ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ ತಾಲ್ಲೂಕು ಕಚೇರಿ ಕಟ್ಟಡ ಶಿಥಿಲ

ಕಿತ್ತು ಬರುತ್ತಿದೆ ಸಿಮೆಂಟ್‌, ದುರಸ್ತಿಗೆ ಗಮನಹರಿಸದ ತಾಲ್ಲೂಕು ಆಡಳಿತ
Last Updated 24 ಆಗಸ್ಟ್ 2020, 17:12 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಪಟ್ಟಣದಲ್ಲಿರುವ ತಾಲ್ಲೂಕು ಕಚೇರಿ ಕಟ್ಟಡದ ಕೆಲವು ಭಾಗಗಳು ಶಿಥಿಲಗೊಂಡಿದ್ದು, ತಾಲ್ಲೂಕು ಆಡಳಿತ ಈ ಬಗ್ಗೆ ಗಮನ ಹರಿಸಿಲ್ಲ.

ಕಚೇರಿ ಮೊದಲ ಮಹಡಿಯ ಮೇಲ್ಚಾವಣಿ ಸಿಮೆಂಟ್ ಕಿತ್ತು ಬಂದಿದೆ.ಒಂದೇ ಕಟ್ಟಡದಲ್ಲಿ ತಹಶೀಲ್ದಾರ್ ಕಚೇರಿ, ಉಪ ನೋಂದಣಾಧಿಕಾರಿ ಕಚೇರಿ, ಜನನ ಮತ್ತು ಮರಣ ನೋಂದಣಿ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಆಹಾರ, ಅಬಕಾರಿ, ಕಂದಾಯ ಇಲಾಖೆ, ಆಧಾರ್ ನೋಂದಣಿ ಮತ್ತು ತಿದ್ದುಪಡಿ ಸೇರಿದಂತೆ ಹಲವು ಇಲಾಖೆಗಳು ಕಾರ್ಯ ನಿರ್ವಹಿಸುತ್ತಿವೆ.

ಇಲ್ಲಿಗೆ ಪ್ರತಿನಿತ್ಯ ನೂರಾರು ಮಂದಿ ವಿವಿಧ ಕೆಲಸಗಳಿಗಾಗಿ ಬರುತ್ತಿರುತ್ತಾರೆ. 15 ದಿನಗಳ ಹಿಂದೆಯೇಮೊದಲ ಮಹಡಿಯ ಮೇಲ್ಚಾವಣಿಯ ಸಿಮೆಂಟ್‌ ಕಿತ್ತು ಬಂದಿದ್ದು, ಪ್ರತಿನಿತ್ಯ ಹಲವು ಇಲಾಖೆ ಅಧಿಕಾರಿಗಳು ಈ ದಾರಿಯಾಗಿಯೇ ಸಂಚರಿಸುತ್ತಾರೆ. ಹೀಗಿದ್ದರೂ ಇದನ್ನು ದುರಸ್ತಿ ಪಡಿಸುವ ಗೋಜಿಗೆ ಹೋಗಿಲ್ಲ.

‘ಅಧಿಕಾರಿಗಳು ಕೆಲಸ ಮಾಡುವ ಸ್ಥಳದಲ್ಲೇ ಈ ರೀತಿಯಾದರೆ, ಸಾರ್ವಜನಿಕರ ಆಸ್ತಿಪಾಸ್ತಿಗಳಿಗೆ ಅಧಿಕಾರಿಗಳು ಹೇಗೆ ರಕ್ಷಣೆ ನೀಡುತ್ತಾರೆ’ ಎಂದು ಕರ್ನಾಟಕ ರಕ್ಷಣೆ ವೇದಿಕೆ ತಾಲ್ಲೂಕು ಅಧ್ಯಕ್ಷ ಸುರೇಶ್ ನಾಯಕ ಅವರು ಪ್ರಶ್ನಿಸಿದರು.

ಕೆಲಸ ವಿಳಂಬ: ‘ಉಪ ನೋಂದಣಾಧಿಕಾರಿಗಳ ಕಚೇರಿ, ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳಲ್ಲಿ ಸಾರ್ವಜನಿಕರ ಕೆಲಸಗಳು ಸಮಯಕ್ಕೆ ಸರಿಯಾಗಿ ನಡೆಯುತ್ತಿಲ್ಲ. ದಿನಕ್ಕೊಂದು ಸಬೂಬು ಹೇಳಿ ಮುಂದೂಡುತ್ತಾರೆ. ಜೊತೆಗೆ ಸರ್ವರ್ ಸಮಸ್ಯೆ ಇದೆ ಎಂದು ಹೇಳುತ್ತಾರೆ. ಈ ಬಗ್ಗೆ ಪ್ರಶ್ನೆ ಮಾಡಿದರೆ ದಾಖಲೆಗಳು ಸರಿಯಾಗಿಲ್ಲ ಎಂದು ಹಾರಿಕೆ ಉತ್ತರ ನೀಡುತ್ತಾರೆ’ ಎಂದು ತಾಲ್ಲೂಕು ಕಚೇರಿಗೆ ಕೆಲಸದ ನಿಮಿತ್ತ ಬಂದಿದ್ದ ರವಿಕುಮಾರ್ ಅವರು ದೂರಿದರು.

‘ತಾಲ್ಲೂಕು ಕಚೇರಿಯಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಹೊರಗೆ ಕುಳಿತುಕೊಳ್ಳಲು ಆಸನದ ವ್ಯವಸ್ಥೆ ಇಲ್ಲ, ಮರದ ಕೆಳಗೆ ಕುಳಿತು ಕೊಳ್ಳೋಣ ಎಂದರೆ ಬೇಲಿ ನಿರ್ಮಾಣ ಮಾಡಿದ್ದಾರೆ. ಕಚೇರಿ ಆವರಣದಲ್ಲಿ ಉದ್ಯಾನ ನಿರ್ಮಿಸಲು ತಾಲ್ಲೂಕು ಆಡಳಿತ ಹೊರಟಿದೆ.ಅಭಿವೃದ್ಧಿ ಎಂಬುದು ಉದ್ಯಾನ ನಿರ್ಮಾಣ ಮಾಡುವುದರಲ್ಲಿ ಇಲ್ಲ. ಜನರ ಕೆಲಸಗಳು ಸಕಾಲದಲ್ಲಿ ಆದರೆ ಅದೇ ಅಭಿವೃದ್ಧಿ’ ಎಂದು ವಕೀಲ ರಾಜೇಶ್ ಮತ್ತು ಮುಖಂಡ ಮೇಲುಕಾಮನಹಳ್ಳಿ ರವಿಕುಮಾರ್ ತಿಳಿಸಿದರು.

ಶೀಘ್ರ ದುರಸ್ತಿ: ತಹಶೀಲ್ದಾರ್‌

ತಾಲ್ಲೂಕು ಕಚೇರಿ ಕಟ್ಟಡ ಶಿಥಿಲಗೊಂಡಿರುವ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿರುವ ತಹಶೀಲ್ದಾರ್‌ ನಂಜುಂಡಯ್ಯ ಅವರು, ‘ಈಗಾಗಲೇ ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನಕ್ಕೆ ತರಲಾಗಿದೆ. ಎಂಜಿನಿಯರ್‌ಗಳಿಗೂ ದುರಸ್ತಿ ಮಾಡಲು ಸೂಚಿಸಲಾಗಿದೆ. ಸಿಮೆಂಟ್‌ ಕಿತ್ತು ಬಂದಿರುವ ಜಾಗದ ಜೊತೆಗೆ ಇನ್ನೂ ಹಲವು ಕಡೆ ಸಜ್ಜೆ ಸೇರಿದಂತೆ ಕಂಬಗಳನ್ನು ದುರಸ್ತಿ ಮಾಡಿಸಬೇಕಾಗಿದೆ. ಶೀಘ್ರ ಇವುಗಳನ್ನು ದುರಸ್ತಿ ಪಡಿಸಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT