ಶನಿವಾರ, ಸೆಪ್ಟೆಂಬರ್ 25, 2021
29 °C
ಮಳೆ ಕೊರತೆಯ ತಾಲ್ಲೂಕಿನಲ್ಲಿ ಜಲಮೂಲಗಳ ಒತ್ತುವರಿ, ನಿರ್ವಹಣೆ ಸಮಸ್ಯೆ

ಹನೂರು: ಅವಸಾನದತ್ತ ಕೆರೆಗಳು

ಬಿ. ಬಸವರಾಜು Updated:

ಅಕ್ಷರ ಗಾತ್ರ : | |

Prajavani

ಹನೂರು: ಮಳೆ ಕೊರತೆ ಕಾಡುವ ಗಡಿ ತಾಲ್ಲೂಕಿನಲ್ಲಿ ನೀರಿನ ಮೂಲವಾಗಿದ್ದ ಕೆರೆಗಳು ಒತ್ತುವರಿ ಹಾಗೂ ನಿರ್ವಹಣೆ ಕೊರತೆಯಿಂದ ಅವಸಾನದತ್ತ ಸಾಗಿವೆ.

ಹೆಚ್ಚು ಅರಣ್ಯ ಹಾಗೂ ಗುಡ್ಡಪ್ರದೇಶಗಳಿಂದಲೇ ಕೂಡಿರುವ ಹನೂರು ತಾಲ್ಲೂಕಿನ ಮೂರು ಹೋಬಳಿಗಳ ವ್ಯಾಪ್ತಿಯಲ್ಲಿ ಕಂದಾಯ ಇಲಾಖೆಯು 94 ಕೆರೆಗಳು ಇರುವುದನ್ನು ಗುರುತಿಸಿದೆ. ತಾಲ್ಲೂಕು ಆಡಳಿತ ನೀಡಿರುವ ಮಾಹಿತಿಯಂತೆ 47 ಕೆರೆಗಳ ಸರ್ವೆ ಮುಗಿದೆ. ಈ ಪೈಕಿ 14 ಕೆರೆಗಳು ಒತ್ತುವರಿಯಾಗಿರುವುದನ್ನು ಸರ್ವೆ ಸಮಯದಲ್ಲಿ ಗುರುತಿಸಲಾಗಿದೆ. 11 ಕೆರೆಗಳ ಒತ್ತುವರಿಯನ್ನು ತೆರವುಗೊಳಿಸಲಾಗಿದೆ.

ರಾಮನಗುಡ್ಡೆ ಹಾಗೂ ಹುಬ್ಬೆಹುಣಸೆ ಕೆರೆಗಳನ್ನು ಬಿಟ್ಟು ಉಳಿದ ಎಲ್ಲ ಕೆರೆಗಳು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಟ್ಟಿವೆ. ಅವುಗಳ ನಿರ್ವಹಣೆ ಹೊಣೆ ಸಂಪೂರ್ಣವಾಗಿ ಆಯಾ ಗ್ರಾಮಪಂಚಾಯಿತಿಗಳದ್ದು ಎಂದು ಹೇಳುತ್ತಾರೆ ತಹಶೀಲ್ದಾರ್ ನಾಗರಾಜು.

‘ಹನೂರು ಭಾಗದಲ್ಲಿ ಇತ್ತೀಚೆಗೆ ಕಡಿಮೆ ಪ್ರಮಾಣದಲ್ಲಿ ಮಳೆಯಾಗುತ್ತಿದೆ. ಹಿಂದೆ ಸಾಕಷ್ಟು ಮಳೆಯಾಗುತ್ತಿದ್ದರಿಂದ ಕೆರೆಕಟ್ಟೆಗಳು ಸಮೃದ್ಧವಾಗಿ ತುಂಬುತ್ತಿದ್ದವು. ನೀರಿನ ಕೊರತೆಯಿರಲಿಲ್ಲ. ಈಗ ಮಳೆ ಕಡಿಮೆಯಾಗುವುದರ ಜೊತೆಗೆ ಕೆಲವು ಗ್ರಾಮಗಳಲ್ಲಿ ಕೆರೆಗಳು ಒತ್ತವರಿಯಾಗಿರುವುದರಿಂದ ವಿಸ್ತಾರವಾಗಿದ್ದ ಕೆರೆಗಳು ಸಂಕೀರ್ಣವಾಗತೊಡಗಿವೆ. ಪರಿಣಾಮ ಬೇಸಿಗೆಯಲ್ಲಿ ಮಾತ್ರ ಎದುರಾಗುತ್ತಿದ್ದ ನೀರಿನ ಸಮಸ್ಯೆ, ಈಗ ಎಲ್ಲಾ ಸಂದರ್ಭದಲ್ಲೂ ಉದ್ಭವಿಸತೊಡಗಿದೆ’ ಎಂದು ಹೇಳುತ್ತಾರೆ ಗ್ರಾಮೀಣ ಜನ. 

ನಿರ್ವಹಣೆ ಕೊರತೆ: ಬಹುತೇಕ ಕೆರೆಗಳಲ್ಲಿ ನೀರಿಲ್ಲ. ಮಳೆಗಾಲದಲ್ಲೂ ಅವು ಪೂರ್ಣವಾಗಿ ಭರ್ತಿಯಾಗುವುದಿಲ್ಲ. ಹೆಚ್ಚಿನ ಕಡೆಗಳಲ್ಲಿ ಕೆರೆಗೆ ನೀರು ಹರಿದುಹೋಗುವುದಕ್ಕೆ ಜಾಗ ಇಲ್ಲ. ಎಲ್ಲ ಸ್ಥಳಗಳೂ ಒತ್ತುವರಿಯಾಗಿದೆ. ಇದರ ಜೊತೆಗೆ ಹೂಳಿನ ಸಮಸ್ಯೆ, ಕಳೆಗಿಡಗಳ ಸಮಸ್ಯೆಯೂ ಬಾಧಿಸುತ್ತಿದೆ. 

ಗ್ರಾಮೀಣ ಭಾಗದಲ್ಲಿ ನರೇಗಾ ಯೋಜನೆ ಅಡಿಯಲ್ಲಿ ಕೆರೆಗಳ ಹೂಳು ತೆಗೆಯಲು ಸಣ್ಣ ಪ್ರಯತ್ನ ನಡೆದಿದ್ದು ಬಿಟ್ಟರೆ, ದೊಡ್ಡ ಮಟ್ಟಿನ ಕಾರ್ಯಕ್ರಮ ಇದುವರೆಗೆ ರೂಪುಗೊಂಡಿಲ್ಲ. 

ನರೇಗಾ ಅಡಿಯಲ್ಲಿ ಕೆರೆಗಳ ಹೂಳು ಎತ್ತುವ ಕೆಲಸವನ್ನು ಹೂಳು ಎತ್ತಲೇಬೇಕು ಎಂಬ ಕಾರಣಕ್ಕೆ ಮಾಡಿದ್ದಲ್ಲ. ಲಾಕ್‌ಡೌನ್‌ ಅವಧಿಯಲ್ಲಿ ಸಂಕಷ್ಟಕ್ಕೀಡಾದ ಕೂಲಿ ಕಾರ್ಮಿಕರಿಗೆ ಕೆಲಸ ನೀಡಬೇಕು ಎಂಬ ಸರ್ಕಾರದ ಸೂಚನೆಯ ಮೇರೆಗೆ ಉದ್ಯೋಗ ಚೀಟಿ ಹೊಂದಿರುವವರಿಗೆ ಕೆಲಸ ನೀಡಬೇಕು ಎಂಬುದಕ್ಕಾಗಿ ಈ ಕಾರ್ಯವನ್ನು ಕೈಗೆತ್ತಿಕೊಳ್ಳಲಾಗಿತ್ತು. 

‘ಕರೆಗೆಳ ಸಂರಕ್ಷಣೆಗಾಗಿ ನಮ್ಮಲ್ಲಿ ಪ್ರತ್ಯೇಕ ಅನುದಾನ ಇಲ್ಲ. ಹೂಳೆತ್ತುವುದು, ಕಟ್ಟೆ ನಿರ್ಮಾಣ ಮುಂತಾದವುಗಳನ್ನು ನರೇಗಾದಲ್ಲಿಯೇ ಮಾಡಿದ್ದೇವೆ’ ಎಂದು ಹೇಳುತ್ತಾರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು. 

‘ಗ್ರಾಮೀಣ ಭಾಗದಲ್ಲಿರುವ ಕೆರೆಗಳ ಜವಾಬ್ದಾರಿ ಆಯಾ ಗ್ರಾಮಪಂಚಾಯಿತಿಗಳದ್ದು ಎಂದು ಕಂದಾಯ ಇಲಾಖೆಯ ಅಧಿಕಾರಿಗಳು ಹೇಳುತ್ತಾರೆ. ಆದರೆ ಪಂಚಾಯಿತಿಗಳಲ್ಲಿ ವಿಚಾರಿಸಿದರೆ, ‘ನರೇಗಾ ಯೋಜನೆಯಡಿ ಅಭಿವೃದ್ಧಿ ಕೆಲಸಗಳನ್ನು ಮಾಡಬಹುದೇ ವಿನಾ ಕೆರೆಗಳ ಸಂರಕ್ಷಣೆಗಾಗಿ ಬೇರೆ ಯಾವ ಕಾಮಗಾರಿಯನ್ನು ನಾವು ಮಾಡಲು ಸಾಧ್ಯವಿಲ್ಲ’ ಎಂದು ಅಧಿಕಾರಿಗಳು ಹೇಳುತ್ತಾರೆ.

‘ಗ್ರಾಮಗಳಲ್ಲಿರುವ ಕೆರೆಗಳ ಸಂರಕ್ಷಣೆಗಾಗಿ ವಿಶೇಷ ಅನುದಾನ ಮೀಸಲಿಟ್ಟು ಅದರ ಬಳಕೆಗಾಗಿ ಶ್ರಮಿಸಿದಾಗ ಮಾತ್ರ ಗ್ರಾಮೀಣ ಭಾಗದಲ್ಲಿ ನೀರಿನ ಮೂಲವಾಗಿರುವ ಕೆರೆಗಳನ್ನು ಸಂರಕ್ಷಿಸಲು ಸಾಧ್ಯ’ ಎಂದು ಹೇಳುತ್ತಾರೆ ಕೌದಳ್ಳಿ ಗ್ರಾಮದ ಮಹದೇವನಾಯ್ಕ.

‘ವರ್ಷವಾದರೂ ತೆರವಾಗದ ಒತ್ತುವರಿ’

ಹುತ್ತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಡೆಯರಪಾಳ್ಯದಲ್ಲಿರುವ ಕೆರೆ ಒತ್ತುವರಿಯಾಗಿದೆ. ಈ ಬಗ್ಗೆ ತಹಶೀಲ್ದಾರ್ ಅವರನ್ನು ವಿಚಾರಿಸಿದರೆ ಅವರು ‘ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎನ್ನುತ್ತಾರೆ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅವರನ್ನು ಕೇಳಿದರೆ ಅವರು ಕೂಡ ‘ನಮ್ಮ ವ್ಯಾಪ್ತಿಗೆ ಬರುವುದಿಲ್ಲ’ ಎನ್ನುತ್ತಾರೆ. ಈ ಗೊಂದಲವನ್ನು ನಿವಾರಿಸಿ ಒತ್ತುವರಿಯನ್ನು ತೆರವುಗೊಳಿಸುವಂತೆ ಕರಿಯಪ್ಪನದೊಡ್ಡಿ ಗ್ರಾಮಕ್ಕೆ ಬಂದಿದ್ದ ಜಿಲ್ಲಾಧಿಕಾರಿ ಡಾ.ಎಂ.ಆರ್ ರವಿ ಅವರಿಗೆ ಮನವಿ ಮಾಡಿದ್ದೆವು. ಅವರು  ತಹಶೀಲ್ದಾರ್ ಹಾಗೂ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ಹವಣಾಧಿಗಳಿಗೆ (ಇಒ) ಸೂಚಿಸಿದ್ದರು. ಆದರೆ ಅವರು ಸೂಚನೆ ನೀಡಿ ಒಂದು ವರ್ಷವಾದರೂ ಒತ್ತುವರಿ ತೆರವು ಕಾರ್ಯ ಆಗಿಲ್ಲ’ ಎಂದು  ಗ್ರಾಮದ ಜಡೇರುದ್ರ ಅವರು ಆರೋಪಿದರು.

------

ಹನೂರು ನೂತನ ತಾಲ್ಲೂಕು ಆಗಿರುವುದರಿಂದ ಕೆರೆಗಳ ಸಂರಕ್ಷಣೆಗಾಗಿ ಅನುದಾನವಿಲ್ಲ. ನರೇಗಾ ಅಡಿ ಅಭಿವೃದ್ಧಿ ಪಡಿಸಬಹುದಾಗಿದೆ
ಶ್ರೀನಿವಾಸ್, ಇಒ, ಹನೂರು

----

ಕೆರೆಗಳು ತುಂಬಿದರೆ ಒತ್ತುವರಿ ಬಗ್ಗೆ ತಿಳಿಯುತ್ತದೆ. ಇದಕ್ಕೂ ಮುನ್ನ ಕೆರೆಗಳ ಸರ್ವೆ ಮಾಡಲು ಭೂಮಾಪನ ಇಲಾಖೆಗೆ ತಿಳಿಸಲಾಗಿದೆ
ಜಿ.ಎಚ್.ನಾಗರಾಜು, ತಹಶೀಲ್ದಾರ್

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು