ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾನವ ವನ್ಯಜೀವಿ ಸಂಘರ್ಷ ಚರ್ಚೆ; ತಮಿಳುನಾಡಿನ ಅಧಿಕಾರಿಗಳೂ ಭಾಗಿ

ಬಂಡೀಪುರ: ಅಂತರ ರಾಜ್ಯ ಅರಣ್ಯ ಸಚಿವರ ಸಭೆ ನಾಳೆ
Published 9 ಮಾರ್ಚ್ 2024, 12:29 IST
Last Updated 9 ಮಾರ್ಚ್ 2024, 12:29 IST
ಅಕ್ಷರ ಗಾತ್ರ

ಚಾಮರಾಜನಗರ: ಬಂಡೀಪುರ ಹಾಗೂ ಸುತ್ತಮುತ್ತಲಿನ ಸಂರಕ್ಷಿತ ಪ್ರದೇಶಗಳಲ್ಲಿ ಹೆಚ್ಚಾಗುತ್ತಿರುವ ಮಾನವ ವನ್ಯಜೀವಿ ಸಂಘರ್ಷ ಮತ್ತು ಪರಿಹಾರೋಪಗಳ ಬಗ್ಗೆ ವಿಚಾರವಾಗಿ ಚರ್ಚಿಸಲು ಭಾನುವಾರ (ಮಾರ್ಚ್‌ 10) ಬಂಡೀಪುರದಲ್ಲಿ ಕರ್ನಾಟಕ, ಕೇರಳ ಅರಣ್ಯ ಸಚಿವರು, ಅಧಿಕಾರಿಗಳ ಸಮನ್ವಯ ಸಮಿತಿ ಸಭೆ ನಡೆಯಲಿದೆ. 

ಹಾಸನದಲ್ಲಿ ಸೆರೆಹಿಡಿದು ರೇಡಿಯೊ ಕಾಲರ್‌ ಅಳವಡಿಸಿ ಬಂಡೀಪುರ ಕಾಡಿಗೆ ಬಿಟ್ಟಿದ್ದ ಆನೆಯೊಂದು (ಮಖ್ನಾ) ಕೇರಳದ ವಯನಾಡು ಜಿಲ್ಲೆಯಲ್ಲಿ ವ್ಯಕ್ತಿಯೊಬ್ಬರ ಮೇಲೆ ದಾಳಿ ಮಾಡಿ ಅವರ ಸಾವಿಗೆ ಕಾರಣವಾಗಿತ್ತು. ಬಂಡೀಪುರ ಅರಣ್ಯದಿಂದ ಕೇರಳಕ್ಕೆ ಹೋಗಿದ್ದ ಮತ್ತೊಂದು ಆನೆ ಮಾನದಂವಾಡಿಯಲ್ಲಿ ದಾಂಧಲೆ ನಡೆಸಿತ್ತು. ಅಲ್ಲಿ ಸೆರೆ ಹಿಡಿದು ಅದನ್ನು ಬಂಡೀಪುರಕ್ಕೆ ಕರೆ ತರುವ ವೇಳೆ ಮೃತಪಟ್ಟಿತ್ತು. 

ಮುಂದೆ ಇಂತಹ ಘಟನೆಗಳು ನಡೆಯದಂತೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸುವುದಕ್ಕಾಗಿ ಅಂತರರಾಜ್ಯ ಅರಣ್ಯ ಇಲಾಖೆಗಳ ಸಮನ್ವಯ ಸಭೆ ಆಯೋಜಿಸಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಈ ಹಿಂದೆ ಹೇಳಿದ್ದರು. 

ಅದರಂತೆ ಭಾನುವಾರ ಸಮನ್ವಯ ಸಮಿತಿ ಸಭೆ ಆಯೋಜಿಸಲಾಗಿದೆ. ಬೆಳಿಗ್ಗೆ 11 ಗಂಟೆಗೆ ಬಂಡೀಪುರದಲ್ಲಿ ಸಭೆ ನಡೆಯಲಿದೆ. ಮಾನವ ವನ್ಯಜೀವಿ ಸಂಘರ್ಷ ಮಾತ್ರವಲ್ಲದೆ, ಅರಣ್ಯ ಸಂರಕ್ಷಣೆ, ಬೇಟೆ, ಅರಣ್ಯ ನಾಶ, ವನ್ಯಜೀವಿಗಳ ಸಂಚಾರ ಕುರಿತಂತೆ ಮಾಹಿತಿಯ ವಿನಿಮಯ, ಜ್ಞಾನ ಮತ್ತು ತಂತ್ರಜ್ಞಾನದ ವಿನಿಮಯಕ್ಕೆ ಸಂಬಂಧಿಸಿದ ವಿಚಾರಗಳು ಚರ್ಚೆಗೆ ಬರುವ ನಿರೀಕ್ಷೆ ಇದೆ. 

ಕರ್ನಾಟಕ, ಕೇರಳ ಅರಣ್ಯ ಸಚಿವರು ಮಾತ್ರವಲ್ಲದೇ, ಕೇರಳದ ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಜ್ಯೋತಿಲಾಲ್‌, ರಾಜ್ಯದ ಅರಣ್ಯ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಂಜುನಾಥ್‌ ಪ್ರಸಾದ್‌, ಪಿಸಿಸಿಎಫ್‌ ಮತ್ತು ಅರಣ್ಯ ಪಡೆ ಮುಖ್ಯಸ್ಥ ಬಿ.ಕೆ.ದೀಕ್ಷಿತ್, ಕೇರಳದ ಪಿಸಿಸಿಎಫ್‌ ಮತ್ತು ಅರಣ್ಯ ಪಡೆಯ ಮುಖ್ಯಸ್ಥ ಗಂಗಾ ಸಿಂಗ್, ರಾಜ್ಯದ ಮುಖ್ಯ ವನ್ಯಜೀವಿ ವಾರ್ಡನ್‌ ಸುಭಾಷ್ ಮಳಖೇಡೆ, ಕೇರಳದ ಮುಖ್ಯ ವನ್ಯಜೀವಿ ವಾರ್ಡನ್‌ ಜಯಪ್ರಸಾದ್‌ ಇವರೊಂದಿಗೆ ತಮಿಳುನಾಡು ಮತ್ತು ಕರ್ನಾಟಕದ ಎಲ್ಲ ಎಪಿಸಿಸಿಎಫ್‌ಗಳು, ಸಿಸಿಎಫ್‌ಗಳು, ಸಿಎಫ್‌ಗಳು, ಡಿಸಿಎಫ್‌ಗಳು ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT