ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಗಡಿಜಿಲ್ಲೆಗಳಲ್ಲಿ ಕನ್ನಡದ ಕಂಪು ಹೆಚ್ಚಿಸುವ ಕೆಲಸ’

ಮಾದಪ್ಪನ ಕ್ಷೇತ್ರದಲ್ಲಿ ಗಡಿನಾಡು ಕನ್ನಡ ಉತ್ಸವ: ಅದ್ದೂರಿ ಮೆರವಣಿಗೆ, ಸಾಂಸ್ಕೃತಿಕ ಕಾರ್ಯಕ್ರಮ
Published 11 ಫೆಬ್ರುವರಿ 2024, 7:10 IST
Last Updated 11 ಫೆಬ್ರುವರಿ 2024, 7:10 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ರಾಜ್ಯದ ಪ್ರತಿಯೊಂದು ಗಡಿ ಜಿಲ್ಲೆಯಲ್ಲಿಯೂ ಕನ್ನಡದ ಕಂಪು ಹೆಚ್ಚಿಸುವ ಕೆಲಸವನ್ನು ಸರ್ಕಾರ ಮಾಡುತ್ತಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ ಶನಿವಾರ ಹೇಳಿದರು. 

ಮಹದೇಶ್ವರ ಬೆಟ್ಟದ ಮಹದೇಶ್ವರ ಬಯಲು ರಂಗಮಂದಿರಲ್ಲಿ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಮತ್ತು ಜಿಲ್ಲಾ ಶಾಖೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆದ ಗಡಿನಾಡು ಕನ್ನಡ ಉತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 

‘ಕನ್ನಡ ಭಾಷೆ, ಪರಂಪರೆ, ಸಂಸ್ಕೃತಿ ಚಟುವಟಿಕೆಗಳಿಗೆ ನಿರಂತರ ಉತ್ತೇಜನ ನೀಡಲಾಗುತ್ತಿದೆ. ನಾಡು-ನುಡಿಗೆ ಸದಾ ಪ್ರೋತ್ಸಾಹ ನೀಡಲಾಗುತ್ತಿದೆ. ತಮಿಳುನಾಡು, ಕೇರಳಕ್ಕೆ ಹೊಂದಿಕೊಂಡಿರುವ ಗಡಿ ಜಿಲ್ಲೆ ಚಾಮರಾಜನಗರದಲ್ಲಿ ಗಡಿನಾಡು ಕನ್ನಡ ಉತ್ಸವ ಆಯೋಜಿಸುವ ಮೂಲಕ ನಾಡು, ನುಡಿ, ಭಾಷೆ ಸೇರಿದಂತೆ ಜನರ ಜೀವನ ಬಗ್ಗೆ ಹಾಗೂ ಸ್ಥಳೀಯ ಸಂಸ್ಕೃತಿಯನ್ನು ಹೊರ ಜಗತ್ತಿಗೆ ತಿಳಿಸುವಂತಾಗಿದೆ’ ಎಂದರು. 

ಭಕ್ತರಿಗೆ ಸೌಲಭ್ಯ: ‘ಮಹದೇಶ್ವರ ಬೆಟ್ಟಕ್ಕೆ ಲಕ್ಷಾಂತರ ಭಕ್ತರು ಬರುತ್ತಾರೆ. ಇವರಲ್ಲಿ ಬಡ ಮಧ್ಯಮ ವರ್ಗದವರೇ ಹೆಚ್ಚು. ಬರುವ ಭಕ್ತರಿಗೆಲ್ಲರಿಗೂ ಸಕಲ ಸವಲತ್ತು, ಸೌಲಭ್ಯ ಒದಗಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಆದೇಶಿಸಿದ್ದಾರೆ. ಅದರಂತೆಯೇ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರವು ಜವಾಬ್ದಾರಿ ಹೊತ್ತು ಮತ್ತಷ್ಟು ಅಭಿವೃದ್ಧಿಗೆ ಶ್ರಮಿಸಿ ಜನರಿಗೆ ಅನುಕೂಲ ಕಲ್ಪಿಸಲಾಗುವುದು’ ಎಂದರು. 

ಶಾಸಕ ಎ.ಆರ್.ಕೃಷ್ಣಮೂರ್ತಿ ಮಾತನಾಡಿ, ‘ಚಾಮರಾಜನಗರ ಜಿಲ್ಲೆ ಕಲೆಗಳ ತವರೂರು. ಜಾನಪದ ಕಲಾವಿದರು ಪ್ರತಿ ಊರಿನಲ್ಲೂ ಇದ್ದಾರೆ. ಮಲೆ ಮಹದೇಶ್ವರ, ಮಂಟೇಸ್ವಾಮಿ, ಸಿದ್ದಾಪ್ಪಾಜಿಯವರ ಸ್ಮರಣೆ ಹಾಡುಗಳನ್ನು ಹಾಡುವ ಕಲಾವಿದರು ಇಲ್ಲಿದ್ದಾರೆ. ನೆಲ, ಜಲ, ಭಾಷೆ ವಿಚಾರಕ್ಕೆ ದಕ್ಕೆಯಾದಾಗ ಇಡೀ ರಾಜ್ಯದಲ್ಲೇ ನಮ್ಮ ಜಿಲ್ಲೆಯ ಕನ್ನಡಪರ ಸಂಘಟನೆಗಳು ಮೊದಲು ಧ್ವನಿ ಎತ್ತುವ ಮೂಲಕ ಅಭಿಮಾನ ಮೂಡಿಸುತ್ತಿದ್ದಾರೆ’ ಎಂದರು.

ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್.ಷಡಾಕ್ಷರಿ ಮಾತನಾಡಿ, ‘ಗಡಿಭಾಗದಲ್ಲಿ ಪರ ಭಾಷೆಯ ವ್ಯಾಮೋಹ ಹೋಗಲಾಡಿಸಿ ಕನ್ನಡ ಉಳಿಸುವ ಕಾರ್ಯಕ್ಕೆ ನಾವೆಲ್ಲರೂ ಹೋರಾಡಬೇಕು. ಸಂಘವು ಕನ್ನಡ ನಾಡು, ನುಡಿ, ಗಡಿ ವಿಚಾರದಲ್ಲಿಯೂ ಜಾಗೃತಿಗೊಳಿಸುವ ಚಟುವಟಿಕೆಗಳನ್ನು ಹಮ್ಮಿಕೊಂಡಿದೆ. ಗಡಿನಾಡು ಕನ್ನಡ ಉತ್ಸವದಂತಹ ಕಾರ್ಯಕ್ರಮಗಳನ್ನು ಏರ್ಪಡಿಸುತ್ತಾ ಬಂದಿದ್ದೇವೆ. ಈ ಹಿಂದೆ ಪುಣ್ಯಕೋಟಿ, ಪಶುಭಾಗ್ಯ ಯೋಜನೆ, ಕನ್ನಡ ಸಮ್ಮೇಳನ ಸೇರಿದಂತೆ ಇನ್ನಿತರ ತುರ್ತು ಸಂದರ್ಭದಲ್ಲಿ ಸರ್ಕಾರಕ್ಕೆ ಸಹಾಯ ಹಸ್ತ ಚಾಚಿದ್ದೇವೆ’ ಎಂದರು.

ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿದರು. ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಿದರು.

ಇದೇ ವೇಳೆ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರಾದ ಗೋಪಾಲ್ ಜಗದೀಶ್ ಅವರನ್ನು ಸನ್ಮಾನಿಸಲಾಯಿತು.

ಮಹದೇಶ್ವರ ಬೆಟ್ಟದ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಜಿ.ಅರ್ಚನಾ ಪ್ರಕಾಶ್, ಕನ್ನಡ ಗಡಿ ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಪ್ರಕಾಶ್ ಮತ್ತೀಹಳ್ಳಿ, ಜಿಲ್ಲಾ ಪಂಚಾಯಿತಿ ಸಿಇಒ ಆನಂದ್‌ ಪ್ರಕಾಶ್‌ ಮೀನಾ, ತಹಶೀಲ್ದಾರ್ ಮಂಜುಳ,  ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಉಪಕಾರ್ಯದರ್ಶಿ ಚಂದ್ರಶೇಖರ್ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಚಂದ್ರಶೇಖರ್‌, ಪದಾಧಿಕಾರಿಗಳು ಹಾಗೂ ತಾಲ್ಲೂಕು ಘಟಕಗಳ ಪದಾಧಿಕಾರಿಗಳು ಇದ್ದರು. 

ಅದ್ದೂರಿ ಮೆರವಣಿಗೆ: ವೇದಿಕೆ ಸಮಾರಂಭಕ್ಕೂ ಮುನ್ನ ಉತ್ಸವದ ಅಂಗವಾಗಿ ಬೆಟ್ಟದಲ್ಲಿ ಜಾನಪದ ಕಲಾತಂಡಗಳ ಮೆರವಣಿಗೆ ಮತ್ತು ಸಾಂಸ್ಕೃತಿಕ ನಡಿಗೆ ಕಾರ್ಯಕ್ರಮ ಅದ್ದೂರಿಯಾಗಿ ನಡೆಯಿತು. ಬೆಳಿಗ್ಗೆ ನಡೆದ ಕನ್ನಡ ಜಾಗೃತಿ ಜಾಥಾಗೆ ಸಚಿವ ವೆಂಕಟೇಶ್‌, ಜಿಲ್ಲಾಧಿಕಾರಿ ಚಾಲನೆ ನೀಡಿದರು. ಸಂಜೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ ಅವರು ಶನಿವಾರ ಹೊಗೆನಕಲ್‌ನಲ್ಲಿ ತೆಪ್ಪದಲ್ಲಿ ಸಾಗಿ ಜಲಪಾತ ವೀಕ್ಷಿಸಿದರು 
ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ ಅವರು ಶನಿವಾರ ಹೊಗೆನಕಲ್‌ನಲ್ಲಿ ತೆಪ್ಪದಲ್ಲಿ ಸಾಗಿ ಜಲಪಾತ ವೀಕ್ಷಿಸಿದರು 

ಹೊಗೆನಕಲ್‌: ಮಯೂರ ಹೋಟೆಲ್‌ ಯಾಂತ್ರೀಕೃತ ಬೋಟ್‌ಗೆ ಚಿಂತನೆ

ಸಚಿವ ವೆಂಕಟೇಶ್‌ ಅವರು ಶನಿವಾರ ಹೊಗೆನಕಲ್‌ ಜಲಪಾತ ಗೋಪಿನಾಥಂನ ಎರಕೆಯಂ ಪ್ರದೇಶದಲ್ಲಿರುವ ಐಎಫ್‌ಎಸ್‌ ಅಧಿಕಾರಿ ಶ್ರೀನಿವಾಸ್‌ ಅವರ ಸ್ಮಾರಕಕ್ಕೆ ಭೇಟಿ ನೀಡಿದರು.  ಹೊಗೆನಕಲ್‌ ಜಲಪಾತ ಪ್ರದೇಶದಲ್ಲಿ ತೆಪ್ಪಸವಾರಿ ಮಾಡಿದ ಸಚಿವರು ಪ್ರವಾಸಿಗರಿಗೆ ಕಲ್ಪಿಸಿರುವ ಸೌಲಭ್ಯಗಳನ್ನು ಪರಿಶೀಲಿಸಿದರು.

ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ‘ಜಲಪಾತದಲ್ಲಿ ರಾಜ್ಯದ  ಭಾಗದಲ್ಲಿ ಪ್ರವಾಸಿಗರಿಗೆ ಮೂಲ ಸೌಕರ್ಯಗಳು ಹೆಚ್ಚಿಲ್ಲ. ತಮಿಳುನಾಡು ವ್ಯಾಪ್ತಿಯಲ್ಲಿ ಊಟ ತಿಂಡಿ ಬಸ್ ವ್ಯವಸ್ಥೆ ಪಾರ್ಕಿಂಗ್ ಇನ್ನಿತರ ಸೌಕರ್ಯಗಳು ಇವೆ ಎಂದು ತಿಳಿದು ಬಂದಿದೆ. ನಮ್ಮ ಭಾಗದಲ್ಲೂ ಮಯೂರ ಹೊಟೆಲ್ ತೆರೆದು ಪ್ರವಾಸಿಗರಿಗೆ ಉತ್ತಮ ಊಟ ಹಾಗೂ ಮೂಲ ಸೌಕರ್ಯಗಳನ್ನು ಕಲ್ಪಿಸಲು ಅಧಿಕಾರಿಗಳಿಗೆ ಸಲಹೆ ನೀಡಲಾಗಿದ್ದು ಜಲಪಾತ ವೀಕ್ಷಣೆಗೆ ಸಾದರಣವಾದ ತೆಪ್ಪಗಳು ಮಾತ್ರ ಅಲ್ಲಿ ಇರುವುದರಿಂದ ಮೋಟಾರ್ ಚಾಲಿತ ಬೋಟ್ ವ್ಯವಸ್ಥೆ ಮಾಡಲು ಚಿಂತಿಸಲಾಗಿದೆ’ ಎಂದರು.

ತೆಪ್ಪ ನಿರ್ವಾಹಕರ ಮನವಿ: ಹೊಗೆನಕಲ್‌ನಲ್ಲಿ ಸಚಿವರನ್ನು ಭೇಟಿ ಮಾಡಿದ ತೆಪ್ಪ ನಿರ್ವಾಹಕರಾದ ರತ್ನವೇಲು ಮತ್ತು ಮೂರ್ತಿ ಅವರು ‘ತೆಪ್ಪದಲ್ಲಿ ಪ್ರವಾಸಿಗರನ್ನು ಕೊಂಡೊಯ್ಯಲು ₹500 ಮಾತ್ರ ಪಡೆಯುತ್ತಿದ್ದೇವೆ.  ಅದರಲ್ಲಿ ಅರಣ್ಯ ಇಲಾಖೆಗೆ ₹100 ನೀಡಬೇಕು. ₹800 ಪಡೆದರೆ ₹ 200 ನೀಡಬೇಕು. ನಮ್ಮ ಬದುಕಿನ ಸುಧಾರಣೆಗೆ ₹1500 ನಿಗದಿ ಪಡಿಸಬೇಕು’ ಎಂದು ಮನವಿ ಮಾಡಿದರು.

ಇದಕ್ಕೆ ಪ್ರತಿಕ್ರಿಸಿದ ಜಿಲ್ಲಾಧಿಕಾರಿಗಳು ‘ಈಗಾಗಲೇ ಟ್ರಿಪ್ಪಿಗೆ ₹800 ನಿಗದಿ ಮಾಡಲಾಗಿದ್ದು ಮುಂದಿನ ದಿನಗಳಲ್ಲಿ ಈ ಬಗ್ಗೆ ಚರ್ಚಿಸಲಾಗುವುದು’ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT