ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷದಿಂದ ಹತ್ಯೆ: ವ್ಯಕ್ತಿಗೆ ಜೀವಾವಧಿ ಶಿಕ್ಷೆ

ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶ: ಇನ್ನಿಬ್ಬರಿಗೆ ಮೂರು ತಿಂಗಳ ಶಿಕ್ಷೆ
Last Updated 28 ಮೇ 2022, 4:09 IST
ಅಕ್ಷರ ಗಾತ್ರ

ಚಾಮರಾಜನಗರ: ಪಿಎಲ್‌ಡಿ ಬ್ಯಾಂಕ್‌ ಚುನಾವಣಾ ವಿಚಾರವಾಗಿ ಗುಂಡ್ಲುಪೇಟೆ ತಾಲ್ಲೂಕಿನ ಹಳ್ಳದಮಾದಳ್ಳಿ ಗ್ರಾಮದಲ್ಲಿ ವ್ಯಕ್ತಿಯೊಬ್ಬರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಹತ್ಯೆ ಮಾಡಿದ್ಧ ವ್ಯಕ್ತಿಗೆ ಜೀವಾವಧಿ ಶಿಕ್ಷೆ ವಿಧಿಸಿ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಲಯ ಆದೇಶ ಹೊರಡಿಸಿದೆ.

ಜಗಳ ಬಿಡಿಸಲು ಬಂದ ಇನ್ನಿಬ್ಬರ ಮೇಲೆ ಹಲ್ಲೆ ನಡೆಸಿದ್ದ ಇತರ ಇಬ್ಬರು ಆರೋಪಿಗಳಿಗೆ ಮೂರು ತಿಂಗಳ ಸಾದಾ ಶಿಕ್ಷೆ ವಿಧಿಸಲಾಗಿದೆ.

ಗುಂಡ್ಲುಪೇಟೆ ತಾಲ್ಲೂಕಿನ ಹಳ್ಳದಮಾದಳ್ಳಿ ಗ್ರಾಮದ ಪ್ರಕಾಶ ಜೀವಾವಧಿ ಶಿಕ್ಷೆಗೆ ಗುರಿಯಾದವರು. ಎಚ್‌.ಎ.ಬಸವರಾಜು ಹಾಗೂ ಮಹದೇವಪ್ಪ ಅವರು ಮೂರು ತಿಂಗಳ ಶಿಕ್ಷೆಗೆ ಗುರಿಯಾದವರು.

2015ರ ಫೆಬ್ರುವರಿ 19ರಂದು ರಂದು ಸಂಜೆ 5.30ಹಳ್ಳದಮಾದಳ್ಳಿ ಗ್ರಾಮದಲ್ಲಿ ಈ ಘಟನೆ ನಡೆದಿತ್ತು. ಚೆನ್ನಮಲ್ಲಪ್ಪ ಅವರು ಹತ್ಯೆಗೀಡಾಗಿದ್ದರು.

ಪಿಎಲ್‌ಡಿ ಚುನಾವಣಾ ವಿಚಾರವಾಗಿ ದ್ವೇಷದಿಂದ ಗ್ರಾಮದ ಚನ್ನಮಲ್ಲಪ್ಪ ಅವರ ಮೇಲೆ ಪ್ರಕಾಶ ಹಾಗೂ ಅವರ ಸಂಗಡಿಗರು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಜಗಳ ಬಿಡಿಸಲು ಹೋಗಿದ್ದ ಶಿವನಾಗಪ್ಪ ಹಾಗೂ ಬಸವಣ್ಣ ಎಂಬುವರ ಮೇಲೆಯೂ ಹಲ್ಲೆ ಮಾಡಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಚನ್ನಮಲ್ಲಪ್ಪ ಅವರನ್ನು ಮೈಸೂರಿನ ಜೆಎಸ್‌ಎಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಅವರು ಮಾರ್ಚ್‌ 19ರಂದು ಮೃತಪಟ್ಟಿದ್ದರು. ಉಳಿದ ಇಬ್ಬರು ಸಣ್ಣ ಪುಟ್ಟ ಗಾಯಗಳೊಂದಿಗೆ ಪಾರಾಗಿದ್ದರು.

ಪ್ರಕರಣದಲ್ಲಿ ಪ್ರಕಾಶ ಅವರನ್ನು ಮೊದಲ ಆರೋಪಿ, ಎಚ್‌.ಎ.ಬಸವರಾಜು ಅವರನ್ನು 2ನೇ ಆರೋಪಿ, ಎಚ್‌.ಎ‌ಂ.ಬಸಪ್ಪ ಅವರನ್ನು ಮೂರನೇ ಆರೋಪಿ, ಶಂಕರ ಅವರನ್ನು ನಾಲ್ಕನೇ ಹಾಗೂ ಮಹದೇವಪ್ಪ ಅವರನ್ನು ಐದನೇ ಆರೋಪಿ ಎಂದು ಗುರುತಿಸಲಾಗಿತ್ತು.

ಗುಂಡ್ಲುಪೇಟೆ ತಾಲ್ಲೂಕಿನ ಬೇಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆ ನಡೆಸಿದ್ದ ಪೊಲೀಸರು ಆರೋಪಿಗಳ ವಿರುದ್ಧ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆಯ ಸಂದರ್ಭದಲ್ಲಿ 3ನೇ ಹಾಗೂ 4ನೇ ಆರೋಪಿಗಳಾಗಿದ್ದ ಎಚ್‌.ಎಂ.ಬಸ‍ಪ್ಪ ಹಾಗೂ ಶಂಕರ ಅವರು ನಿಧನರಾಗಿದ್ದರು.

ಆರೋಪಿಗಳ ವಿರುದ್ಧದ ಆರೋಪಗಳು ಸಾಬೀತಾಗಿದ್ದರಿಂದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಬಿ.ಎಸ್‌.ಭಾರತಿ ಅವರು ಗುರುವಾರ ಮೊದಲ ಆರೋಪಿ ಪ್ರಕಾಶ ಅವರಿಗೆ ಜೀವಾವಧಿ ಶಿಕ್ಷೆ ಹಾಗೂ ₹1 ಲಕ್ಷ ದಂಡ ವಿಧಿಸಿ ಆದೇಶಿಸಿದ್ದಾರೆ. ದಂಡದ ಮೊತ್ತವನ್ನು ಚೆನ್ನಮಲ್ಲಪ್ಪನವರ ಕುಟುಂಬಕ್ಕೆ ಪರಿಹಾರದ ದೂರದಲ್ಲಿ ನೀಡುವಂತೆಯೂ ಸೂಚಿಸಿದ್ದಾರೆ.

2ನೇ ಮತ್ತು 5ನೇ ಆರೋಪಿಗಳಾದ ಎಚ್‌.ಎ.ಬಸವರಾಜು ಹಾಗೂ ಮಹದೇವಪ್ಪ ಅವರಿಗೆ ಮೂರು ತಿಂಗಳ ಸಾದಾ ಶಿಕ್ಷೆ ಹಾಗೂ ತಲಾ ₹15 ಸಾವಿರ ದಂಡ ವಿಧಿಸಿ ನ್ಯಾಯಾಧೀಶರು ಆದೇಶಿಸಿದ್ದಾರೆ.

ಪ್ರಾಸಿಕ್ಯೂಷನ್‌ ಪರವಾಗಿ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಲೋಲಾಕ್ಷಿ ಟಿ.ಎಚ್‌. ಅವರು ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT