ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬರಪೀಡಿತ ಘೋಷಣೆ, ಚಂಗಡಿ ಸ್ಥಳಾಂತರಕ್ಕೆ ಆಗ್ರಹ

ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿಯಾದ ರೈತ ಸಂಘದ ನಿಯೋಗ
Published 25 ಜುಲೈ 2023, 5:49 IST
Last Updated 25 ಜುಲೈ 2023, 5:49 IST
ಅಕ್ಷರ ಗಾತ್ರ

ಮಹದೇಶ್ವರ ಬೆಟ್ಟ: ಜಿಲ್ಲೆಯನ್ನು ಬರಪೀಡಿತ ಎಂದು ಘೋಷಿಸಬೇಕು, ಜಿಲ್ಲೆಯ ಕೆರೆಗಳಿಗೆ ನೀರು ಹರಿಸಬೇಕು ಮತ್ತು ಚಂಗಡಿ ಗ್ರಾಮ ಪುನರ್ವಸತಿ ಯೋಜನೆಯನ್ನು ತಕ್ಷಣ ಕೈಗೆತ್ತಿಕೊಳ್ಳಬೇಕು ಎಂದು ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್‌ ಅವರನ್ನು ಒತ್ತಾಯಿಸಿದೆ. 

ಭಾನುವಾರ ರಾತ್ರಿ ಸಚಿವರು ಮಹದೇಶ್ವರ ಬೆಟ್ಟಕ್ಕೆ ಭೇಟಿ ನೀಡಿದ್ದ ವೇಳೆ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಹೊನ್ನೂರು ಪ್ರಕಾಶ್‌ ಹಾಗೂ ಇತರ ರೈತ ಮುಖಂಡರು ಸಚಿವರನ್ನು ಭೇಟಿ ಮಾಡಿ ತಮ್ಮ ಬೇಡಿಕೆಗಳನ್ನು ಮುಂದಿಟ್ಟರು. 

‘ಈಗಾಗಲೇ ಹಲವಾರು ಜಿಲ್ಲಾ ಉಸ್ತುವಾರಿ ಸಚಿವರು ಬಂದು ಹೋಗಿದ್ದಾರೆ. ಅವರೆಲ್ಲ ಆಶ್ವಾಸನೆ ನೀಡಿದ್ದಾರೆಯೇ ವಿನಾ, ಯಾವ ಬೇಡಿಕೆಯನ್ನೂ ಈಡೇರಿಸಿಲ್ಲ. ರೈತರ ಸಮಸ್ಯೆಗಳನ್ನು ನಿವಾರಿಸಲು ವಿಶೇಷ ಪ್ಯಾಕೇಜ್‌ ಘೋಷಣೆ ಮಾಡಬೇಕು. ತೆಂಗಿನ ಬೆಲೆ ಕುಸಿದಿದ್ದು ಬೆಳೆಗಾರರು ಸಂಕಷ್ಟ ಎದುರಿಸುತ್ತಿದ್ದಾರೆ. ಮಳೆ ಕೊರೆತೆಯಿಂದ ಸೂರ್ಯಕಾಂತಿ ಫಸಲು ನಷ್ಟವಾಗುವ ಸಾಧ್ಯತೆ ಹೆಚ್ಚಿದೆ. ಈ ಎರಡೂ ಬೆಳೆಗಳಿಗೂ ಬೆಂಬಲ ಬೆಲೆ ಘೋಷಿಸಿ, ಆ ಬೆಲೆಯಲ್ಲಿ ಸರ್ಕಾರ ಖರೀದಿಸಬೇಕು’ ಎಂದು ಹೊನ್ನರು ಪ್ರಕಾಶ್‌ ಒತ್ತಾಯಿಸಿದರು. 

‘ಮಲೆ ಮಹದೇಶ್ವರ ವನ್ಯಧಾಮದಲ್ಲಿರುವ ಚಂಗಡಿ ಗ್ರಾಮದ ಜನರು ಕಾಡನ್ನು ಬಿಟ್ಟು ನಾಡಿಗೆ ಬರುತ್ತೇವೆ ಎಂದು ಹೇಳಿದ್ದರೂ ಸರ್ಕಾರ ಸ್ಪಂದಿಸುತ್ತಿಲ್ಲ. ಕೂಡಲೇ ಚಂಗಡಿ ಗ್ರಾಮಕ್ಕೆ ಪುನರ್ವಸತಿಯನ್ನು ಕಲ್ಪಿಸಬೇಕು. ಅರಣ್ಯ ಇಲಾಖೆಯವರು ಮಲೆ ಮಹದೇಶ್ವರ ವನ್ಯಜೀವಿ ವಲಯದಲ್ಲಿ ದನ ಮೇಯಿಸುವವರ ಮೇಲೆ ದಬ್ಬಾಳಿಕೆ ಮಾಡುತಿದ್ದು, ಇತ್ತೀಚೆಗೆ ಪಾಲಾರ್ ಬಳಿ ಇದ್ದ ದೊಡ್ಡಿಯನ್ನು ಖಾಲಿ ಮಾಡಿ ಎಂದು ಹಿಂಸೆ ನೀಡುತ್ತಿದ್ದಾರೆ. ಕೂಡಲೇ ಅರಣ್ಯಾಧಿಕಾರಿಗಳ ಜೊತೆ ಮಾತನಾಡಿ ಅರಣ್ಯದಲ್ಲಿ ದೊಡ್ಡಿಯನ್ನು ಹಾಕಲು ಅನುಮತಿ ನೀಡಬೇಕು’ ಎಂದು ಒತ್ತಾಯಿಸಿದರು. 

‘ಹಿಂದಿನ ಡಿಸಿಎಫ್‌ ವಿ.ಏಡುಕುಂಡಲು ಅವರು ಜನ ವನ ಸೇತುವೆ ಸಾರಿಗೆ ಎಂಬ ಕಾರ್ಯಕ್ರಮ ಹಮ್ಮಿಕೊಂಡು ನಾಲ್ಕು ವಾಹನಗಳನ್ನು ಬಿಟ್ಟಿದ್ದರು. ಅದನ್ನೂ ಸ್ಥಗಿತಗೊಳಿಸಲಾಗಿದೆ. ಶೀಘ್ರ ಅಧಿಕಾರಿಗಳ ಸಭೆ ಕರೆದು ಈ ಬಗ್ಗೆ ತೀರ್ಮಾನಿಸಬೇಕು. ಕಾಡು ಪ್ರಾಣಿಗಳಿಂದ ಕುಗ್ರಾಮದ ಜನರಿಗೆ ಪ್ರಾಣ ಹಾನಿ ಅಥವಾ ರೈತರ ಬೆಳೆಗೆ ಹಾನಿ ಉಂಟಾದರೆ ಮೊದಲೇ ಅರಣ್ಯ ಸಂರಕ್ಷಣಾಧಿಕಾರಿ ಮೇಲೆ ಎಫ್ಐಆರ್ ದಾಖಲು ಮಾಡಬೇಕು’ ಎಂದು ಒತ್ತಾಯಿಸಿದರು. 

ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ‘ನಿಮ್ಮ ಎಲ್ಲ ಸಮಸ್ಯೆಗಳನ್ನು ಸ್ಥಳೀಯ ಶಾಸಕರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು. ಈಗಾಗಲೇ ಸಾಲೂರು ಮಠದ ಶ್ರೀಗಳು ಹಾಗೂ ಶಾಸಕ ಎಂ.ಆರ್‌.ಮಂಜುನಾಥ್‌ ಗಮನಕ್ಕೆ ತಂದಿದ್ದಾರೆ. ಕೂಡಲೇ ಶಾಸಕರ ಸಭೆ ಕರೆದು ನಿರ್ಧಾರ ತೆಗೆದುಕೊಳ್ಳಲಾಗುವುದು’ ಎಂದು ಭರವಸೆ ನೀಡಿದರು. 

ಸಾಲೂರು ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ, ಹನೂರು ಶಾಸಕ ಎಂ.ಆರ್‌.ಮಂಜುನಾಥ್‌ ರೈತ ಮುಖಂಡರು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT