ಗುರುವಾರ , ಮೇ 13, 2021
40 °C
ಸಾರಿಗೆ ಮುಷ್ಕರ: 4ನೇ ದಿನ 61 ಬಸ್‌ಗಳು ರಸ್ತೆಗೆ, ಊರಿಗೆ ತೆರಳಿರುವ ಸಿಬ್ಬಂದಿ

150 ನೌಕರರ ಹಾಜರಿ, 25 ಮಂದಿಗೆ ವರ್ಗಾವಣೆ ಶಿಕ್ಷೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಾಮರಾಜನಗರ: ಆರನೇ ವೇತನ ಆಯೋಗದ ಶಿಫಾರಸಿನಂತೆ ಸಂಬಳ ನೀಡುವಂತೆ ಆಗ್ರಹಿಸಿ ಕೆಎಸ್‌ಆರ್‌ಟಿಸಿ ನೌಕರರು ಜಿಲ್ಲೆಯಲ್ಲಿ ಶನಿವಾರವೂ ಮುಷ್ಕರ ನಡೆಸಿದ್ದಾರೆ. ಆದರೆ, ನಾಲ್ಕನೇ ದಿನ 120 ಮಂದಿ ಚಾಲಕರು, ನಿರ್ವಾಹಕರು ಹಾಗೂ 30 ಮಂದಿ ಮೆಕ್ಯಾನಿಕ್‌ಗಳು ಸೇರಿ 150 ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ.

ಚಾಮರಾಜನಗರ ವಿಭಾಗದಲ್ಲಿ 61 ಕೆಎಸ್‌ಆರ್‌ಟಿಸಿ ಬಸ್‌ಗಳು ಶನಿವಾರ ಸಂಚಾರ ನಡೆಸಿ‌ವೆ. ಬಹುತೇಕ ಬಸ್‌ಗಳು ಪ್ರಮುಖ ನಗರ ಮತ್ತು ಪಟ್ಟಣಗಳ ನಡುವೆ ಓಡಾಡಿದವು. ಸಂಜೆ ಕೊಳ್ಳೇಗಾಲದಿಂದ ಒಂದು ಬಸ್‌ ಬೆಂಗಳೂರಿಗೂ ತೆರಳಿತು.  

ಕರ್ತವ್ಯಕ್ಕೆ ಹಾಜರಾಗದೆ ಶಿಸ್ತು ಉಲ್ಲಂಘಿಸಿದ್ದಕ್ಕಾಗಿ ಹಾಗೂ ಕೆಲಸ ಮಾಡದಂತೆ ಇತರ ನೌಕರರಿಗೆ ಪ್ರಚೋದನೆ ನೀಡಿದ್ದಕ್ಕಾಗಿ 25 ನೌಕರರಿಗೆ ವರ್ಗಾವಣೆ ಶಿಕ್ಷೆಯನ್ನೂ ಕೆಎಸ್‌ಆರ್‌ಟಿಸಿ ವಿಧಿಸಿದೆ. ಶುಕ್ರವಾರ ಸಂಜೆ 17 ಚಾಲಕರು ನಿರ್ವಾಹಕರು ಸೇರಿದಂತೆ 20 ಮಂದಿಯನ್ನು ದಕ್ಷಿಣ ಕನ್ನಡದ ಪುತ್ತೂರು ಘಟಕಕ್ಕೆ ವರ್ಗಾವಣೆ ಮಾಡಲಾಗಿದೆ. ಶನಿವಾರ ಮತ್ತೆ ಐವರನ್ನು ಕೋಲಾರ ಘಟಕಕ್ಕೆ ವರ್ಗಾವಣೆ ಮಾಡಲಾಗಿದೆ. 

ಪ್ರಯಾಣಿಕರ ಸಂಖ್ಯೆ ಕಡಿಮೆ: ಎರಡನೇ ಶನಿವಾರದ ಅಂಗವಾಗಿ ರಜೆ ಇದ್ದುದರಿಂದ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ಖಾಸಗಿ ಬಸ್‌ಗಳು ಎಂದಿನಂತೆ ಸಂಚರಿಸಿದವು. ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಿಂದ ಸಾರಿಗೆ ಹಾಗೂ ಖಾಸಗಿ ಬಸ್‌ಗಳೆರಡೂ ಕಾರ್ಯಾಚರಿಸಿದವು. 

ಶೇ 20ರಷ್ಟು ಸಂಚಾರ: ‘ಶುಕ್ರವಾರಕ್ಕೆ ಹೋಲಿಸಿದರೆ ಶನಿವಾರ ಹೆಚ್ಚು ನೌಕರರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. ಈ ಪೈಕಿ ಶೇ 75ರಷ್ಟು ಮಂದಿ ಸ್ವಯಂ ಪ್ರೇರಿತರಾಗಿ ಬಂದು ಕೆಲಸ ಮಾಡಿದ್ದಾರೆ. ಉಳಿದವರನ್ನು ಬಲವಂತವಾಗಿಯೇ ಕರೆದುಕೊಂಡು ಬರಲಾಗಿದೆ. ನಮ್ಮ ವಿಭಾಗದಲ್ಲಿ 61 ಬಸ್‌ಗಳು ಸಂಚಾರ ಮಾಡಿವೆ. ನಮ್ಮ ಸಾಮರ್ಥ್ಯದಲ್ಲಿ ಶೇ 20ರಷ್ಟು ಬಸ್‌ಗಳು ಕಾರ್ಯಾಚರಿಸಿವೆ. ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು. ₹1.25 ಲಕ್ಷದಷ್ಟು ಆದಾಯ ಸಂಗ್ರಹವಾಗಿರಬಹುದು’ ಎಂದು ಕೆಎಸ್‌ಆರ್‌ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ಶ್ರೀನಿವಾಸ ಬಿ. ಅವರು ‘ಪ್ರಜಾವಾಣಿ’ಗೆ ತಿಳಿಸಿದರು. 

ನೌಕರರ ವರ್ಗಾವಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಪದೇ ಪದೇ ಹೇಳಿದರೂ ಕೆಲಸಕ್ಕೆ ಹಾಜರಾಗಿಲ್ಲ. ಅದು ಮಾತ್ರವಲ್ಲದೇ ಸ್ವಯಂ ಪ್ರೇರಿತರಾಗಿ ಬರುವವರಿಗೆ ಕರ್ತವ್ಯಕ್ಕೆ ಹಾಜರಾಗದಂತೆ ಪ್ರಚೋದಿಸಿದ್ದಾರೆ. ಈ ಕಾರಣಕ್ಕಾಗಿ 25 ಮಂದಿಯನ್ನು ವರ್ಗಾವಣೆ ಮಾಡಲಾಗಿದೆ’ ಎಂದು ಅವರು ಮಾಹಿತಿ ನೀಡಿದರು. 

‘ದಿನ ಕಳೆದಂತೆ ಕೆಲಸಕ್ಕೆ ಬರುತ್ತಿರುವವರ ಸಂಖ್ಯೆ ಹೆಚ್ಚಾಗಿದೆ. ಹಾಗಾಗಿ, ಭಾನುವಾರವೂ ಇನ್ನಷ್ಟು ಹೆಚ್ಚು ನೌಕರರು ಬರುವ ನಿರೀಕ್ಷೆ ಇದೆ’ ಎಂದು ಶ್ರೀನಿವಾಸ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು