ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಾದಪ್ಪನ ಪ್ರತಿಮೆ: ಬೆಟ್ಟದ ಹೊಸ ಆಕರ್ಷಣೆ

ಮಹದೇಶ್ವರ ಬೆಟ್ಟ: 18ರಂದು ಬೊಮ್ಮಾಯಿ ಉದ್ಘಾಟನೆ, ₹ 20 ಕೋಟಿಯ ಯೋಜನೆ
Last Updated 14 ಮಾರ್ಚ್ 2023, 5:10 IST
ಅಕ್ಷರ ಗಾತ್ರ

ಮಹದೇಶ್ವರಬೆಟ್ಟ: ಇಲ್ಲಿನ ದೀಪದಗಿರಿ ಒಡ್ಡುವಿನಲ್ಲಿ ನಿರ್ಮಾಣವಾಗುತ್ತಿರುವ 108 ಎತ್ತರದ ಮಹದೇಶ್ವರ ಸ್ವಾಮಿಯ ಪ್ರತಿಮೆ ಕಾಮಗಾರಿ ಪೂರ್ಣಗೊಂಡಿದ್ದು, ಇದೇ 18ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅನಾವರಣಗೊಳಿಸಲಿದ್ದಾರೆ.

ಮಲೆ ಮಹದೇಶ್ವರಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು ಮುಖ್ಯಮಂತ್ರಿ ಅವರ ಭೇಟಿಯನ್ನು ದೃಢಪಡಿಸಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರು 17ರಂದೇ ಜಿಲ್ಲೆಗೆ ಭೇಟಿ ನೀಡಲಿದ್ದಾರೆ. ಇದೇ ವೇಳೆ ಬೆಳ್ಳಿ ರಥದ ಅನಾವರಣವೂ ನಡೆಯಲಿದೆ.

₹ 20 ಕೋಟಿ ವೆಚ್ಚದ ಯೋಜನೆ ಇದಾಗಿದ್ದು, ಸದ್ಯ, ಪ್ರತಿಮೆ ನಿರ್ಮಾಣ ಮಾತ್ರ ಪೂರ್ಣಗೊಂಡಿದೆ. ಮಹದೇಶ್ವರಸ್ವಾಮಿ ಜೀವನ ಚರಿತ್ರೆ ಸಾರುವ ಮ್ಯೂಸಿಯಂ, ಪ್ರತಿಮೆಯ ಸ್ಥಳದಲ್ಲಿ ಬಯಲು ರಂಗಮಂದಿರ, ಗಿಡಮೂಲಿಕಾ ವನಗಳ ಅಭಿವೃದ್ಧಿ ಸೇರಿದಂತೆ ಇತರೆ ಕಾಮಗಾರಿಗಳು ಇನ್ನಷ್ಟೇ ನಡೆಯಬೇಕಿವೆ.

ತರಾತುರಿಯಲ್ಲಿ ಪ್ರತಿಮೆ ಉದ್ಘಾಟನೆ ಮಾಡುತ್ತಿರುವುದಕ್ಕೆ ಸ್ಥಳೀಯ ಕೆಲವು ಭಕ್ತರು ಆಕ್ಷೇಪವನ್ನೂ ವ್ಯಕ್ತಪಡಿಸಿದ್ದಾರೆ. ಶೌಚಾಲಯದಂತಹ ಕನಿಷ್ಠ ಸೌಲಭ್ಯವನ್ನೂ ಕಲ್ಪಿಸಿದೆ ಪ್ರತಿಮೆ ಉದ್ಘಾಟನೆ ಮಾಡಿದರೆ ಹೇಗೆ ಎಂದು ಅವರು ಪ್ರಶ್ನಿಸಿದ್ದಾರೆ.

ಶಿವರಾತ್ರಿ ಜಾತ್ರೆಯ ದಿನ ಬೆಟ್ಟಕ್ಕೆ ಭೇಟಿ ನೀಡಿದ್ದ ಜಿಲ್ಲಾ ಉಸ್ತುವಾರಿ ಸಚಿವ ವಿ.ಸೋಮಣ್ಣ ಅವರು ಪ್ರತಿಮೆ ಕಾಮಗಾರಿಯನ್ನು ಪರಿಶೀಲಿಸಿ, ಮಾರ್ಚ್‌ 10ರೊಳಗಾಗಿ ಪ್ರತಿಮೆ ಹಸ್ತಾಂತರಿಸುವಂತೆ ಗುತ್ತಿಗೆದಾರರಿಗೆ ಸೂಚಿಸಿದ್ದರು.

ಸದ್ಯ, ಮಹದೇಶ್ವರಸ್ವಾಮಿ ದೇವಾಲಯದಿಂದ ಪ್ರತಿಮೆ ಇರುವ ಜಾಗಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಮೆಟ್ಟಿಲು ಅಳವಡಿಸುವ ಕಾರ್ಯ ಭರದಿಂದ ಸಾಗಿದೆ.

ಯೋಜನೆ ಅನುಷ್ಠಾನ ವಿಳಂಬ: ಮಹದೇಶ್ವರಬೆಟ್ಟದಲ್ಲಿ ಮಾದಪ್ಪನ ಬೃಹತ್‌ ಪ್ರತಿಮೆ ನಿರ್ಮಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ದಿವಂಗತ ಎಚ್‌.ಎಸ್‌.ಮಹದೇವ ಪ್ರಸಾದ್‌ ಅವರ ಕನಸಾಗಿತ್ತು. 2016ರಲ್ಲಿ ಅಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2016ರ ಸೆಪ್ಟೆಂಬರ್‌ನಲ್ಲಿ ಯೋಜನೆ ಘೋಷಿಸಿದ್ದರು. ₹ 20 ಕೋಟಿ ವೆಚ್ಚದ ಈ ಯೋಜನೆ ಜಮೀನು ಸ್ವಾಧೀನ ವಿಳಂಬದಿಂದಾಗಿ ತಡವಾಗಿತ್ತು.

2019ರ ಫೆಬ್ರುವರಿಯಲ್ಲಿ ಕಾಮಗಾರಿಗೆ ಚಾಲನೆ ಸಿಕ್ಕಿತ್ತು. 2021ರ ಮಾರ್ಚ್ ತಿಂಗಳಲ್ಲಿ ಮೊದಲ ಹಂತದ ನೆಲಮಹಡಿಯ (ಕಲ್ಲು ಬಂಡೆಯ ರಚನೆ) ಕಾಮಗಾರಿ ಮುಕ್ತಾಯವಾಗಿತ್ತು. ಈಗ ಪ್ರತಿಮೆಯೂ ಸಿದ್ಧವಾಗಿದ್ದು, ಸ್ಥಳೀಯರು ಸೇರಿದಂತೆ ಪ್ರವಾಸಿಗರು ಹಾಗೂ ಭಕ್ತರು ಸ್ಥಳಕ್ಕೆ ಭೇಟಿ ನೀಡಿ ಪವಾಡ ಪುರುಷನ ಬೃಹತ್‌ ಪ್ರತಿಮೆ ಕಣ್ತುಂಬಿಕೊಳ್ಳುತ್ತಿದ್ದಾರೆ.

ಪ್ರತಿಮೆ ಹೇಗಿದೆ? ಏನೇನಿದೆ?

ಗದಗದ ಸಿಎಸ್‌ಎಪಿ ಆರ್ಕಿಟೆಕ್ಟ್‌ ಸಂಸ್ಥೆಯು ಪ್ರತಿಮೆ ನಿರ್ಮಿಸಿದೆ. ಶ್ರೀಧರ್ ಎಂಬುವವರು ಪ್ರತಿಮೆಯ ಶಿಲ್ಪಿಯಾಗಿದ್ದು, ಮುರ್ಡೇಶ್ವರದ ಶಿವನ ಮೂರ್ತಿ, ಬಸವ ಕಲ್ಯಾಣದದಲ್ಲಿ ಬೃಹತ್‌ ಬಸವಣ್ಣನ ಪ್ರತಿಮೆಗಳ ರೂವಾರಿ ಇವರು.

ಹನೂರು ಭಾಗದಿಂದ ಬೆಟ್ಟಕ್ಕೆ ಬರುವವರು ಆನೆದಿಂಬ ತಲುಪುತ್ತಿದ್ದಂತೆಯೇ ಹುಲಿಮೇಲೆ ಕುಳಿತ ಮಾದಪ್ಪನ ಪ್ರತಿಮೆಯ ಸೊಬಗು ಕಾಣಬಹುದು. ತಮಿಳುನಾಡಿನಿಂದ ಬಂದರೆ ಗರಿಕೆಕಂಡಿ ಸಿಗುತ್ತಿದ್ದಂತೆ ಮಾದಪ್ಪನನ್ನು ಕಣ್ತುಂಬಿಕೊಳ್ಳಬಹುದು.

108 ಅಡಿ ಎತ್ತರ ‌ಪ್ರತಿಮೆಯು ಎರಡು ಸ್ತರದಲ್ಲಿ ನಿರ್ಮಾಣವಾಗಿದೆ. ಕಲ್ಲು ಬಂಡೆಯ ರಚನೆಯ ಮೇಲೆ ವ್ಯಾಘ್ರನ ಮೇಲೆ ಕುಳಿತ ತ್ರಿಶೂಲ ಹಿಡಿದ ಮಹದೇಶ್ವರ ಸ್ವಾಮಿಯ ಪ್ರತಿಮೆ ರೂಪಿಸಲಾಗಿದೆ.

ಕಲ್ಲುಬಂಡೆಯಾಕೃತಿಯ ರಚನೆಯಲ್ಲಿ ಗುಹೆಯ ಮಾದರಿಯಲ್ಲಿ ಎರಡು ಮಹಡಿಗಳಿವೆ. ತಳಭಾಗದಲ್ಲಿ ಮಹದೇಶ್ವರ ಬೆಟ್ಟದ ಚಾರಿತ್ರಿಕ ಹಿನ್ನಲೆ ಸಾರುವ ಕಲಾಕೃತಿ ಚಿತ್ರಗಳ ರಚನೆ, ಭಕ್ತರ ವಿಶ್ರಾಂತಿ ಸ್ಥಳಾವಕಾಶ ಸೇರಿದಂತೆ ಭಕ್ತರು, ಪ್ರವಾಸಿಗರಿಗೆ ಮಹದೇಶ್ವರ ಚರಿತ್ರೆ, ಪರಂಪರೆ ಸಾರುವ ಮ್ಯೂಸಿಯಂ ನಿರ್ಮಾಣವಾಗಲಿದೆ.

ಪ್ರತಿಮೆ ಜೊತೆಗೆ ಬೆಳ್ಳಿ ರಥ ಅನಾವರಣ

‘ಪ್ರತಿಮೆ ನಿರ್ಮಾಣ ಕೆಲಸ ಮುಗಿದಿದೆ. 18ರಂದು ಮುಖ್ಯಮಂತ್ರಿಯವರು ಕ್ಷೇತ್ರಕ್ಕೆ ಬಂದು ಪ್ರತಿಮೆ ಅನಾವರಣ ಮಾಡಲಿದ್ದಾರೆ. ಇದೇ ಸಂದರ್ಭದಲ್ಲಿ ಬೆಳ್ಳಿ ರಥವನ್ನೂ ಉದ್ಘಾಟಿಸಲಿದ್ದಾರೆ. ಉದ್ಘಾಟನೆಯ ಬಳಿಕ ಮಹದೇಶ್ವರರ ಚರಿತ್ರೆ ಸಾರುವ ಮ್ಯೂಸಿಯಂ ಸ್ಥಾಪಿಸಲಾಗುವುದು’ ಎಂದು ಪ್ರಾಧಿಕಾರದ ಕಾರ್ಯದರ್ಶಿ ಎಸ್‌.ಕಾತ್ಯಾಯಿನಿದೇವಿ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT