ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡೀಪುರ | ಮಾನವ ವನ್ಯಜೀವಿ ಸಂಘರ್ಷ ತಡೆ: ಕರ್ನಾಟಕ, ಕೇರಳ ಅರಣ್ಯ ಸಚಿವರ ಸಭೆ

Published 10 ಮಾರ್ಚ್ 2024, 13:13 IST
Last Updated 10 ಮಾರ್ಚ್ 2024, 13:13 IST
ಅಕ್ಷರ ಗಾತ್ರ

ಚಾಮರಾಜನಗರ: ಸಂರಕ್ಷಿತ ಅರಣ್ಯ ಪ್ರದೇಶಗಳ ವ್ಯಾಪ್ತಿಯಲ್ಲಿ ಮಾನವ– ವನ್ಯಜೀವಿ ಸಂಘರ್ಷಕ್ಕೆ ಕಡಿವಾಣ ಹಾಕಿ, ಜೀವ‌ ಹಾನಿ ತಡೆಯುವ ನಿಟ್ಟಿನಲ್ಲಿ ಪರಸ್ಪರ ಸಹಕಾರ, ಸಮನ್ವಯ ಸಾಧಿಸಲು ಮತ್ತು ತಂತ್ರಜ್ಞಾನಗಳ ವಿನಿಮಯಕ್ಕೆ ಕರ್ನಾಟಕ, ಕೇರಳ ಮತ್ತು ತಮಿಳುನಾಡು ರಾಜ್ಯಗಳು ಸಮ್ಮತಿಸಿವೆ. 

ಬಂಡೀಪುರದಲ್ಲಿ ಭಾನುವಾರ ರಾಜ್ಯದ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ, ಕೇರಳದ ಅರಣ್ಯ ಸಚಿವ ಎ.ಕೆ.ಶಶೀಂದ್ರನ್‌ ಅವರ ಸಮ್ಮುಖದಲ್ಲಿ ನಡೆದ ಅಂತರರಾಜ್ಯ ಅರಣ್ಗ ಸಚಿವರ ಸಮನ್ವಯ ಸಮಿತಿಯಲ್ಲಿ ಈ ತೀರ್ಮಾನಕ್ಕೆ ಬರಲಾಗಿದೆ. 

ಕರ್ನಾಟಕ, ಕೇರಳ ಮತ್ತು ತಮಿಳುನಾಡಿನ ಅರಣ್ಯ ಇಲಾಖೆಯ ಉನ್ನತ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು. ಸಭೆಯ ಕೊನೆಗೆ ಮಾನವ ವನ್ಯಜೀವಿ ಸಂಘರ್ಷ ತಡೆ ಮತ್ತು ಜೀವ ಹಾನಿ ತಪ್ಪಿಸಲು ಪಾಲಿಸಬೇಕಾದ ನಿಯಮಗಳನ್ನೊಳಗೊಂಡ ಪತ್ರಕ್ಕೆ (ಸನ್ನದು– ಚಾರ್ಟರ್‌) ಉಭಯ ಸಚಿವರೂ ಸಹಿ ಹಾಕಿದರು.  

ಸಭೆಯ ಬಳಿಕ ಪತ್ರಿಕಾಗೋಷ್ಠಿ ನಡೆಸಿದ ಸಚಿವ ಖಂಡ್ರೆ, ‘ವನ್ಯಜೀವಿ ಸಂರಕ್ಷಣಾ ಕಾಯ್ದೆ, ಅರಣ್ಯ ಸಂರಕ್ಷಣಾ ಕಾಯ್ದೆಗಳಿಂದಾಗಿ ಅರಣ್ಯ, ವನ್ಯಜೀವಿಗಳ ಸಂರಕ್ಷಣೆಯಾಗುತ್ತಿದೆ. ಇದರಿಂದ ಪ್ರಾಣಿಗಳ ಸಂಖ್ಯೆ ಹೆಚ್ಚಾಗಿದೆ. ನಗರೀಕರಣದ ಕಾರಣಕ್ಕೆ ವನ್ಯಜೀವಿ– ಮಾನವ ಸಂಘರ್ಷ ಜಾಸ್ತಿಯಾಗಿದೆ. ಈ ವರ್ಷ ರಾಜ್ಯದಲ್ಲಿ ಪ್ರಾಣಿಗಳ ದಾಳಿಯಿಂದಾಗಿ 52 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಹಲವರು ಗಾಯಗೊಂಡಿದ್ದಾರೆ. ಅಪಾರ ಬೆಳೆ ಹಾನಿಯೂ ಆಗಿದೆ. ವನ್ಯಜೀವಿ, ಅರಣ್ಯ ಸಂರಕ್ಷಣೆಯ ಜೊತೆಗೆ, ಪ್ರಾಣ ಹಾನಿ ತಡೆಯುವ ಜವಾಬ್ದಾರಿಯೂ ಸರ್ಕಾರಕ್ಕೆ ಇದೆ. ಇವುಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳಲು ಈ ಸಭೆ ನಡೆಸಲಾಗಿದೆ’  ಎಂದರು.

‘ಮೂರು ರಾಜ್ಯಗಳ ಅಧಿಕಾರಿಗಳು ಇದರಲ್ಲಿ ಪಾಲ್ಗೊಂಡಿದ್ದು, ಎಲ್ಲ ವಿಚಾರಗಳನ್ನು ಚರ್ಚಿಸಲಾಗಿದೆ. ಸಮನ್ವಯ ಸಾಧನೆ, ಎಐ (ಕೃತಕ ಬುದ್ಧಿಮತ್ತೆ) ಸೇರಿದಂತೆ ಆಧುನಿಕ ತಂತ್ರಜ್ಞಾನಗಳ ಬಳಕೆ, ಡ್ರೋನ್‌ ಕ್ಯಾಮೆರಾಗಳ ಬಳಕೆ, ಮಾಹಿತಿ ವಿನಿಮಯ, ಕಾರ್ಯಾಚರಣೆಗಳಲ್ಲಿ ಪರಸ್ಪರ ಸಹಕಾರ, ಸಂಘರ್ಷ ನಿಯಂತ್ರಣಕ್ಕೆ ಅನುಸರಿಸಲಾಗಿರುವ ಮಾದರಿ ಪ್ರಯೋಗಗಳನ್ನು ಅಳವಡಿಸಿಕೊಳ್ಳುವುದು, ಅಂತರ ಇಲಾಖೆ ಅಧಿಕಾರಿಗಳು ನಿರಂತರ ಸಂಪರ್ಕ ಇಟ್ಟುಕೊಳ್ಳುವುದು ಸೇರಿದಂತೆ ಹಲವು ನಿಯಮಗಳ ಪಾಲನೆ ಬಗ್ಗೆ ತೀರ್ಮಾನಿಸಲಾಗಿದೆ’ ಎಂದರು.

 ಕಾಯ್ದೆಗೆ ತಿದ್ದುಪಡಿ ‍ಪ್ರಸ್ತಾವ

‘ಆನೆ ಸೇರಿದಂತೆ ವನ್ಯಪ್ರಾಣಿಗಳು ದಾಳಿ ನಡೆಸಿದ ಸಂದರ್ಭದಲ್ಲಿ ಅವುಗಳ ನಿಯಂತ್ರಣಕ್ಕಾಗಿ ವಿವಿಧ ನಿರ್ಧಾರಗಳನ್ನು ತೆಗೆದುಕೊಳ್ಳುವ ಅಧಿಕಾರ ಸದ್ಯ ಮುಖ್ಯ ವನ್ಯಜೀವಿ ವಾರ್ಡನ್‌ ಅವರಿಗಷ್ಟೇ ಇದೆ. ಈ ಅಧಿಕಾರವನ್ನು ಕೆಳಹಂತದ ಅಧಿಕಾರಿಗಳಿಗೆ ನೀಡಬೇಕು. ಇದಕ್ಕಾಗಿ ಅರಣ್ಯ ಸಂರಕ್ಷಣೆ ಕಾಯ್ದೆಯ ಸೆಕ್ಷನ್‌ 11(1ಎ) ಮತ್ತು 11 (1ಬಿ)ಗಳಿಗೆ ತಿದ್ದುಪಡಿ ತರಬೇಕು ಎಂಬ ಪ್ರಸ್ತಾವವನ್ನು ಕೇಂದ್ರ ಸಲ್ಲಿಸಬೇಕು ಎನ್ನುವ ಸಲಹೆಯನ್ನು ಕೇರಳದ ಅರಣ್ಯ ಸಚಿವ ಶಶೀಂದ್ರನ್‌ ಅವರು ಪ್ರಸ್ತಾಪಿಸಿದ್ದಾರೆ. ಮೂರು ರಾಜ್ಯಗಳೂ ಒಟ್ಟಾಗಿ ಕೇಂದ್ರಕ್ಕೆ ಈ ಪ್ರಸ್ತಾವ ಸಲ್ಲಿಸಲಿವೆ’ ಎಂದು ಸಚಿವರು ಹೇಳಿದರು. 

ಸಹಕಾರ ನೀಡದ ಕೇಂದ್ರ: ಆರೋಪ

ಅರಣ್ಯ, ವನ್ಯಜೀವಿ ಸಂರಕ್ಷಣೆಯಲ್ಲಿ ರಾಜ್ಯ ಸರ್ಕಾರಗಳಂತೆ ಕೇಂದ್ರ ಸರ್ಕಾರಕ್ಕೂ ಜವಾಬ್ದಾರಿ ಇದೆ. ಒಕ್ಕೂಟ ವ್ಯವಸ್ಥೆಯಲ್ಲಿ ಕೇಂದ್ರ ಸರ್ಕಾರವೂ ರಾಜ್ಯಗಳಿಗೆ ಸಹಕಾರ ನೀಡಬೇಕು. ಕೇಂದ್ರದ ಪರಿಹಾರಾತ್ಮಕ ನಿಧಿಯಲ್ಲಿ (ಕಾಂಪಾ) ಸಾಕಷ್ಟು ಹಣ ಇದೆ. ಆದರೆ, ಕೇಂದ್ರ ಸರ್ಕಾರ ಕೊಡುತ್ತಿಲ್ಲ’ ಎಂದು ಸಚಿವ ಈಶ್ವರ ಖಂಡ್ರೆ ದೂರಿದರು. 

‘ಸಂಘರ್ಷ ತಡೆಗೆ ರೈಲ್ವೆ ಕಂಬಿ ಬೇಲಿ ನಿರ್ಮಣಕ್ಕೆ ಕಾಂಪಾ ಅಡಿ ₹50 ಕೋಟಿ ನೀಡುವಂತೆ ಪ್ರಸ್ತಾವ ಸಲ್ಲಿಸಿದ್ದೆವು. ಅದನ್ನು ಕೇಂದ್ರ ತಿರಸ್ಕರಿಸಿದೆ. ಹಳೆಯ ರೈಲ್ವೆ ಕಂಬಿಗಳನ್ನು ಶೇ 50ರ ಕಡಿಮೆ ಬೆಲೆಗೆ ನೀಡುವಂತೆ ಮನವಿ ಮಾಡಿದ್ದೇವೆ. ಅದಕ್ಕೂ ಸ್ಪಂದಿಸಿಲ್ಲ’ ಎಂದರು.

ಪರಿಹಾರ ಸ್ವೀಕರಿಸದ ಕೇರಳದ ಕುಟುಂಬ

‘ರಾಜ್ಯದಲ್ಲಿ ಸೆರೆ ಹಿಡಿದು ರೇಡಿಯೊ ಕಾಲರ್ ಅಳವಡಿಸಿ ಬಂಡೀಪುರ ಅರಣ್ಯಕ್ಕೆ ಬಿಟ್ಟಿದ್ದ ಮಖ್ನಾ ಆನೆ ಕೇರಳದ ವಯನಾಡು ಜಿಲ್ಲೆಯಲ್ಲಿ ನಡೆಸಿದ ದಾಳಿಯಲ್ಲಿ ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ರಾಜ್ಯ ಸರ್ಕಾರ ಘೋಷಿಸಿದ್ದ ₹15 ಲಕ್ಷ ಪರಿಹಾರವನ್ನು ಕುಟುಂಬ ತಿರಸ್ಕರಿಸಿದೆ’ ಎಂದು ಸಚಿವ ಈಶ್ವರ ಖಂಡ್ರೆ ಹೇಳಿದರು. 

ಮಾಧ್ಯಮಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ‘ಮಾನವೀಯ ಆಧಾರದಲ್ಲಿ ನಾವು ಪರಿಹಾರ ನೀಡಲು ನಿರ್ಧರಿಸಿದ್ದೆವು. ಆದರೆ, ಬಿಜೆಪಿ ಅದನ್ನು ರಾಜಕೀಯಕರಣಗೊಳಿಸಿತು. ಈ ಕಾರಣಕ್ಕೆ ಕುಟುಂಬವು ಪರಿಹಾರ ಬೇಡ ಎಂದಿದ್ದು, ನಾವು ನೀಡಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT