ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಕಥೆ ಕೀರ್ತನೆ ನಿಪುಣ ರಾಮದಾಸ

ಗಡಿಭಾಗದ ದೇಶಿ ಕಲೆ ‘ಹರಿಕಥೆ’ಗೆ ಬೇಕಿದೆ ಪ್ರೋತ್ಸಾಹ
Last Updated 18 ಸೆಪ್ಟೆಂಬರ್ 2018, 15:20 IST
ಅಕ್ಷರ ಗಾತ್ರ

ಚಾಮರಾಜನಗರ: ಕುತ್ತಿಗೆಯಲ್ಲಿ ಹಾರ, ತಲೆಗೆ ಪೇಟ, ಕೈಯಲ್ಲಿ ಕವಟ ಹಿಡಿದು ನಿಂತು ರಾತ್ರಿಯಿಂದ ಮುಂಜಾನೆವರೆಗೂ ಪೌರಾಣಿಕ ಕಥೆಗಳನ್ನುವಿಶಿಷ್ಟವಾಗಿ ಹಾಡುತ್ತಾ, ವಿವರಣೆ ನೀಡುವ‘ಹರಿಕಥೆ’ ಇಂದಿಗೂ ಪ್ರಸಿದ್ಧಿ ಪಡೆದಿದೆ.

ಜಿಲ್ಲೆಯ ಗಡಿ ಭಾಗದ ಹೊಸಹಳ್ಳಿ ಸಮೀಪವಿರುವ ತಮಿಳುನಾಡಿನ ತಾಳವಾಡಿ ತಾಲ್ಲೂಕಿಗೆ ಸೇರಿದ ಅರಳವಾಡಿಯಕೆ.ರಾಮದಾಸ ಅವರು ಹರಿಕಥೆ ಕಲಾವಿದರಾಗಿ ಈ ಭಾಗದಲ್ಲಿ ಗುರುತಿಸಿಕೊಂಡಿದ್ದಾರೆ.

‘ತಮಿಳುನಾಡಿನಲ್ಲಿದ್ದರೂ ನಾನು ಕನ್ನಡಿಗ’ ಎಂದು ಎದೆತಟ್ಟಿ ಹೇಳುವ ರಾಮದಾಸ ಅವರಿಗೆ ಹರಿಕಥೆಯ ನಂಟು ಬಾಲ್ಯದಿಂದಲೇ ಬಂದಿದೆ.

5ನೇ ತರಗತಿಯಲ್ಲಿ ಇರುವಾಗಲೇ ಹರಿಕಥೆಯ ಮೋಹ ಬೆಳೆಸಿಕೊಂಡ ಅವರುಹರಿಕಥೆ ವಿದ್ವಾನ್ ಆರ್.ಗುರುರಾಜ ನಾಯ್ಡು ಅವರ ಹರಿಕಥೆಗಳನ್ನು ಕೇಳಿಕೊಂಡು ಬೆಳೆದವರು. ತಾವು ಹರಿಕಥೆ ಕೀರ್ತನೆಯ ಪದಗಳನ್ನು ಹಾಡಲು ನಾಯ್ಡು ಅವರೇ ಸ್ಫೂರ್ತಿ ಎಂದು ಹೇಳುವ ರಾಮದಾಸ ಅವರು ತಮ್ಮ ಶಿಕ್ಷಣವನ್ನು 8ನೇ ತರಗತಿಗೇ ಮೊಟಕುಗೊಳಿಸಿದವರು.

‘ನಾನು ಆರ್.ಗುರುರಾಜ ನಾಯ್ಡು ಅವರ ಹರಿಕಥೆ ಕ್ಯಾಸೆಟ್‌ಗಳನ್ನು ಕೇಳಿ ಅಭ್ಯಾಸ ಆರಂಭಿಸಿದೆ. ಸಮೀಪದ ಮೆಟ್ಟಲವಾಡಿಯ ಪದ್ಮನಾಭ ಅವರ ತಂಡದೊಂದಿಗೆ ಕಾರ್ಯಕ್ರಮಗಳಲ್ಲಿ ಭಾಗಿಯಾಗುತ್ತಿದ್ದೆ. 2007ರಲ್ಲಿ ತಮಿಳುನಾಡಿನ ದೊಡ್ಡಪುರ ಗ್ರಾಮದರಾಮರಪಾದ ದೇವಸ್ಥಾನದಲ್ಲಿ ಮೊದಲ ಬಾರಿಹರಿಕಥೆಆರಂಭಿಸಿದೆ. 11 ವರ್ಷಗಳಿಂದ ನಿರಂತರವಾಗಿ ಕಾರ್ಯಕ್ರಮಗಳನ್ನು ನೀಡುತ್ತಿದ್ದೇನೆ’ ಎಂದು ರಾಮದಾಸ ಅವರು ತಮ್ಮ ಕಲಾಯಾನವನ್ನು ‘ಪ್ರಜಾವಾಣಿ’ಯೊಂದಿಗೆ ಹಂಚಿಕೊಂಡರು.

ರಾಮದಾಸ ಅವರು ಆರು ಸದಸ್ಯರ ತಮ್ಮದೇ ತಂಡ ಕಟ್ಟಿದ್ದಾರೆ. ವಾದ್ಯ, ತಬಲ, ಪಿಟೀಲು ಮತ್ತು ತಾಳವಾದ್ಯ ವಾದಕರು ತಂಡದಲ್ಲಿದ್ದಾರೆ. ಕಾರ್ಯಕ್ರಮ ನೀಡುವ ಸ್ಥಳಕ್ಕೆ ತಂಡದೊಂದಿಗೆ ತೆರಳುವ ಅವರು, ಕೆಲವು ಕಡೆಗಳಲ್ಲಿ ವೈಯಕ್ತಿಕ ಪ್ರದರ್ಶನಗಳನ್ನು ನೀಡಿದ್ದೂ ಇದೆ.

ಹರಿಕಥೆ ಕಲಾವಿದರಿಗೆ ಬೇಡಿಕೆ: ಜಿಲ್ಲೆಯ ಸುತ್ತಮುತ್ತಲ ದೇವಸ್ಥಾನಗಳಲ್ಲಿ ವಿಶೇಷ ಪೂಜೆ, ಜಾತ್ರೆಗಳಲ್ಲಿ ಹಾಗೂ ತಮಿಳುನಾಡಿನಲ್ಲೂ ಇವರಿಗೆ ಬೇಡಿಕೆ ಇದೆ. ಗ್ರಾಮೀಣ ಭಾಗದ ಜನರು ಹೆಚ್ಚು ಉತ್ಸಾಹದಿಂದ ಹರಿಕಥೆ ಕೇಳುತ್ತಾರೆ. ಕೈಲಾಸ ಗಣರಾಧನೆ (11ನೇ ತಿಥಿ ಕಾರ್ಯ) ವೇಳೆಯಲ್ಲಿ ಕುಟುಂಬ ವರ್ಗದವರು ಇವರಿಂದ ರಾತ್ರಿಯಿಂದ ಮುಂಜಾನೆವರೆಗೂಹರಿಕಥೆಹೇಳಿಸುತ್ತಾರೆ.

ಪ್ರತಿ ವರ್ಷ ನಂಜನಗೂಡು ಶನೀಶ್ವರಸ್ವಾಮಿ ದೇವಸ್ಥಾನದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಭಾಗಿಯಾಗಿ ಪ್ರಥಮ ಬಹುಮಾನ ತಮ್ಮದಾಗಿಸಿಕೊಳ್ಳುತ್ತಾರೆ. ಎಚ್.ಡಿ.ಕೋಟೆ, ಬೆಂಗಳೂರು ಮಂಡ್ಯ, ಹಾಸನ, ಮದ್ದೂರು ಪ್ರದೇಶಗಳಲ್ಲಿ ಇವರುಹರಿಕಥೆ ಪ್ರದರ್ಶನ ನೀಡಿದ್ದಾರೆ.

ಬಾಲಕಾಂಡ ರಾಮಾಯಣ, ಲವಕುಶ, ಗಜ ಗೌರಿ ವ್ರತ, ಹರಿಭಕ್ತ ರಾಮಾಯಣ, ಮಹದೇಶ್ವರ, ಅಯ್ಯಪ್ಪಸ್ವಾಮಿ ಸೇರಿದಂತೆ 12ರಿಂದ 13 ಕಥೆಗಳಲ್ಲಿ ಇವರು ಪರಿಣತಿ ಸಾಧಿಸಿದ್ದಾರೆ.

‘ತಂಡದೊಂದಿಗೆ ಕಾರ್ಯಕ್ರಮ ನೀಡಿದರೆ ₹10ರಿಂದ ₹15 ಸಾವಿರದವರೆಗೆ ನೀಡುತ್ತಾರೆ. ಪ್ರತ್ಯೇಕ ಹರಿಕಥೆ ನೀಡಿದರೆ ವೈಯಕ್ತಿಕವಾಗಿ ₹4ರಿಂದ ₹5 ಸಾವಿರ ನೀಡುತ್ತಾರೆ. ಉಳಿದ ದಿನಗಳಲ್ಲಿ ನೀರಾವರಿ ಹೊಂದಿರುವ ನಮ್ಮದೇ ಜಮೀನಿನಲ್ಲಿ ಕೆಲಸ ಮಾಡುತ್ತೇನೆ’ ಎಂದು ಹೇಳುತ್ತಾರೆ ರಾಮದಾಸ.

‘ನಂಜನಗೂಡಿನ ತಬಲ ಮರಿಸ್ವಾಮಿ ಮತ್ತು ಹೆಜ್ಜಿಗೆ ನಾರಾಯಣಸ್ವಾಮಿ ಅವರ ತಂಡದೊಂದಿಗೆ ನಾನು ಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದೇನೆ. ತಂಡದ ಎಲ್ಲ ಕಲಾವಿದರಿಗೆ, ಪೋಷಕರಿಗೆ, ಸ್ನೇಹಿತರಿಗೆ ಋಣಿಯಾಗಿದ್ದೇನೆ’ ಎಂದು ಹೇಳುತ್ತಾರೆ ಅವರು.

‘ನನಗೆ ನಾಲ್ವರುಪುತ್ರಿಯರು. ಇವರಲ್ಲಿ ಹಿರಿಯ ಮಕ್ಕಳಿಬ್ಬರು ಉತ್ಸಾಹದಿಂದಹರಿಕಥೆ ಹೇಳಿಸಿಕೊಳ್ಳುತ್ತಾರೆ. ಕಿರಿಯ ವಯಸ್ಸಿನಿಂದಲೇ ದೇಸಿ ಕಲೆಗೆ ಉತ್ತೇಜನ ನೀಡಿದರೆ ಕಲೆ ಉಳಿಯಲಿದೆ. ಹರಿಕಥೆ ಕಲಿಯಲು ಮುಂದೆ ಬಂದರೆ ಅವರಿಗೂ ಹೇಳಿಕೊಡುತ್ತೇನೆ’ ಎಂದು ರಾಮದಾಸ ಹೇಳುತ್ತಾರೆ.

ಸರ್ಕಾರ, ಇಲಾಖೆಯ ಪ್ರೋತ್ಸಾಹ ಅಗತ್ಯ

ದೇಸಿ ಕಲೆಗಳನ್ನು ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಸರ್ಕಾರ ಹಾಗೂಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಟ್ಟದಲ್ಲಿ ಆಗಬೇಕು. ಕಲೆಯ ಮೂಲಕ ಕಲಾವಿದರಿಗೂ ಪ್ರೋತ್ಸಾಹ, ಪ್ರಚಾರ ಸಿಗುತ್ತದೆ. ಇಲ್ಲವಾದರೆ ದೇಸಿ ಕಲೆ ನಶಿಸಿ ಹೋಗುತ್ತದೆ ಎಂಬುದು ರಾಮದಾಸ ಅವರ ಕಳವಳ.

‘ನಾನುಕನ್ನಡದವನು. ಈ ರಾಜ್ಯದಲ್ಲೇಹೆಚ್ಚು ಕಾರ್ಯಕ್ರಮಗಳನ್ನು ನೀಡಿದ್ದೇನೆ. ಇಲ್ಲಿನ ಕೇಳುಗರು ಹೆಚ್ಚು ಗುರುತಿಸಿದ್ದಾರೆ. 1955ರಲ್ಲಿ ಕರ್ನಾಟಕ ರಾಜ್ಯದಿಂದ ಬೇರ್ಪಟ್ಟ ಅರಳವಾಡಿ, ತಾಳವಾಡಿ, ಫಿರ್ಕಾ (ಈಗ ತಾಲ್ಲೂಕು), ಸತ್ತಿ ತಾಲ್ಲೂಕಿಗೆ ಸೇರಿತ್ತು. ಬಳಿಕ ಸ್ವಂತ ಜಮೀನು ಹೊಂದಿರುವ ನಮ್ಮ ಕುಟುಂಬ ಬೇರೆ ಕಡೆ ಹೋಗಲು ಸಾಧ್ಯವಾಗಲಿಲ್ಲ. ಹಾಗಾಗಿ, ಇಲ್ಲೆ ಉಳಿದುಕೊಂಡೆವು’ ಎಂದು ತಾವು ತಮಿಳುನಾಡಿನ ಭಾಗವಾದ ಕಥೆಯನ್ನು ಅವರು ಹೇಳಿಕೊಂಡರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT