ಭಾನುವಾರ, ನವೆಂಬರ್ 27, 2022
26 °C
ಕೊಳ್ಳೇಗಾಲ: ಕೆಟ್ಟ ಉದ್ದೇಶದಿಂದ ಈ ರೀತಿ ಮಾಡಿಲ್ಲ, ಮುಂದೆ ಎಚ್ಚರವಹಿಸುತ್ತೇನೆ–ಕ್ಷಮೆ ಕೇಳಿದ ಅರ್ಚಕ

ಕೊಳ್ಳೇಗಾಲ | ಆಂಜನೇಯಸ್ವಾಮಿ ವಿಗ್ರಹದ ಬಳಿ ಏಸು ಫೊಟೊ: ವೈರಲ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಕೊಳ್ಳೇಗಾಲ: ನಗರದ ಜ್ಯೋತಿಷಿ ಹಾಗೂ ಧಾರ್ಮಿಕ ಮುಖಂಡ ಟಿ.ವಿ.ಎಸ್‌ ರಾಘವನ್‌ ಅವರು ತಮ್ಮ ಮನೆಯಲ್ಲಿರುವ ವೀರಾಂಜನೇಯಸ್ವಾಮಿ ದೇವಸ್ಥಾನದ ಗರ್ಭಗುಡಿಯಲ್ಲಿ ಆಂಜನೇಯಸ್ವಾಮಿಯ ವಿಗ್ರಹದ ಬಳಿ ಯೇಸು ಹಾಗೂ ಮರಿಯಳ ಚಿತ್ರವಿರುವ ಫೋಟೊವನ್ನು ಇಟ್ಟು ಪೂಜೆ ಮಾಡಿರುವ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಹಿಂದೂಗಳ ದೇವಸ್ಥಾನದಲ್ಲಿ ಕ್ರಿಶ್ಚಿಯನ್‌ ದೇವರ ಚಿತ್ರ ಇಟ್ಟಿರುವುದಕ್ಕೆ ಕೆಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. 

ಚಿತ್ರ ವೈರಲ್‌ ಆಗುತ್ತಿದ್ದಂತೆಯೇ ವಿಡಿಯೊ ಸಂದೇಶದಲ್ಲಿ ರಾಘವನ್‌ ಅವರು ನಡೆದಿರುವ ಘಟನೆಗೆ ಕ್ಷಮಾಪಣೆ ಕೇಳಿದ್ದು, ‘ದುರುದ್ದೇಶದಿಂದ ಈ ರೀತಿ ಮಾಡಿಲ್ಲ. ಮುಂದೆ ಈ ರೀತಿ ಆಗದಂತೆ ಎಚ್ಚರಿಸಿಕೆ ವಹಿಸುತ್ತೇನೆ’ ಎಂದು ಹೇಳಿದ್ದಾರೆ. ‘ಪ್ರಜಾವಾಣಿ’ಯು ದೂರವಾಣಿ ಮೂಲಕ ಅವರನ್ನು ಸಂಪರ್ಕಿಸಲು ಯತ್ನಿಸಿದರೂ ಸಾಧ್ಯವಾಗಲಿಲ್ಲ. 

ಅಯೋಧ್ಯೆಯ ರಾಮಮಂದಿರಕ್ಕೆ ಶಿಲಾನ್ಯಾಸ ನಡೆದ ದಿನ (ಆಗಸ್ಟ್‌ 5) ಈ ಪ್ರಕರಣ ನಡೆದಿದೆ. 

ಭೂಮಿ ಪೂಜೆ ಕಾರ್ಯಕ್ರಮದ ಅಂಗವಾಗಿ ವೀರಾಂಜನೇಯಸ್ವಾಮಿ ದೇವಾಲಯದಲ್ಲೂ ವಿಶೇಷ ಪೂಜೆ ಹಾಗೂ ಹೋಮ ಹವನ ಕಾರ್ಯಕ್ರಮಗಳನ್ನು ಏರ್ಪಡಿಸಲಾಗಿತ್ತು. ಬಜರಂಗದಳ, ವಿಶ್ವ ಹಿಂದೂ ಪರಿಷತ್, ಆರ್‌ಎಸ್‌ಎಸ್‌ ಮುಖಂಡರು ಕೂಡ ಇದರಲ್ಲಿ ಭಾಗವಹಿಸಿದ್ದರು. 

ಜಿಲ್ಲೆಯಾದ್ಯಂತ ಅಂದು ನಿಷೇಧಾಜ್ಞೆ ಜಾರಿಯಲ್ಲಿ ಇದ್ದುದರಿಂದ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ (ಎಸ್‌ಪಿ) ದಿವ್ಯಾ ಸಾರಾ ಥಾಮಸ್‌ ಅವರು, ಕೊಳ್ಳೇಗಾಲಕ್ಕೆ ಪರಿಶೀಲನೆಗಾಗಿ ತೆರಳಿದ್ದರು. ವೀರಾಂಜನೇಯಸ್ವಾಮಿ ದೇವಾಲಯದ ಆಸುಪಾಸಿನಲ್ಲೂ ಸುತ್ತಾಡಿದ್ದರು.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಬಂದಿದ್ದನ್ನು ಕಂಡು ಪ್ರಧಾನ ಅರ್ಚಕ ಹಾಗೂ ಜ್ಯೋತಿಷಿ ರಾಘವನ್ ಅವರು, ದೇವಾಲಯಕ್ಕೆ ಬರುವಂತೆ ದಿವ್ಯಾ ಸಾರಾ ಥಾಮಸ್‌ ಅವರನ್ನು ಆಹ್ವಾನಿಸಿದರು. ಎಸ್‌ಪಿ ಅವರು ಕ್ರಿಶ್ಚಿಯನ್‌ ಆಗಿರುವುದರಿಂದ, ಯೇಸು ಹಾಗೂ ಮರಿಯ ಅವರ ಚಿತ್ರಗಳನ್ನು ಹೊಂದಿರುವ ಫೋಟೊವನ್ನು ವೀರಾಂಜನೇಯ ಸ್ವಾಮಿಯ ಮುಂದೆ ಇಟ್ಟು, ಪೂಜೆ ಮಾಡಿ ನಂತರ ಎಸ್‌ಪಿಯವರಿಗೆ ದೇವಸ್ಥಾನದ ವತಿಯಿಂದ ಸನ್ಮಾನ ಮಾಡಿದ್ದರು. ಈ ಸಂದರ್ಭದಲ್ಲಿ ರಾಘವನ್‌ ಅವರು ಆ ಫೋಟೊವನ್ನು ದಿವ್ಯಾ ಅವರಿಗೆ ಉಡುಗೊರೆಯಾಗಿ ನೀಡಿದ್ದರು.

ಮೂರ್ನಾಲ್ಕು ದಿನಗಳ ನಂತರ, ಆಂಜನೇಯ ಸ್ವಾಮಿ ವಿಗ್ರಹದ ಬಳಿ ಇಟ್ಟಿರುವ ಏಸು, ಮರಿಯಳ ಚಿತ್ರ ಇರುವ ಭಾವಚಿತ್ರದ ಫೋಟೊ ವೈರಲ್‌ ಆಗಿದೆ. ಇದರಿಂದ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆಯಾಗಿದೆ ಎಂಬ ಸಂದೇಶ ಹರಿದಾಡಲು ಆರಂಭಿಸಿದೆ. 

‘ಯಾರೇ ಬಂದರೂ, ಏನೇ ತಂದರೂ, ಅದನ್ನು ದೇವರ ಮುಂದೆ ಇಟ್ಟು ಪೂಜೆ ಮಾಡಿ ಕೊಡುವುದು ನಮ್ಮ ಸಂಪ್ರದಾಯ. ಒಳ್ಳೆಯದಾಗಲಿ ಎಂಬ ಭಾವನೆ. ಕೆಟ್ಟ ಉದ್ದೇಶದಿಂದ ಅನ್ಯ ಮತದ ಫೋಟೊ ಇಟ್ಟಿಲ್ಲ. ಹಿಂದೂ ಸಮಾಜದವರಿಗೆ ಇದರಿಂದ ಬೇಸರ ಆಗಿದ್ದರೆ ಕ್ಷಮೆ ಕೋರುತ್ತೇನೆ. ಹಿಂದೂಗಳಿಗಾಗಿ ಇರುತ್ತೇವೆ. ಹಿಂದೂಗಳಾಗಿಯೇ ಬಾಳುತ್ತೇವೆ. ಹಿಂದೂಗಳಾಗಿಯೇ ಕೊನೆಯಾಗುತ್ತೇವೆ’ ಎಂದು ರಾಘವನ್‌ ಅವರು ವಿಡಿಯೊದಲ್ಲಿ ಹೇಳಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು