ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೊಳ್ಳೇಗಾಲ: ಆನೆ ದಾಳಿಗೆ ವೃದ್ಧ ಸಾವು

Published 29 ಫೆಬ್ರುವರಿ 2024, 11:36 IST
Last Updated 29 ಫೆಬ್ರುವರಿ 2024, 11:36 IST
ಅಕ್ಷರ ಗಾತ್ರ

ಕೊಳ್ಳೇಗಾಲ: ತಾಲ್ಲೂಕಿನ ಕರಳಕಟ್ಟೆ ಗ್ರಾಮದಲ್ಲಿ ಗುರುವಾರ ಕಾಡಾನೆಯೊಂದು ನಡೆಸಿದ ದಾಳಿಯಲ್ಲಿ ಸ್ಥಳೀಯ ನಿವಾಸಿ ಸಣ್ಣಮಾದ (72) ಮೃತಪಟ್ಟಿದ್ದಾರೆ.  

ಗ್ರಾಮವು ಬಿಆರ್‌ಟಿ ಹುಲಿ ಸಂರಕ್ಷಿತ ಪ್ರದೇಶದ ವ್ಯಾಪ್ತಿಗೆ ಬರುತ್ತದೆ. ಬೆಳಿಗ್ಗೆ 8 ಗಂಟೆ ಸಮಯದಲ್ಲಿ ಕರಳಕಟ್ಟೆ ಗ್ರಾಮಕ್ಕೆ ಕಾಡಾನೆಯೊಂದು ಬಂದಿದೆ. ಸಣ್ಣಮಾದ ಅವರು ಪತ್ನಿ ಜಡೆ ಮಾದಮ್ಮ, ನಾದಿನಿ ರಂಗಮ್ಮ ಜೊತೆ ಮೇಗಲದೊಡ್ಡಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಆನೆ ದಾರಿ ಮಧ್ಯೆ ನಿಂತಿತ್ತು. ಆನೆಯಿಂದ ತಪ್ಪಿಸಿಕೊಳ್ಳಲು ಸಣ್ಣಮಾದ ಸೇರಿದಂತೆ ಮೂವರೂ ಓಡಿದರು. 

ಸಣ್ಣ ಮಾದ ಅವರನ್ನು ಅಟ್ಟಿಸಿದ ಆನೆ ದಾಳಿ ಮಾಡಿದೆ. ಜಡೆ ಮಾದಮ್ಮ ಮತ್ತು ರಂಗಮ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡು ಪಾರಾಗಿದ್ದಾರೆ. 

ಸ್ಥಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾದಿಕಾರಿ ನಂದಕುಮಾರ್, ಡಿಆರ್‌ಎಫ್‌ಒ ಮಹೇಶ್ ಸೇರಿದಂತೆ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಾಂತರ ಪೊಲೀಸ್‌ ಠಾಣೆ ಪಿಎಸ್‍ಐ ಗಣೇಶ್ ಭೇಟಿ ನೀಡಿ ಪರಿಶೀಲಿಸಿದರು.

ಪರಿಹಾರಕ್ಕೆ ಒತ್ತಾಯ:  ಎಸಿಎಫ್ ನಂದಕುಮಾರ್ ಭೇಟಿ ನೀಡಿದ ವೇಳೆ ಗ್ರಾಮಸ್ಥರು, ಸಣ್ಣ ಮಾದ ಅವರ ಕುಟುಂಬಕ್ಕೆ ಪರಿಹಾರ ನೀಡುವಂತೆ ಆಗ್ರಹಿಸಿದರು. 

‘ಕರಳಕಟ್ಟೆ ಗ್ರಾಮವು ಕಾಡಿನ ಅಂಚಿನಲ್ಲಿರುವುದ್ದರಿಂದ ಗ್ರಾಮಸ್ಥರಿಗೆ ರಕ್ಷಣೆ ಇಲ್ಲದಂತಾಗಿದೆ. ಒಂದು ತಿಂಗಳಿನಿಂದ ಎರಡು ಆನೆಗಳು ಗ್ರಾಮಕ್ಕೆ ಬರುತ್ತಿವೆ. ಜಿಂಕೆ, ಕಾಡು ಹಂದಿಗಳು ಬೆಳೆಯನ್ನು ಹಾಳು ಮಾಡುತ್ತಿವೆ. ಈ ಬಗ್ಗೆ ಅರಣ್ಯ ಸಿಬ್ಬಂದಿ ಹಲವು ಬಾರಿ ಮಾಹಿತಿ ನೀಡಿದ್ದರೂ ಕ್ರಮವಹಿಸಲಿಲ್ಲ’ ಎಂದು ದೂರಿದರು. 

ಎಸಿಎಫ್ ನಂದಕುಮಾರ್ ಮಾತನಾಡಿ, ‘ಇಲಾಖೆಯಿಂದ ಸಿಗುವ ಪರಿಹಾರ ಮತ್ತು ಸೌಲಭ್ಯಗಳನ್ನು ಸಣ್ಣಮಾದ ಅವರ ಕುಟುಂಬಕ್ಕೆ ಸಿಗುವಂತೆ ಮಾಡಲಾಗುವುದು’ ಎಂದು ಭರವಸೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT