದರೆ, ಈ ಬಾರಿ ಜನರ ಸಂಖ್ಯೆ ಸ್ವಲ್ಪ ಕಡಿಮೆ ಇತ್ತು. ಗ್ರಾಮಸ್ಥರು ಹಬ್ಬಕ್ಕೆ ನೆಂಟರಿಷ್ಟರನ್ನು ಕರೆದಿರಲಿಲ್ಲ. ಪೊಲೀಸರು ಕೂಡ, ಸ್ಥಳೀಯರು ಮಾತ್ರ ಹಬ್ಬದಲ್ಲಿ ಪಾಲ್ಗೊಳ್ಳುವಂತೆ ಸೂಚಿಸಿದ್ದರು.

ಕೋವಿಡ್‌ ಇದ್ದ ಕಾರಣದಿಂದ, ಸ್ಥಳೀಯ ಆಡಳಿತ ಮಂಗಳವಾರ ಬೆಳಿಗ್ಗೆಯಷ್ಟೇ ಆಚರಣೆಗೆ ಅನುಮತಿ ನೀಡಿತ್ತು ಎಂದು ಸ್ಥಳೀಯರು ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು