ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಂಗನವಾಡಿಗಳಲ್ಲಿ ಚಿಣ್ಣರ ಚಿಲಿಪಿಲಿ-ಗೆಳೆಯರೊಂದಿಗೆ ಬೆರೆತ ಪುಟಾಣಿಗಳು

ಪೂರ್ವ ಪ್ರಾಥಮಿಕ ತರಗತಿಗಳೂ ಆರಂಭ, ಗೆಳೆಯರೊಂದಿಗೆ ಬೆರೆತ ಪುಟಾಣಿಗಳು
Last Updated 9 ನವೆಂಬರ್ 2021, 5:05 IST
ಅಕ್ಷರ ಗಾತ್ರ

ಚಾಮರಾಜನಗರ:‌ಜಿಲ್ಲೆಯಾದ್ಯಂತ ಸೋಮವಾರ ಅಂಗನವಾಡಿ ಕೇಂದ್ರಗಳು, ಪೂರ್ವ ಪ್ರಾಥಮಿಕ ತರಗತಿಗಳು (ಎಲ್‌ಕೆಜಿ, ಯುಕೆಜಿ) ಆರಂಭಗೊಂಡವು. ಒಂದೂಮುಕ್ಕಾಲು ವರ್ಷಗಳ ಬಳಿಕ ಪುಟಾಣಿ ಮಕ್ಕಳು ತಮ್ಮ ಸಹಪಾಠಿಗಳೊಂದಿಗೆ ಬೆರೆತರು.

ಪೋಷಕರೊಂದಿಗೆ ಸಂಭ್ರಮದಿಂದ ಅಂಗನವಾಡಿ ಹಾಗೂ ಪೂರ್ವ ಪ್ರಾಥಮಿಕ ಶಾಲೆಗಳಿಗೆ ಹೋದ ಚಿಣ್ಣರನ್ನು ಅಂಗನವಾಡಿ ಕಾರ್ಯಕರ್ತೆಯರು, ಸಹಾಯಕಿಯರು, ಪೂರ್ವ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕರು ಆತ್ಮೀಯವಾಗಿ ಪ್ರೀತಿಯಿಂದ ಬರಮಾಡಿಕೊಂಡರು.

ಚಿಣ್ಣರಿಗೆ ಆರತಿ ಬೆಳಗಿ, ಸಿಹಿ ಹಂಚಿ, ಹೂವು ನೀಡಿ ಸ್ವಾಗತಿಸಲಾಯಿತು. ಖುಷಿಯಿಂದಲೇ ತರಗತಿಗಳಿಗೆ ಹೋದ ಪುಟಾಣಿಗಳು ಹೊಸ ಸ್ನೇಹಿತರನ್ನು ಮಾಡಿಕೊಂಡರು. ಅವರೊಂದಿಗೆ ಆಟವಾಡಿದರು. ಶಿಕ್ಷಕರೊಂದಿಗೂ ಬೆರೆತು ಸಂತಸ ಪಟ್ಟರು.

ಜಿಲ್ಲೆಯಲ್ಲಿ ಒಟ್ಟು 1,425 ಅಂಗನವಾಡಿ ಕೇಂದ್ರಗಳಿವೆ. ಇವುಗಳಲ್ಲಿ 50 ಮಿನಿ ಅಂಗನವಾಡಿ ಕೇಂದ್ರಗಳು. ಎಲ್ಲ ಕೇಂದ್ರಗಳೂ ಸೋಮವಾರ ತೆರೆದವು. ಕೋವಿಡ್‌ ಸೇರಿದಂತೆ ಇನ್ನಿತರ ಕರ್ತವ್ಯಗಳಲ್ಲಿ ತೊಡಗಿದ್ದ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕರ್ತವ್ಯಕ್ಕೆ ಹಾಜರಾದರು.

‘ನಾಲ್ಕೂ ತಾಲ್ಲೂಕುಗಳಲ್ಲಿ ಎಲ್ಲ ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕಿಯರು ಕರ್ತವ್ಯಕ್ಕೆ ಹಾಜರಾಗಿದ್ದೇವೆ. ಮಕ್ಕಳನ್ನು ಪ್ರೀತಿಯಿಂದ, ಹೂವು ಸಿಹಿ ನೀಡಿ ಸ್ವಾಗತಿಸಿದ್ದೇವೆ. ಕೋವಿಡ್‌ ನಿಯಮ ಪಾಲನೆಗೂ ಒತ್ತು ನೀಡಿದ್ದೇವೆ’ ಎಂದುರಾಜ್ಯ ಅಂಗನವಾಡಿ ನೌಕರರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷೆ ಸುಜಾತ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಚಿಣ್ಣರನ್ನು ಸ್ವಾಗತಿಸಿದ ಸಿಇಒ: ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೆ.ಎಂ.ಗಾಯತ್ರಿ ಅವರು ಸೋಮವಾರ ಚಾಮರಾಜನಗರ ವ್ಯಾಪ್ತಿಯ ಎರಡು ಅಂಗನವಾಡಿ ಕೇಂದ್ರಗಳಿಗೆ (ಗಾಳಿಪುರ ಮತ್ತು ಕರಿನಂಜನಪುರ) ಭೇಟಿ ನೀಡಿ ಮಕ್ಕಳನ್ನು ಸ್ವಾಗತಿಸಿದರು. ಹೂವು ನೀಡಿ ಬರಮಾಡಿಕೊಂಡ ಅವರು, ಚಿಣ್ಣರೊಂದಿಗೆ ಆತ್ಮೀಯವಾಗಿ ಬೆರೆತರು. ಕೋವಿಡ್‌ ನಿಯಮ ಪಾಲನೆಗೆ ಕೈಗೊಳ್ಳಲಾಗಿರುವ ಕ್ರಮಗಳನ್ನು ಪರಿಶೀಲಿಸಿದರು.

ಅಂಗನವಾಡಿ ಕೇಂದ್ರಗಳ ಪುನರಾರಂಭದ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕಿ ಗೀತಾ ಲಕ್ಷ್ಮಿ ಅವರು, ‘ಸರ್ಕಾರದ ಸೂಚನೆಯನ್ನು ಕಟ್ಟುನಿಟ್ಟಾಗಿ ಪಾಲನೆಗೆ ಒತ್ತು ನೀಡಿ ಎಲ್ಲ ಕೇಂದ್ರಗಳನ್ನೂ ಆರಂಭಿಸಲಾಗಿದೆ. ಪೋಷಕರೇ ಖುದ್ದಾಗಿ ಮಕ್ಕಳನ್ನು ಕರೆ ತಂದಿದ್ದಾರೆ. ಅಂಗನವಾಡಿ ಕೇಂದ್ರದಲ್ಲಿ ಸಿಬ್ಬಂದಿ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಯ ಜನಪ್ರತಿನಿಧಿಗಳು ಮಕ್ಕಳನ್ನು ಸ್ವಾಗತಿಸಿದ್ದಾರೆ. ಮಕ್ಕಳು ಖುಷಿಯಿಂದ ಸಮಯ ಕಳೆದಿದ್ದಾರೆ’ ಎಂದರು.

‘ಸುರಕ್ಷಿತ ಅಂತರವನ್ನು ಕಟ್ಟುನಿಟ್ಟಾಗಿ ಕಾಯ್ದುಕೊಳ್ಳಬೇಕು ಎಂದು ಸೂಚಿಸಲಾಗಿದೆ. ಮಕ್ಕಳ ಹಾಜರಾತಿ ಕಡ್ಡಾಯವಲ್ಲ. ಹಾಗಿದ್ದರೂ, ಮೊದಲ ದಿನ ಪೋಷಕರು ಹಾಗೂ ಮಕ್ಕಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬೆಳಿಗ್ಗೆ 10ರಿಂದ 12 ಗಂಟೆಯವರೆಗೆ ಎರಡು ಗಂಟೆಗಳಷ್ಟು ಹೊತ್ತು ಮಾತ್ರ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಲ್ಲಿ ಬಿಡಲು ಪೋಷಕರಿಗೆ ಸೂಚಿಸಲಾಗಿದೆ. ಪೋಷಕರು ಬಯಸಿದರೆ, ಹೆಚ್ಚು ಹೊತ್ತು ಇರಬಹುದು. ಆದರೆ, ಸದ್ಯಕ್ಕೆ ಕೇಂದ್ರಗಳಲ್ಲಿ ಆಹಾರ ನೀಡುವುದಿಲ್ಲ. ಮನೆಗೆ ವಿತರಿಸಲಾಗುತ್ತಿದೆ’ ಎಂದು ಗೀತಾ ಲಕ್ಷ್ಮಿ ಅವರು ‘ಪ್ರಜಾವಾಣಿ’ಗೆ ತಿಳಿಸಿದರು.

ಪೂರ್ವ ಪ್ರಾಥಮಿಕ ಶಾಲೆಗಳಲ್ಲೂ ಸಂಭ್ರಮ

ಜಿಲ್ಲೆಯ ಖಾಸಗಿ ಶಾಲೆಗಳ ಪೂರ್ವ ಪ್ರಾಥಮಿಕ ತರಗತಿಗಳಲ್ಲೂ ಸೋಮವಾರ ಮನೆ ಮಾಡಿತ್ತು. ಬಹುತೇಕ ಎಲ್ಲ ಶಾಲೆಗಳಲ್ಲಿ ಎಲ್‌ಕೆಜಿ, ಯುಕೆಜಿಯ ಭೌತಿಕ ತರಗತಿಗಳು ಸೋಮವಾರದಿಂದ ಪುನರಾರಂಭಗೊಂಡಿದೆ. ಇದುವರೆಗೂ ಶಿಕ್ಷಕರು ಆನ್‌ಲೈನ್‌ ಮೂಲಕ ಪಾಠ ಮಾಡುತ್ತಿದ್ದರು.

ಶಾಲೆಗಳಲ್ಲಿ ಚಿಣ್ಣರನ್ನು ಆತ್ಮೀಯವಾಗಿ ಬರಮಾಡಿಕೊಳ್ಳಲಾಯಿತು. ಆನ್‌ಲೈನ್‌ನಲ್ಲಿ ಮಾಡಿದ ಪಾಠವನ್ನು ಮಕ್ಕಳು ಎಷ್ಟು ಚೆನ್ನಾಗಿ ಅಭ್ಯಾಸ ಮಾಡಿದ್ದಾರೆ ಎಂಬುದನ್ನು ಶಿಕ್ಷಕರು ಪರೀಕ್ಷಿಸಿದರು. ಆನ್‌ಲೈನ್‌ನಲ್ಲೇ ಪಾಠ ಕೇಳಿಕೊಂಡಿದ್ದ ಮಕ್ಕಳಿಗೆ ನೇರ ತರಗತಿ ಮುದ ನೀಡಿದವು. ಹೊಸ ಸ್ನೇಹಿತರೊಂದಿಗೆ ಬೆರೆತು ಕಲೆತು ಆಟವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT