ಮಂಗಳವಾರ, 18 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಗೃಹಲಕ್ಷ್ಮಿ ಯೋಜನೆ, ₹47.47 ಕೋಟಿ ಬಿಡುಗಡೆ

2,37,374 ಫಲಾನುಭವಿಗಳಿಗೆ ಪಾವತಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕ್ರಮ
Published 1 ಸೆಪ್ಟೆಂಬರ್ 2023, 4:41 IST
Last Updated 1 ಸೆಪ್ಟೆಂಬರ್ 2023, 4:41 IST
ಅಕ್ಷರ ಗಾತ್ರ

ಚಾಮರಾಜನಗರ: ಕಾಂಗ್ರೆಸ್‌ ಸರ್ಕಾರ ಮಹತ್ವಾಕಾಂಕ್ಷಿ ಗ್ಯಾರಂಟಿ ಯೋಜನೆ ಗೃಹಲಕ್ಷ್ಮಿಯ ಫಲಾನುಭವಿಗಳ ಖಾತೆಗೆ ಜಮೆ ಮಾಡುವುದಕ್ಕಾಗಿ ಸರ್ಕಾರ ಜಿಲ್ಲೆಗೆ ₹47.47 ಕೋಟಿ ಅನುದಾನ ನೀಡಿದೆ.

ಜಿಲ್ಲೆಯಲ್ಲಿ ಇಲ್ಲಿಯವರೆಗೆ 2.47 ಲಕ್ಷ ಫಲಾನುಭವಿಗಳು ನೋಂದಣಿ ಮಾಡಿಕೊಂಡಿದ್ದಾರೆ. ನಾಲ್ಕೈದು ದಿನಗಳ ಹಿಂದಿನ ನೋಂದಣಿ ಸಂಖ್ಯೆಯನ್ನು ಪರಿಗಣಿಸಿ, 2,37,374 ಮಹಿಳೆಯರಿಗೆ ತಲಾ ₹2000ದಂತೆ ಪಾವತಿ ಮಾಡಲು ₹47,47,48,000 ಮೊತ್ತವನ್ನು ಜಿಲ್ಲೆಯ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ಬಿಡುಗಡೆ ಮಾಡಿದೆ.

ಇಲಾಖೆಯ ಅಧಿಕಾರಿಗಳು ಪಾವತಿಗೆ ಸಂಬಂಧಿಸಿದ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿ ಖಜಾನೆ ಇಲಾಖೆಗೆ ಕಳುಹಿಸಿದ್ದಾರೆ. ಅಲ್ಲಿಂದಲೂ ಹಣ ಪಾವತಿ ಆರಂಭವಾಗಿದ್ದು, ಕೆಲವರಿಗೆ ಈಗಾಗಲೇ ಜಮೆ ಆಗಿದೆ. ಪಾವತಿ ಪ್ರಕ್ರಿಯೆ ಪೂರ್ಣಗೊಳ್ಳಲು ಒಂದೆರಡು ದಿನ ಆಗಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

‘ಹಣ ಖಾತೆಗೆ ಜಮೆ ಆದ ಬಳಿಕ ಫಲಾನುಭವಿಗಳ ಮೊಬೈಲ್‌ ಸಂಖ್ಯೆಗೆ ಸಂದೇಶ ಬರುತ್ತದೆ. ಈಗಾಗಲೇ ಕೆಲವರಿಗೆ ಬಂದಿದೆ. ಎಷ್ಟು ಜನರಿಗೆ ಪಾವತಿಯಾಗಿದೆ ಎಂಬ ಮಾಹಿತಿ ಸಿಗಲು ಇನ್ನೂ ಎರಡು ಮೂರು ದಿನಗಳು ಬೇಕು’ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಗೀತಾಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು.

ಕಾಂಗ್ರೆಸ್‌ ಸರ್ಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ನಾಲ್ಕನೇ ಯೋಜನೆ ಗೃಹಲಕ್ಷ್ಮಿಗೆ ಮೈಸೂರಿನಲ್ಲಿ ಬುಧವಾರ ಚಾಲನೆ ಸಿಕ್ಕಿತ್ತು.

ಜಿಲ್ಲೆಯಲ್ಲಿ ಪಡಿತರ ಚೀಟಿಯಲ್ಲಿ ಮನೆಯ ಯಜಮಾನಿ ಎಂದು ನಮೂದಾಗಿರುವ 2.77 ಲಕ್ಷ ಮಹಿಳೆಯರಿದ್ದ, ಇಲ್ಲಿವರೆಗೆ 2.47 ಲಕ್ಷ ಮಂದಿ ನೋಂದಣಿ ಮಾಡಿಕೊಂಡಿದ್ದಾರೆ.  ಮಹಿಳೆಯರು ನೋಂದಣಿ ಮಾಡಿಕೊಂಡಿದ್ದು, ಶೇ 88ರಷ್ಟು ಪ್ರಗತಿಯಾಗಿದೆ. ನೋಂದಣಿಯಲ್ಲಿ ಜಿಲ್ಲೆ ರಾಜ್ಯದಲ್ಲೇ ಎರಡನೇ ಸ್ಥಾನದಲ್ಲಿದೆ.

ನಿರಂತರ ಪ್ರಕ್ರಿಯೆ: ಈ ತಿಂಗಳಲ್ಲಿ ಸರ್ಕಾರ ಜಿಲ್ಲೆಯ 2,37,374 ಫಲಾನುಭವಿಗಳನ್ನು ಗುರುತಿಸಿ, ಅವರಿಗೆ ಪಾವತಿಸಲು ಅನುದಾನ ಬಿಡುಗಡೆ ಮಾಡಿದೆ. ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಪರಿಶಿಷ್ಟ ಪಂಗಡ ಉಪಯೋಜನೆ ಅನುದಾನ ಮತ್ತು ಇತರ ಅನುದಾನದಿಂದ ಈ ಮೊತ್ತವನ್ನು ಭರಿಸಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ನೋಂದಣಿಗೆ ಗಡುವು ನೀಡದೇ ಇರುವುದರಿಂದ ಫಲಾನುಭವಿಗಳ ಸಂಖ್ಯೆ ಮುಂದೆ ಹೆಚ್ಚುತ್ತ ಹೋಗಲಿದೆ. ನೋಂದಾಯಿತ ಸಂಖ್ಯೆಗೆ ಅನುಗುಣವಾಗಿ ಸರ್ಕಾರ ಅನುದಾನ ಬಿಡುಗಡೆ ಮಾಡಲಿದೆ. ಹಾಗಾಗಿ, ಮುಂದಿನ ತಿಂಗಳು ಫಲಾನುಭವಿಗಳು ಮತ್ತು ಅನುದಾನದ ಮೊತ್ತವೂ ಹೆಚ್ಚಲಿದೆ’ ಎಂದು ಗೀತಾಲಕ್ಷ್ಮಿ ಹೇಳಿದರು.

‘ತಾಂತ್ರಿಕ ಸಮಸ್ಯೆ ಇದ್ದರೆ ಜಮೆಯಾಗದು’

₹2000 ಮೊತ್ತ ಮಹಿಳೆಯರ ಖಾತೆಗೆ ನೇರವಾಗಿ ಜಮೆ ಆಗುವುದರಿಂದ ಅವರ ಬ್ಯಾಂಕ್‌ ಖಾತೆಗಳು ಸಕ್ರಿಯವಾಗಿರಬೇಕು. ಮೊಬೈಲ್‌ ಸಂಖ್ಯೆ ಆಧಾರ್‌ ಸಂಖ್ಯೆಯನ್ನು ಜೋಡಿಸುವುದು ಕಡ್ಡಾಯ. ಒಂದು ವೇಳೆ ಇದೆಲ್ಲವೂ ಸಮರ್ಪಕವಾಗಿಲ್ಲದಿದ್ದರೆ ಹಣ ಜಮೆಯಾಗುವುದಿಲ್ಲ. ಅನ್ನಭಾಗ್ಯ ಯೋಜನೆಯ ಅಡಿಯಲ್ಲಿ ಹೆಚ್ಚುವರಿ 5 ಕೆಜಿ ಅಕ್ಕಿಯ ಮೊತ್ತವನ್ನು ನೇರವಾಗಿ ಫಲಾನುಭವಿಗಳ ಖಾತೆಗೆ ಜಮೆ ಮಾಡಲಾಗುತ್ತಿದ್ದು ಬ್ಯಾಂಕ್‌ ಖಾತೆ ಜೋಡಣೆ ಸಮಸ್ಯೆಯಿಂದಾಗಿ 25 ಸಾವಿರದಷ್ಟು ಜನರಿಗೆ ಹಣ ಬಂದಿಲ್ಲ. ‘ಕೆಲವರು ಹಣ ಬಂದಿಲ್ಲ ಎಂದು ಹೇಳುತ್ತಿದ್ದಾರೆ. ತಾಂತ್ರಿಕ ಕಾರಣಗಳಿಂದ ಹಾಗಾಗಿರುವ ಸಾಧ್ಯತೆ ಇದೆ. ಇದು ಖಚಿತವಾಗಲು ಎರಡು ಮೂರು ದಿನಗಳ ಬೇಕು. ಎಲ್ಲ ಫಲಾನುಭವಿಗಳು ತಮ್ಮ ಬ್ಯಾಂಕ್‌ ಖಾತೆಯನ್ನು ಸಕ್ರಿಯವಾಗಿಟ್ಟುಕೊಳ್ಳಬೇಕು. ಆಧಾರ್‌ ಸಂಖ್ಯೆ ಮೊಬೈಲ್‌ ಸಂಖ್ಯೆಯನ್ನು ಜೋಡಿಸಿರಬೇಕು’ ಎಂದು ಉಪನಿರ್ದೇಶಕಿ ಗೀತಾಲಕ್ಷ್ಮಿ ‘ಪ್ರಜಾವಾಣಿ’ಗೆ ತಿಳಿಸಿದರು. 

ಸರ್ಕಾರ ನೋಂದಣಿಗೆ ಗಡುವು ವಿಧಿಸಿಲ್ಲ. ಫಲಾನುಭವಿಗಳನ್ನು ಮುಂದೆಯೋ ಗೃಹಲಕ್ಷ್ಮಿಗೆ ನೋಂದಣಿ ಮಾಡಬಹುದು
–ಗೀತಾಲಕ್ಷ್ಮಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪನಿರ್ದೇಶಕಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT