ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಸಾಪ ಚುನಾವಣೆ: ಅಧ್ಯಕ್ಷ ಸ್ಥಾನಕ್ಕೆ ಮಹೇಶ ಜೋಶಿ ಸ್ಪರ್ಧೆ

Last Updated 3 ಡಿಸೆಂಬರ್ 2020, 11:46 IST
ಅಕ್ಷರ ಗಾತ್ರ

ಚಾಮರಾಜನಗರ: ಮುಂದಿನ ವರ್ಷ ನಡೆಯಲಿರುವ ಕನ್ನಡ ಸಾಹಿತ್ಯ ಪರಿಷತ್ (ಕಸಾಪ)‌ ಚುನಾವಣೆಯಲ್ಲಿ ಪರಿಷತ್ತಿನ ರಾಜ್ಯ ಅಧ್ಯಕ್ಷ ಸ್ಥಾನಕ್ಕೆ ದೂರದರ್ಶನದ ಹೆಚ್ಚುವರಿ ಮಹಾನಿರ್ದೇಶಕರಾಗಿ ನಿವೃತ್ತಿಯಾಗಿರುವ ಡಾ.ಮಹೇಶ ಜೋಶಿ ಅವರು ಸ್ಪರ್ಧಿಸಲಿದ್ದಾರೆ.

ನಗರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನು ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಎಂದು ಕರೆದುಕೊಳ್ಳುವುದಿಲ್ಲ. ಆ ಸ್ಥಾನದ ಸೇವಾಕಾಂಕ್ಷಿ. ಅಧಿಕಾರದ ಲಾಲಸೆಯಿಂದ ನಾನು ಸ್ಪರ್ಧಿಸುತ್ತಿಲ್ಲ. ಕನ್ನಡದ ರಾಯಭಾರಿಯಾಗಿ ಕೆಲಸ ಮಾಡಿ ಹೊಸ ದಿಕ್ಕನ್ನು ಸೃಷ್ಟಿಸುವ ಉದ್ದೇಶದಿಂದ ಕಣಕ್ಕಿಳಿಯುತ್ತಿದ್ದೇನೆ’ ಎಂದು ಅವರು ಹೇಳಿದರು.

‘ಅಧ್ಯಕ್ಷನಾಗಿ ಆಯ್ಕೆಯಾದರೆ, ಕನ್ನಡ ಸಾಹಿತ್ಯ ಪರಿಷತ್ತನ್ನು ಜನರ ಹತ್ತಿರಕ್ಕೆ ತರಲು ಪ್ರಮುಖವಾಗಿ ನಾಲ್ಕು ಯೋಜನೆಗಳನ್ನು ಹಾಕಿಕೊಂಡಿದ್ದೇನೆ. ಸದಸ್ಯರಾಗಲು ಸರಳೀಕರಣ ವ್ಯವಸ್ಥೆ, ಪರಿಷತ್ತಿನ ಸುಧಾರಣೆ, ಆಡಳಿತದಲ್ಲಿ ಪಾರದರ್ಶಕತೆ, ವ್ಯವಸ್ಥೆಯ ಶುದ್ಧೀಕರಣ ಮಾಡುತ್ತೇನೆ. ಪರಿಷತ್ತಿಗಾಗಿ ಆ್ಯಪ್‌ ಅಭಿವೃದ್ಧಿ ಪಡಿಸಿ, ಅದರ ಮೂಲಕ ಸದಸ್ಯತ್ವಕ್ಕೆ ಅರ್ಜಿ ಹಾಕಲು ಅವಕಾಶ ಕಲ್ಪಿಸಲಾಗುವುದು’ ಎಂದರು.

ಗಡಿ ಜಿಲ್ಲೆಯಲ್ಲಿ ಸಮ್ಮೇಳನ: ‘ಗಡಿ ಜಿಲ್ಲೆ ಚಾಮರಾಜನಗರಕ್ಕೆ ಹೆಚ್ಚು ಆದ್ಯತೆ ನೀಡಲಾಗುವುದು. ಇಡೀ ರಾಜ್ಯದಲ್ಲಿ ಇದುವರೆಗೆ ಚಾಮರಾಜನಗರ, ಬೆಂಗಳೂರು ಗ್ರಾಮಾಂತರ ಹಾಗೂ ಯಾದಗಿರಿ ಜಿಲ್ಲೆಗಳಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆದಿಲ್ಲ. ನಾನು ಆಯ್ಕೆಯಾದರೆ ಒಂದು ವರ್ಷ ಚಾಮರಾಜನಗರದಲ್ಲಿ ಖಂಡಿತವಾಗಿ ಸಮ್ಮೇಖನ ನಡೆಸಲಾಗುವುದು. ಕನ್ನಡ ಭವನಕ್ಕೆ ನಿವೇಶನ ಇದ್ದರೂ ಕಟ್ಟಡ ಇಲ್ಲ. ಭವನ ನಿರ್ಮಿಸಲಾಗುವುದು. ಗಡಿ ಭಾಗದಲ್ಲಿ ಕನ್ನಡ ಉಳಿಸಲು ಒತ್ತು ನೀಡಲಾಗುವುದು’ ಎಂದರು.

ನಿಯಮಗಳ ಅನುಸಾರ ಸ್ಪರ್ಧೆ: ಇತ್ತೀಚಿನ ವರ್ಷಗಳಲ್ಲಿ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸಾಹಿತಿಗಳನ್ನು ಬಿಟ್ಟು, ಸಾಹಿತಿಗಳಲ್ಲದವರು, ನಿವೃತ್ತ ಅಧಿಕಾರಿಗಳು ಸ್ಪರ್ಧಿಸುವ ಪ್ರವೃತ್ತಿ ಹೆಚ್ಚಾಗುತ್ತಿದೆಯಲ್ಲಾ ಎಂಬ ಪ್ರಶ್ನೆಗೆ ಉತ್ತರಿಸಿದ ಮಹೇಶ ಜೋಶಿ ಅವರು, ‘ಪರಿಷತ್ತಿನ ಸದಸ್ಯರಾಗಲು ಅಥವಾ ಅಧ್ಯಕ್ಷರಾಗಲು ಸಾಹಿತಿಯೇ ಆಗಬೇಕು ಎಂಬ ನಿಯಮ ಇಲ್ಲ. ಪರಿಷತ್ತಿನ ಸದಸ್ಯರಾಗಿ ಹತ್ತು ವರ್ಷ ಅನುಭವವಿರುವ, ಕನ್ನಡದ ನೆಲ, ಜಲ, ಸಂಸ್ಕೃತಿ, ಸಾಹಿತ್ಯ ಬಗ್ಗೆ ಅರಿವಿರುವ ಯಾರು ಬೇಕಾದರೂ ಸ್ಪರ್ಧಿಸಬಹು್ಉ’ ಎಂದರು.

ಮುಖಂಡರಾದ ರಾಮಮೂರ್ತಿ, ಗಂಗಾಧರ್‌, ಉಪನ್ಯಾಸಕ ಸುರೇಶ್‌ ಋಗ್ವೇದಿ ಮತ್ತು ಲಕ್ಷ್ಮಿ ನರಸಿಂಹ ಇದ್ದರು.

ಈಗಿನ ಅಧ್ಯಕ್ಷರ ಅವಧಿ 2021ರ ಮಾರ್ಚ್‌ 3ಕ್ಕೆ ಕೊನೆಗೊಳ್ಳಲಿದ್ದು, ಆ ಬಳಿಕ ಚುನಾವಣೆ ನಡೆಯುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT