ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಗುಂಡ್ಲುಪೇಟೆ: ಕ್ವಾರಿ ಬಂದ್‌, ಸಿಗುತ್ತಿಲ್ಲ ಜಲ್ಲಿ, ಕಲ್ಲು- ಬೆಲೆ ಏರುವ ಆತಂಕ

ಕೃತಕ ಅಭಾವ ಸೃಷ್ಟಿ–ರೈತರ ಆರೋಪ
Last Updated 13 ಮಾರ್ಚ್ 2022, 19:30 IST
ಅಕ್ಷರ ಗಾತ್ರ

ಗುಂಡ್ಲುಪೇಟೆ: ತಾಲ್ಲೂಕಿನ ಮಡಹಳ್ಳಿಯಲ್ಲಿ ಬಿಳಿಕಲ್ಲು ಕ್ವಾರಿ ಗುಡ್ಡ ಕುಸಿದ ‍ಪ್ರಕರಣದ ನಂತರ ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರ ಸೂಚನೆಯಂತೆ ಬಿಳಿಕಲ್ಲು ಕ್ವಾರಿ, ಕ್ರಷರ್‌ಗಳು ತಾತ್ಕಾಲಿಕವಾಗಿ ಸ್ಥಗಿತಗೊಂಡಿರುವುದರಿಂದ ತಾಲ್ಲೂಕಿನಲ್ಲಿ ಕಟ್ಟಡ ನಿರ್ಮಾಣಕ್ಕೆ ಬೇಕಾದ ಜಲ್ಲಿ, ಕಲ್ಲು, ಎಂ ಸ್ಯಾಂಡ್‌ ಸಿಗುತ್ತಿಲ್ಲ.

ಕ್ವಾರಿಗಳಿಂದ ಕಲ್ಲು ಪೂರೈಕೆಯಾಗದಿರುವುದರಿಂದ ಜಲ್ಲಿ,ಕಲ್ಲು, ಎಂ ಸ್ಯಾಂಡ್‌ ತಯಾರಿಕೆ ನಡೆಯುತ್ತಿಲ್ಲ ಎಂದು ಕ್ವಾರಿ, ಕ್ರಷರ್‌ ಮಾಲೀಕರು ಹೇಳುತ್ತಿದ್ದರೆ, ಸಾಕಷ್ಟು ಸಂಗ್ರಹ ಇದ್ದರೂ ಬೆಲೆ ಏರಿಸುವ ಉದ್ದೇಶದಿಂದ ಕೃತಕ ಅಭಾವ ಸೃಷ್ಟಿಸಲಾಗುತ್ತಿದೆ ಎಂದು ರೈತರು ಹಾಗೂ ಕಟ್ಟಡ ನಿರ್ಮಾಣದಲ್ಲಿ ತೊಡಗಿರುವವರು ದೂರಿದ್ದಾರೆ.

ವಾರದಿಂದ ಕ್ರಷರ್‌ಗಳು, ಕ್ವಾರಿಗಳು ಬಂದ್‌ ಆಗಿವೆ. ಹೀಗಾಗಿ ಕಟ್ಟಡ ನಿರ್ಮಾಣ ಸಾಮಗ್ರಿಗಳ ಪೂರೈಕೆ ಆಗುತ್ತಿಲ್ಲ. ಕಟ್ಟಡದ ಕೆಲಸಗಳೆಲ್ಲ ಅರ್ಧಕ್ಕೆ ನಿಂತಿವೆ. ಮುಂದಿನ ದಿನಗಳಲ್ಲಿ ಕಲ್ಲು, ಜಲ್ಲಿ, ಎಂ ಸ್ಯಾಂಡ್‌ನ ಬೆಲೆ ಗಗನಕ್ಕೆ ಏರುವ ಆತಂಕದದಲ್ಲಿ ಜನರಿದ್ದರೆ.

’ತಾಲ್ಲೂಕಿನ ಬೇಗೂರು ಹೋಬಳಿಯ ಹಿರಿಕಾಟಿ ಭಾಗದಲ್ಲಿ ಮತ್ತು ಮಡಹಳ್ಳಿ ಕ್ವಾರಿಗಳಿಂದ ಪ್ರತಿನಿತ್ಯ ಕ್ರಷರ್‌ಗಳಿಗೆ ನೂರಾರು ಲೋಡ್ ಕಲ್ಲು ಸರಬರಾಜು ಆಗುತ್ತಿತ್ತು. ಸಾಕಷ್ಟು ಪ್ರಮಾಣದಲ್ಲಿ ಕಟ್ಟಡ ನಿರ್ಮಾಣ ಸಾಮಗ್ರಿಗಳು ಕೆಲ ನಿಮಿಷಗಳಲ್ಲಿ ಸಿಗುತ್ತಿತ್ತು. ಆದರೆ ಗುಡ್ಡದಲ್ಲಿ ಗಣಿಗಾರಿಕೆ ಬಂದ್ ಮಾಡಿದಾಗಿನಿಂದ ಜೆಲ್ಲಿ, ಎಂ ಸ್ಯಾಂಡ್‌ಗಳಿಗೆ ಬೇಡಿಕೆ ಹೆಚ್ಚಾಗಿದ್ದು, ವಾರ ಕಾದರೂ ಸಿಗುತ್ತಿಲ್ಲ‘ ಎಂದು ಗಾರೆ ಕೆಲಸ ಮಾಡುವ ಶ್ರೀನಿವಾಸ್ ಅವರು ತಿಳಿಸಿದರು.

ಮಡಹಳ್ಳಿ ಗ್ರಾಮದ ವ್ಯಾಪ್ತಿಯ ಗುಮ್ಮನಗುಡ್ಡದ ಕ್ವಾರಿಯೊಂದರಲ್ಲೇ ನೂರಕ್ಕೂ ಹೆಚ್ಚಿನ ಟಿಪ್ಪರ್ ಲಾರಿಗಳು, 40 ಹಿಟಾಚಿ, 60 ಟ್ರ್ಯಾಕ್ಟರ್ ಕಾರ್ಯ ನಿರ್ವಹಿಸಿದ್ದವು. ಗಂಟೆಗೆ ಹತ್ತಕ್ಕೂ ಹೆಚ್ಚು ವಾಹನಗಳಲ್ಲಿ ಕಲ್ಲುಗಳು ಕ್ರಷರ್ ಸೇರುತ್ತಿತ್ತು.

‘ಮನೆ ಕಟ್ಟಡ ಕಾರ್ಯ ಆರಂಭಿಸಲು ಯೋಚಿಸಿ ಕಬ್ಬಿಣ ತಂದೆವು. ಅಗತ್ಯಬಿದ್ದಾಗ ತಕ್ಷಣವೇ ಜಲ್ಲಿ, ಎಂ ಸ್ಯಾಂಡ್ ಸಿಗುತ್ತದೆ ಎಂಬ ಕಾರಣಕ್ಕೆ ಸಂಗ್ರಹ ಮಾಡಿರಲಿಲ್ಲ. ದುರ್ಘಟನೆಯಿಂದ ಗುಡ್ಡ ಬಂದ್ ಆಯಿತು. ಎಲ್ಲ ಕೆಲಸಗಳಿಗೆ ಹಿನ್ನ‌ಡೆ ಆಯಿತು’ ಎಂದು ಪಟ್ಟಣದ ಸಿವಿಲ್ ಎಂಜಿನಿಯರ್ ಒಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಇತ್ತೀಚಿನ ದಿನಗಳಲ್ಲಿ ನೈಸರ್ಗಿಕ ಮರಳು ಸಿಗುತ್ತಿಲ್ಲ. ಆದ್ದರಿಂದ ಎಂ.ಸ್ಯಾಂಡ್ ಬಳಕೆ ಹೆಚ್ಚಾಗಿದೆ. ತಾಲ್ಲೂಕಿನ ಪ್ರತಿ ಗ್ರಾಮದಲ್ಲೂ ಕನಿಷ್ಠ ಐದಾರು ಹೊಸ ಮನೆಗಳು ನಿರ್ಮಾಣ ಆಗುತ್ತಿವೆ. ಯಾರೋ ಲಾಭದ ಉದ್ದೇಶಕ್ಕಾಗಿ ಮಾಡುವ ಕೆಲಸದಿಂದ ಜನರಿಗೆ ಕಟ್ಟಡಕ್ಕೆ ಬೇಕಾಗುವ ವಸ್ತುಗಳು ಸಿಗುತ್ತಿಲ್ಲ. ಒಂದು ವೇಳೆ ಶಾಶ್ವತವಾಗಿ ತಾಲ್ಲೂಕಿನಲ್ಲಿ ಗಣಿಗಾರಿಕೆ ಬಂದ್ ಆದರೆ ಕಟ್ಟಡ ಕೆಲಸಕ್ಕೆ ಬೇಕಾಗುವ ಎಲ್ಲ ವಸ್ತುಗಳ ಬೆಲೆ ಹೆಚ್ಚಾಗಿ ಜನರಿಗೆ ಹೊರೆಯಾಗುತ್ತದೆ. ಈಗಾಗಲೇ ಬೆಲೆ ಹೆಚ್ಚಳವಾಗಿದೆ‘ ಎಂದು ಎಂಜಿನಿಯರ್ ಮಹೇಶ್ ಅವರು ಬೇಸರ ವ್ಯಕ್ತಪಡಿಸಿದರು.

‘ಕೃತಕ ಅಭಾವ ಸೃಷ್ಟಿ’

ಕ್ರಷರ್‌ಗಳಲ್ಲಿ ಇನ್ನೂ ಒಂದು ವರ್ಷಕ್ಕೆ ಆಗುವಷ್ಟು ಕಲ್ಲು, ಎಂ ಸ್ಯಾಂಡ್‌, ಜಲ್ಲಿ ದಾಸ್ತಾನು ಇದೆ.ಬೆಲೆ ಹೆಚ್ಚಳ ಮಾಡುವ ಉದ್ದೇಶದಿಂದ ಮಾಲೀಕರು ಕೊಡುತ್ತಿಲ್ಲ. ಬೇರೆ ಜಿಲ್ಲೆಗಳಿಗೆ ಹೋಗುವುದನ್ನು ತಪ್ಪಿಸಿದರೆ ಸಾಕಾಗುತ್ತದೆ. ಸಂಬಂಧಿಸಿದ ಅಧಿಕಾರಿ ಹಾಗೂ ಮಾಲೀಕರ ಒಳ ಒಪ್ಪಂದದಿಂದ ಈ ರೀತಿ ಆಗಿದೆ. ಜಿಲ್ಲಾಧಿಕಾರಿಗಳ ತಂಡ ಕ್ರಷರ್‌ಗಳಿಗೆ ಭೇಟಿ ಮಾಡಲಿ. ಆಗ ವಾಸ್ತವಾಂಶ ತಿಳಿಯುತ್ತದೆ‘ ಎಂದು ರೈತ ಮುಖಂಡ ಮಹದೇವಪ್ಪ ಅವರು ತಿಳಿಸಿದರು.

––

ಏಕಾಏಕಿ ಕ್ಚಾರಿಗಳನ್ನು ಬಂದ್ ಮಾಡಿರುವುದು ಸರಿಯಲ್ಲ. ಕಲ್ಲು, ಮರಳು, ಜಲ್ಲಿ ಅಗತ್ಯ ವಸ್ತುಗಳು ಅಭಿವೃದ್ಧಿ ಕೆಲಸಗಳಿಗೆ ಕಡ್ಡಾಯವಾಗಿ ಬೇಕಿದೆ

–ಸೋಮಶೇಖರ್, ಬಿಳಿಕಲ್ಲು ಗಣಿ ಮತ್ತು ಕ್ರಷರ್ ಮಾಲೀಕರ ಸಂಘದ ಜಿಲ್ಲಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT