ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಗವಾನ್‌ ಮುಖಕ್ಕೆ ಮಸಿ: ಚಾಮರಾಜನಗರದಲ್ಲಿ ಪ್ರತಿಭಟನೆ, ಸಂಭ್ರಮಾಚರಣೆ‌

Last Updated 5 ಫೆಬ್ರುವರಿ 2021, 13:40 IST
ಅಕ್ಷರ ಗಾತ್ರ

ಚಾಮರಾಜನಗರ: ಬೆಂಗಳೂರಿನ ನ್ಯಾಯಾಲಯದ ಆವರಣದಲ್ಲಿ ಲೇಖನ ಪ್ರೊ.ಕೆ.ಎಸ್‌.ಭಗವಾನ್‌ ಅವರ ಮುಖಕ್ಕೆ ವಕೀಲೆ ಮೀರಾ ರಾಘವೇಂದ್ರ ಅವರು ಮಸಿ ಬಳಿದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಶುಕ್ರವಾರ ಪ್ರತಿಭಟನೆ ಹಾಗೂ ಸಂಭ್ರಮಾಚರಣೆ ನಡೆದಿದೆ.

ಜನ ಹಿತಾಸಕ್ತಿ ಸಮಿತಿ ಹಾಗೂ ದಲಿತ ಸಂಘರ್ಷ ಸಮಿತಿ, ಎಸ್‌ಡಿಪಿಐ ಮುಖಂಡರು ಮೀರಾ ಅವರ ಭಾವಚಿತ್ರವನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರೆ, ಶಿವಾಜಿ ನೇತಾಜಿ ಸೇನಾ ಸಮಿತಿಯ ಪದಾಧಿಕಾರಿಗಳು ಆಕೆಯ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿ, ಪಟಾಕಿ ಸಿಡಿಸಿ ಸಂಭ್ರಮಿಸಿದರು.

ಗಡಿಪಾರಿಗೆ ಆಗ್ರಹ:ನಗರದ ಭುವನೇಶ್ವರಿ ವೃತ್ತದಲ್ಲಿ ಶುಕ್ರವಾರ ಸೇರಿದ ಜನ ಹಿತಾಸಕ್ತಿ ಹೋರಾಟ ವೇದಿಕೆ, ದಲಿತ ಸಂಘರ್ಷ ಸಮಿತಿ (ಸಂಚಾಲಕ) ಹಾಗೂ ಎಸ್‌ಡಿಪಿಐ ಮುಖಂಡರು, ಮಸಿ ಬಳಿದ ಕೃತ್ಯವನ್ನು ಖಂಡಿಸಿ ಪ್ರತಿಭಟನೆ ನಡೆಸಿದರು. ಅಲ್ಲದೇ, ಅವರ ಭಾವಚಿತ್ರಕ್ಕೆ ಬೆಂಕಿ ಹಾಕಿ ಆಕ್ರೋಶ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಜನ ಹಿತಾಸಕ್ತಿ ಹೋರಾಟ ವೇದಿಕೆ ಜಿಲ್ಲಾ ಅಧ್ಯಕ್ಷ ರಾಮಸಮುದ್ರ ಸುರೇಶ್‌ ಅವರು, ‘ಮೀರಾ ಅವರು ಪ್ರಚಾರ ಪಡೆದು ತಾವೊಬ್ಬ ಕಟ್ಟರ್‌ ಹಿಂದೂ ಎಂದು ಬಿಂಬಿಸಿಕೊಂಡು ಬಿಜೆಪಿ ಟಿಕೆಟ್‌ ಪಡೆದುಕೊಳ್ಳುವ ತಂತ್ರವಾಗಿ ಭಗವಾನ್‌ ಅವರ ಮುಖಕ್ಕೆ ಮಸಿ ಬಳಿದಿದ್ದಾರೆ’ ಎಂದು ಆರೋಪಿಸಿದರು.

‘ಯಾವುದೇ ವಿಚಾರವನ್ನು ಸೈದ್ಧಾಂತಿಕವಾಗಿ ಎದುರಿಸಬೇಕು. ಅದನ್ನು ಬಿಟ್ಟು ಇಂತಹ ಹೀನ‌ ಕೃತ್ಯ ಮಾಡುವುದು ಬೌದ್ಧಿಕ ದಿವಾಳಿತನ ತೋರಿಸುತ್ತದೆ. ಇಂತಹವರನ್ನು ದೇಶದಿಂದಲೇ ಗಡಿಪಾರು ಮಾಡಬೇಕು’ ಎಂದು ಅವರು ಆಗ್ರಹಿಸಿದರು.

ಜನ ಹಿತಾಸಕ್ತಿ ಸಮಿತಿ, ದಸಂಸ ಹಾಗೂ ಎಸ್‌ಡಿಪಿಐ ಮುಖಂಡರು ಮೀರಾ ಅವರ ಭಾವಚಿತ್ರ ಸುಟ್ಟು ಪ್ರತಿಟಭಟನೆ ನಡೆಸಿದರು
ಜನ ಹಿತಾಸಕ್ತಿ ಸಮಿತಿ, ದಸಂಸ ಹಾಗೂ ಎಸ್‌ಡಿಪಿಐ ಮುಖಂಡರು ಮೀರಾ ಅವರ ಭಾವಚಿತ್ರ ಸುಟ್ಟು ಪ್ರತಿಟಭಟನೆ ನಡೆಸಿದರು

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಸಿ.ಎಂ.ಶಿವಣ್ಣ ಅವರು ಮಾತನಾಡಿ, ‘ಸತ್ಯ ಹೇಳುವವರನ್ನು ಹಿಂಸಿಸುವುದು ಹಿಂದಿನ ಕಾಲದಿಂದಲೂ ಬಂದ ಲೋಕರೂಢಿ. ಈಗಲೂ ಅದು ಮುಂದುವರಿದಿದೆ. ದೇಶದಲ್ಲಿ ಸತ್ಯ ಹೇಳುವವರನ್ನು ಹಿಂಸಿಸಬಹುದು ಅಥವಾ ತೇಜೋವಧೆ ಮಾಡಬಹುದೇ ವಿನಾ ಸತ್ಯವನ್ನು ಸಾಯಿಸಲು ಯಾರಿಂದಲೂ ಸಾಧ್ಯವಿಲ್ಲ. ರಾಜ್ಯದಲ್ಲಿ ಅನೇಕ ಪ್ರಗತಿಪರ ಚಿಂತಕರ ಮೇಲೆ ಹಲ್ಲೆ ನಡೆಯುತ್ತಲೇ ಇದೆ. ಇಂತಹ ದುಷ್ಕೃತ್ಯ ಎಸೆಯುವವರ ವಿರುದ್ಧ ಸರ್ಕಾರ ಕಾನೂನು ಕ್ರಮ ಜರುಗಿಸಬೇಕು’ ಎಂದು ಒತ್ತಾಯಿಸಿದರು.

ದಲಿತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ಸಂಚಾಲಕಸಿ.ಎಂ.ಕೃಷ್ಣಮೂರ್ತಿ, ಎಸ್‌ಡಿಪಿಐನ ರಾಜ್ಯ ಕಾರ್ಯದರ್ಶಿ ಅಬ್ರಾರ್ ಅಹಮದ್‌, ಎಸ್‌ಡಿಪಿಐನ ಆರೀಫ್, ಎಂ.ಮಹೇಶ, ಬಿಸಲ್ವಾಡಿ ಪಾಪಣ್ಣ, ಪ್ರವೀಣ್, ಧನಂಜಯ, ಕಾಡಳ್ಳಿಸ ಮಹದೇವು, ಮಹೇಶ್ ಕಾಳನಹುಂಡಿ, ಕಲೀಲ್, ಚಿಕ್ಕಣ್ಣ, ಕೃಷ್ಣಯ್ಯ, ನಟರಾಜು ಇದ್ದರು.

ಹಾಲಿನ ಅಭಿಷೇಕ ಮಾಡಿ ಸಂಭ್ರಮ

ನಗರದ ಚಾಮರಾಜೇಶ್ವರ ದೇವಾಲಯದ ಮುಂದೆ ಸೇರಿದ ಶಿವಾಜಿ ನೇತಾಜಿ ಸೇನಾ ಸಮಿತಿ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಮೀರಾ ಪರವಾಗಿ ಜೈಕಾರ ಕೂಗಿದರು. ಆಕೆಯ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದರು. ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮೀರಾ ಅವರು ತೆಗೆದುಕೊಂಡಿರುವ ಕ್ರ‌ಮ, ಹಿಂದೂ ವಿರೋಧಿಗಳಿಗೆ ಎಚ್ಚರಿಕೆ ಗಂಟೆಯಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಾತನಾಡಿದ ನೇತಾಜಿ ಸೇನಾ ಸಮಿತಿಯ ಕಾರ್ಯದರ್ಶಿ ಕೃಷ್ಣ ಅವರು, ‘ಮೀರಾ ಅವರು ಕಿತ್ತೂರಾಣಿ ರಾಣಿ ಚನ್ನಮ್ಮನಾಗಿದ್ದಾರೆ. ಚನ್ನಮ್ಮ ಅವರು ಅಂದು ಸ್ವಾತಂತ್ರ್ಯಕ್ಕಾಗಿ ಬ್ರಿಟಿಷರ ವಿರುದ್ಧ ಹೋರಾಟ ಮಾಡಿದರು. ಇಂದು ಹಿಂದೂ ದೇವತೆಗಳ ಬಗ್ಗೆ ಅವಹೇಳನವಾಗಿ ಮಾತನಾಡುವವರಿಗೆ ಮೀರಾ ಅವರು ತಕ್ಕ ಶಾಸ್ತಿ ಮಾಡಿದ್ದಾರೆ. ಇನ್ನಾದರೂ ಭಗವಾನ್ ಅವರು ಎಚ್ಚೆತ್ತುಕೊಂಡು ಹಿಂದೂ ದೇವರು ಹಾಗೂ ದೇವತೆಗಳ ವಿರುದ್ಧ ಮಾತನಾಡುವುದನ್ನು ನಿಲ್ಲಿಸಬೇಕು. ಹಿಂದೂಗಳ ಭಾವನೆಗಳನ್ನು ಕೆರಳಿಸುವಂತಹ ಕೆಲಸ ಮಾಡಬಾರದು’ ಎಂದರು.

ಸಮಿತಿಯ ಅಧ್ಯಕ್ಷ ಆರ್. ಸುಂದರರಾಜ್, ನಗರಸಭಾ ಸದಸ್ಯರಾದ ಶಿವರಾಜು, ರಾಘವೇಂದ್ರ, ಮನೋಜ್ ಪಟೇಲ್, ಮುಖಂಡರಾದ ಚಂದ್ರಶೇಖರ್ ರಾವ್, ಮಾರ್ಕೆಟ್‌‌ ಕುಮಾರ್, ಕೂಸಣ್ಣ, ಮಹೇಶ್ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT