ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾನೂನು ಕಾಲೇಜು ಆರಂಭಿಸಲು ಧ್ರುವ ಒತ್ತಾಯ

Last Updated 28 ಡಿಸೆಂಬರ್ 2020, 15:18 IST
ಅಕ್ಷರ ಗಾತ್ರ

ಚಾಮರಾಜನಗರ: ಜಿಲ್ಲೆಗೆ ಮಂಜೂರಾಗಿರುವ ಕಾನೂನು ಕಾಲೇಜನ್ನು ಮುಂದಿನ ಶೈಕ್ಷಣಿಕ ವರ್ಷದಿಂದ (2021–22) ಆರಂಭಿಸಲು ರಾಜ್ಯ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಕೆಪಿಸಿಸಿ ವಕ್ತಾರ ಆರ್.ಧ್ರುವನಾರಾಯಣ ಅವರು ಸೋಮವಾರ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದಾಗ 2017–18ರಲ್ಲಿ ಚಾಮರಾಜನಗರಕ್ಕೆ ಸರ್ಕಾರಿ ಕಾನೂನು ಕಾಲೇಜು ಮಂಜೂರಾಗಿತ್ತು. ಬಜೆಟ್‌ನಲ್ಲಿ ₹1 ಕೋಟಿ ಮೀಸಲಿಡಲಾಗಿತ್ತು. ಮೂರು ವರ್ಷ ಕಳೆದರೂ ಕಾಲೇಜು ಆರಂಭವಾಗಿಲ್ಲ. ಕಳೆದ ಶೈಕ್ಷಣಿಕ ವರ್ಷದಿಂದ ತರಗತಿಗಳನ್ನು ಆರಂಭಿಸಲು ಅವಕಾಶ ಇದ್ದಿದ್ದ‌ರೂ ಸಾಧ್ಯವಾಗಿಲ್ಲ’ ಎಂದರು.

‘ಬಾರ್ ಕೌನಿಲ್ಸ್ ಆಫ್ ಇಂಡಿಯಾವು 2019ರ ಆಗಸ್ಟ್‌ನಲ್ಲಿ ದೇಶದಲ್ಲಿ ಇನ್ನು ಮೂರು ವರ್ಷಗಳ ಕಾಲ ಯಾವುದೇ ಕಾನೂನು ಕಾಲೇಜುಗಳನ್ನು ಸ್ಥಾಪಿಸಬಾರದು ಎಂಬ ನಿರ್ಧಾರ ಕೈಗೊಂಡಿದ್ದು, ಇದಲ್ಲದೇ ಈ ವರ್ಷ ಕೋವಿಡ್‌ ಕಾರಣಕ್ಕೂ ಹಿನ್ನಡೆಯಾಗಿರಬಹುದು. 15 ದಿನಗಳ ಹಿಂದೆ ಪಂಜಾಬ್‌ –ಹರಿಯಾಣ ಹೈಕೋರ್ಟ್,‌ ಬಾರ್‌ ಕೌನ್ಸಿಲ್‌ ಆಫ್‌ ಇಂಡಿಯಾದ ನಿರ್ಧಾರವನ್ನು ವಜಾ ಮಾಡಿದೆ. ಹಾಗಾಗಿ, ರಾಜ್ಯ ಸರ್ಕಾರ ತಕ್ಷಣವೇ ಮುಂದಿನ ವರ್ಷದಿಂದ ಕಾನೂನು ಕಾಲೇಜು ಆರಂಭಿಸಲು ಕ್ರಮಕೈಗೊಳ್ಳಬೇಕು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಹಾಗೂ ಕಾನೂನು ಸಚಿವ ಮಾಧುಸ್ವಾಮಿ ಅವರು ಗಮನಹರಿಸಬೇಕು’ ಎಂದರು.

‘ರಾಜ್ಯದಲ್ಲಿ ಹಾಸನ, ಹೊಳೆನರಸೀಪುರ, ರಾಮನಗರ, ಗುಲ್ಬರ್ಗ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಮಾತ್ರ ಸರ್ಕಾರಿ ಕಾನೂನು ಕಾಲೇಜು ಇದ್ದು, ಚಾಮರಾಜನಗರ ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಕಾನೂನು ಕಾಲೇಜು ಇರಲಿಲ್ಲ. ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಕಾನೂನು ಕಾಲೇಜು ಸಹಕಾರಿ ಆಗಲಿದೆ ಎಂಬ ಕಾರಣಕ್ಕೆ ನಾನು ಸಂಸದನಾಗಿದ್ದಾಗ ಮುಖ್ಯಮಂತ್ರಿ ಆಗಿದ್ದ ಸಿದ್ದರಾಮಯ್ಯ ಅವರು ಹಾಗೂ ಕಾನೂನು ಸಚಿವರಾಗಿದ್ದ ಜಿ.ಟಿ.ಜಯಚಂದ್ರ ಅವರ ಮೇಲೆ ತೀವ್ರ ಒತ್ತಡ ತಂದ ಪರಿಣಾಮ ಚಾಮರಾಜನಗರಕ್ಕೆ ಕಾನೂನು ಕಾಲೇಜು ಮಂಜೂರಾಗಿತ್ತು. ಕಾನೂನು ಶಿಕ್ಷಣಕ್ಕೆ ಈಗ ಬೇಡಿಕೆ ಇದ್ದು, ಕಾಲೇಜಿನಿಂದ ಜಿಲ್ಲೆಯ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ. ಜಿಲ್ಲೆಯ ಅಭಿವೃದ್ಧಿಗೂ ಸಹಕಾರಿಯಾಗಲಿದೆ’ ಎಂದರು.

ಕೃಷಿ ಕಾಲೇಜಿಗೆ ಅನುದಾನ ಕೊಡಿಸಲು ಆಗ್ರಹ: ‘ನಗರದಲ್ಲಿ ಮೂರು ವರ್ಷಗಳ ಹಿಂದೆ ಆರಂಭವಾಗಿರುವ ಕೃಷಿ ಕಾಲೇಜಿಗೆ ಶಾಶ್ವತ ಕಟ್ಟಡ ನಿರ್ಮಾಣಕ್ಕೆ ನಬಾರ್ಡ್‌ನಲ್ಲಿ ₹25 ಕೋಟಿ ಮೀಸಲಿಟ್ಟಿದ್ದು, ಅದು ಬಿಡುಗಡೆಯಾಗಲು ಸಚಿವ ಸಂಪುಟದ ಸಭೆ ಒಪ್ಪಿಗೆ ಅಗತ್ಯ. ಆರು ತಿಂಗಳ ಹಿಂದೆ ಟಿಪ್ಪಣಿ ಸಿದ್ಧವಾಗಿದ್ದು, ಶೀಘ್ರವಾಗಿ ಅದಕ್ಕೆ ಅನುಮತಿ ನೀಡಲು ಸರ್ಕಾರ ಕ್ರಮ ಕ್ರಮಕೊಳ್ಳಬೇಕು’ ಎಂದು ಧ್ರುವನಾರಾಯಣ ಅವರು ಹೇಳಿದರು.

‘ಕಾಲೇಜುಕಾಲೇಜು ಪ್ರಸ್ತುತ ಹರದನಹಳ್ಳಿಯ ಕೃಷಿ ವಿಜ್ಞಾನ ಕೇಂದ್ರದಲ್ಲಿ ತಾತ್ಕಾಲಿಕವಾಗಿ ನಡೆಯುತ್ತಿದೆ. ಯಡಬೆಟ್ಟದ ತಪ್ಪಲಿನಲ್ಲಿ ಕಾಲೇಜಿಗಾಗಿ 75 ಎಕರೆ ಜಾಗ ಗುರುತಿಸಲಾಗಿದೆ. ಇತ್ತೀಚೆಗೆ, ಬೆಂಗಳೂರಿನ ಕೃಷಿ ವಿಶ್ವವಿದ್ಯಾಲಯವು ಕಾಲೇಜಿಗಾಗಿ ₹5 ಕೋಟಿ ಬಿಡುಗಡೆ ಮಾಡಿದೆ. ಆರಂಭಿಕ ಕೆಲಸಗಳಿಗಾಗಿ ಟೆಂಡರ್‌ ಪ್ರಕ್ರಿಯೆ ನಡೆಯುತ್ತಿದೆ’ ಎಂದು ಅವರು ಹೇಳಿದರು.

ಜಿಲ್ಲಾ ಕಾಂಗ್ರೆಸ್ ಸಮಿತಿ ಉಪಾಧ್ಯಕ್ಷ ಬಿ.ಕೆ.ರವಿಕುಮಾರ್, ಪ್ರಧಾನ ಕಾರ್ಯದರ್ಶಿ ಚಿಕ್ಕಮಹದೇವು, ಯಳಂದೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ವಿ.ಚಂದ್ರು, ನಗರ ಬ್ಲಾಕ್ ಅಧ್ಯಕ್ಷ ಅಸ್ಗರ್‌ ಅಲಿ ಮುನ್ನಾ, ಕಾಂಗ್ರೆಸ್ ಕಾನೂನು ವಿಭಾಗದ ಜಿಲ್ಲಾಧ್ಯಕ್ಷ ಪೃಥ್ವಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT