ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಚಾಮರಾಜನಗರ: ಬಿಎಸ್‌ಪಿಯಲ್ಲೂ ಟಿಕೆಟ್‌ಗಾಗಿ ಪೈಪೋಟಿ

ನಿವೃತ್ತ ಐಎಎಸ್‌ ಅಧಿಕಾರಿ ಶಿವರಾಮ್‌ ಪತ್ನಿ ವಾಣಿ ಅವರನ್ನು ಪಕ್ಷಕ್ಕೆ ಸೆಳೆಯುವ ಯತ್ನ
ಸೂರ್ಯನಾರಾಯಣ ವಿ.
Published 21 ಮಾರ್ಚ್ 2024, 6:38 IST
Last Updated 21 ಮಾರ್ಚ್ 2024, 6:38 IST
ಅಕ್ಷರ ಗಾತ್ರ

ಚಾಮರಾಜನಗರ: ಚಾಮರಾಜನಗರ ಮೀಸಲು ಕ್ಷೇತ್ರದಲ್ಲಿ ಸ್ಪರ್ಧಿಸಲು ಬಹುಜನ ಸಮಾಜ ಪಕ್ಷವೂ ಸಿದ್ಧತೆ ನಡೆಸಿದ್ದು, ಟಿಕೆಟ್‌ಗಾಗಿ ಮುಖಂಡರ ನಡುವೆ ಪೈಪೋಟಿ ಕಂಡು ಬಂದಿದೆ. 

ರಾಜ್ಯದಲ್ಲೇ ಬಿಎಸ್‌ಪಿ ಸಂಘಟನೆ ಪ್ರಬಲವಾಗಿರುವ ಪ್ರಮುಖ ಜಿಲ್ಲೆ ಚಾಮರಾಜನಗರ. ಎನ್‌.ಮಹೇಶ್‌ ಅವರು ಪಕ್ಷ ತೊರೆದ ಬಳಿಕ ಸಂಘಟನಾತ್ಮಕವಾಗಿ ಪಕ್ಷವು ಕೊಂಚ ದುರ್ಬಲವಾಗಿರುವಂತೆ ಕಂಡು ಬಂದರೂ, ಬಹುಜನ ಚಳವಳಿಗೆ ನಿಷ್ಠರಾಗಿರುವ ಸಾವಿರಾರು ಕಾರ್ಯಕರ್ತರು ಇನ್ನೂ ಇದ್ದಾರೆ.

ಕಳೆದ ವಿಧಾನಸಭಾ ಚುನಾವಣೆಯಲ್ಲೂ ಪಕ್ಷ ನಿರೀಕ್ಷಿತ ಸಾಧನೆ ಮಾಡದಿದ್ದರೂ, ಲೋಕಸಭಾ ಚುನಾವಣೆ ಎದುರಿಸಲು ಮುಖಂಡರು, ಕಾರ್ಯಕರ್ತರು ಸಜ್ಜಾಗುತ್ತಿದ್ದಾರೆ.

ಬಿಜೆಪಿ, ಕಾಂಗ್ರೆಸ್‌ಗೆ ಹೋಲಿಸಿದರೆ ಬಿಎಸ್‌ಪಿಯು ಬಹಿರಂಗವಾಗಿ ಸಿದ್ಧತೆ ಮಾಡಿಕೊಳ್ಳುತ್ತಿರುವುದು ಕಾಣಿಸುತ್ತಿಲ್ಲ. ಆದರೆ, ರಾಜ್ಯ ಮಟ್ಟದಲ್ಲಿ ಇತ್ತೀಚೆಗೆ ಪಕ್ಷದ ಮೂರು ಸಮಾವೇಶಗಳು ನಡೆದಿದ್ದು, ಚಾಮರಾಜನಗರದ ಕ್ಷೇತ್ರದ ಬಗ್ಗೆಯೂ ಚರ್ಚೆ ನಡೆದಿದೆ ಎಂದು ಹೇಳುತ್ತಾರೆ ಮುಖಂಡರು. 

‘ಇದೇ 9 ರಂದು ಬೆಂಗಳೂರಿನಲ್ಲಿ, 10ರಂದು ಹಾಸನದಲ್ಲಿ ಮತ್ತು 12ರಂದು ಕಲಬುರಗಿಯಲ್ಲಿ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದು, ಅಭ್ಯರ್ಥಿಗಳ ಆಯ್ಕೆಯ ಬಗ್ಗೆ ಚರ್ಚೆ ನಡೆದಿದೆ. ಆಕಾಂಕ್ಷಿಗಳ ಹೆಸರು ಕೂಡ ಅಲ್ಲಿ ಪ್ರಸ್ತಾಪವಾಗಿದೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ಆಕಾಂಕ್ಷಿಗಳು ಯಾರು?: ಚಾಮರಾಜನಗರ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಆಕಾಂಕ್ಷಿಗಳ ಪಟ್ಟಿಯಲ್ಲಿ ಮೂವರ ಹೆಸರು ಪ್ರಮುಖವಾಗಿ ಕೇಳಿ ಬರುತ್ತಿದೆ. ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದುನಿವೃತ್ತ ತಹಶೀಲ್ದಾರ್‌ ಹಾಗೂ ಚಾಮರಾಜನಗರ ಲೋಕಸಭಾ ಕ್ಷೇತ್ರ ಉಸ್ತುವಾರಿ ಸಿ.ಮಹಾದೇವಯ್ಯ, ಬಿಎಸ್‌ಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಹ.ರಾ.ಮಹೇಶ್‌, ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಎನ್‌.ನಾಗಯ್ಯ ಅವರ ಹೆಸರುಗಳು ಕೇಳಿ ಬರುತ್ತಿವೆ. 

ಅಭ್ಯರ್ಥಿ ಆಯ್ಕೆ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಶೀಘ್ರದಲ್ಲಿ ಅಭ್ಯರ್ಥಿ ಹೆಸರು ಘೋಷಣೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. 

ವಾಣಿ ಶಿವರಾಮ್‌ ಸೆಳೆಯುವ ಯತ್ನ: ಈ ಮಧ್ಯೆ, ಇತ್ತೀಚೆಗೆ ನಿಧನರಾದ ನಿವೃತ್ತ ಐಎಎಸ್‌ ಅಧಿಕಾರಿ ಕೆ.ಶಿವರಾಮ್‌ ಪತ್ನಿ ವಾಣಿ ಶಿವರಾಮ್‌ ಅವರನ್ನು ಪಕ್ಷಕ್ಕೆ ಸೆಳೆಯಲು ಬಿಎಸ್‌ಪಿ ಮುಖಂಡರು ಯತ್ನಿಸುತ್ತಿದ್ದಾರೆ. 

ಶಿವರಾಮ್‌ ಕ್ಷೇತ್ರದಿಂದ ಬಿಜೆಪಿ ಟಿಕೆಟ್‌ ಆಕಾಂಕ್ಷಿಯಾಗಿದ್ದರು. ಅವರು ನಿಧನರಾಗಿರುವುದರಿಂದ ಅವರ ಪತ್ನಿಗೆ ಟಿಕೆಟ್‌ ನೀಡಬೇಕು ಎಂಬ ಒತ್ತಾಯವನ್ನು ಅವರ ಬೆಂಬಲಿಗರು, ಛಲವಾದಿ ಮಹಾಸಭಾದವರು ಒತ್ತಾಯಿಸಿದ್ದರು. 

‌ಇ‌ತ್ತೀಚೆಗೆ ‌‌ನಗರದಲ್ಲಿ ನಡೆದಿದ್ದ ಶಿವರಾಮ್‌ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ್ದ ವಾಣಿ ಶಿವರಾಮ್‌ ಅವರು, ‘ನನ್ನ ಪತಿಯವರ ಆಸೆ ನನಸು ಮಾಡಲು ನಾನು ರಾಜಕೀಯಕ್ಕೆ ಬರುವೆ’ ಎಂದು ಹೇಳಿದ್ದರು. ಇದೇ ಸಂದರ್ಭದಲ್ಲಿ ಸಮಾರಂಭದಲ್ಲಿ ಭಾಗವಹಿಸಿದ್ದ ಬಿಎಸ್‌ಪಿ ಕಾರ್ಯಕರ್ತರು ಮತ್ತು ಮುಖಂಡರು, ಪಕ್ಷಕ್ಕೆ ಸೇರ್ಪಡೆಯಾಗುವಂತೆ ವಾಣಿ ಅವರಿಗೆ ಬಹಿರಂಗವಾಗಿ ಆಹ್ವಾನ ನೀಡಿದ್ದರು. 

‘ವಾಣಿ ಅವರ ಪಕ್ಷ ಸೇರ್ಪಡೆ ವಿಚಾರ ಪಕ್ಷದ ವೇದಿಕೆಯಲ್ಲೂ ಚರ್ಚೆಯಾಗಿದೆ. ಶಿವರಾಮ್‌ ಸಂಘಟಿಸಿದ್ದ ಛಲವಾದಿ ಮಹಾಸಭಾದ ಪದಾಧಿಕಾರಿಗಳೊಂದಿಗೂ ಬಿಎಸ್‌ಪಿ ಮುಖಂಡರು ಚರ್ಚೆ ನಡೆಸಿದ್ದಾರೆ. ಅವರು ಪಕ್ಷಕ್ಕೆ ಸೇರ್ಪಡೆಗೊಂಡರೆ, ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡುವ ಸಾಧ್ಯತೆಯನ್ನೂ ತಳ್ಳಿ ಹಾಕಲಾಗದು. ಮೂರ್ನಾಲ್ಕು ದಿನಗಳಲ್ಲಿ ಈ ಬಗ್ಗೆ ಸ್ಪಷ್ಟ ಚಿತ್ರಣ ಸಿಗಲಿದೆ’ ಎಂದು ಪಕ್ಷದ ಹಿರಿಯ ಮುಖಂಡರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು. 

ಹ.ರಾ.ಮಹೇಶ್‌
ಹ.ರಾ.ಮಹೇಶ್‌
ಎನ್‌.ನಾಗಯ್ಯ
ಎನ್‌.ನಾಗಯ್ಯ
ವಾಣಿ ಶಿವರಾಮ್‌
ವಾಣಿ ಶಿವರಾಮ್‌
ಚುನಾವಣೆಯಲ್ಲಿ ಪಕ್ಷ ಸ್ಪರ್ಧಿಸಲಿದೆ. ಸಿದ್ಧತೆ ನಡೆಯುತ್ತಿದೆ. ಆಕಾಂಕ್ಷಿಗಳು ಇರುವುದು ನಿಜ. ವರಿಷ್ಠರು ಚರ್ಚೆ ಮಾಡಿ ಅಭ್ಯರ್ಥಿ ಹೆಸರು ಘೋಷಿಸಲಿದ್ದಾರೆ
ಎನ್‌.ನಾಗಯ್ಯ ಬಿಎಸ್‌ಪಿ ಜಿಲ್ಲಾ ಘಟಕದ ಅಧ್ಯಕ್ಷ

ಚುನಾವಣೆಯಲ್ಲಿ ಸ್ಪರ್ಧೆ ಖಚಿತ: ವಾಣಿ

‘ಪ್ರಜಾವಾಣಿ’ಯೊಂದಿಗೆ ಮಾತನಾಡಿರುವ ವಾಣಿ ಶಿವರಾಮ್‌ ಅವರು ಚುನಾವಣೆಯಲ್ಲಿ ಚಾಮರಾಜನಗರ ಕ್ಷೇತ್ರದಿಂದ ಸ್ಪರ್ಧಿಸಲು ನಿರ್ಧರಿಸಿರುವುದಾಗಿ ಹೇಳಿದ್ದಾರೆ. ಆದರೆ ಬಿಎಸ್‌ಪಿ ಸೇರುವ ಬಗ್ಗೆ ಅವರು ಸ್ಪಷ್ಟವಾಗಿ ಏನೂ ಹೇಳಿಲ್ಲ. ಬಿಜೆಪಿ ನಾಯಕ ಬಿ.ಎಸ್‌.ಯಡಿಯೂರಪ್ಪ ಅವರು ತಮ್ಮ ಪತಿ ಶಿವರಾಮ್‌ಗೆ ಅನ್ಯಾಯ ಮಾಡಿದ್ದಾರೆ ಎಂದು ದೂರಿದ್ದಾರೆ.  ‘ಪತಿ ಶಿವರಾಮ್‌ ಅವರು ಲೋಕಸಭಾ ಕ್ಷೇತ್ರದಾದ್ಯಂತ ಸುತ್ತಾಡಿ ಪಕ್ಷ ಸಂಘಟನೆ ಮಾಡಿದ್ದರು. ಬಿಜೆಪಿಯವರು ಕಳೆದ ಚುನಾವಣೆ ಸಂದರ್ಭದಲ್ಲಿ ಕೊನೆ ಕ್ಷಣದಲ್ಲಿ ಶ್ರೀನಿವಾಸ ಪ್ರಸಾದ್‌ ಅವರಿಗೆ ಟಿಕೆಟ್‌ ಕೊಟ್ಟು ಅನ್ಯಾಯ ಮಾಡಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆನೇಕಲ್‌ ಕ್ಷೇತ್ರದಲ್ಲಿ ಕೆಲಸ ಮಾಡಲು ಯಡಿಯೂರಪ್ಪ ಸೂಚಿಸಿದ್ದರು. ಅದರಂತೆ ಅಲ್ಲೂ ಪಕ್ಷ ಸಂಘಟನೆ ಮಾಡಿದ್ದರು. ಆದರೆ ಯಡಿಯೂರಪ್ಪ ಆಗಲೂ ಟಿಕೆಟ್‌ ನೀಡಲಿಲ್ಲ. ಯಡಿಯೂರಪ್ಪ ಅವರಿಂದ ನಮಗೆ ಅನ್ಯಯವಾಗಿದೆ’ ಎಂದು ವಾಣಿ ಶಿವರಾಮ್‌ ತಿಳಿಸಿದರು.  ‘ಕ್ಷೇತ್ರದಲ್ಲಿ ಅವರಿಗೆ ತುಂಬಾ ಜನ ಬೆಂಬಲ ಇದೆ. ಅವರ ಬೆಂಬಲಿಗರು ಅಭಿಮಾನಿಗಳು ಈಗ ನನಗೆ ಬೆಂಬಲ ತೋರುತ್ತಿದ್ದಾರೆ. ‘ಅವರು ಮಾಡುತ್ತಿದ್ದ ಕೆಲಸವನ್ನು ನೀವು ಮುಂದುವರಿಸಬೇಕು’ ಎಂದು ಹೇಳುತ್ತಿದ್ದಾರೆ. ರಾಜಕೀಯದಲ್ಲಿದ್ದುಕೊಂಡು ಜನ ಸೇವೆ ಮಾಡುವುದು ಶಿವರಾಮ್‌ ಆಸೆಯಾಗಿತ್ತು. ಅದಕ್ಕಾಗಿ ನಾನು ರಾಜಕೀಯ ಸೇರಲು ನಿರ್ಧಾರ ಮಾಡಿದ್ದೇನೆ. ಚುನಾವಣೆಯಲ್ಲಿ ಸ್ಪರ್ಧಿಸಬೇಕು ಎಂದು ತೀರ್ಮಾನಿಸಿದ್ದೇನೆ. ಬಿಜೆಪಿಯು ಟಿಕೆಟ್‌ ಬೇರೆಯವರಿಗೆ ನೀಡಿದೆ. ಕಾಂಗ್ರೆಸ್‌ ಟಿಕೆಟ್‌ ನೀಡಬಹುದು ಎಂಬ ನಿರೀಕ್ಷೆಯಲ್ಲಿದ್ದೇನೆ’ ಎಂದರು.  ಬಿಎಸ್‌ಪಿ ಸೇರುತ್ತೀರಾ ಎಂದು ಕೇಳಿದ್ದಕ್ಕೆ ‘ಆ ‍ಪಕ್ಷ ಈ ಪಕ್ಷ ಎಂದು ನಾನು ನೋಡುತ್ತಿಲ್ಲ. ಶಿವರಾಮ್‌ ಅವರ ಆಸೆಯಂತೆ ನಡೆದುಕೊಳ್ಳುವುದಷ್ಟೇ ನನ್ನ ಕೆಲಸ. ಅದಕ್ಕಾಗಿ ಚುನಾವಣೆಗೆ ಸ್ಪರ್ಧಿಸುವೆ’ ಎಂದಷ್ಟೇ ಉತ್ತರಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT