ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪ್ರಾಣಿ ದಾಳಿ: ಪತ್ತೆ ಮಾಡಿ ಸೆರೆ ಹಿಡಿಯಲು ಒತ್ತಾಯ

ಬಂಡೀಪುರ: ದಾಳಿ ಮಾಡಿದ್ದು ಹುಲಿಯೋ, ಚಿರತೆಯೋ ಮುಂದುವರಿದ ಜಿಜ್ಞಾಸೆ
Published 14 ಡಿಸೆಂಬರ್ 2023, 5:54 IST
Last Updated 14 ಡಿಸೆಂಬರ್ 2023, 5:54 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಕುಂದುಕೆರೆ ವಲಯದ ಆಡಿನ ಕಣಿವೆ ಪ್ರದೇಶದಲ್ಲಿ ಕುರಿಗಾಹಿ ಬಸವಯ್ಯ ಅವರನ್ನು ಕೊಂದಿರುವ ಪ್ರಾಣಿ ಯಾವುದು ಎಂಬುದನ್ನು ಪತ್ತೆ ಮಾಡಿ ಅದನ್ನು ಸೆರೆ ಹಿಡಿಯಲು ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ. 

ಘಟನೆಯ ನಂತರ ಆ ಭಾಗದ ಜನರು ಆತಂಕಗೊಂಡಿದ್ದು, ಜಮೀನುಗಳತ್ತ ಹೋಗುವುದಕ್ಕೂ ಭಯ ಪಡುತ್ತಿದ್ದಾರೆ. 

ಒಂದು ಕಿ.ಮೀ ಹೊತ್ತೊಯ್ದ ‍ಪ್ರಾಣಿ: ಬಸವವಯ್ಯ ಅವರು ಕಟ್ಟಿಗೆ ಮತ್ತು ಅರಣ್ಯ ಕಿರು ಉತ್ಪನ್ನಗಳ ಸಂಗ್ರಹಕ್ಕಾಗಿ ಸೋಮವಾರ ಕಾಲೊನಿ ಸಮೀಪದ ಕಾಡಿಗೆ ಹೋಗಿದ್ದರು. 

ಒಂದೂವರೆ ಕಿ.ಮೀ ದೂರದಲ್ಲಿ ಪ್ರಾಣಿ ಅದರ ಮೇಲೆ ದಾಳಿ ಮಾಡಿದೆ. ಆ ಸ್ಥಳದಿಂದ ಮತ್ತೆ ಒಂದು ಕಿ.ಮೀ ದೂರಕ್ಕೆ ದೇಹವನ್ನು ಎಳೆದೊಯ್ದಿದೆ. 

ಬಸವಯ್ಯ ಅವರಿಗೆ ಹುಡುಕಾಟ ನಡೆಸುತ್ತಿದ್ದ ಗ್ರಾಮಸ್ಥರಿಗೆ, ಗುಡ್ಡದ ಮಧ್ಯಭಾಗದಲ್ಲಿ ಅರಣ್ಯ ಗಡಿಯಿಂದ ಒಂದೂವರೆ ಕಿ.ಮೀ ದೂರದಲ್ಲಿ ಅವರು ಕೊಂಡೊಯ್ದಿದ್ದ ಕತ್ತಿ, ಹಗ್ಗ ಪತ್ತೆಯಾಗಿದೆ. ಅಲ್ಲಿ ರಕ್ತದ ಕಲೆಗಳೂ ಇದ್ದವು. ಅದರ ಜಾಡನ್ನು ಹಿಡಿದು ಹೊರಟಾಗ ಮತ್ತೆ ಒಂದು ಕಿ.ಮೀ ದೂರದಲ್ಲಿ ಪ್ರಾಣಿ ತಿಂದ ಸ್ಥಿತಿಯಲ್ಲಿ ಬಸವಯ್ಯ ಅವರ ಮೃತದೇಹ ಕಂಡು ಬಂದಿತ್ತು. ಆ ಬಳಿಕ ಅವರು ಅರಣ್ಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ನಂತರ ಅಧಿಕಾರಿಗಳು, ಸಿಬ್ಬಂದಿ, ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. 

ಬಸವಯ್ಯ ಮೇಲೆ ದಾಳಿ ಮಾಡಿರುವುದು ಹುಲಿಯೋ ಚಿರತೆಯೋ ಎಂಬ ಜಿಜ್ಞಾಸೆ ಮುಂದುವರಿದಿರುವುದರ ನಡುವೆಯೇ, ಅದು ಹುಲಿಯಾಗಿರುವ ಸಾಧ್ಯತೆಯೇ ಹೆಚ್ಚು ಎಂದು ಇಲಾಖೆಯ ಕೆಳ ಹಂತದ ಸಿಬ್ಬಂದಿ ಹಾಗೂ ವನ್ಯಜೀವಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. 

‘ಬೇಟೆಯಾಡಿದ ನಂತರ  ಹುಲಿ ಮಾತ್ರ ಬೇಟೆಯನ್ನು ದೂರ ಎಳೆದುಕೊಂಡು ಹೋಗುತ್ತದೆ. ಅಲ್ಲದೇ ದೇಹವನ್ನು ತುಂಡು ತುಂಡಾಗಿ ಮಾಡುತ್ತದೆ. ಚಿರತೆ ಅಷ್ಟು ದೂರ ಕೊಂಡೊಯ್ಯವ ಸಾಧ್ಯತೆ ಕಡಿಮೆ. ಚಿರತೆಗಳು ಬೇಟೆಯಾಡಿದ ಪ್ರಾಣಿಯನ್ನು ಮರದ ಮೇಲಕ್ಕೆ ಹೊತ್ತೊಯ್ಯುವುದು ಜಾಸ್ತಿ’ ಎಂದು ಹೇಳುತ್ತಾರೆ ಅವರು.

‘ಬಸವಯ್ಯ ಅವರು 50 ಕೆಜಿಯಷ್ಟು ತೂಕ ಇದ್ದಿರಬಹುದು. ಹಾಗಾಗಿ, ದಾಳಿ ಮಾಡಿದ ಪ್ರಾಣಿ, ಅವರ ದೇಹವನ್ನು ತುಂಬಾ ದೂರಕ್ಕೆ ಎಳೆದುಕೊಂಡು ಹೋಗಿದೆ’ ಎಂದು ಹೇಳುತ್ತಾರೆ ಅರಣ್ಯ ಅಧಿಕಾರಿಗಳು. 

ಕೂದಲು ಪ್ರಯೋಗಾಲಯಕ್ಕೆ: ‘ದಾಳಿ ಮಾಡಿದ ಜಾಗದಲ್ಲಿ ಪ್ರಾಣಿಯ ಕೂದಲು ಸಿಕ್ಕಿದೆ. ಅದು ತೀರಾ ಚಿಕ್ಕದಾಗಿದ್ದು, ಮೇಲ್ನೋಟಕ್ಕೆ ಗುರುತಿಸಲು ಸಾಧ್ಯವಾಗಿಲ್ಲ. ಅದನ್ನು ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ’ ಎಂದು ಹುಲಿ ಯೋಜನೆ ನಿರ್ದೇಶಕ ಪಿ.ರಮೇಶ್‌ ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು. 

ಸೆರೆ ಹಿಡಿಯಿರಿ: ‘ಬಂಡೀಪುರಕ್ಕೆ ಹೊಂದಿಕೊಂಡಿರುವ ಮಂಗಲ ಭಾಗದಲ್ಲಿ ಈ ರೀತಿಯ ಘಟನೆ ಈವರೆಗೆ ನಡೆದಿರಲಿಲ್ಲ. ಮಂಗಲ, ಜಕ್ಕಳ್ಳಿ ಎಲಚೆಟ್ಟಿ ಭಾಗದಲ್ಲಿ ಜಾನುವಾರುಗಳನ್ನು ಕಾಡಿನ ಬಳಿ ಮೇಯಿಸುತ್ತಾರೆ. ಹುಲಿ, ಚಿರತೆಗಳು ಜಾನುವಾರುಗಳನ್ನು ಕೊಂದಿದೆ. ಆದರೆ ಜನರ ಮೇಲೆ ದಾಳಿ ಮಾಡಿರಲಿಲ್ಲ. ಈ ಘಟನೆಯಿಂದಾಗಿ ಜಾನುವಾರುಗಳನ್ನು ಕಾಡಿನ ಭಾಗದಲ್ಲಿ ಮೇಯಿಸಲೂ ಭಯವಾಗುತ್ತಿದೆ’ ಎಂದರು. 

‘ದಾಳಿ ಮಾಡಿರುವುದು ಹುಲಿಯಾಗಿರುವ ಸಾಧ್ಯತೆಯೇ ಹೆಚ್ಚಿದೆ. ಅದು ಮನುಷ್ಯನ ರುಚಿ ನೋಡಿರುವುದರಿಂದ ಮತ್ತೆ ಕಾಡಿನ ಹೊರಕ್ಕೆ ಬಂದು ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಹಾಗಾಗಿ, ಅದನ್ನು ಸೆರೆ ಹಿಡಿಯುವುದು ಒಳ್ಳೆಯದು’ ಎಂದು ಮಂಗಲ ಗ್ರಾಮದ ಉಮೇಶ್ ಒತ್ತಾಯಿಸಿದರು.    

‘ಈ ಭಾಗದಲ್ಲಿ ಗ್ರಾಮ ಸೇರಿದಂತೆ ಕೃಷಿ ಜಮೀನುಗಳು ಕಾಡಂಚಿನಲ್ಲಿ ಇದೆ. ಜನರಲ್ಲಿರುವ ಭಯ ಕಡಿಮೆಯಾಗಬೇಕಾದರೆ, ಆ ಪ್ರಾಣಿಯನ್ನು ಪತ್ತೆ ಹಚ್ಚಿ ಸೆರೆ ಹಿಡಿಯಬೇಕು’ ಎಂದು ಹೇಳಿದರು. 

ಪರಿಹಾರಕ್ಕೆ ಒತ್ತಾಯ

‘ಬಸವಯ್ಯ ಅವರು ಕಾಡಿನಿಂದ ಹೊರಗಿದ್ದಾಗಲೇ ಹುಲಿ ಅವರ ಮೇಲೆ ದಾಳಿ ಮಾಡಿ ಅರಣ್ಯಕ್ಕೆ ಎಳೆದುಕೊಂಡು ಹೋಗಿದೆ. ಹುಲಿಯನ್ನು ಸೆರೆ ಹಿಡಿಯುವುದರ ಜೊತೆಗೆ ಪರಿಹಾರವನ್ನು ನೀಡಬೇಕು’ ಎಂದು ಆಡಿನ ಕಣಿವೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಈ ಬಗ್ಗೆ ‘ಪ್ರಜಾವಾಣಿ’ಗೆ ‍ಪ್ರತಿಕ್ರಿಯಿಸಿದ ಹುಲಿ ಯೋಜನೆ ನಿರ್ದೇಶಕ ರಮೇಶ್‌ ಕುಮಾರ್‌ ‘ಮೃತ ದೇಹ ಪತ್ತೆಯಾಗಿರುವುದು ಮತ್ತು ಹುಲಿ ದಾಳಿ ಮಾಡಿರುವ ಜಾಗಗಳನ್ನು ಸಿಬ್ಬಂದಿಗಳು ಗುರುಸಿದ್ದಾರೆ. ದಾಳಿ ಕಾಡಿನಲ್ಲಿ ಆಗಿದೆ. ಇಲಾಖೆಯ ನಿಯಮದ ಪ್ರಕಾರ ಪರಿಹಾರ ಕೊಡಲು ಆಗುವುದಿಲ್ಲ ಹಾಗಿದ್ದರೂ ಸರ್ಕಾರದ ಗಮನಕ್ಕೆ ತರುತ್ತೇವೆ. ಇಲ್ಲವಾದಲ್ಲಿ ಮಾನವಿಯ ನೆಲೆಯಿಂದ ನಮ್ಮ ಸ್ಥಳೀಯ ನಿಧಿಯಿಂದ ಪರಿಹಾರ ಕೊಡಲು ಪ್ರಯತ್ನಿಸುತ್ತೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT