ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಸುಧಾರಿಸಿದ ಎಸ್ಸೆಸ್ಸೆಲ್ಸಿ ಫಲಿತಾಂಶ

ನಾಲ್ಕನೇ ಸ್ಥಾನಕ್ಕೇರಿದ ತಾಲ್ಲೂಕು l ಅತಿ ಹೆಚ್ಚು ಅಂಕಗಳಿಸಿದ ಐವರು
Last Updated 21 ಮೇ 2022, 4:58 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ನಾಲ್ಕು ವರ್ಷಗಳಿಂದ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಕಳಪೆ ಸಾಧನೆ ತೋರಿ ಫಲಿತಾಂಶದಲ್ಲಿ ಕೊನೆಯ ಸ್ಥಾನದಲ್ಲಿದ್ದ ಗುಂಡ್ಲುಪೇಟೆ ತಾಲ್ಲೂಕು ಈ ಬಾರಿ ಉತ್ತಮ ಫಲಿತಾಂಶ ದಾಖಲಿಸಿ (ಶೇ 90.16) ನಾಲ್ಕನೇ ಸ್ಥಾನಕ್ಕೇರಿದೆ.

ಅತಿ ಹೆಚ್ಚು ಅಂಕಗಳಿಸಿ ಜಿಲ್ಲೆಗೆ ಮೊದಲ ಸ್ಥಾನ ಹಾಗೂ ಎರಡನೇ ಸ್ಥಾನ ಗಳಿಸಿರುವ ಜಿಲ್ಲೆಯ 12 ವಿದ್ಯಾರ್ಥಿಗಳ ಪೈಕಿ ಐವರು ತಾಲ್ಲೂಕಿನವರು. ಈ ಪೈಕಿ ಇಬ್ಬರು 621 ಅಂಕಗಳನ್ನು ಗಳಿಸಿ ಜಿಲ್ಲೆಗೆ ಮೊದಲ ಸ್ಥಾನಗಳಿಸಿದರೆ, ಇನ್ನು ಮೂವರು 620 ಅಂಕಗಳಿಸಿ ಎರಡನೇ ಸ್ಥಾನಗಳಿಸಿದ್ದಾರೆ. ಎರಡನೇ ಸ್ಥಾನಗಳಿಸಿದ ಮೂವರೂ ಸೇಂಟ್‌ ಜಾನ್‌ ಇಂಗ್ಲಿಷ್ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು. ಮೊದಲ ಸ್ಥಾನ ಗಳಿಸಿದವರು ಸರ್ಕಾರಿ ಶಾಲೆಯ ಮಕ್ಕಳು.

ನಾಲ್ಕು ವರ್ಷಗಳಿಂದ ತಾಲ್ಲೂಕಿನ ಫಲಿತಾಂಶ ಸುಧಾರಣೆ ಆಗಿರಲಿಲ್ಲ. ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಫಲಿತಾಂಶ ಉತ್ತಮವಾಗಿದ್ದರೂ, ಅನುದಾನಿತ ಶಾಲೆಗಳ ಫಲಿತಾಂಶ ಕಳಪೆಯಾಗಿತ್ತು. ಇದು ಒಟ್ಟಾರೆ ಫಲಿತಾಂಶದ ಮೇಲೆ ಪ್ರಭಾವ ಬೀರುತ್ತಿತ್ತು. ಫಲಿತಾಂಶ ಕಡಿಮೆ ಆದರೆ ಸರ್ಕಾರಕ್ಕೆ ಪತ್ರ ಬರೆಯಲಾಗುತ್ತದೆ ಎಂಬ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್‌.ಸಿ.ಶಿವಮೂರ್ತಿ ಅವರು ಅನುದಾನಿತ ಶಿಕ್ಷಣ ಸಂಸ್ಥೆಗಳನ್ನು ಎಚ್ಚರಿಸಿದ್ದರು. ಅಲ್ಲದೇ ಫಲಿತಾಂಶ ಹೆಚ್ಚಳಕ್ಕೆ ಎಲ್ಲ ಶಿಕ್ಷಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿವಿಧ ಕಾರ್ಯಕ್ರಮಗಳ‌ನ್ನೂ ಹಮ್ಮಿಕೊಳ್ಳಲಾಗಿತ್ತು. ಇವೆಲ್ಲದರ ಪರಿಣಾಮವಾಗಿ ಫಲಿತಾಂಶ ಸುಧಾರಿಸಿದೆ.

‘ತಾಲ್ಲೂಕಿನಲ್ಲಿ 2,398 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. 2,173 ಮಂದಿ ಉತ್ತೀರ್ಣರಾಗಿದ್ದು,1,115 ‌ಬಾಲಕಿಯರು (ಶೇ 90.61) ಹಾಗೂ 1,058 ಬಾಲಕರು (ಶೇ 87.36). ತಾಲ್ಲೂಕಿನಲ್ಲಿ 27 ಸರ್ಕಾರಿ ಶಾಲೆಗಳು ಇದ್ದು, ಶೇ 88.95 ಮತ್ತು 14 ಅನುದಾನಿತ ಶಾಲೆಗಳಲ್ಲಿ ಶೇ 88.95 ಮತ್ತು 8 ಖಾಸಗಿ ಶಾಲೆಗಳಲ್ಲಿ ಶೇ 94.58ರಷ್ಟು ಫಲಿತಾಂಶ ದಾಖಲಾಗಿದೆ’ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ ಅವರು ಮಾಹಿತಿ ನೀಡಿದರು.

ಬೇಗೂರು ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯ ವಿದ್ಯಾರ್ಥಿನಿ ಅನುಷಾ 621, ಗುಂಡ್ಲುಪೇಟೆ ಸರ್ಕಾರಿ ಆದರ್ಶ ವಿದ್ಯಾಲಯ ವಿದ್ಯಾರ್ಥಿನಿ ಡಿ.ಎಲ್. ಸಿಂಚನಾ 621 ಅಂಕ ಪಡೆದು ಜಿಲ್ಲೆ, ತಾಲ್ಲೂಕಿಗೆ ಪ್ರಥಮ ಸ್ಥಾನಗಳಿಸಿದ್ದಾರೆ. ಪಟ್ಟಣದ ಸೇಂಟ್ ಜಾನ್ ಶಾಲೆಯ ಎಸ್.ಬಿ.ಚಂದನಾ , ಜಿ.ವರ್ಷಿಣಿ, ಜಿ.ಆರ್. ದೀಕ್ಷಿತ್ ತಲಾ 620 ಅಂಕ ಪಡೆದು ಎರಡನೇ ಸ್ಥಾನ ಗಳಿಸಿದ್ದಾರೆ.

*
ಮೂರ್ನಾಲ್ಕು ವರ್ಷಗಳಿಂದ ಕೊನೆಯ ಸ್ಥಾನದಲ್ಲಿದ್ದ ತಾಲ್ಲೂಕು ಒಂದು ಸ್ಥಾನ ಮೇಲೇರಿದೆ. ಇದಕ್ಕೆ ಎಲ್ಲ ಶಿಕ್ಷಕರ ಪರಿಶ್ರಮ ಮತ್ತು ಪೋಷಕರ ಸಹಕಾರ ಕಾರಣ.
-ಎಸ್.ಸಿ.ಶಿವಮೂರ್ತಿ, ಕ್ಷೇತ್ರ ಶಿಕ್ಷಣಾಧಿಕಾರಿ, ಗುಂಡ್ಲುಪೇಟೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT