ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೊಳ್ಳೇಗಾಲ: ಆರೋಗ್ಯ ಕಾಳಜಿ ತೋರದ ಪೌರಕಾರ್ಮಿಕರು

Published 1 ಏಪ್ರಿಲ್ 2024, 5:53 IST
Last Updated 1 ಏಪ್ರಿಲ್ 2024, 5:53 IST
ಅಕ್ಷರ ಗಾತ್ರ

ಕೊಳ್ಳೇಗಾಲ: ನಗರಸಭಾ ವ್ಯಾಪ್ತಿ ಸ್ವಚ್ಛತಾ ಜವಾಬ್ದಾರಿ ಹೊತ್ತ ಪೌರಕಾರ್ಮಿಕರಲ್ಲಿ ಬಹುತೇಕ ಮಂದಿ, ನಗರಸಭೆ ನೀಡಿದ ಕೈಗವಸು, ಮಾಸ್ಕ್‌ ಸೇರಿ ಆರೋಗ್ಯ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ವಿತರಿಸಿದ ವಸ್ತುಗಳನ್ನು ಬಳಸಲು ಆಸಕ್ತಿ ತೋರುತ್ತಿಲ್ಲ. 

 ರಕ್ಷಣಾ ಸಲಕರಣೆ ಇದ್ದರೂ ಅವುಗಳನ್ನು ಬಳಸದ ಕಾರ್ಮಿಕರು ಬರಿ ಕೈಯಲ್ಲಿ, ಬರಿ ಕಾಲಿನಲ್ಲಿ ಕಸ ತೆಗೆವ ಕೆಲಸ ಮಾಡುತ್ತಿದ್ದಾರೆ. ಧೂಳು ಏಳುತ್ತಿದ್ದರೂ ಮಾಸ್ಕ್‌ ಹಾಕಿಕೊಳ್ಳಲು ಮನಸ್ಸು ಮಾಡುವುದಿಲ್ಲ. ಇದು ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಪ್ರತಿ ದಿನ ಸ್ವಚ್ಛತೆಯಲ್ಲಿ ತೊಡಗಿರುವ ಕಾರ್ಮಿಕರಿಗೆ ಉಪಕರಣಗಳನ್ನು ಕಡ್ಡಾಯವಾಗಿ ಬಳಸುವಂತೆ ಹೇಳುವ ವರೂ ಇಲ್ಲದಂತಾಗಿದೆ. 

ಎಂತಹದ್ದೇ ಕಸ ಇರಲಿ, ಇವರು ಎತ್ತುವುದು ಬರಿಗೈಯಲ್ಲೇ. ಲಾರಿಗಳಿಗೆ ಕಸ ಹಾಕುವುದಕ್ಕೆ, ಚರಂಡಿ ಕಟ್ಟಿಕೊಂಡರೆ ತೆರವುಗೊಳಿಸಲು ಸಲಕರಣೆ ಬಳಸುವುದಿಲ್ಲ; ಬದಲಿಗೆ ಕೈ ಬಳಸುತ್ತಾರೆ. ಕೊಳೆತ ಕಸ ವಾಸನೆ ಬೀರುತ್ತಿದ್ದರೂ ಮುಖ ಗವಸು ಬಳಸುವುದಿಲ್ಲ. ಕೈಗವಸು, ಮುಖಗವಸು, ಗಮ್‌ ಶೂ ಮತ್ತಿತರ ಸಲಕರಣೆಗಳನ್ನು ಇಲ್ಲಿನ ಪೌರಕಾರ್ಮಿಕರಿಗೆ ನೀಡಿದ್ದರೂ ಬಳಸುತ್ತಿಲ್ಲ. ಇವುಗಳನ್ನು ಹಾಕಿ ಕೊಂಡೇ ಸ್ವಚ್ಛತಾ ಕೆಲಸ ಮಾಡಬೇಕೆಂಬ ನಿಯಮವಿದೆ. ಆದರೆ, ಇವರು ಬಳಸುತ್ತಿಲ್ಲ.

ರೋಗಕ್ಕೆ ತುತ್ತು: ಬಹುತೇಕ ಪೌರ ಕಾರ್ಮಿಕರು ಕುಡಿತದ ಚಟಕ್ಕೆ ಹೆಚ್ಚಾಗಿ ಬಲಿಯಾಗುತ್ತಿದ್ದಾರೆ. ಪುರುಷರು ಕುಡಿತದ ಚಟಕ್ಕೆ ಬಲಿಯಾಗುತ್ತಿದ್ದು, ಅವರ ಕುಟುಂಬಗಳು ಬೀದಿಗೆ ಬೀಳುತ್ತಿವೆ. ಅನೈರ್ಮಲ್ಯದ ವಾತಾವರಣದಲ್ಲಿ ಕೆಲಸ ಮಾಡುತ್ತಿರುವುದರಿಂದ ದುಶ್ಚಟಗಳಿಗೆ ಬಲಿಯಾ ಗುತ್ತಿರುವುದರಿಂದ ಪೌರ ಕಾರ್ಮಿಕರು ಬಹಳ ಬೇಗ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಚರ್ಮ, ಕಣ್ಣು, ಉಸಿರಾಟದ ತೊಂದರೆಗಳು ಕಾಡುತ್ತಿವೆ.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ನಗರಸಭೆ ಆಯುಕ್ತ ಎ.ರಮೇಶ್‌ ಮಾತನಾಡಿ, ‘ಪೌರ ಕಾರ್ಮಿಕರಿಗೆ ಕೈಗವಸು, ಮಾಸ್ಕ್‌ ಸೇರಿ ಅನೇಕ ಸಲಕರಣೆಗಳನ್ನು ನೀಡಿದ್ದೇವೆ. ಆದರೆ, ಕೆಲವರು ಮಾತ್ರ ಉಪಕರಣಗಳನ್ನು ಹಾಕಿಕೊಂಡು ಕೆಲಸ ಮಾಡುತ್ತಾರೆ. ಹಾಗಾಗಿ, ಮುಂದಿನ ದಿನಗಳಲ್ಲಿ ಯಾರೂ ಕೈಗವಸು, ಮಾಸ್ಕ್ ಹಾಕದೆ ಕೆಲಸ ಮಾಡುತ್ತಾರೋ ಅಂತವರಿಗೆ ನೋಟಿಸ್ ನೀಡಲಾಗುವುದು’ ಎಂದರು.

ವಿಶ್ರಾಂತಿ ಕೊಠಡಿ ಬೇಕು

‘ಪ್ರತಿನಿತ್ಯ ಬೆಳಿಗ್ಗೆ 5.30ಕ್ಕೆ ಬಂದು ಕೆಲಸ ಆರಂಭಿಸಿದರೆ, 10 ಗಂಟೆಯವರೆಗೂ ಮಾಡಬೇಕು. ಸರ್ಕಾರ ನಮಗೆ ಯಾವ ಸವಲತ್ತುಗಳನ್ನೂ ನೀಡುತ್ತಿಲ್ಲ’ ಎಂದು ಹೇಳುತ್ತಾರೆ ಪೌರಕಾರ್ಮಿಕರು. 

ಪೌರಕಾರ್ಮಿಕರು ಕೆಲಸದ ಮಧ್ಯೆ ಬಿಡುವಿನ ಅವಧಿಯಲ್ಲಿ ವಿಶ್ರಾಂತಿ ಪಡೆಯಲು ನಗರದಲ್ಲಿ ಸೂಕ್ತ ಸ್ಥಳವಿಲ್ಲ.

‘ವಿಶ್ರಾಂತಿ ಕೊಠಡಿ ನಿರ್ಮಿಸಿ ಎಂದು ಮನವಿ ಮಾಡಿ ಹಲವು ವರ್ಷಗಳಾದರೂ, ಈ ಸೌಲಭ್ಯ ಕಲ್ಪಿಸಿಲ್ಲ. ಪೌರಕಾರ್ಮಿಕರಿಗೆ ಮನೆಗಳನ್ನೂ ನೀಡಿಲ್ಲ. ಅಧಿಕಾರಿಗಳು ನಮ್ಮನ್ನು ಸರಿಯಾಗಿ ನೋಡಿಕೊಳ್ಳುವುದಿಲ್ಲ. ಏನಾದರೂ ಕೇಳಿದರೆ ಉಡಾಫೆ ಉತ್ತರ ನೀಡುತ್ತಾರೆ. ನಮ್ಮನ್ನು ಕಸದಂತೆ ಕಾಣುತ್ತಾರೆ’ ಎಂದು ಹೆಸರು ಹೇಳಲು ಇಚ್ಛಿಸದ ಪೌರಕಾರ್ಮಿಕರೊಬ್ಬರು ಹೇಳಿದರು. 

ಕಾರ್ಮಿಕರ ಕೊರತೆ

ಕೊಳ್ಳೇಗಾಲ ನಗರಸಭೆ ವ್ಯಾಪ್ತಿಯಲ್ಲಿ 31 ವಾರ್ಡ್‌ಗಳಿವೆ. ಜನಸಂಖ್ಯೆ ದಿನವೇ ದಿನಕ್ಕೆ ಹೆಚ್ಚಾಗುತ್ತಿದೆ. ಅದಲ್ಲದೆ ಬಡಾವಣೆಗಳೂ ಹೆಚ್ಚಾಗುತ್ತಿವೆ. ನಗರದ ಸ್ವಚ್ಛತೆ ಕಾಪಾಡುವುದು ನಗರಸಭೆಗೆ ಸವಾಲಾಗಿದೆ. ಕಾರ್ಮಿಕರ ಕೊರತೆಯೂ ಕಾಡುತ್ತಿದೆ.   

ನಗರಸಭೆಯಲ್ಲಿ 91 ಮಂದಿ ಸ್ವಚ್ಛತಾ ಕಾರ್ಮಿಕರು ಇದ್ದಾರೆ. ಈ ಪೈಕಿ, 41 ಕಾಯಂ ಪೌರ ಕಾರ್ಮಿಕರು, 28 ಮಂದಿ ನೇರ ವೇತನ ಪೌರಕಾರ್ಮಿಕರು ಹಾಗೂ 22 ಮಂದಿ ಲೋಡರ್ಸ್‌, ಕ್ಲೀನರ್ಸ್‌ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT