ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಾಮರಾಜನಗರ: ಚಿಣ್ಣರನ್ನು ಸ್ಪರ್ಧಾತ್ಮಕ ಪರೀಕ್ಷೆಗೆ ತಯಾರಿ ಮಾಡುವ ಮೇಷ್ಟ್ರು

ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ಕೊಳ್ಳೇಗಾಲದ ಗೋಪಾಲಸ್ವಾಮಿ ಆಯ್ಕೆ
Last Updated 5 ಸೆಪ್ಟೆಂಬರ್ 2021, 6:00 IST
ಅಕ್ಷರ ಗಾತ್ರ

ಕೊಳ್ಳೇಗಾಲ: 2021–22ನೇ ಸಾಲಿನ ರಾಜ್ಯಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿಗೆ ತಾಲ್ಲೂಕಿನ ಇಕ್ಕಡಹಳ್ಳಿ ಗ್ರಾಮದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಗಣಿತ ಶಿಕ್ಷಕ ಡಿ.ಗೋಪಾಲಸ್ವಾಮಿ ಅವರು ಭಾಜನರಾಗಿದ್ದಾರೆ.

ಮಕ್ಕಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತಯಾರು ಮಾಡುವುದು, ಪ್ರಾಯೋಗಿಕ ತರಗತಿಗಳ ಮೂಲಕ ಮಕ್ಕಳ ಕಲಿಕಾ ಸಾಮರ್ಥ್ಯವನ್ನು ಹೆಚ್ಚಿಸಲು ಶಿಕ್ಷಣ ಕ್ಷೇತ್ರದಲ್ಲಿ ಗೋಪಾಲಸ್ವಾಮಿ ಅವರು ಹಾಕಿರುವ ಶ್ರಮಕ್ಕೆ ಈ ಪ್ರಶಸ್ತಿ ಅವರನ್ನು ಅರಸಿಕೊಂಡು ಬಂದಿದೆ.

ಶಿಕ್ಷಕರ ದಿನಾಚರಣೆ ಅಂಗವಾಗಿ ವಿಧಾನಸೌಧದಲ್ಲಿ ಭಾನುವಾರ (ಸೆ.5) ನಡೆಯುವ ಸಮಾರಂಭದಲ್ಲಿ ಅವರು ಪ್ರಶಸ್ತಿ ಸ್ವೀಕರಿಸಲಿದ್ದಾರೆ.

ಗೋಪಾಲಸ್ವಾಮಿ ಅವರು ತಾಲ್ಲೂಕಿನ ಮಧುವನಹಳ್ಳಿ ಗ್ರಾಮದವರು. 2005ರ ಜುಲೈ 1ರಂದು ಶಿಕ್ಷಕ ವೃತ್ತಿ ಆರಂಭಿಸಿದ ಅವರು 16 ವರ್ಷಗಳಿಂದಲೂ ಗಣಿತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಹುಪಾಲು ಮಕ್ಕಳಿಗೆ ಕಬ್ಬಿಣದ ಕಡಲೆಯಾಗಿರುವ ಗಣಿತವನ್ನು ಸುಲಭವಾಗಿ ಸುಲಿಯಬಹುದಾದ ಬಾಳೆಹಣ್ಣಿನ ರೀತಿಯಲ್ಲಿ ಅರ್ಥಮಾಡಿಸುವ ಇವರ ಸಾಮರ್ಥ್ಯದಿಂದಾಗಿ, ಮಕ್ಕಳ ಅಚ್ಚುಮೆಚ್ಚಿನ ಶಿಕ್ಷಕರಾಗಿ ಗುರುತಿಸಿಕೊಂಡಿದ್ದಾರೆ.

ಆಧುನಿಕ ತಂತ್ರಜ್ಞಾನದಲ್ಲಿ ಪಾಠ: ತಮ್ಮ ಪಾಠದಲ್ಲಿ ಆಧುನಿಕ ತಂತ್ರಜ್ಞಾನವನ್ನು ಬಳಸುವ ಗೋಪಾಲಸ್ವಾಮಿ ಅವರು ಸ್ಮಾರ್ಟ್‌ ಬೋರ್ಡ್‌ ಮೂಲಕ ಮಕ್ಕಳಿಗೆ ಗಣಿತವನ್ನು ಬೋಧನೆ ಮಾಡುತ್ತಿದ್ದಾರೆ. ಗೋಪಾಲಸ್ವಾಮಿ ಮೇಷ್ಟ್ರ‍ಪಾಠ ಎಂದರೆ ಮಕ್ಕಳಿಗೂ ಅಚ್ಚುಮೆಚ್ಚು ಎಂದು ಹೇಳುತ್ತಾರೆ ಶಾಲೆಯ ಇತರ ಶಿಕ್ಷಕರು.

ಶಾಲಾ ಮಕ್ಕಳನ್ನು ಸಣ್ಣ ವಯಸ್ಸಿನಲ್ಲೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ತಯಾರು ಮಾಡಬೇಕು ಎಂಬ ಅವರ ಅಭಿಲಾಷೆ ಹಲವು ಪುಸ್ತಕಗಳನ್ನು ರಚಿಸುವಂತೆ ಪ್ರೇರೇಪಿಸಿತು.ನವೋದಯ ಪುಸ್ತಕ, ಆದರ್ಶ, ಮುರಾಜಿ ದೇಸಾಯಿ ಪ್ರವೇಶ ಪುಸ್ತಕ ಮತ್ತು ಎನ್‌ಎಂಎಂಎಸ್ ಪುಸ್ತಕಗಳನ್ನು ಅವರು ರಚಿಸಿದ್ದಾರೆ. ಕೇಂದ್ರ ಸರ್ಕಾರದ ಯೋಜನೆಯಡಿ 8ನೇ ತರಗತಿ ಮಕ್ಕಳಿಗೆ ಎನ್ಎಂ‌ಎಂಎಸ್ ಪರೀಕ್ಷೆ ನೀಡಲಾಗುತ್ತದೆ. ಈ ಪರೀಕ್ಷೆಯಲ್ಲಿ ಮಕ್ಕಳು ತೇರ್ಗಡೆಯಾದರೆ ಮಕ್ಕಳಿಗೆ ನಾಲ್ಕು ವರ್ಷಗಳ ಕಾಲ ಪ್ರತಿ ತಿಂಗಳು ₹1,000 ವಿದ್ಯಾರ್ಥಿ ವೇತನ ಬರುತ್ತದೆ.

‘ಗೋಪಾಲಸ್ವಾಮಿ ಅವರ ಈ ಪುಸ್ತಕ ರಚನೆ ಪ್ರಯತ್ನಕ್ಕೆ ಉತ್ತಮ ಶಿಕ್ಷಕ ಪ್ರಶಸ್ತಿ ಲಭಿಸಿದೆ. ನಮ್ಮ ತಾಲ್ಲೂಕಿನಲ್ಲಿ ಪ್ರತಿ ವರ್ಷ 25ಕ್ಕೂ ಹೆಚ್ಚು ಮಕ್ಕಳು ಎನ್‌ಎಂಎಂಎಸ್ ಪರೀಕ್ಷೆಯಲ್ಲಿ ಉತೀರ್ಣರಾಗುತ್ತಾರೆ’ ಎಂದು ಶಿಕ್ಷಕ ಲೋಕೇಶ್ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

’ಅಪ್ಪನ ಆಸೆಯಂತೆ ಶಿಕ್ಷಕನಾದೆ’
ರಾಜ್ಯ ಮಟ್ಟದ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ‘ಪ್ರಜಾವಾಣಿ’ಯೊಂದಿಗೆ ಸಂತಸ ಹಂಚಿಕೊಂಡ ಗೋಪಾಲಸ್ವಾಮಿ ಅವರು, ತಂದೆಯ ಆಸೆಯಂತೆ ಶಿಕ್ಷಕನಾದೆ ಎಂದರು.

ನಾವು ಸಣ್ಣ ಗ್ರಾಮದವರು. ಅಪ್ಪ ಸರ್ಕಾರಿ ಶಾಲೆಯಲ್ಲಿ ‘ಡಿ’ ಗ್ರೂಪ್‌ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದರು. ನಾನು ಶಿಕ್ಷಕನಾಗಬೇಕು ಎಂಬುದು ಮಹದಾಸೆಯಾಗಿತ್ತು. ಅವರ ಆಸೆಯಂತೆ ನಾನು ಇಂದು ಶಿಕ್ಷಕನಾಗಿ ಸೇವೆ ಮಾಡುತ್ತಿದ್ದೇನೆ. ಅನೇಕ ಬಡಮಕ್ಕಳಿಗೆ ವಿದ್ಯಾಭ್ಯಾಸ ಮಾಡಿಸುತ್ತಿದ್ದೇನೆ. ಅದಕ್ಕೆ ಸ್ಫೂರ್ತಿಯೂ ನನ್ನ ತಂದೆಯವರೇ. ನನ್ನ ಈ ಸಾಧನೆಗೆ ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರ ಪಾಟೀಲ್ ಅವರ ಸಹಕಾರವೂ ಇದೆ ಎಂದು‌ಗೋಪಾಲಸ್ವಾಮಿ ಅವರು ತಿಳಿಸಿದರು.

***
ನಾನು ‘ಪ್ರಜಾವಾಣಿ’ಯನ್ನೇ ಓದಿಕೊಂಡು ಬೆಳೆದವನು. ಅದರ ಕಾರಣದಿಂದಲೇ ಸರ್ಕಾರಿ ಉದ್ಯೋಗಿಯಾಗಿದ್ದೇನೆ. ಪುಸ್ತಕ ರಚನೆಗೆ ಪತ್ರಿಕೆಯ ಕೊಡುಗೆಯೂ ಇದೆ.
-ಡಿ.ಗೋಪಾಲಸ್ವಾಮಿ, ಗಣಿತ ಶಿಕ್ಷಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT