ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಡುಗೆ ಅನಿಲ ಸುರಕ್ಷತೆ: ಬೇಕಿದೆ ಜಾಗೃತಿ

ಸಿಲಿಂಡರ್‌, ಸ್ಟೌ ಬಳಕೆ: ನಿಯಮ ಪಾಲಿಸದ ಗ್ರಾಹಕರು, ಆಪತ್ತಿಗೆ ಆಹ್ವಾನ
Last Updated 22 ಜನವರಿ 2023, 22:30 IST
ಅಕ್ಷರ ಗಾತ್ರ

ಚಾಮರಾಜನಗರ: ಕಳೆದ ತಿಂಗಳು ಗುಂಡ್ಲುಪೇಟೆಯ ಚಹಾ ಅಂಗಡಿಯೊಂದರಲ್ಲಿ ಅನಿಲ ಸಿಲಿಂಡರ್‌ನಲ್ಲಿ ಸೋರಿಕೆ ಉಂಟಾಗಿ ಸ್ಫೋಟ ಉಂಟಾಯಿತು. ಕಳೆದ ವರ್ಷದ ಮೇ ತಿಂಗಳಲ್ಲಿ ಗುಂಡ್ಲುಪೇಟೆ ತಾಲ್ಲೂಕಿನ ಮಳವಳ್ಳಿ ಗ್ರಾಮದಲ್ಲಿ ವಿದ್ಯುತ್‌ ಶಾರ್ಟ್‌ ಸರ್ಕಿಟ್‌ನಿಂದ ಸಿಲಿಂಡರ್‌ ಸ್ಫೋಟ ಸಂಭವಿಸಿ ಮನೆಯಲ್ಲಿ ಮಲಗಿದ್ದ ಯುವಕ ಮೃತಪಟ್ಟಿದ್ದರು.

– ಇದು ಎರಡು ಉದಾಹರಣೆಗಳಷ್ಟೇ. ಅಡುಗೆ ಅನಿಲ ಸೋರಿಕೆ, ಸಿಲಿಂಡರ್‌ ಸ್ಫೋಟದಂತಹ ಪ್ರಕರಣಗಳು ಅಲ್ಲಲ್ಲಿ ವರದಿಯಾಗುತ್ತಲೇ ಇರುತ್ತವೆ. ಬಹುತೇಕ ಸಂದರ್ಭಗಳಲ್ಲಿ ಜನರ ಅಜಾಗರೂಕತೆಯಿಂದಾಗಿ ದುರ್ಘಟನೆಗಳು ನಡೆಯುತ್ತವೆ.

ಸಿಲಿಂಡರ್‌, ಸ್ಟೌ, ರೆಗ್ಯುಲೇಟರ್‌, ಅನಿಲ ಪೈಪ್‌ಗಳ ಬಳಕೆ, ಸುರಕ್ಷತೆ ಬಗ್ಗೆ ಸರ್ಕಾರ, ಅಡುಗೆ ಅನಿಲ ವಿತರಕ ಕಂಪನಿಗಳು, ಏಜೆನ್ಸಿಗಳು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದರೂ, ಜನರು ಪೂರ್ಣವಾಗಿ ಜಾಗೃತರಾಗಿಲ್ಲ. ಅಡುಗೆ ಅನಿಲ ಸಿಲಿಂಡರ್‌ ಗ್ರಾಹಕರು ನಿರ್ಲಕ್ಷ್ಯ ವಹಿಸುತ್ತಲೇ ಇದ್ದಾರೆ. ಕೆಲವು ಸಂದರ್ಭದಲ್ಲಿ ವಿತರಕ ಏಜೆನ್ಸಿಗಳು ಉದಾಸೀನ ಪ್ರವೃತ್ತಿ ತೋರುವುದೂ ಇದೆ.

ಜಿಲ್ಲೆಯಲ್ಲಿ ಒಂದು ಖಾಸಗಿ ಅನಿಲ ಕಂಪನಿ (ಗೊ ಗ್ಯಾಸ್) ಏಜೆನ್ಸಿ ಸೇರಿದಂತೆ ಒಟ್ಟು 24 ಅಡುಗೆ ಅನಿಲ ವಿತರಕ ಏಜೆನ್ಸಿಗಳಿವೆ. ಭಾರತ್‌ ಗ್ಯಾಸ್‌ನ ಆರು, ಹಿಂದೂಸ್ತಾನ್‌ ಗ್ಯಾಸ್‌ನ ಏಳು ಮತ್ತು ಇಂಡೇನ್‌ ಗ್ಯಾಸ್‌ನ 10 ಏಜೆನ್ಸಿಗಳು ಜಿಲ್ಲೆಯಲ್ಲಿವೆ. ಒಟ್ಟು 3,32,287 ಅಡುಗೆ ಅನಿಲ ಸಂಪರ್ಕಗಳಿವೆ.

ಅಡುಗೆ ಅನಿಲ ಬಳಸುವ ಸಂದರ್ಭದಲ್ಲಿ ಗ್ರಾಹಕರು ಸುರಕ್ಷತೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಇದರ ಬಗ್ಗೆ ಜಾಗೃತಿ ಮೂಡಿಸುವ ಹೊಣೆಗಾರಿಕೆಯೂ ಈ ಏಜೆನ್ಸಿಗಳ ಮೇಲಿದೆ. ಕೆಲವು ಕಡೆಗಳಲ್ಲಿ ಜಾಗೃತಿ ಕಾರ್ಯ ಪರಿಣಾಮಕಾರಿ ಆದರೆ, ಇನ್ನೂ ಕೆಲವು ಕಡೆಗಳಲ್ಲಿ ಆಗುತ್ತಿಲ್ಲ. ಗ್ರಾಮೀಣ ಭಾಗಗಳಲ್ಲಿ ಜನರಿಗೆ ಇನ್ನೂ ಇವುಗಳ ಬಗ್ಗೆ ಪೂರ್ಣ ಮಾಹಿತಿ ಇಲ್ಲ.

ಏಜೆನ್ಸಿಗಳ ಸಿಬ್ಬಂದಿ, ಕಂಪನಿಗಳ ತಜ್ಞರು ಬಂದು ಹೇಳಿದರೂ, ಅವುಗಳನ್ನು ಅನುಷ್ಠಾನಗೊಳಿಸುವುದಿಲ್ಲ.

ನಿಯಮಗಳ ಅನುಸಾರ, ಮನೆಗೆ ಸಿಲಿಂಡರ್‌ಗಳನ್ನು ನೀಡುವಾಗ ವಿತರಕರು, ಅನಿಲ ಸೋರಿಕೆ ಇದೆಯೇ ಎಂಬುದನ್ನು ಪರಿಶೀಲಿಸಿಯೇ ನೀಡಬೇಕು. ಕೆಲವರು ಪರಿಶೀಲನೆ ನಡೆಸಿದರೆ ಇನ್ನೂ ಕೆಲವರು ಮಾಡುವುದಿಲ್ಲ.

‘ಮನೆಗೆ ತಂದು ಕೊಟ್ಟಿದ್ದಕ್ಕೆ ₹40, ₹50 ವಸೂಲು ಮಾಡುವ ಸಿಬ್ಬಂದಿ ಸಿಲಿಂಡರ್‌ ಪರಿಶೀಲಿಸಲು ಮುಂದಾಗುವುದಿಲ್ಲ’ ಎಂಬುದು ಕೆಲವು ಗ್ರಾಹಕರ ದೂರು.

ಬಹುತೇಕ ಕಡೆಗಳಲ್ಲಿ ಸಿಲಿಂಡರ್‌ನಿಂದ ಸ್ಟೌಗೆ ಅನಿಲ ಸಂಪರ್ಕಿಸುವ ಪೈಪ್‌ನಿಂದ ಅನಿಲ ಸೋರಿಕೆಯಾಗಿ ದುರಂತ ಸಂಭವಿಸುತ್ತದೆ. ವಿತರಕ ಕಂಪನಿಗಳ ಪ್ರಕಾರ ಪ್ರತಿ ಐದು ವರ್ಷಕ್ಕೊಮ್ಮೆ ಪೈಪ್‌ ಬದಲಾಯಿಸಬೇಕು. ಕೆಲವು ಏಜೆನ್ಸಿಗಳ ಮಾಲೀಕರು, ಮೂರು ವರ್ಷಕ್ಕೊಮ್ಮೆ ಪೈಪ್‌ ಬದಲಾಯಿಸುವುದು ಸುರಕ್ಷತೆ ದೃಷ್ಟಿಯಿಂದ ಒಳ್ಳೆಯದು ಎಂದು ಹೇಳುತ್ತಾರೆ.

ಆದರೆ, ಕೆಲವು ಗ್ರಾಹಕರು ಏಳೆಂಟು ವರ್ಷಗಳಾದರೂ ಪೈಪ್‌ ಬದಲಾಯಿಸಲು ಹೋಗುವುದಿಲ್ಲ. ಸಿಬ್ಬಂದಿ ಬಂದು ಪರೀಕ್ಷಿಸಿ ಪೈಪ್‌ ಬದಲಾಯಿಸಬೇಕು ಎಂದು ಹೇಳಿದರೆ, ₹250–₹300 ಉಳಿಸುವ ಆಸೆಯಿಂದ ‘ಈಗ ಬೇಡ ಮುಂದೆ ನೋಡೋಣ’ ಎಂದು ಹೇಳುತ್ತಾರೆ.

ಸಿಲಿಂಡರನ್ನು ಯಾವಾಗಲೂ ಮೇಲ್ಮುಖವಾಗಿ ಇರಿಸಬೇಕು. ಮನೆಯಲ್ಲಿ ಗಾಳಿಯಾಡುವ ಸ್ಥಳದಲ್ಲಿ ಇಡಬೇಕು. ಉರಿಯ ಪಕ್ಕದಲ್ಲಿ ಪ್ಲಾಸ್ಟಿಕ್ ಮತ್ತು ಇನ್ನಿತರ ದಹನಕಾರಿ ವಸ್ತುಗಳನ್ನು ಇಡಬಾರದು. ಸಿಲಿಂಡರ್ ಬಳಸದಿದ್ದಾಗ ರೆಗ್ಯುಲೇಟರ್‌ ಸ್ಥಗಿತಗೊಳಿಸಬೇಕು. ವಾಲ್ವ್‌ನಲ್ಲಿ ಕೊಳೆ ಮತ್ತು ದೂಳು ಕೂರದಂತೆ ಎಚ್ಚರವಹಿಸಬೇಕು ಎಂಬುದೂ ಸೇರಿದಂತೆ ಹಲವು ನಿಯಮಗಳು ಇವೆ.

ಗ್ರಾಮ, ಶಾಲಾ ಕಾಲೇಜುಗಳಲ್ಲಿ ಜಾಗೃತಿ: ಏಜೆನ್ಸಿಗಳ ಸಿಬ್ಬಂದಿ ಗ್ರಾಮೀಣ ಭಾಗ, ಶಾಲಾ ಕಾಲೇಜುಗಳಲ್ಲಿ ಪ್ರಾತ್ಯಕ್ಷಿಕೆ ಮೂಲಕ ಸುರಕ್ಷತಾ ನಿಯಮಗಳ ಪಾಲನೆ ಹಾಗೂ ಅನುಸರಿಸಬೇಕಾದ ಕ್ರಮಗಳ ಬಗ್ಗೆ ವಿವರಿಸುತ್ತಾರೆ. ಕೆಲವು ಸಂದರ್ಭಗಳಲ್ಲಿ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಕೂಡ ಈ ಕೆಲಸದಲ್ಲಿ ಕೈಜೋಡಿಸುತ್ತಾರೆ.

‘ಪ್ರತಿ ಐದು ವರ್ಷಗಳಿಗೊಮ್ಮೆ ಕಡ್ಡಾಯವಾಗಿ ಪೈಪ್‌ ಬದಲಿಸಬೇಕು. ಕಂಪನಿಯ ಸಿಬ್ಬಂದಿ ಗ್ರಾಹಕರ ಮನೆ ಮನೆಗೆ ತೆರಳಿ ಸ್ಟೌ, ಪೈಪ್‌, ರೆಗ್ಯುಲೇಟರ್‌ ಪರಿಶೀಲಿಸುತ್ತಾರೆ. ಪೈಪ್‌ ಬದಲಾಯಿಸಬೇಕಾದರೆ ಮನೆಯವರಿಗೆ ತಿಳಿಸುತ್ತಾರೆ. ಗಾಳಿ, ಬೆಳಕು ಚೆನ್ನಾಗಿ ಇರುವ ಸ್ಥಳದಲ್ಲೇ ಸಿಲಿಂಡರ್‌ ಸ್ಟೌ ಇಡಬೇಕು. ಕೆಲವು ಮನೆಗಳಲ್ಲಿ ಸ್ಟೌಗಳನ್ನು ನೆಲದಲ್ಲಿ ಇಟ್ಟಿರುತ್ತಾರೆ. ಇದು ದೊಡ್ಡ ತಪ್ಪು. ಅನಿಲ ಯಾವಾಗಲೂ ಮೇಲ್ಮುಖವಾಗಿ ಚಲಿಸುವುದರಿಂದ ಸ್ಟೌ ಯಾವಾಗಲು ಸಿಲಿಂಡರ್‌ಗಿಂತ ಎತ್ತರದಲ್ಲಿರಬೇಕು. ಈ ನಿಯಮವನ್ನು ಎಲ್ಲರೂ ಕಡ್ಡಾಯವಾಗಿ ಪಾಲಿಸಬೇಕು’ ಎಂದು ಭಾರತ್‌ ಗ್ಯಾಸ್‌ನ ಜಿಲ್ಲಾ ಮಾರುಕಟ್ಟೆ ಪ್ರತಿನಿಧಿ ಮೋಹನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಮಾಲೀಕರು, ಗ್ರಾಹಕರು ಏನಂತಾರೆ?

ನಿರಂತರ ಜಾಗೃತಿ

ಅಡುಗೆ ಅನಿಲ ಸಿಲಿಂಡರ್‌, ಸ್ಟೌ, ರೆಗ್ಯುಲೇಟರ್‌, ಅನಿಲ ಪೈಪ್‌ಗಳ ನಿರ್ವಹಣೆ, ಅಡುಗೆ ಮಾಡುವಾಗ ಪಾಲಿಸಬೇಕಾದ ನಿಯಮಗಳ ಬಗ್ಗೆ ನಿರಂತರವಾಗಿ ಜಾಗೃತಿ ಮೂಡಿಸಲಾಗುತ್ತಿದೆ. ದಿನಕ್ಕೊಂದು ಊರನ್ನು ಆಯ್ಕೆ ಮಾಡಿ ಜನರಿಗೆ ತಿಳಿಹೇಳುವ ಕೆಲಸ ಮಾಡುತ್ತಿದ್ದೇವೆ. ಸಿಲಿಂಡರ್‌ ಮನೆಗೆ ಕೊಡುವಾಗಲೂ, ನಮ್ಮ ಸಿಬ್ಬಂದಿ ಮುಚ್ಚಳ ತೆಗೆದು ಸೋರುತ್ತದೆಯೇ ಎಂದು ಪರಿಶೀಲಿಸುತ್ತಾರೆ. ಕೆಲವು ಗ್ರಾಹಕರಿಗೆ ಇದು ಇಷ್ಟವಾಗುವುದಿಲ್ಲ. ಮನೆಯೊಳಕ್ಕೆ ಬಂದು ಪರಿಶೀಲಿಸಲು ಹುಡುಗರನ್ನು ಬಿಡುವುದಿಲ್ಲ.

–ಮಹೇಶ್‌ ಕುದರ್‌, ಮಹೇಶ್‌ ಗ್ಯಾಸ್‌ ಏಜೆನ್ಸಿ ಮಾಲೀಕ, ಚಾಮರಾಜನಗರ

ಪರೀಕ್ಷೆ ಮಾಡಿಸಲು ಹಿಂದೇಟು

ಗ್ರಾಹಕರು ಐದು ವರ್ಷಗಳಿಗೊಮ್ಮೆ ಅಡುಗೆ ಅನಿಲ ಬಳಕೆ, ಸುರಕ್ಷತೆ ಬಗ್ಗೆ ಖಾತರಿ ಪಡಿಸಿಕೊಳ್ಳಬೇಕು. ವರ್ಷದಿಂದ ವರ್ಷಕ್ಕೆ ಅನಿಲ ಸಂಪರ್ಕ ಪೈಪ್, ಬರ್ನಲ್, ಲೈಟರ್‌ಗಳ ಕಾರ್ಯಕ್ಷಮತೆ ಕುಸಿಯುತ್ತದೆ. ಸಂಭಾವ್ಯ ಅಪಾಯ ತಪ್ಪಿಸಲು ₹236 (ಸಾಮಾನ್ಯ) ಹಾಗೂ ಉಜ್ವಲ ಯೋಜನೆ ಗ್ರಾಹಕರಿಗೆ ₹59 ವೆಚ್ಚದಲ್ಲಿ ನುರಿತ ತಜ್ಞರು ಸಂಪೂರ್ಣ ತಪಾಸಣೆ ನಡೆಸುತ್ತಾರೆ. ಹಾಳಾದ ವಸ್ತುಗಳನ್ನು ತೆಗೆದು, ಹೊಸ ಸಂಪರ್ಕ ಕಲ್ಪಿಸಲಾಗುತ್ತದೆ. ಆದರೆ, ಬಹಳಷ್ಟು ಸಂದರ್ಭಗಳಲ್ಲಿ ಗ್ರಾಹಕರು ಈ ಸೇವೆಗಳನ್ನು ನಿರ್ಲಕ್ಷ ಮಾಡುತ್ತಾರೆ

-ನಿರಂಜನ್, ಗೋಪಾಲಸ್ವಾಮಿ ಗ್ಯಾಸ್ ಏಜಿನ್ಸಿ ಮಾಲೀಕ, ಯಳಂದೂರು.

ಅರಿವು ಮೂಡಿಸುತ್ತಿದ್ದೇವೆ

ಸಿಲಿಂಡರ್ ಸುರಕ್ಷತೆ ಹಾಗೂ ಸ್ವಚ್ಛತೆಯ ಬಗ್ಗೆ ಸಾರ್ವಜನಿಕವಾಗಿ ಅರಿವು ಮೂಡಿಸಲಾಗುತ್ತಿದೆ. ಅದರಲ್ಲೂ ಕಾಲೇಜಿನ ಯುವ ಯುವತಿಯರು ಅಂಗನವಾಡಿ, ಆಶಾ ಕಾರ್ಯಕರ್ತೆಯರಿಗೆ, ಸೇವಾ ಸಂಸ್ಥೆಗಳ ಪ್ರತಿನಿಧಿಗಳಿಗೆ ಅರಿವು ಮೂಡಿಸಲಾಗುತ್ತಿದೆ.

–ಎಂ.ರಾಜೇಶ್. ಭ್ರಮರಾಂಬ ಇಂಡೇನ್ ಗ್ಯಾಸ್ ಮಾಲೀಕ, ಉಮ್ಮತ್ತೂರು

ಮಾಹಿತಿ ಕೊಡುವುದಿಲ್ಲ

ಸಿಲಿಂಡರ್‌ಗಳನ್ನು ಸರಿಯಾದ ಸಮಯಕ್ಕೆ ಏಜೆನ್ಸಿಯವರು ನೀಡುತ್ತಿಲ್ಲ ಹಾಗೂ ಸಿಲಿಂಡರ್‌ಗಳ ಬಗ್ಗೆ ಮಾಹಿತಿಗಳನ್ನೂ ಕೊಡುವುದಿಲ್ಲ. ಅವರು ನೀಡಿದ ಸಿಲಿಂಡರ್‌ಗಳನ್ನು ಹಾಗೆ ಬಳಸುತ್ತಿದ್ದೇವೆ. ಮನೆ ಮನೆಗೆ ಸಿಲಿಂಡರ್‌ ಕೊಡುವಾಗ ಕಡ್ಡಾಯವಾಗಿ ಪರೀಕ್ಷೆ ಮಾಡಿ ನೀಡಬೇಕು. ಆಗಾಗ ರೆಗ್ಯುಲೇಟರ್‌, ಪೈಪ್‌ಗಳನ್ನು ಪರಿಶೀಲಿಸಬೇಕು.

– ರಾಧಾ, ಕೊಳ್ಳೇಗಾಲ

ಜಾಗೃತಿ ಮೂಡಿಸಲಿ

ಗ್ರಾಮಕ್ಕೆ ಮೂಗೂರು ಮತ್ತು ಕೊಳ್ಳೇಗಾಲ ಪಟ್ಟಣದಿಂದ ಅನಿಲ ಸಿಲಿಂಡರ್ ಪೂರೈಕೆಯಾಗುತ್ತಿದೆ. ಪ್ರತಿ ವರ್ಷ ಗ್ಯಾಸ್ ಬಳಕೆ ವಿಧಾನ, ಅನಿರೀಕ್ಷತ ಅವಘಡಗಳ ಸಂದರ್ಭದಲ್ಲಿ ಕೈಗೊಳ್ಳಬೇಕಾದ ಎಚ್ಚರಗಳ ಬಗ್ಗೆ ಜಾಗೃತಿ ಮೂಡಿಸಲು ಸಂಬಂಧಪಟ್ಟವರು ಆಸ್ಥೆ ವಹಿಸಬೇಕು.

–ಸ್ವಾಮಿ, ಕೆಸ್ತೂರು, ಯಳಂದೂರು ತಾಲ್ಲೂಕು

ಸುರಕ್ಷತೆ ನಿರ್ಲಕ್ಷ್ಯ

ಗ್ರಾಮೀಣ ಭಾಗಗಳಲ್ಲಿ ಅಡುಗೆ ಅನಿಲ ಮಿತಮಿವ್ಯದ ಬಗ್ಗೆ ಇನ್ನೂ ತಿಳಿದಿಲ್ಲ. ಗಾಳಿ, ಬೆಳಕು ಸಮರ್ಪಕವಾಗಿ ಪೂರೈಕೆ ಇರುವೆಡೆ ಸಿಲಿಂಡರ್ ಇಟ್ಟಿರುವುದಿಲ್ಲ. ಅನಿಲ ಪೂರೈಸುವ ಪರಿಕರಗಳು ಸಮರ್ಪಕವಾಗಿ ಇದೆ ಎಂಬುದನ್ನು ಪ್ರತಿ ವರ್ಷ ತಜ್ಞರಿಂದ ತಪಾಸಣೆ ಮಾಡಿಸಬೇಕು. ಇದರಿಂದ ಮನೆಗಳಲ್ಲಿ ಉಂಟಾಗುವ ಸಂಭಾವ್ಯ ಅಗ್ನಿ ಅಪಾಯಗಳನ್ನು ತಪ್ಪಿಸಬಹುದು.

–ಸರೋಜಮ್ಮ, ಗುಂಬಳ್ಳಿ, ಯಳಂದೂರು ತಾಲ್ಲೂಕು

––

ಸಿಲಿಂಡರ್‌ ಬಳಕೆ ಹಾಗೂ ಸುರಕ್ಷತೆಯ ಬಗ್ಗೆ ಆಯಾ ಏಜೆನ್ಸಿಗಳು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಇರುತ್ತವೆ
ಯೋಗಾನಂದ, ಆಹಾರ ಮತ್ತು ನಾಗರಿಕ ಇಲಾಖೆ ಉಪನಿರ್ದೇಶಕ

––––––

ನಿರ್ವಹಣೆ: ಸೂರ್ಯನಾರಾಯಣ ವಿ.

ಪೂರಕಮಾಹಿತಿ: ನಾ.ಮಂಜುನಾಥಸ್ವಾಮಿ, ಮಲ್ಲೇಶ ಎಂ., ಮಹದೇವ್‌ ಹೆಗ್ಗವಾಡಿಪುರ, ಅವಿನ್‌ಪ್ರಕಾಶ್‌ ವಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT