ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭ್ರಷ್ಟ ಅಧಿಕಾರಿಗಳಿಂದ ಪ್ರಗತಿ ಕುಂಠಿತ:ಇಂದುಶೇಖರ್‌

ಜಿಲ್ಲಾ ವಕೀಲರ ಸಂಘದ ಆರೋಪ, ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆಗೆ ಒತ್ತಾಯ
Last Updated 7 ಏಪ್ರಿಲ್ 2021, 15:10 IST
ಅಕ್ಷರ ಗಾತ್ರ

ಚಾಮರಾಜನಗರ: ‘ಭ್ರಷ್ಟ, ಬೇಜವಾಬ್ದಾರಿ ಅಧಿಕಾರಿಗಳಿಂದಾಗಿ ನಗರ ಹಾಗೂ ಜಿಲ್ಲೆಯ ಅಭಿವೃದ್ಧಿ ಕುಂಠಿತವಾಗಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಸುರೇಶ್‌ಕುಮಾರ್‌ ಅವರು ಕೂಡ ಜಿಲ್ಲೆಯಲ್ಲಿ ಯಾವುದೇ ಕೆಲಸ ಮಾಡಿಲ್ಲ’ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್‌ ಅವರು ಬುಧವಾರ ದೂರಿದರು.

ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಹಲವು ತಿಂಗಳುಗಳಿಂದ ನ್ಯಾಯಾಲಯದ ರಸ್ತೆಯ ಕಾಮಗಾರಿ ನನೆಗುದಿಗೆ ಬಿದ್ದಿದೆ. ಜನರಿಗೆ ತೊಂದರೆಯಾಗುತ್ತಿದೆ. ನಗರಸಭೆಯ ಅಧಿಕಾರಿಗಳು ಮನವಿಗೆ ಸ್ಪಂದಿಸುತ್ತಿಲ್ಲ. ಬಿ.ರಾಚಯ್ಯ ಜೋಡಿ ರಸ್ತೆಯ ಕೆಲಸವೂ ಅಪೂರ್ಣವಾಗಿದೆ. ಅಲ್ಲಲ್ಲಿ ಚರಂಡಿ ನಿರ್ಮಾಣ ಆಗದೇ ಇರುವುದರಿಂದ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಭ್ರಷ್ಟ, ನಿರ್ಲಜ್ಜ ಅಧಿಕಾರಿಗಳು ಇರುವುದರಿಂದ ಈ ರೀತಿ ಆಗುತ್ತಿದೆ’ ಎಂದು ದೂರಿದರು.

ಉಸ್ತುವಾರಿ ಬದಲಾಗಲಿ: ‘ಜಿಲ್ಲೆಯ ಉಸ್ತುವಾರಿ ಸಚಿವ ಎಸ್‌.ಸುರೇಶ್‌ ಕುಮಾರ್‌ ಅವರು ಪ್ರಾಮಾಣಿಕ ಹಾಗೂ ನಿಷ್ಠಾವಂತ. ಆದರೆ, ಅಧಿಕಾರಿಗಳಿಗೆ ಹೇಳಿ ಕೆಲಸ ಮಾಡಿಸಲು ಅವರಿಂದ ಆಗುತ್ತಿಲ್ಲ. ಜಿಲ್ಲೆಯಲ್ಲಿ ಯಾವುದೇ ಅಭಿವೃದ್ಧಿ ಕೆಲಸ ಆಗಿಲ್ಲ. ಅಧಿಕಾರಿಗಳನ್ನು ಗದರಿಸಿ, ಕೆಲಸ ಮಾಡಿಸುವಂತಹ ಖಡಕ್‌ ಉಸ್ತುವಾರಿ ಸಚಿವರು ಜಿಲ್ಲೆಗೆ ಬೇಕು. ಹಾಗಾಗಿ, ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಿಲ್ಲಾ ಉಸ್ತುವಾರಿ ಸಚಿವರನ್ನು ಬದಲಾಯಿಸಬೇಕು’ ಎಂದು ಇಂದುಶೇಖರ್‌ ಅವರು ಒತ್ತಾಯಿಸಿದರು.

ಕಾನೂನು ಕಾಲೇಜು ಆರಂಭಕ್ಕೆ ಅನುಮತಿ ನೀಡಿ: ‘ಜಿಲ್ಲೆಗೆ ಸರ್ಕಾರಿ ಕಾನೂನು ಕಾಲೇಜು ಮಂಜೂರು ಮಾಡಲಾಗಿದೆ. ತಾತ್ಕಾಲಿಕವಾಗಿ ಅದಕ್ಕೆ ಕಟ್ಟಡದ ವ್ಯವಸ್ಥೆ ಆಗಿದೆ. ಆದರೆ, ಕಾಲೇಜಿಗೆ ಇನ್ನೂ ಅನುಮತಿ ಸಿಕ್ಕಿಲ್ಲ. ಈ ವರ್ಷ ಸರ್ಕಾರ ತರಗತಿಗಳ ಪ್ರಾರಂಭಕ್ಕೆ ಅನುಮತಿ ನೀಡಬೇಕು’ ಎಂದು ಆಗ್ರಹಿಸಿದರು.

‘ನಮ್ಮ ಸಂಘದಲ್ಲಿ 400ಕ್ಕೂ ಹೆಚ್ಚು ವಕೀಲರಿದ್ದು, ವಕೀಲರಿಗಾಗಿಯೇ ಪ್ರತ್ಯೇಕ ಭವನದ ಅಗತ್ಯವಿದೆ. ಇದರಿಂದಾಗಿ ಬಡ ವಕೀಲರಿಗೆ ಸಮಾರಂಭಗಳನ್ನು ಏರ್ಪಡಿಸಲು ಅನುಮತಿ ಸಿಗಲಿದೆ. ಸರ್ಕಾರ ವಕೀಲ ಭವನ ನಿರ್ಮಾಣಕ್ಕೆ ಅನುದಾನ ನೀಡಬೇಕು’ ಎಂದು ಇಂದುಶೇಖರ್‌ ಅವರು ಮನವಿ ಮಾಡಿದರು.

ಸಂಘದ ಪ್ರಧಾನ ಕಾರ್ಯದರ್ಶಿ ಎಸ್.ಮಂಜು ಹರವೆ, ಉಪಾಧ್ಯಕ್ಷ ಶಿವರಾಮು, ಜಂಟಿ ಕಾರ್ಯದರ್ಶಿ ಮಂಜು, ಖಜಾಂಚಿ ನಾಗಮ್ಮ ಇದ್ದರು.

ಪ್ರತ್ಯೇಕ ನ್ಯಾಯಾಲಯ ವ್ಯವಸ್ಥೆ ರೂಪಿಸಲು ಒತ್ತಾಯ

‘ಅರೆ ನ್ಯಾಯಿಕ ನ್ಯಾಯಾಲಯಗಳಾದ ತಹಶೀಲ್ದಾರ್‌, ಉಪವಿಭಾಗಾಧಿಕಾರಿ ಮತ್ತು ಜಿಲ್ಲಾಧಿಕಾರಿ ನ್ಯಾಯಾಲಯಗಳಲ್ಲಿ ಸರಿಯಾಗಿ ವಿಚಾರಣೆ ನಡೆಯುತ್ತಿಲ್ಲ. ಉದಾಹರಣೆಗೆ, ಜಿಲ್ಲೆಯಲ್ಲಿ ಆರು ತಿಂಗಳಿಂದ ಉಪವಿಭಾಗಾಧಿಕಾರಿ ನ್ಯಾಯಾಲಯದಲ್ಲಿ ಪ್ರಕರಣಗಳ ವಿಚಾರಣೆ ನಡೆದಿಲ್ಲ. ಇದರಿಂದ ಭೂ ಕಂದಾಯ ಕಾಯ್ದೆಗೆ ಸಂಬಂಧಿಸಿದ ಪ್ರಕರಣಗಳ ವಿಲೇವಾರಿ ತಡವಾಗುತ್ತಿದೆ. ಪಕ್ಷಗಾರರಿಗೆ ತೊಂದರೆಯಾಗುತ್ತಿದೆ’ ಎಂದು ಉಮ್ಮತ್ತೂರು ಇಂದುಶೇಖರ್‌ ಅವರು ಹೇಳಿದರು.

‘ಉಪವಿಭಾಗಾಧಿಕಾರಿ ಅವರಿಗೆ ಕೆಲಸದ ಒತ್ತಡ ಹೆಚ್ಚಿರುವುದರಿಂದ, ಸಚಿವರು ಇನ್ನಿತರ ಗಣ್ಯರು ಜಿಲ್ಲೆಗೆ ಭೇಟಿ ನೀಡುವ ಸಂದರ್ಭದಲ್ಲಿ ಪ್ರಕರಣಗಳ ವಿಚಾರಣೆಗೆ ದಿನಾಂಕ ನೀಡಲು ಅವರಿಗೆ ಸಾಧ್ಯವಾಗುವುದಿಲ್ಲ. ಈ ಸಮಸ್ಯೆಯನ್ನು ಹೋಗಲಾಡಿಸಲು ಗ್ರಾಹಕರ ನ್ಯಾಯಾಲಯದ ವ್ಯವಸ್ಥೆಯಂತೆ ಅರೆ ನ್ಯಾಯಿಕ ನ್ಯಾಯಾಲಯಗಳಿಗೂ ಪ್ರತ್ಯೇಕ ವ್ಯವಸ್ಥೆಯನ್ನು ಸರ್ಕಾರ ರೂಪಿಸಬೇಕು. ಇದರಿಂದ ಜನರಿಗೆ ಅನುಕೂಲವಾಗಲಿದೆ. ನಿವೃತ್ತ ನ್ಯಾಯಾಧೀಶರನ್ನು ಇದಕ್ಕೆ ನೇಮಿಸಬಹುದಾಗಿದೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT