ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂತರರಾಷ್ಟ್ರೀಯ ಹುಲಿ ದಿನ: ವಿದ್ಯಾರ್ಥಿಗಳ ಪರಿಸರ ಪಾಠ

Last Updated 30 ಜುಲೈ 2022, 2:57 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಕಾಡು ಪ್ರಾಣಿಗಳ ಮತ್ತು ಮಾನವ ಸಂಘರ್ಷಕ್ಕೆ ಕಾರಣವೇನು? ಕಾಡು ನಾಶವಾದರೆ ಮನುಷ್ಯ ಮೇಲಾಗುವ ದುಷ್ಪರಿಣಾಮಗಳು, ಕಳ್ಳ ಬೇಟೆಯಿಂದ ಆಗುವ ಅನಾನುಕೂಲದ ಬಗ್ಗೆ ಶಾಲಾ ವಿದ್ಯಾರ್ಥಿಗಳು ನಾಟಕ ಮತ್ತು ಪರಿಸರ ಗೀತೆಗಳ ಮೂಲಕ ವಿದ್ಯಾರ್ಥಿಗಳಿಗೆ ಮತ್ತು ಸಾರ್ವಜನಿಕರಿಗೆ ಅರಿವು ಮೂಡಿಸಿದರು.

ಬಂಡೀಪುರ ರಾಷ್ಟ್ರೀಯ ಹುಲಿ ಸಂರಕ್ಷಿತ ಪ್ರದೇಶದ ಮೇಲುಕಾಮನಹಳ್ಳಿ ಸಫಾರಿ ಕೇಂದ್ರದಲ್ಲಿ ನಡೆದ ಜಾಗತಿಕ ಹುಲಿ ದಿನಾಚರಣೆ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಕಾಡಿನ ಉಳಿವಿಗೆ ಸಂಬಂಧಿಸಿದ ನಾಟಕ ಪ್ರದರ್ಶಿಸಿ ಮೆಚ್ಚುಗೆ ಪಡೆದರು.

ಬಾಚಹಳ್ಳಿ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಕಾಡಂಚಿನ ಗ್ರಾಮದ ಜನರು ಕಾಡು ಪ್ರಾಣಿಗಳಿಂದ ಅನುಭವಿಸುತ್ತಿರುವ ಸಮಸ್ಯೆ,, ಕಾಡು ಪ್ರಾಣಿಗಳಾದ ಹುಲಿ ಚಿರತೆ ಮೃತ ಪಟ್ಟರೆ ಅದರ ಲಾಭ ಪಡೆಯುವ ಕಳ್ಳ ಬೇಟೆಗಾರರು, ಇದರಿಂದಾಗಿ ಸಮಸ್ಯೆ ಅನುಭವಿಸುವ ರೈತರು ಇವುಗಳ ಬಗ್ಗೆ ನಾಟಕ ಪ್ರದರ್ಶನ ಮಾಡಿ ನೆರದಿದ್ದವರಿಗೆ ಅರಿವು ಮೂಡಿಸಿದರು.

ಹುಲಿಗಳನ್ನು ರೈತರು ಕೊಂದರೆ ಸಸ್ಯಹಾರಿ ಪ್ರಾಣಿಗಳು ಅರಣ್ಯದಲ್ಲಿ ಹೆಚ್ಚಾಗಿ ರೈತರಿಗೆ ಏನೆಲ್ಲ ತೊಂದರೆ ಆಗುತ್ತದೆ ಎಂಬುದನ್ನು ವಿವರಿಸಿದರು.

ಗುಂಡ್ಲುಪೇಟೆ ಪಟ್ಟಣದ ಬಾಲಕಿಯರ ಪ್ರೌಢಶಾಲಾ ವಿದ್ಯಾರ್ಥಿನಿಯರು ಪ್ರಾಣಿಗಳನ್ನು ಕೊಂದರೆ ಏನು ಶಿಕ್ಷೆಯಾಗುತ್ತದೆ. ರೈತರು ಅನುಭವಿಸುವ ಕಷ್ಟಗಳೇನು? ಕಳ್ಳಬೇಟೆ ಗಾರರು ಯಾವ ಕ್ರಮಗಳನ್ನು ಅನುಸರಿಸಿ ಕಾಡು ಪ್ರಾಣಿಗಳನ್ನು ಕೊಲ್ಲುತ್ತಾರೆ? ಅರಣ್ಯ ಇಲಾಖೆಯ ಕ್ರಮಗಳೇನು ಎಂಬುದರ‌ ಬಗ್ಗೆ ಪ್ರದರ್ಶನ ಮಾಡಿ ಹುಲಿಯ ಬಗ್ಗೆ ಸ್ವಾರಸ್ಯಕರವಾದ ಮಾಹಿತಿಯನ್ನು ನೀಡಿದರು.

ವಿವೇಕ ಗಿರಿಜನ ಶೈಕ್ಷಣಿಕ ಶಾಲೆಯ ವಿದ್ಯಾರ್ಥಿಗಳು ಕಾಡು ಉಳಿಸಿ ನಾಡು ಉಳಿಸಿ ಎಂಬ ಪರಿಸರ ಗೀತೆ ಹಾಡಿ ರಂಜಿಸಿದರು.

ಇದಕ್ಕೂ ಮೊದಲು ಶಾಸಕ ಸಿ.ಎಸ್.ನಿರಂಜನಕುಮಾರ್ ಮತ್ತು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಸೈಕಲ್ ಜಾಥಾ ಮತ್ತು ಕ್ಯಾಂಟಿನ್ ಗೆ ಚಾಲನೆ ನೀಡಿದರು. ಇದಕ್ಕೂ ಮುನ್ನ ಮಾತನಾಡಿದ ಶಾಸಕ ಸಿ.ಎಸ್.ನಿರಂಜನಕುಮಾರ್ ಹಿಂದೆ ಕಾಡಿನಲ್ಲಿ ಅನೇಕ ಕಳ್ಳತನ ಮತ್ತು ಬೇಟೆಗಳು ಆಗುತ್ತಿತ್ತು.ಅರಣ್ಯ ಇಲಾಖೆಯ ಕಟ್ಟುನಿಟ್ಟಾದ ಕಾನೂನು ಕ್ರಮದಿಂದ ಮತ್ತು ಇಲಾಖೆಯ ಸಿಬ್ಬಂದಿಗಳ ಕಾರ್ಯ ದಕ್ಷತೆಯಿಂದ ಕಾಎಇನ ಸಂಪತ್ತು ಉತ್ತಮವಾಗಿದೆ ಎಂದು ಅಭಿಪ್ರಾಯ ಪಟ್ಟರು.

ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಮಾತನಾಡಿ, ಅರಣ್ಯ ಸಂಪತ್ತನ್ನು ರಕ್ಷಣೆ ಮಾಡುವುದು ಪ್ರತಿಯೊಬ್ಬ ನಾಗರಿಕರ ಕರ್ತವ್ಯ ಮತ್ತು ಜವಬ್ದಾರಿ, ಕೇವಲ ಇಲಾಖೆಯ ಸಿಬ್ಬಂದಿಗಳಿಂದ ಮಾತ್ರ ಕಾಡಿನ ಸಂಪತ್ತು ರಕ್ಷಣೆ ಆಗುವುದಿಲ್ಲ ಎಂದರು.

ಕಾಡಿನ ರಕ್ಷಣೆ ಮಾಡಬೇಕಾದರೆ ಅನೇಕ ಸಮಸ್ಯೆಗಳು ಎದುರಾಗುತ್ತದೆ.ಅವುಗಳ ನಡುವೆಯೇ ಸಿಬ್ಬಂದಿಗಳು ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತ ಪಡಿಸಿದರು.

ಮೈಸೂರು ವೃತ್ತ ವಿಭಾಗದ ಸಿಸಿಎಫ್ ಮಾಲತಿ ಪ್ರೀಯ ಮಾತನಾಡಿ, 2018ರಲ್ಲಿ ನಡೆದ ಹುಲಿ ಗಣತಿಯಲ್ಲಿಯೇ ಬಂಡೀಪುರ ದೇಶದಲ್ಲಿ ಅತಿ ಹೆಚ್ಚು ಹುಲಿ ಹೊಂದಿರುವ ಪ್ರದೇಶ ಎಂದು ಘೋಷಣೆ ಆಗಬೇಕಿತ್ತು. ಈ ಭಾರಿ ಮೊದಲನೇ ಸ್ಥಾನ ಬಂಡೀಪುರಕ್ಕೆ ಸಿಗುತ್ತದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದೇ ಸಂದರ್ಭದಲ್ಲಿ ಕಾಡು ಪ್ರಾಣಿ ಮತ್ತು ಮಾನವ ಸಂಘರ್ಷ ತಡೆಯಲು ಉತ್ತಮವಾಗಿ ಕಾರ್ಯನಿರ್ವಹಿಸಿದ ಸಿಬ್ಬಂದಿಗಳಿಗೆ ಮತ್ತು ಕ್ರೀಡಾಕೂಟದಲ್ಲಿ ವಿಜೇತರಾದವರಿಗೆ ಬಹುಮಾನ ವಿತರಣೆ ಮಾಡಿದರು.

ಕಾರ್ಯಕ್ರಮದಲ್ಲಿ ವನ್ಯಜೀವಿ ಮಂಡಳಿ ಸದಸ್ಯ ಮಲ್ಲೇಶಪ್ಪ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಟಿ.ಪಿ.ಶಿವಕುಮಾರ್, ಗ್ರಾಮ ಪಂಚಾಯತಿ ಸದಸ್ಯ ನಾಗಮಲ್ಲಪ್ಪ, ಉಪಾಧ್ಯಕ್ಷೆ ಗೀತಾ, ಎಸಿಎಪ್ ಕೆ.ಪರಮೇಶ್, ರವೀಂದ್ರ ಮತ್ತು ನವೀನ್, ಗೋಪಾಲ ಸ್ವಾಮಿ ಬೆಟ್ಟ ವಲಯಾರಣ್ಯಾಧಿಕಾರಿ ನವೀನ್ ಕುಮಾರ್ ಸೇರಿದಂತೆ ಸಿಬ್ಬಂದಿಗಳು ಮತ್ತು ಶಾಲಾ ವಿದ್ಯಾರ್ಥಿಗಳು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT