ಗುರುವಾರ , ಅಕ್ಟೋಬರ್ 29, 2020
20 °C
ಮನೆ ಮನೆಗೆ ಭೇಟಿ ನೀಡುತ್ತಿರುವ ಅಧಿಕಾರಿಗಳು, ಮಾಹಿತಿ ಸಂಗ್ರಹ

ಸರ್ಕಾರಿ ವಸತಿಗೃಹಗಳ ದುರ್ಬಳಕೆ ತಡೆಗೆ ಚಾಮರಾಜನಗರದಲ್ಲಿ ಸಮೀಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಜಿಲ್ಲೆಯಲ್ಲಿ ಸರ್ಕಾರಿ ಅಧಿಕಾರಿಗಳು ನೌಕರರಿಗಾಗಿರುವ ವಸತಿಗೃಹಗಳನ್ನು ಸಿಬ್ಬಂದಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಕೇಳಿ ಬಂದಿರುವ ಬೆನ್ನಲ್ಲೇ, ವಸತಿ ಗೃಹಗಳಲ್ಲಿ ಯಾರು ವಾಸ್ತವ್ಯ ಹೂಡಿದ್ದಾರೆ ಎಂಬುದರ ಬಗ್ಗೆ ಮಾಹಿತಿ ಕಲೆ ಹಾಕಲು ಜಿಲ್ಲಾಡಳಿತ ಸಮೀಕ್ಷೆ ಕಾರ್ಯ ಕೈಗೊಂಡಿದೆ. 

ಜಿಲ್ಲಾಧಿಕಾರಿ ಡಾ.ಎಂ.ಆರ್.ರವಿ ಅವರು ನಗರಾಭಿವೃದ್ಧಿ ಕೋಶದ ಜಿಲ್ಲಾ ಯೋಜನಾ ಅಧಿಕಾರಿ ಕೆ.ಸುರೇಶ್‌ ನೇತೃತ್ವದಲ್ಲಿ ತಂಡವೊಂದನ್ನು ರಚಿಸಿದ್ದು, ಸಮೀಕ್ಷೆ ನಡೆಸಿ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ. 

ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆಯ ಉಪನಿರ್ದೇಶಕ ರಾಜೇಂದ್ರಪ್ರಸಾದ್‌, ರೇಷ್ಮೆ ಇಲಾಖೆಯ ಉಪನಿರ್ದೇಶಕ ವೃಷಬೇಂದ್ರಪ್ಪ, ನಗರಸಭೆ ಕಿರಿಯ ಆರೋಗ್ಯ ಅಧಿಕಾರಿ ಶಿವಪ್ರಸಾದ್, ಲೋಕೋಪಯೋಗಿ ಇಲಾಖೆಯ ವಿಷಯ ನಿರ್ವಾಹಕ ನಂಜುಂಡ, ವಸತಿ ಇಲಾಖೆಯ ಅಶ್ವಿನಿ ಅವರು ತಂಡದಲ್ಲಿದ್ದು, ಸಮೀಕ್ಷೆ ಕಾರ್ಯದಲ್ಲಿ ನಿರತರಾಗಿದ್ದಾರೆ. 

ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾಧಿಕಾರಿ ಅವರ ವ್ಯಾಪ್ತಿಯಲ್ಲಿ 108 ಮತ್ತು ಲೋಕೋಪಯೋಗಿ ಇಲಾಖೆಯ ಅಡಿಯಲ್ಲಿ 78 ವಸತಿಗೃಹಗಳಿವೆ. ವಸತಿ ಗೃಹಗಳ ಅಗತ್ಯವಿಲ್ಲದವರೂ ಅವುಗಳನ್ನು ಬಳಸುತ್ತಿದ್ದಾರೆ, ಇನ್ನೂ ಕೆಲವರು ದುರ್ಬಳಕೆ ಮಾಡುತ್ತಿದ್ದಾರೆ ಎಂಬ ಆರೋಪಗಳು ಆಗಾಗ ಕೇಳಿ ಬರುತ್ತಿತ್ತು. 

ವಿಚಾರಣೆ ನಡೆಸಿದಾಗ, ಕೆಲವರು ಸ್ವಂತ ಮನೆ ಇದ್ದರೂ, ಅದನ್ನು ಭೋಗ್ಯಕ್ಕೆ ಅಥವಾ ಬಾಡಿಗೆಗೆ ನೀಡಿ ವಸತಿಗೃಹದಲ್ಲಿ ವಾಸವಿರುವುದು ಇನ್ನೂ ಕೆಲವರು ವರ್ಗಾವಣೆಯಾಗಿ ಹೋಗಿದ್ದರೂ ಇನ್ನೂ ವಸತಿ ಗೃಹಗಳನ್ನು ಹಸ್ತಾಂತರಿಸದೇ ಇರುವುದು, ನಿವೃತ್ತಿ ಹೊಂದಿದ್ದರೂ ಸರ್ಕಾರ ನೀಡಿದ ಮನೆಯಲ್ಲಿ ವಾಸವಿರುವುದು... ಸೇರಿದಂತೆ ವಿವಿಧ ರೀತಿಗಳಲ್ಲಿ ದುರ್ಬಳಕೆ ಮಾಡುತ್ತಿದ್ದುದು ಕಂಡು ಬಂದಿತ್ತು. ಹೀಗಾಗಿ, ಎಲ್ಲ ವಸತಿ ಗೃಹಗಳ ಬಗ್ಗೆ ಮಾಹಿತಿ ಕಲೆ ಹಾಕಲು ಜಿಲ್ಲಾಡಳಿತ ತೀರ್ಮಾನಿಸಿತ್ತು. 

ಪ್ರತಿ ಮನೆಗಳಿಗೂ ಭೇಟಿ ನೀಡುತ್ತಿರುವ ಅಧಿಕಾರಿಗಳ ತಂಡ, ಅಲ್ಲಿ ವಾಸವಿರುವವರ ವಿವರಗಳನ್ನು ಕಲೆ ಹಾಕುತ್ತಿದೆ. 

‘ಪ್ರತಿ ಮನೆಗೂ ಭೇಟಿ ನೀಡಿ ವಿವರ ಪಡೆಯುತ್ತಿದ್ದೇವೆ. ಸಮೀಕ್ಷೆ ಕಾರ್ಯ ಅರ್ಧದಷ್ಟು ಮುಗಿದಿದೆ. ಇನ್ನು ಒಂದೆರಡು ದಿನಗಳಲ್ಲಿ ಎಲ್ಲ ವಸತಿಗೃಹಗಳ ಸಂಪೂರ್ಣ ಮಾಹಿತಿಗಳನ್ನು ಸಂಗ್ರಹಿಸುತ್ತೇವೆ’ ಎಂದು ತಂಡದ ನೇತೃತ್ವ ವಹಿಸಿರುವ ಕೆ.ಸುರೇಶ್‌ ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.